

ಜಗತ್ತಿನಲ್ಲೇ ಮೊಟ್ಟ ಮೊದಲು ನಿರ್ವಣಗೊಂಡ ಪ್ರಾರ್ಥನಾ ಮಂದಿರವೊಂದಿದ್ದರೆ ಅದು ಪವಿತ್ರ ಮಕ್ಕಾದಲ್ಲಿರುವ ಪುಣ್ಯ ಕಹಬಾಲಯ ಎಂಬುದು ಮುಸ್ಲಿಮರ ನಂಬಿಕೆ. ಪವಿತ್ರ ಕುರಾನ್ನಲ್ಲಿಯೂ ಇದನ್ನು ನೆನಪಿಸಲಾಗಿದೆ. ನಂತರದ ಕಾಲದಲ್ಲಿ ಪಾಳು ಬಿದ್ದಿದ್ದ ಕಹಬಾವನ್ನು ನವೀಕರಿಸುವ ಕೆಲಸ ಪೈಗಂಬರ್ ಇಬ್ರಾಹಿಮ್ (ಅ) ಮತ್ತು ಮಗ ಇಸ್ಮಾಯಿಲ್ ಅಲೈಹಿಸ್ಸಲಾಂ ಅವರಿಂದ ನಡೆಯಿತು. ಅಬ್ರಾಹಂ ಎಂದು ಕರೆಯಲ್ಪಡುವ ಇಬ್ರಾಹಿಂ ನೆಬಿಯವರಿಗೆ ಯಹೂದಿ, ಕ್ರೖೆಸ್ತ ಹಾಗೂ ಇಸ್ಲಾಂ ಧರ್ಮದಲ್ಲಿ ವಿಶೇಷ ಸ್ಥಾನಮಾನ ಇದೆ. ಈ ಮೂರೂ ಧರ್ಮಗಳ ಪವಿತ್ರ ಗ್ರಂಥಗಳಲ್ಲಿ ಇಬ್ರಾಹಿಂರನ್ನು ಧರ್ವೇದ್ಧಾರಕರಾಗಿ ಗೌರವಿಸಿ ವಿಶೇಷ ಸ್ಥಾನಮಾನ ಕಲ್ಪಿಸಿರುವುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿ.
ಇದೇ ಕಾರಣದಿಂದ ಮಕ್ಕಾದಲ್ಲಿ ನೆಲೆಯೂರಿದ್ದ ಇಬ್ರಾಹಿಂ(ಅ)ರ ಕುಟುಂಬದ ವೃತ್ತಾಂತವನ್ನು ಮತ್ತು ಅವರ ತ್ಯಾಗವನ್ನು ಸ್ಮರಿಸುವ ಸಲುವಾಗಿ ಮಕ್ಕಾಗೆ ತಲುಪುವ ಮುಸ್ಲಿಮರು ಹಜ್ ಕರ್ಮವನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. ದುಲ್ ಹಜ್ ಏಳರಂದು ಆರಂಭಿಸಲಾಗುವ ಹಜ್ ಕರ್ಮದ ಒಂದು ಹಂತ ಬಕ್ರೀದ್ನಂದು ಕೊನೆಗೊಳ್ಳುತ್ತದೆ. ಆ ದಿನ ಬಕ್ರೀದ್ ಹಬ್ಬ ಆಚರಿಸುವುದು ಪದ್ಧತಿ.
ಜಾಗತಿಕವಾಗಿ ಪ್ರತಿಯೊಬ್ಬ ಮುಸ್ಲಿಮರೂ ದುಲ್ ಹಜ್ ತಿಂಗಳ ಹತ್ತರಂದು ಬಕ್ರೀದ್ ಆಚರಿಸುತ್ತಾರೆ. ಇದರ ಆಚರಣೆಯಲ್ಲಿ ಪ್ರಮುಖವಾದ ಒಂದು ಅಂಶವೇನೆಂದರೆ, ಜಾನುವಾರುಗಳನ್ನು ಬಲಿ ನೀಡಿ ಅದರ ಮಾಂಸವನ್ನು ಬಡವರಿಗೆ ಹಂಚುವುದು. ಸಾವಿರಾರು ವರ್ಷಗಳ ಹಿಂದೆ ತಾವು ನಂಬಿದ ದೇವಿ ದೇವತೆಗಳನ್ನು ಸಂತೃಪ್ತಿಗೊಳಿಸಲು ನರಬಲಿ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು. ಹಜರತ್ ಇಬ್ರಾಹಿಂ ನೆಬಿಯವರಿಗೆ ಮಕ್ಕಳಿಲ್ಲದ ಕಾರಣ ಸ್ವಂತವಾಗಿ ಒಂದು ಮಗುವಿನ ಮುಖ ನೋಡಲು ತುಂಬಾ ಆಸೆಪಟ್ಟಿದ್ದರು. ಹಾಗೊಂದು ವೇಳೆ ತನಗೊಂದು ಕೂಸು ಹುಟ್ಟಿದರೆ ಅದನ್ನು ದೇವನ ಸಂತೃಪ್ತಿಗಾಗಿ ಬಲಿ ನೀಡಲೂ ಸಿದ್ಧ ಎಂದು ಹರಕೆ ಹೊತ್ತರು. ತರುವಾಯ ಮಗುವೊಂದು ಜನಿಸಿತು. ಅದಕ್ಕೆ ಇಸ್ಮಾಯಿಲ್ ಎಂದು ಹೆಸರಿಟ್ಟರು. ಮಗು ದೊಡ್ಡದಾಗುತ್ತಲೇ ತಾನು ಮಾಡಿದ ಹರಕೆಯನ್ನು ಇಬ್ರಾಹಿಂ (ಅ) ಮರೆತೇ ಬಿಟ್ಟಿದ್ದರು. ಅಲ್ಲಾಹನು ಅದನ್ನು ಇಬ್ರಾಹಿಂ(ಅ)ರಿಗೆ ಕನಸಿನ ಮೂಲಕ ನೆನಪಿಸುತ್ತಾನೆ.
ಹಿಂದೆ ಮುಂದೆ ನೋಡದೇ ತನ್ನ ಮಾತಿಗೆ ಬದ್ಧವಾಗಿದ್ದುಕೊಂಡು ಸತ್ಯ, ಧರ್ಮ, ನ್ಯಾಯ, ನೀತಿ, ಪ್ರಾಮಾಣಿಕತೆ, ಪಾರದರ್ಶಕತೆ ಇವೆಲ್ಲಾ ಆಶಯಗಳನ್ನು ಪ್ರದರ್ಶಿಸಿ ಕರುಳಕುಡಿಯನ್ನೇ ಬಲಿ ನೀಡಲು ಇಬ್ರಾಹಿಂ ಮುಂದಾಗುತ್ತಾರೆ. ದೇವನ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾದ ಇಬ್ರಾಹಿಂ ನೆಬಿಯವರಿಗೆ ಮೇಕೆಯೊಂದನ್ನು ನೀಡಲಾಗಿ, ಮುಂದೆ ಧರ್ಮದ ಹೆಸರಲ್ಲಿ ನರ ಹತ್ಯೆಗೆ ನಿಷೇಧ ಹೇರಲಾಗುತ್ತದೆ. ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಭುವಿಯ ಮೇಲೆ ಮನುಷ್ಯನ ಹೆಣ ಉರುಳಬಾರದೆಂದು ಆದೇಶ ಹೊರಡಿಸಲಾಗುತ್ತದೆ. ಆನಂತರ ಕುರಾನಿನಲ್ಲೂ ಇದೇ ಆದೇಶವನ್ನು ಹೊರಡಿಸಲಾಗಿದೆ. ಅನ್ಯಾಯವಾಗಿ ಒಬ್ಬನನ್ನು ಕೊಂದರೆ ಅದು ಇಡೀ ಮಾನವ ಕುಲವನ್ನೇ ಕೊಂದಂತೆ, ಒಬ್ಬನಿಗೆ ಜೀವದಾನ ನೀಡಿದರೆ ಅದು ಇಡೀ ಮಾನವ ಕುಲಕ್ಕೆ ಜೀವದಾನ ಮಾಡಿದಂತೆ ಎನ್ನುತ್ತದೆ ಕುರಾನ್.
ಹೌದು, ಧರ್ಮದ ನೀತಿಪಾಠ ಹೀಗಿದ್ದರೂ ಇಂದಿನ ನಾಗರಿಕ ಯುಗದಲ್ಲೂ ಜನರು ಧರ್ಮದ ಹೆಸರಲ್ಲಿ ಪರಸ್ಪರ ಕಚ್ಚಾಟ ನಡೆಸಿ ಹೆಣಗಳನ್ನು ಉರುಳಿಸುತ್ತಿರುವುದು ದುರಂತವೇ ಸರಿ. ಅವತ್ತಿನ ಕಾಲದಲ್ಲಿ ಜನತೆಯನ್ನು ಸಹೋದರತೆಯ ಸರಪಳಿಯಲ್ಲಿ ಪೋಣಿಸಿದ ಇಸ್ಲಾಮಿನ ತತ್ವ ಸಿದ್ಧಾಂತಗಳನ್ನು ಪುನಃ ಮುಸ್ಲಿಮರಿಗೆ ನೆನಪಿಸಬೇಕಾದ ಅನಿವಾರ್ಯತೆ ಈಗ ಬಂದೊದಗಿದೆ. ಪ್ರವಾದಿಗಳ ಆಗಮನ ಪೂರ್ವದಲ್ಲಿ ಔಸ್- ಖಸ್ರಜ್ ಎಂಬ ಪ್ರಮುಖ ಗೋತ್ರಗಳು ಹಾಗೂ ಇತರ ಸಣ್ಣ ಪುಟ್ಟ ಗುಂಪುಗಳು ಕ್ಷುಲ್ಲಕ ನೆಪವೊಡ್ಡಿ ನೂರಾರು ವರ್ಷಗಳ ಕಾಲ ಪರಸ್ಪರ ಯುದ್ಧನಿರತರಾಗಿ ಕೋಟ್ಯಂತರ ಜನರ ಸಾವು ನೋವಿಗೆ ಕಾರಣವಾಗಿದ್ದವು. ಅಂತಹ ಅನಾಗರಿಕ ಜನಸಮೂಹವನ್ನು ಇಸ್ಲಾಮಿನ ತರಬೇತಿ ಮೂಲಕ ಸಂಸ್ಕರಿಸಿ ಇಡೀ ಜಗತ್ತಿಗೇ ಸಮಾನತೆ ಮತ್ತು ಭಾತೃತ್ವದ ಸಂದೇಶ ಸಾರುವಂತೆ ಪರಿವರ್ತಿಸಲಾಯಿತು. ಅವರ ಮೂಲಕ ಇಡೀ ಜಗತ್ತಿಗೇ ಇಸ್ಲಾಮಿನ ಕಂಪು ಹರಡಲು ನಿಮಿತ್ತವಾದದ್ದು ಅದೊಂದು ಅಪರೂಪದ ಅಚ್ಚರಿದಾಯಕ ಬೆಳವಣಿಗೆಯೇ ಸರಿ.
ದೇವನಿಗೆ ತಲುಪಲು ದಾರಿಯೊಂದಿದ್ದರೆ ಅದು ಮಾನವನೇ ಹೊರತು ಯಾಂತ್ರಿಕ ಜಪ ತಪಗಳು ಅಲ್ಲ ಎಂಬುದನ್ನು ಜಗತ್ತಿಗೆ ಸಾರಿದ ಧರ್ಮ ಇಸ್ಲಾಂ. ಬೆಲೆ ಬಾಳುವ ವಸ್ತ್ರ ಧರಿಸಿ, ಸದಾ ಸುಗಂಧ ಸೂಸುವ, ಸುಂದರ ಮೈಕಟ್ಟಿನ ಬಿಲಿಯಾಧಿಪತಿಯ ಜತೆ ಬಡವನೂ ಇಸ್ಲಾಂ ಪ್ರಕಾರ ಭುಜಕ್ಕೆ ಭುಜ ತಾಗಿಸಿ ನಮಾಜಿನ ಸಾಲಿನಲ್ಲಿ ನಿಲ್ಲಬೇಕು. ಅಲ್ಲಿ ಅಂತರ ಪಾಲಿಸಿ ದೂರ ನಿಂತು ಬಿಟ್ಟರೆ ಸೈತಾನನ ಮಧ್ಯಪ್ರವೇಶ ಆಗುತ್ತದೆ ಎಂದು ಜಗತ್ತಿನಲ್ಲೇ ಅಪರೂಪದ ತತ್ವವನ್ನು ಸಾರುವ ಮೂಲಕ, ಕರಾಳ ಉಚ್ಛನೀಚತ್ವದ ಅಡಿಬೇರನ್ನೇ ಅಲುಗಾಡಿಸಿದ್ದು ಇಸ್ಲಾಮ್ ಸಮಾನತೆಯ ಸಂದೇಶವಾಗಿದೆ. ಎಾತಿ, ದೇಶ, ಭಾಷೆ, ವರ್ಗ, ವರ್ಣದ ಎಲ್ಲೆ ಮೀರಿ ಜಾಗತಿಕ ನೆಲೆಯಲ್ಲಿ ಸಮಾನತೆ ಪ್ರದರ್ಶಿಸುವ ಅವಕಾಶವನ್ನು ಹಜ್ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದ ಮೂಲಕ ಪ್ರಾಯೋಗಿಕವಾಗಿ ಸ್ಥಾಪಿಸಲಾಯಿತು. ಝುಕಾತ್ ಮತ್ತು ದಾನಕ್ಕೆ ಒತ್ತು ಕೊಡುವ ಮೂಲಕ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ, ಬಡವರ ಕಣ್ಣೀರು ಒರೆಸುವ ಪ್ರಯತ್ನ ಮಾಡಲಾಯಿತು.
ಪರಲೋಕದದಲ್ಲಿ ಖುದ್ದು ಅಲ್ಲಾಹನೇ ಮಾನವನನ್ನು ಕರೆದು ‘ನಾನು ರೋಗಿಯಾದಾಗ ಯಾಕೆ ನೀನು ನನ್ನನ್ನು ಸಂದರ್ಶಿಸಲಿಲ್ಲ?’ ಎಂದು ಪ್ರಶ್ನೆ ಮಾಡಿದಾಗ, ‘ದೇವನು ರೋಗಿಯಾಗುವುದಂಟೇ?’ ಎಂದು ಮನುಷ್ಯ ಮರುಪ್ರಶ್ನೆ ಮಾಡುತ್ತಾನೆ. ‘ಇಂತಿಂಥ ವ್ಯಕ್ತಿ ರೋಗಿಯಾದಾಗ ಅವನನ್ನು ನೀನ್ಯಾಕೆ ಶುಶ್ರೂಷೆ ಮಾಡಲಿಲ್ಲ? ಹಾಗೆ ಮಾಡಿದ್ದರೆ ಅಲ್ಲಿ ನಾನಿರುತ್ತಿದ್ದೆ’ ಎಂದು ದೇವನು ಉತ್ತರಿಸುತ್ತಾನೆ. ಇಸ್ಲಾಮಿನ ದೈವ ಸಂಕಲ್ಪದಲ್ಲಿ ಕಾರುಣ್ಯ ಮತ್ತು ದಯಾಪರ ಕೆಲಸ ಕಾರ್ಯಗಳು ಅಡಕಗೊಂಡಿವೆ ಎಂಬುದು ಇದರ ಅರ್ಥ. ಮನುಷ್ಯ ಸದಾ ತನ್ನನ್ನು ಅಗತ್ಯವಿರುವವರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಇದು ಪ್ರೇರೇಪಿಸುತ್ತದೆ. ‘ನೆರೆಕರೆಯವನ ನಾಯಿಗೆ ಕಲ್ಲೆಸೆದರೆ ಅದು ಕೂಡ ಅವನಿಗೆ ನೀನು ತೊಂದರೆ ಕೊಟ್ಟಂತೆ. ನೆರೆಯವ ಯಾವ ಧರ್ವಿುಯನೇ ಆಗಿರಲಿ, ಆತ ಹಸಿದಿರುವಾಗ ಅನ್ನ ನೀಡದೇ ತನ್ನ ಹೊಟ್ಟೆ ತುಂಬಿಸಿಕೊಂಡವ ಇಸ್ಲಾಂ ಧರ್ಮಕ್ಕೆ ಸೇರುವುದಿಲ್ಲ’ ಎಂಬ ಇಸ್ಲಾಮಿನ ತತ್ವವು ಧರ್ಮಸಂಕಲ್ಪಕ್ಕೆ ಹೊಸ ವ್ಯಾಖ್ಯಾನ ನೀಡುತ್ತದೆ.
ಇಸ್ಲಾಮಿನ ಎಲ್ಲ ಆಚಾರ ವಿಚಾರಗಳು ಮಾನವನನ್ನೇ ಮೂಲಾಧಾರವಾಗಿ ಇಟ್ಟುಕೊಂಡಿವೆ. ಇಸ್ಲಾಮಿನ ಮೂಲ ಉದ್ದೇಶ- ಜಗತ್ತಿನಲ್ಲಿ ಶಾಂತಿ, ಪ್ರೀತಿ, ಭ್ರಾತೃತ್ವ ಸ್ಥಾಪಿಸಿ ನ್ಯಾಯ, ನೀತಿಯ ವಾತಾವರಣ ಸೃಷ್ಟಿ ಮಾಡಿ ಆ ಮೂಲಕ ಮಾನವ ಕುಲವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ಆಗಿದೆ. ಈ ಎಲ್ಲ ಆದರ್ಶಗಳನ್ನು ನಾವು ಪಾಲಿಸುತ್ತಿದ್ದೇವೆಯೇ ಎಂಬುದರ ಆತ್ಮಾವಲೋಕನಕ್ಕೆ ಪವಿತ್ರ ಈದ್ ಆಚರಣೆ ಪ್ರೇರಣೆಯಾಗಲಿ ಎಂದು ಆಶಿಸೋಣ. (ಲೇಖಕರು ರಾಜ್ಯ ದಾರಿಮಿ ಉಲಮಾ ಸಮಿತಿಯ ಅಧ್ಯಕ್ಷರು)