ಉತ್ತಮ ನಿರ್ಧಾರ; ನಿರ್ಜನ ಪ್ರದೇಶಗಳಲ್ಲಿ ಮದ್ಯಸೇವನೆ ನಿಷೇಧಿಸಿ: ಜನಮತ

Janamatha1
Published on

ಉತ್ತಮ ನಿರ್ಧಾರ

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಬದಲಾಯಿಸಲಾಗುವುದು ಎಂದು ಹೇಳಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್​ಕುಮಾರ್ ಹೇಳಿಕೆ ಸ್ವಾಗತಾರ್ಹ. ನಗರ ಹಾಗೂ ಗ್ರಾಮೀಣ ಪ್ರದೇಶಗಳ ತೆರೆಮರೆಯ ಪ್ರತಿಭೆ, ಸಾಧಕರನ್ನು ಸರ್ಕಾರ ನೇಮಿಸಿದ ಸಮಿತಿ ಮತ್ತು ಸಾರ್ವಜನಿಕರ ಆಶಯದ ಮೇರೆಗೆ ಆಯ್ಕೆ ಮಾಡುವ ನಿರ್ಧಾರ ಸೂಕ್ತವಾದುದು. ಇಷ್ಟು ವರ್ಷ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕಿತ್ತು. ಈ ಪದ್ಧತಿಗೆ ಆಗಾಗ ಅಪಸ್ವರ ಕೇಳಿಬಂದಿದ್ದರೂ, ಗಮನಾರ್ಹ ಬದಲಾವಣೆ ಆಗಿರಲಿಲ್ಲ. ಈ ಬಾರಿ ಅದಕ್ಕೆ ತಿಲಾಂಜಲಿ ಇಡುತ್ತಿದ್ದು, ಹಳೆಯ ಸಂಪ್ರದಾಯವನ್ನು ಕೈಬಿಡಲಾಗುತ್ತಿದೆ. ಪರಿಣಾಮ, ಎಲೆಮರೆ ಕಾಯಿಯಂತೆ ಇರುವ ಸಾಧಕರಿಗೆ, ಪ್ರತಿಭೆಗಳಿಗೆ ಪ್ರಶಸ್ತಿ ಅರಸಿಕೊಂಡು ಬರಲು ಸಾಧ್ಯ ವಾಗಲಿದೆ. ಹಾಗೆಯೇ, ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಶಿಫಾರಸ್ಸು, ಒತ್ತಡಗಳು ನುಸುಳದಂತೆ ಎಚ್ಚರವಹಿಸುವುದು ಇಲಾಖೆಯ ಸಚಿವರ ಆದ್ಯ ಕರ್ತವ್ಯ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿವಾದ, ಗೊಂದಲಗಳಿಂದ ದೂರವಿದ್ದು, ಘನತೆ ಹೊಂದುವಂತಾಗಲಿ ಎಂದು ಆಶಿಸೋಣ.

| ಶ್ರೀಧರ್ ಡಿ. ರಾಮಚಂದ್ರಪ್ಪ ತುರುವನೂರು

ನಿರ್ಜನ ಪ್ರದೇಶಗಳಲ್ಲಿ ಮದ್ಯಸೇವನೆ ನಿಷೇಧಿಸಿ

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್​ರೇಪ್ ಪ್ರಕರಣ ಆತಂಕ, ಆಘಾತ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ತಂಡೋಪತಂಡವಾಗಿ ನಿರ್ಜನ ಪ್ರದೇಶಗಳಿಗೆ ತೆರಳಿ ಮದ್ಯಸೇವನೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಕರೊನಾ ಕಟ್ಟಿ ಹಾಕಲು ಸರ್ಕಾರ ಮೇಲಿಂದ ಮೇಲೆ ಲಾಕ್​ಡೌನ್ ವಿಧಿಸುತ್ತಿ ರುವುದರಿಂದ ಬಾರ್, ಧಾಬಾ ಹಾಗೂ ಇನ್ನಿತರ ಸ್ಥಳಗಳಲ್ಲಿ ಕುಳಿತು, ಉಪಾಹಾರ ಹಾಗೂ ಮದ್ಯಸೇವನೆ ನಿಷೇಧಿಸಲಾಗಿದೆ. ಹೀಗಾಗಿ ಮದ್ಯವ್ಯಸನಿಗಳು ಹೊಲ, ಗದ್ದೆ, ಅರಣ್ಯಗಳಂಥ ನಿರ್ಜನ ಪ್ರದೇಶಗಳನ್ನೇ ಮೋಜುಮಸ್ತಿಯ ತಾಣಗಳನ್ನಾಗಿ ಮಾಡಿಕೊಂಡಿದ್ದಾರೆ. ಪರಿಣಾಮ, ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕಾಗಿದೆ, ನಿರ್ಜನ ಪ್ರದೇಶಗಳಲ್ಲಿ ಮದ್ಯಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ವಿಧಿಸಿದರೆ ಮತ್ತೆ ಈ ರೀತಿಯ ಪ್ರಕರಣಗಳು ಮರುಕಳಿಸುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು.

| ಶಿವಾನಂದ ಜಿ. ಹಿರೇಮಠ ಬಸವಕಲ್ಯಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net