

| ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗವಾದ ಸಂಪಾಜೆ ಶೀತ ಪ್ರದೇಶದಿಂದ ಕೂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚಿನ ಉಷ್ಣಾಂಶ ಹೊಂದಿರುವ ಪ್ರದೇಶ. ಇದರ ನಡುವೆ ಯಾವುದೇ ಲಾಭದ ನಿರೀಕ್ಷೆ ಇಲ್ಲದೆ ಸಂಪಾಜೆ ಗ್ರಾಮದ ಗೋಪಾಲಕೃಷ್ಣ ರಾಂಬೂಟನ್ ಕೃಷಿಯಲ್ಲಿ ಲಾಭ ಗಳಿಸಿದ್ದಲ್ಲದೆ, ಇತರ ರೈತರಿಗೂ ಮಾದರಿಯಾಗಿದ್ದಾರೆ. ಗೋಪಾಲಕೃಷ್ಣ ಮೊದಲಿಗೆ ಹೆಚ್ಚಿನ ಸಮಯವನ್ನು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿನಲ್ಲೇ ಸಾಕಷ್ಟು ಸಮಯ ಕಳೆದಿದ್ದ ಅವರಿಗೆ ಕೃಷಿ ಬಗ್ಗೆ ಹೆಚ್ಚಿನ ಅನುಭವ ಇರಲಿಲ್ಲ. ಆ ಸಂದರ್ಭದಲ್ಲಿ ಅವರ ತೋಟದ ಮ್ಯಾನೇಜರ್ ಕೇಶವ ಚೌಟಾಜೆ ಸಾಥ್ ನೀಡಿದ್ದರಿಂದ ಕೃಷಿಯೆಡೆಗೆ ಮುಖ ಮಾಡಿ ಯಶಸ್ಸು ಸಾಧಿಸಿದ್ದಾರೆ.
ಅಡಕೆಯಿಂದ ರಾಂಬೂಟನ್: ಗೋಪಾಲಕೃಷ್ಣ ಅವರ ತಂದೆಯ ಕಾಲದಲ್ಲಿ ರಬ್ಬರ್, ಗೇರುಹಣ್ಣು, ಅಡಕೆ ಸೇರಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ನಂತರ ಅಡಕೆ ಕೃಷಿ ಮಾತ್ರ ಮಾಡಲಾಯಿತು. ಆದರೆ ಹಳದಿ ರೋಗ ಬಂದ ಹಿನ್ನೆಲೆಯಲ್ಲಿ ಅಡಕೆ ಕೃಷಿ ಬಿಟ್ಟು ರಬ್ಬರ್ ತೋಟ ಆರಂಭಿಸಿದರು. ರಬ್ಬರ್ ಮರದ ಆಯಸ್ಸು ಮುಗಿದ ನಂತರ ಹೊಸ ಕೃಷಿ ಮಾಡಬೇಕೆಂದು ಯೋಚಿಸುತ್ತಿದ್ದ ಗೋಪಾಲಕೃಷ್ಣರಿಗೆ ಕೇಶವ ಚೌಟಾಜೆ ಕೇರಳದ ರಾಂಬೂಟನ್ ಹಣ್ಣಿನ ಪರಿಚಯ ಮಾಡಿಸಿ ಎರಡೂವರೆ ಎಕರೆ ಜಾಗದಲ್ಲಿ ಕೃಷಿ ಮಾಡಿದರು.
ಇಳುವರಿ ಹೇಗೆ?: ಮೊದಲ ವರ್ಷ ಎಲ್ಲ ಹೂವನ್ನು ತೆಗೆಯಬೇಕು. ಎರಡನೇ ವರ್ಷ ಗಿಡದಲ್ಲಿ ಯಾವುದೇ ಇಳುವರಿ ಬಿಡದಂತೆ ನೋಡಿಕೊಳ್ಳಬೇಕು. ಆದರೆ ಮೂರನೇ ವರ್ಷಕ್ಕೆ ಶೇ.10 ಇಳುವರಿ ಹಾಗೂ ನಾಲ್ಕನೇ ವರ್ಷಕ್ಕೆ ಶೇ.20 ಇಳುವರಿ ಪಡೆಯಬಹುದು. 7 ವರ್ಷಕ್ಕೆ ಒಂದು ಗಿಡದಲ್ಲಿ 50 ಕೆ.ಜಿ. ಇಳುವರಿ ಪಡೆಯಬಹುದು ಎನ್ನುತ್ತಾರೆ ಗೋಪಾಲಕೃಷ್ಣ.
ಗಿಡ ನೆಡುವ ವಿಧಾನ: ರಾಂಬೂಟನ್ ಗಿಡ ನೆಡಲು 2 ಅಡಿ ಸುತ್ತಳತೆ 2 ಅಡಿ ಆಳದ ಗುಂಡಿ ತೆಗೆಯಬೇಕು. ನಂತರ ಸಗಣಿ ಗೊಬ್ಬರವನ್ನು ಗುಂಡಿಗೆ ಹಾಕಿ ಮುಚ್ಚಬೇಕು. 15 ರಿಂದ 20 ದಿನ ಬಿಟ್ಟು ಗುಂಡಿ ಮುಚ್ಚಿದ ಜಾಗದ ಮಧ್ಯದಲ್ಲೇ ಮತ್ತೆ ಗುಂಡಿ ತೆಗೆದು ಗಿಡ ನೆಟ್ಟರೆ ಉತ್ತಮ. ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 15 ಅಡಿ ಅಂತರ ಇರಬೇಕು. ಗಿಡ ನೆಟ್ಟ ಎರಡು ವರ್ಷದಲ್ಲಿ ರಾಂಬೂಟನ್ ಹಣ್ಣಿನ ಫಸಲು ತೆಗೆಯಬಹುದು.
ರಾಂಬೂಟನ್ ಬೆಳೆಯುತ್ತೇನೆಂದು ಏಕಾಏಕಿ ಕೈ ಹಾಕುವುದು ತಪ್ಪು. ಯಾರಾದರೂ ಕೃಷಿ ಮಾಡಿದವರಿದ್ದರೆ, ಅದರಲ್ಲಿ ಯಶಸ್ವಿ ಆಗಿದ್ದರೆ ಅವರ ಸಲಹೆ ಪಡೆದು ಮುಂದುವರಿಯುವುದು ಉತ್ತಮ. ಸಂಪಾಜೆ ಭಾಗಕ್ಕೆ ಇದು ಹೇಳಿ ಮಾಡಿಸಿದ ಕೃಷಿ. ಆದರೆ, ಕೊಡಗು ಹೆಚ್ಚು ಶೀತ ಪ್ರದೇಶವಾಗಿರುವುದರಿಂದ ಗಮನಹರಿಸಿ ಮಾಡಬೇಕು. ರಾಂಬೂಟನ್ಗೆ ಮಾರುಕಟ್ಟೆ ವ್ಯವಸ್ಥೆ ಇದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಖರೀದಿ ನಡೆಯುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇದೆ. ಹೊರ ರಾಜ್ಯದಲ್ಲೂ ಬಹು ಬೇಡಿಕೆ ಇದೆ. | ಅಂಬೆಕಲ್ಲು ಗೋಪಾಲಕೃಷ್ಣ ರಾಂಬೂಟನ್ ಬೆಳೆಗಾರ
ಒಂದು ಲಕ್ಷಕ್ಕೆ ನಾಲ್ಕೂ ಲಕ್ಷ ರೂ.!: ಗಿಡ ಖರೀದಿ ಮಾಡಿ ನಾಟಿ ಮಾಡುವವರೆಗೆ ಎಕರೆಗೆ 60 ಸಾವಿರ ರೂ. ವೆಚ್ಚವಾಗಲಿದೆ. 40 ಸಾವಿರ ರೂ. ನಿರ್ವಹಣೆ ವೆಚ್ಚವಾಗಲಿದೆ. ಒಂದು ಎಕರೆಗೆ 1 ಲಕ್ಷ ರೂ. ವೆಚ್ಚ ಮಾಡಿದಲ್ಲಿ 4 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ. ವೆಚ್ಚ ಕಳೆದು 3 ಲಕ್ಷ ರೂ. ಲಾಭ ನಿರೀಕ್ಷಿಸಬಹುದು. ಮರ ಹಾಗೂ ಇಳುವರಿ ಹೆಚ್ಚಾದಂತೆ 5-6 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ ಎಂಬುದು ಗೋಪಾಲಕೃಷ್ಣ ಹೇಳಿಕೆ.
ಒಂದು ಗಿಡಕ್ಕೆ 600 ರೂ.: ಐದು ವರ್ಷದ ಹಿಂದೆ ಒಂದು ವರ್ಷದ ಗಿಡಕ್ಕೆ 360 ರೂ. ಇತ್ತು. ಈಗ ಒಂದು ವರ್ಷದ ಗಿಡಕ್ಕೆ 600 ರೂ. ಹಾಗೂ 2 ವರ್ಷದ ಗಿಡಗಳಿಗೆ 1000 ರೂ. ಇದೆ. ಒಂದು ಎಕರೆ ಜಾಗದಲ್ಲಿ 130 ಗಿಡ ನೆಡಲಾಗಿದ್ದು, ಒಟ್ಟು ಎರಡೂವರೆ ಎಕರೆ ಜಾಗದಲ್ಲಿ 310 ಗಿಡ ನೆಡಲಾಗಿದೆ. ವರ್ಷಕ್ಕೆ ಎರಡು ಬಾರಿ ಗೊಬ್ಬರ ಹಾಕಬೇಕಾಗುತ್ತದೆ. ಹೆಚ್ಚಾಗಿ ಯಾವುದೇ ರೋಗಬಾಧೆ ಅಪಾಯ ಇಲ್ಲ. ಆದರೆ, ಮಳೆ ಹೆಚ್ಚಾದಲ್ಲಿ ಫಂಗಸ್ ರೋಗ ಬಂದು ಅದು ಉದುರಿ ಹೋಗುತ್ತದೆ. ಉಳಿದಂತೆ ಯಾವುದೇ ರೀತಿಯ ರೋಗದ ಅಪಾಯ ಇಲ್ಲ. ಸುತ್ತಮುತ್ತ ಸಿಗುವ ಕೋಳಿಗೊಬ್ಬರ ಹಾಗೂ ಸಗಣಿಗೊಬ್ಬರ ಉಪಯೋಗಿಸಬಹುದು.
ಕಾಯಿಲೆಗೆ ರಾಮಬಾಣ: ರೋನ್ ಗ್ರೀನ್, ಸ್ಕೂಲ್ ಬಾಯ್, ಎನ್18, ಜೆರೋಎಮಾಸ್, ಬಿಂಜಾಯ್, ಮಲ್ವಾನ, ರೆಡ್ ಬ್ಯಾರನ್ ಸೇರಿ 8 ಬಗೆಯ ರಾಂಬೂಟನ್ ಹಣ್ಣುಗಳ ತಳಿ ಬೆಳೆಯಲಾಗುತ್ತದೆ. ಹೆಚ್ಚು ಇಳುವರಿ ಸಿಗುವ ಹಾಗೂ ರುಚಿಕರವಾಗಿರುವ ಎನ್18 ತಳಿಯ ಗಿಡವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ರಾಂಬೂಟನ್ ಕ್ಯಾನ್ಸರ್ ಸೇರಿ ವಿವಿಧ ಕಾಯಿಲೆಗಳಿಗೆ ಹೇಳಿ ಮಾಡಿಸಿದ ಹಣ್ಣು. ತೂಕ ಕಡಿಮೆ ಮಾಡಲು ಕೂಡ ಸಹಕಾರಿ. ಹೀಗೆ ವಿವಿಧ ರೋಗಗಳಿಗೆ ಇದು ರಾಮಬಾಣವಾಗಿದೆ.
ನೀರಿನ ಅವಶ್ಯಕತೆ ಹೆಚ್ಚು: ಬೇಸಿಗೆಯಲ್ಲಿ ಒಂದು ವರ್ಷದ ಗಿಡಕ್ಕೆ 20 ರಿಂದ 30 ಲೀಟರ್ (ಒಂದು ದಿನಕ್ಕೆ) ನೀರಿನ ಅವಶ್ಯಕತೆಯಿದೆ. ಎರಡು ವರ್ಷದ ಗಿಡಗಳಿಗೆ 10 ರಿಂದ 15 ಲೀಟರ್ ನೀರಿನ ಅವಶ್ಯಕತೆ ರಾಂಬೂಟನ್ ತಳಿಗೆ ಬೇಕಾಗುತ್ತದೆ. ನೀರಿನ ಪ್ರಮಾಣ ಕಡಿಮೆಯಾದರೆ ಎಲೆಗಳು ಒಣಗಲಾರಂಭಿಸುತ್ತವೆ. ಇಂತಹ ಸಂದರ್ಭದಲ್ಲಿ ನೀರಿನ ಪ್ರಮಾಣ ಹೆಚ್ಚಳ ಮಾಡಿದಲ್ಲಿ ಸಮಸ್ಯೆ ಬಗೆಹರಿಯಲಿದೆ. ಗೋಪಾಲಕೃಷ್ಣ ಅವರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, 300 ಮರದ ಬುಡದಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಾರೆ.