ಸಂಶಯದಿಂದ ಆಪತ್ತು: 'ಆ ಕ್ಷಣ..' ಅಂಕಣ

aa kshana
Published on
ಮೂವತ್ತೈದು ವರ್ಷದ ರಾಜ ಹಾಗೂ 32 ವರ್ಷದ ಪಾರ್ವತಿ ಇವರದು ಕುಟುಂಬದವರು ಪರಸ್ಪರ ಒಪ್ಪಿ ಮಾಡಿಸಿದ ಲಗ್ನ. ಅವರ ಒಬ್ಬಳೇ ಹೆಣ್ಣು ಮಗಳು ಏಳು ವರ್ಷದ ರಾಣಿ ಪ್ರೈಮರಿ ಶಾಲೆಗೆ ಹೋಗುತ್ತಿದ್ದಳು. ರಾಜ ಸ್ವಂತ ಕ್ಯಾಬ್ ಹೊಂದಿದ್ದು ವಿಶ್ವವಿದ್ಯಾನಿಲಯವೊಂದಕ್ಕೆ ವಾಹನವನ್ನು ಬಾಡಿಗೆಗೆ ಓಡಿಸುತ್ತಿದ್ದ. ಇದಲ್ಲದೇ ಸ್ವಗ್ರಾಮದಲ್ಲಿ ಅವನಿಗೆ ಸ್ವಲ್ಪ ಖುಷ್ಕಿ ಜಮೀನಿತ್ತು. ಹೀಗಾಗಿ ಆರ್ಥಿಕವಾಗಿ ಅನುಕೂಲಸ್ಥನಾಗಿದ್ದ. ಮಗಳು ಶಾಲೆಗೆ ಹೋಗಲಾರಂಭಿಸಿದ ನಂತರ ಪಾರ್ವತಿಗೆ ಮನೆಯಲ್ಲಿರುವುದು ಬೇಸರವಾಗಿ ಕೆಲಸಕ್ಕೆ ಸೇರುವುದಾಗಿ ಹೇಳಿದಳು. ಆದರೆ ಆತನಿಗೆ ಪತ್ನಿ ಕೆಲಸಕ್ಕೆ ಹೋದರೆ ಪರಪುರುಷರ ಸಂಪರ್ಕಕ್ಕೆ ಬಂದು ಅವರತ್ತ ಅನುರಕ್ತಳಾಗಬಹುದು ಎನ್ನುವ ಚಿಂತೆಯಿತ್ತು. ಹೀಗಾಗಿ ಮದುವೆಯ ಮುಂಚೆ ಪಾರ್ವತಿ ಗಾರ್ವೆಂಟ್ ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿದ್ದರೂ ಮದುವೆಯ ನಂತರ ಆಕೆ ಕೆಲಸಕ್ಕೆ ಹೋಗುವುದನ್ನು ನಿರ್ಬಂಧಿಸಿದ್ದ.

ರಾಣಿಗೆ ಬೇಸಿಗೆ ರಜಾ ಬಂದಾಗ ಪಾರ್ವತಿ ಮಗಳೊಡನೆ ಹತ್ತು ದಿನ ತವರು ಮನೆಗೆ ಹೋಗಲು ಪತಿಯ ಒಪ್ಪಿಗೆ ಕೇಳಿದಳು. ಆತ ಸಂತೋಷದಿಂದಲೇ ಒಪ್ಪಿ ಅವರನ್ನು ಕಳುಹಿಸಿದ ನಂತರ ತನ್ನ ಗ್ರಾಮಕ್ಕೆ ಹೋಗಿ ಮಾತಾಪಿತರೊಂದಿಗೆ ಕಾಲ ಕಳೆದ. ಎಂಟು ದಿನಗಳ ಬಳಿಕ ಆಕೆಯ ತಂದೆ ರಾಜನಿಗೆ ಕರೆ ಮಾಡಿ ‘ನಿನ್ನೆ ಬೆಳಿಗ್ಗೆ ಪಾರ್ವತಿ ತನ್ನ ಗೆಳತಿಯರೊಡನೆ ಪಿಕ್​ನಿಕ್​ಗೆ ಹೋದವಳು ಇನ್ನೂ ಬಂದಿಲ್ಲ’ ಎಂದಾಗ ಗಾಬರಿಯಾದ ಆತ ರಾಣಿ ಎಲ್ಲಿದ್ದಾಳೆಂದು ಕೇಳಿದ. ರಾಣಿಯನ್ನು ನಮ್ಮ ಬಳಿಯೇ ಬಿಟ್ಟುಹೋದಳು ಎಂದು ಮಾವ ತಿಳಿಸಿದ.

ಕೂಡಲೇ ಆತ ಮಾವನ ಮನೆಗೆ ತೆರಳಿದ. ಪಾರ್ವತಿ ಯಾರ ಜೊತೆ ಹೋದಳು, ಎಲ್ಲಿಗೆ ಹೋದಳು ಮುಂತಾದ ವಿವರಗಳನ್ನು ಕೇಳಿದ. ‘ತನ್ನ ಶಾಲಾ ಗೆಳತಿಯರ ಜೊತೆ ಹತ್ತಿರದ ಪ್ರವಾಸಿ ತಾಣಕ್ಕೆ ಪಿಕ್​ನಿಕ್ ಹೋಗುವುದಾಗಿ ಹೇಳಿ ಬೆಳಗಿನ 6 ಗಂಟೆಗೇ ಹೊರಟಳು. ರಾತ್ರಿಯಾದರೂ ಬರಲಿಲ್ಲ. ನಾವು ಬೆಳಗಾಗುವವರೆಗೆ ಕಾದು ನಿನಗೆ ಫೋನ್ ಮಾಡಿದೆವು’ ಎಂದರು. ಹಲವಾರು ಬಾರಿ ಆಕೆಗೆ ಕರೆ ಮಾಡಿದೆವು. ಆದರೆ ಸ್ವಿಚ್ ಆಫ್ ಎಂದೇ ಬರುತ್ತಿದೆ ಎಂದು ಹೇಳಿದರು. ರಾಜ ಸ್ಥಳೀಯ ಪೊಲೀಸ್ ಠಾಣೆಗೆ ಧಾವಿಸಿ ಪತ್ನಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ. ಆ ಠಾಣೆಯಲ್ಲಿ ಅವನ ಪರಿಚಯಸ್ಥ ಅಧಿಕಾರಿಯೊಬ್ಬ ಇದ್ದ ಕಾರಣ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡರು. ಪಾರ್ವತಿಯ ಮೊಬೈಲ್ ನಂಬರ್ ವಿವರಗಳನ್ನು ಟೆಲಿಫೋನ್ ಸಂಸ್ಥೆಗೆ ನೀಡಿದರು. ಪಾರ್ವತಿಯ ಕಡೆಯ ಲೊಕೇಷನ್ ಸುಮಾರು 35 ಕಿ.ಮೀ ದೂರದಲ್ಲಿರುವ ಒಂದು ತಾಲ್ಲೂಕು ಕೇಂದ್ರ ಎಂದು ಪತ್ತೆಯಾಯಿತು. ಆ ಊರಿನಲ್ಲಿ ಪಾರ್ವತಿಯ ಅಥವಾ ರಾಜನ ಸಂಬಂಧಿಕರು ಯಾರೂ ಇರದಿದ್ದ ಕಾರಣ ಆಕೆಯನ್ನು ಅಪಹರಣ ಮಾಡಿರಬಹುದೇನೋ ಎನ್ನುವ ಸಂಶಯ ಬಲವಾಯಿತು.

ಪೊಲೀಸರು ಅಲ್ಲಿಗೆ ಧಾವಿಸಿದರು. ಅಲ್ಲಿ ಯಾವುದೇ ಸುಳಿವು ಸಿಗಲಿಲ್ಲ. ಆನಂತರ ಆಕೆಯ ಫೋನ್​ಗೆ ಬಂದು ಹೋಗುವ ಕರೆಗಳನ್ನು ಪರಿಶೀಲಿಸಿದಾಗ ಆಕೆ ಕಾಣೆಯಾಗುವ ಪೂರ್ವದಲ್ಲಿ ಶಂಕರ್ ಎನ್ನುವವನ ಜತೆ ನಿರಂತರ ಸಂಪರ್ಕದಲ್ಲಿದ್ದುದು ತಿಳಿಯಿತು. ಶಂಕರನ ವಿಳಾಸ ಪಡೆದ ಪೊಲೀಸರು ಅವನ ಮನೆಗೆ ತೆರಳಿದಾಗ ಪಾರ್ವತಿ ಅಲ್ಲಿ ಸಿಕ್ಕಳು.

ಶಂಕರ್ ಪಾರ್ವತಿಯ ಪ್ರೈಮರಿ ಶಾಲೆಯ ಸಹಪಾಠಿಯಾಗಿದ್ದು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಆತನಿಗೆ ಇನ್ನೂ ಮದುವೆಯಾಗಿರಲಿಲ್ಲ. ಪಾರ್ವತಿ ಆತನನ್ನು ಸಂರ್ಪಸಿ ಕೆಲ ದಿನಗಳ ಕಾಲ ಆಶ್ರಯ ಕೋರಿದ್ದಲ್ಲದೇ ಅವನನ್ನು ಮದುವೆಯಾಗಬೇಕೆಂದು ಪೀಡಿಸಿ ಬಂದಿದ್ದಾಗಿ ತಿಳಿಯಿತು. ಪಾರ್ವತಿಯನ್ನು ವಿಚಾರಿಸಿದಾಗ, ‘ನನಗೆ ರಾಜನ ಜೊತೆ ಜೀವನ ನಡೆಸುವುದು ಕಷ್ಟವಾಗಿದೆ. ಆತ ಯಾವಾಗಲೂ ನನ್ನನ್ನು ಸಂಶಯದಿಂದ ನೋಡುತ್ತಾನೆ. ಯಾರಾದರೂ ಪುರುಷರ ಜೊತೆ ಮಾತನಾಡಿದರೆ ನೂರಾರು ಪ್ರಶ್ನೆಗಳನ್ನು ಕೇಳುತ್ತಾನೆ. ನಾನು ನೌಕರಿಗೆ ಹೋಗಬೇಕು ಎಂದು ಕೇಳಿದರೂ ಹೋಗಲು ಬಿಡುತ್ತಿಲ್ಲ. ಮನೆಯಲ್ಲಿ ಒಬ್ಬಳೇ ಇದ್ದು, ಟಿವಿ ನೋಡಿ ಸಾಕಾಗಿದೆ. ಅವನ ಜತೆ ಜೀವನ ಬೇಡವೆಂದೇ ನಾನೇ ಮನಃಪೂರ್ವಕವಾಗಿ ಶಂಕರನ ಆಶ್ರಯ ಕೋರಿ ಇಲ್ಲಿಗೆ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ’ ಎಂದಳು. ಇದನ್ನು ಕೇಳಿ ರಾಜ ಬೇಸರಪಟ್ಟು ಅಲ್ಲಿಂದ ಹೊರನಡೆದ.

ನಂತರ ಪಾರ್ವತಿಯನ್ನು ಪಾಲಕರಿಗೆ ಒಪ್ಪಿಸಿದ ಪೊಲೀಸರು ಪ್ರಕರಣದ ಕಡತವನ್ನು ಮುಚ್ಚಿದರು. ಪಾರ್ವತಿಯನ್ನು ಕರೆದೊಯ್ಯಲು ಆಕೆಯ ಮಾತಾಪಿತರು ರಾಜನನ್ನು ಸಂರ್ಪಸಿದಾಗ ‘ನನ್ನನ್ನು ಬಿಟ್ಟು ಬೇರೆಯವನ ಜತೆ ಓಡಿಹೋದ ಅವಳನ್ನು ಮನೆಗೆ ಸೇರಿಸುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ. ಅವಳನ್ನು ಶಂಕರನಿಗೇ ಕೊಟ್ಟು ಲಗ್ನಮಾಡಿ ಎಂದ. ಆದರೆ ಶಂಕರನಿಗೆ ಈ ಲಗ್ನ ಬೇಕಾಗಿರಲಿಲ್ಲ. ಒಂದು ತಿಂಗಳವರೆಗೆ ಸುಮ್ಮನಿದ್ದ ಪಾರ್ವತಿಯ ಮಾತಾಪಿತರು ರಾಜನ ಮಾತಾಪಿತರನ್ನು ಸಂರ್ಪಸಿ ಪಾರ್ವತಿಯನ್ನು ಗಂಡನ ಮನೆಗೆ ಕರೆದೊಯ್ಯಲು ಹೇಳಿದಾಗ ‘ಆತ ಪಾರ್ವತಿಯ ಜತೆ ಸಂಸಾರ ಮಾಡಲು ಒಪ್ಪಿದರೆ ನಮ್ಮ ಅಭ್ಯಂತರವಿಲ್ಲ’ ಎಂದು ಕೈಚೆಲ್ಲಿದರು. ಆದರೆ ರಾಜ ಆಕೆ ಜತೆ ಸಂಸಾರ ಮಾಡುವುದಿಲ್ಲವೆಂದು ದೃಢ ನಿಲುವನ್ನು ತಳೆದ ಕಾರಣ ಸಮಸ್ಯೆ ಉಲ್ಬಣಗೊಂಡಿತು.

ಕೆಲವು ತಿಂಗಳು ಸುಮ್ಮನಿದ್ದ ಪಾರ್ವತಿಯ ಮಾತಾಪಿತರು ಎರಡೂ ಕುಟುಂಬಗಳ ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜನ ಜತೆ ಮಾತುಕತೆ ನಡೆಸಿದರು. ‘ಶಂಕರನ ಜೊತೆ ಪಾರ್ವತಿ ಹತ್ತು ದಿನಗಳು ಕಳೆದಿರುವ ಕಾರಣ ನನಗೆ ಅವಳ ಚಾರಿತ್ರ್ಯದ ಬಗ್ಗೆ ಸಂಶಯವಿದೆ, ಅವಳು ನನಗೆ ಬೇಡ’ ಎಂದ. ಮುಂದೇನು ಮಾಡಬೇಕೆಂದು ಪಾರ್ವತಿಯ ಮಾತಾಪಿತರಿಗೆ ತೋಚಲಿಲ್ಲ. ಮದುವೆಯಾದ ಹತ್ತು ವರ್ಷದ ನಂತರ ಗಂಡನನ್ನು ತೊರೆದು ಬಂದಿದ್ದ ಮಗಳ ಬಗ್ಗೆ ಸಂಬಂಧಿಕರಿಗೆ ಸಮಜಾಯಿಷಿ ಕೊಟ್ಟು ಅವರಿಗೂ ಸಾಕಾಗಿತ್ತು. ಇದಲ್ಲದೆ ಪಾರ್ವತಿ ಮತ್ತು ರಾಣಿಯನ್ನು ಸಾಕಲು ಅವರಲ್ಲಿ ಆರ್ಥಿಕ ಶಕ್ತಿಯಿರಲಿಲ್ಲ. ವಿವಾಹ ವಿಚ್ಛೇದನ ಮಾಡಿಸಿದರೆ ರಾಜನಿಂದ ಪಾರ್ವತಿ ಜೀವನಾಂಶ ಪಡೆಯಬಹುದು ಎಂದು ಕೆಲ ಹಿರಿಯರು ಸಲಹೆಯಿತ್ತರು. ಪಾರ್ವತಿಯ ಮಾತಾಪಿತರು ವಕೀಲರೊಬ್ಬರನ್ನು ಸಂರ್ಪಸಿದಾಗ, ವಿಚ್ಛೇದನಕ್ಕಾಗಿ ಅರ್ಜಿಯನ್ನೇನೋ ಹಾಕಬಹುದು, ಆದರೆ ಈ ಪ್ರಕ್ರಿಯೆ ಸಮಯ ಹಿಡಿಯುತ್ತದೆ, ಹಾಗೂ ಸಾಕಷ್ಟು ಹಣ ಖರ್ಚಾಗುತ್ತದೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರೆ ಪಾರ್ವತಿಗೆ ಜೀವನಾಂಶ ಬರುವಂತೆ ಮಾಡಬಹುದು. ಆದರೆ ಮೊದಲಿಗೆ ಆಪ್ತ ಸಮಾಲೋಚಕರನ್ನು ಭೇಟಿಯಾಗಿ. ಯಾವುದಕ್ಕೂ ದುಡುಕಬೇಡಿ’ ಎಂದರು.

ಅದರಂತೆ ಪಾರ್ವತಿಯ ಪಾಲಕರು ಪೊಲೀಸ್ ಇಲಾಖೆಯಲ್ಲಿಯೇ ಇದ್ದ ಆಪ್ತ ಸಮಾಲೋಚಕರನ್ನು ಭೇಟಿಯಾದರು. ಆಪ್ತ ಸಮಾಲೋಚಕರು ರಾಜನನ್ನು ಮಾತುಕತೆಗಾಗಿ ಕರೆಸಿದರು. ಆತ ಪತ್ನಿ ಮತ್ತು ಮಗಳನ್ನು ತನ್ನೊಡನೆ ಇಟ್ಟುಕೊಳ್ಳಲು ಒಪ್ಪಲಿಲ್ಲ. ಆದರೆ ಎರಡು ಮೂರು ಸುತ್ತಿನ ಸಮಾಲೋಚನೆಯ ನಂತರ ಆತ ಪಾರ್ವತಿಯೊಡನೆ ಸಂಸಾರ ಮಾಡಲು ಒಲ್ಲದ ಮನಸ್ಸಿನಿಂದಲೇ ಒಪ್ಪಿದ. ಆದರೆ ಪತ್ನಿಯನ್ನು ಕರೆದೊಯ್ಯುವ ಸಮಯಕ್ಕೆ ಒಂದು ಷರತ್ತನ್ನು ಹಾಕಿದ. ‘ಪಾರ್ವತಿ ಪರಪುರುಷನ ಜೊತೆ ವಾಸ ಮಾಡಿರುವ ಕಾರಣ ಅವನ ಜೊತೆ ಲೈಂಗಿಕ ಸಂಪರ್ಕ ಮಾಡಿಲ್ಲ ಎನ್ನುವ ಬಗ್ಗೆ ನನಗೆ ಖಾತರಿಯಿಲ್ಲ. ಹೀಗಾಗಿ ಆಕೆ ತಾನು ಪತಿವ್ರತೆಯೆಂದು ಎಲ್ಲರ ಸಮ್ಮುಖದಲ್ಲಿ ಪ್ರಮಾಣ ಮಾಡಿದ ನಂತರವೇ ಮನೆಗೆ ಸೇರಿಸುವುದು’ ಎಂದ. ‘ಅದಕ್ಕೇನಂತೆ ನಾನೇನೂ ಕೆಟ್ಟ ಕೆಲಸ ಮಾಡಿಲ್ಲ. ಖಂಡಿತವಾಗಿ ಪ್ರಮಾಣ ಮಾಡುತ್ತೇನೆ’ ಎಂದು ಪಾರ್ವತಿ ಹೇಳಿದಳು. ಅಂತೆಯೇ ನಿಗದಿತ ದಿನದಂದು ಎರಡೂ ಕುಟುಂಬದವರು ರಾಜ ಹೇಳಿದ ದೇವಸ್ಥಾನವೊಂದಕ್ಕೆ ಹೋದರು. ಅದೊಂದು ನಿರ್ಜನ ಪ್ರದೇಶದಲ್ಲಿತ್ತು. ‘ದೇವರ ಮುಂದೆ ನೀನು ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿ ಚಾರಿತ್ರ್ಯ ಕೆಟ್ಟಿಲ್ಲ ಎಂದು ಹೇಳಬೇಕು’ ಎಂದ ರಾಜ ಅವಳನ್ನು ದೇವರೆದುರು ನಿಲ್ಲಿಸಿ ಒಂದು ಹಿಡಿ ಕರ್ಪರವನ್ನು ಆಕೆಯ ಬೊಗಸೆಗೆ ಹಾಕಿದ. ‘ನಾನು ಈ ಕರ್ಪರಕ್ಕೆ ಬೆಂಕಿ ಹಚ್ಚುವೆ, ಬೆಂಕಿ ನಿನ್ನ ಕೈಗಳನ್ನು ಸುಡದೇ ಹೋದರೆ ನೀನು ಪತಿವ್ರತೆಯೆಂದು ನಂಬುವೆ’ ಎಂದ. ಆಕೆ ಒಪ್ಪಿದಾಗ ರಾಜ ಕರ್ಪರಕ್ಕೆ ಕಡ್ಡಿ ಗೀರಿದ. ಧಗ್ಗೆಂದು ಬೆಂಕಿ ಹತ್ತಿ ಪಾರ್ವತಿಯ ಕೈ ಸುಡತೊಡಗಿತು. ಆಕೆ ಕೈ ಕೊಡವಿದಾಗ ಉರಿಯುತ್ತಿದ್ದ ಕರ್ಪರದ ತುಂಡುಗಳು ಅವಳ ಸೀರೆಗೆ ತಗುಲಿ ಸೀರೆ ಹೊತ್ತಿಕೊಂಡು ಉರಿಯತೊಡಗಿತು. ಕೂಡಲೇ ಸುತ್ತಮುತ್ತಲ್ಲಿದ್ದವರು ನೀರನ್ನು ತಂದು ಸುರಿದರು. ಬೆಂಕಿ ನಂದಿತಾದರೂ ಸಿಂಥೆಟಿಕ್ ಸೀರೆಯಾದ್ದರಿಂದ ಆಕೆಗೆ ತೀವ್ರ ಗಾಯಗಳಾದವು. ಕೂಡಲೇ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಆಕೆಗೆ ಎರಡನೇ ಹಂತದ ಸುಟ್ಟ ಗಾಯಗಳಾಗಿದ್ದು ಒಂದು ತಿಂಗಳು ಆಸ್ಪತ್ರೆಯಲ್ಲಿ ಇರಬೇಕಾಯಿತು. ಪಾರ್ವತಿ ದೂರು ನೀಡಿದ ಕಾರಣ ರಾಜನ ವಿರುದ್ಧ ತೀವ್ರ ಗಾಯ ಮಾಡಿದ ಪ್ರಕರಣ ದಾಖಲಾಯಿತು. ನ್ಯಾಯಾಲಯದಲ್ಲಿ ರಾಜ ತಾನು ಭಗವಾನ್ ಶ್ರೀರಾಮಚಂದ್ರ ನಡೆದಂತೆ ನಡೆದೆ ಎಂದು ವಾದಿಸಿದ. ಆದರೆ ಪಾರ್ವತಿಗಾದ ಗಾಯಗಳಿಗೆ ಅವನೇ ಕಾರಣ ಎಂದು ತೀರ್ವನಿಸಿದ ನ್ಯಾಯಾಲಯ ಎರಡು ವರ್ಷದ ಜೈಲು ಶಿಕ್ಷೆ ನೀಡಿತು. ‘ಧಾರುಣೀಸುತೆಯವೊಲು ಧೃಢಮನ್ಕರದಾರು? ಮಾರೀಚಹರಿಣ ವಡ್ಡಾಡಲೇನಾಯ್ತು? ವಾರಿಧಿಯೊಳಡಗಿ ನಿದ್ರಿಪಬಾಡವವೋ ತೃಷ್ಣೆ, ಆರದನು ಕೆರಳಿಪರೋ ಮಂಕುತಿಮ್ಮ’ ಎಂದಂತೆ ಪಾರ್ವತಿಯ ಮನದೊಳಗಿನ ಸುಪ್ತ ಆಸೆ ಆಕಾಂಕ್ಷೆಗಳು ಪ್ರಕಟವಾದ ಕಾರಣಕ್ಕಾಗಿಯೇ ಆಕೆ ತೊಂದರೆಗೀಡಾಗಬೇಕಾಯಿತು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net