

ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನಟಿ ಪ್ರಿಯಾಮಣಿ, ಬಾಲಿವುಡ್ ಮಂದಿಗೂ ಗೊತ್ತು. ಇತ್ತೀಚೆಗಷ್ಟೇ ಹಿಂದಿಯ ಎರಡು ವೆಬ್ಸಿರೀಸ್ಗಳಲ್ಲಿ ನಟಿಸಿ ಎಲ್ಲರ ಗಮನಸೆಳೆದಿದ್ದರು. ಇದೀಗ ಇದೇ ನಟಿ ಬಾಲಿವುಡ್ನಲ್ಲೇ ಭದ್ರ ನೆಲೆಯೂರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಂತ ಬೆನ್ನುಬಿದ್ದು ಅವಕಾಶಗಳ ಹಿಂದೆ ಹೋಗುವುದಿಲ್ಲ ಎಂಬ ಮಾತನ್ನೂ ಕೇಳಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾರಂಗದಲ್ಲೂ ಸಿನಿಮಾ ಮಾಡಿರುವ ಪ್ರಿಯಾಮಣಿ, ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಈಗಲೂ ದಕ್ಷಿಣದ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಲಾಕ್ಡೌನ್ ಸಂದರ್ಭದಲ್ಲಿ ಹಿಂದಿಯ ‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ಅತೀತ್’ ವೆಬ್ಸಿರೀಸ್ನಲ್ಲಿ ನಟಿಸಿ ಓಟಿಟಿ ವೀಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಈಗ ಆ ವೆಬ್ಸಿರೀಸ್ ಮೂಲಕವೇ ಬಾಲಿವುಡ್ನಲ್ಲಿ ಹೆಚ್ಚೆಚ್ಚು ಗುರುತಿಸಿಕೊಳ್ಳುವ ಬಗ್ಗೆ ಪ್ರಿಯಾಮಣಿ ಮಾತನಾಡಿದ್ದಾರೆ. ಅಂದರೆ, ವೆಬ್ಸರಣಿಗೆ ಸಿಕ್ಕ ಜನಮನ್ನಣೆ ಕಂಡು ಅವಕಾಶಗಳು ಸಿಕ್ಕರೆ ಬಿಟೌನ್ನಲ್ಲಿ ಸಕ್ರಿಯರಾಗುವ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಸಯ್ಯಾ … ಸಯ್ಯಾ …’ ಅಂತಿದ್ದಾರೆ ಮನು
‘ಈ ಪಾತ್ರಕ್ಕೆ ಪ್ರಿಯಾಮಣಿ ಸೂಕ್ತ ಎಂದು ಬಾಲಿವುಡ್ ಸಿನಿಮಾ ಮೇಕರ್ಸ್ ನಿರ್ಧರಿಸಿ ಅವಕಾಶ ನೀಡಿದರೆ, ನಾನು ಅವರು ಕೊಟ್ಟ ಪಾತ್ರಕ್ಕೆ ಜೀವ ನೀಡಬಲ್ಲೆ. ಹಿಂದಿಯಲ್ಲಿ ಕೆರಿಯರ್ ವಿಸ್ತರಿಸಿಕೊಳ್ಳಬೇಕೆಂಬ ಕನಸು ನನಗೂ ಇದೆ. ಹಾಗಂತ ಅದರ ಹಿಂದೆಯೇ ನಾನು ಹೋಗುತ್ತಿಲ್ಲ. ಸುಮ್ಮನೇ ಅವಕಾಶಕ್ಕಾಗಿ ನುಗ್ಗುವುದು ನನಗಿಷ್ಟವಿಲ್ಲ. ಅದೇ ರೀತಿ ನಾನು ಮಾಡಿದ ಸಿನಿಮಾ ಆಗಲಿ, ವೆಬ್ಸಿರೀಸ್ ಆಗಲಿ ಅದರಲ್ಲಿ ನಾನು ತೃಪ್ತಿ ಕಂಡುಕೊಂಡಿದ್ದೇನೆ’ ಎಂದಿದ್ದಾರೆ ಪ್ರಿಯಾಮಣಿ.
ಸದ್ಯ ತೆಲುಗಿನಲ್ಲಿ ಸಿದ್ಧವಾಗುತ್ತಿರುವ ‘ವಿರಾಟಪರ್ವಂ’, ‘ನಾರಪ್ಪ’, ‘ಸಿರಿವೆನ್ನಿಲಾ’, ಕನ್ನಡದ ‘ಡಾ. 56’ ಮತ್ತು ಬಾಲಿವುಡ್ನಲ್ಲಿ ಅಜಯ್ ದೇವಗನ್ ಜತೆಗೆ ‘ಮೈದಾನ್’ ಸಿನಿಮಾದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಕಾರ್ಯಕ್ರಮ, ಯೋಜನೆಗಳ ಭಿತ್ತಿಪತ್ರ ಬಿಡುಗಡೆ