

‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಮಣಿ, ಈಗ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಂಬೈನ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗಲೇ ಇವರ ಸಿನಿಮಾವೊಂದು ಮಂಗಳವಾರ ಬಿಡುಗಡೆ ಆಗಿದೆ. ಅರೇ ಎಲ್ಲ ಸಿನಿಮಾ ಮಂದಿರಗಳೇ ಬಂದ್ ಇರುವಾಗ, ಅದ್ಯಾವ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ? ಎಂಬ ಪ್ರಶ್ನೆ ಬರಬಹುದು.
ಅಷ್ಟೇ ಅಲ್ಲ, ಆ ಸಿನಿಮಾ ಯಾವುದು ಎಂದು ಕುತೂಹಲವೂ ಆಗಬಹುದು. ಪ್ರಿಯಾಮಣಿ ಅವರ ಹೊಸ ಸಿನಿಮಾ ಬಿಡುಗಡೆಯಾಗಿರುವುದು ಚಿತ್ರಮಂದಿರದಲ್ಲಲ್ಲ, ಓಟಿಟಿಯಲ್ಲಿ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಅಮೆಜಾನ್, ನೆಟ್ಫ್ಲಿಕ್ಸ್, ಜೀ5ಗಳಲ್ಲಿ ಬಿಡುಗಡೆಯಾಗುತ್ತಿವೆ.
ಈಗ ಪ್ರಿಯಾಮಣಿ ನಟನೆಯ ‘ಅತೀತ್’, ಜೀ5ನಲ್ಲಿ ಮಂಗಳವಾರ ರಿಲೀಸ್ ಆಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ರಾಜೀವ್ ಖಂಡೆಲ್ವಾಲ್, ಪ್ರಿಯಾಮಣಿ ಮತ್ತು ಸಂಜಯ್ ಸುರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಅಂದಹಾಗೆ, ತನುಜ್ ಬಾರ್ಮರಾ ನಿರ್ದೇಶದ ‘ಅತೀತ್’ ಚಿತ್ರದ ಕಥೆಯೂ ಅಷ್ಟೇ ಕುತೂಹಲಕಾರಿಯಾಗಿದೆ. ಆರ್ವಿುಯ ಕ್ಯಾಪ್ಟನ್ ಅತೀತ್ ರಾಣಾ ನಾಪತ್ತೆಯಾಗುತ್ತಾರೆ. ಅವರು ಸಾವನ್ನಪ್ಪಿದ್ದಾರೆ ಎಂದು ಸೇನೆ ಘೊಷಿಸುತ್ತದೆ. ಇತ್ತ ಅತೀತ್ ಪತ್ನಿಯನ್ನು ಮದುವೆಯಾಗಲು ಇನ್ನೋರ್ವ ಆಗಮಿಸುತ್ತಾನೆ. ಇದೆಲ್ಲ ನಡೆದು ದಶಕ ಕಳೆಯುವುದರಲ್ಲಿ ನಾಪತ್ತೆಯಾಗಿದ್ದ ಅತೀತ್ ದಿಢೀರ್ ಪ್ರತ್ಯಕ್ಷನಾಗುತ್ತಾನೆ! ಹಾಗಾದರೆ, ಅತೀತ್ಗೆ ಏನಾಗಿತ್ತು? ಹೆಂಡತಿಯ ಮುಂದಿನ ನಡೆ ಏನು? ಹೀಗೆ ಕೌತುಕದಲ್ಲಿಯೇ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಇದಲ್ಲದೆ ಪ್ರಿಯಾಮಣಿ, ಸದ್ಯ ‘ಡಾ.56’, ‘ಮೈದಾನ್’, ‘ಸಿರಿವೆನ್ನಿಲಾ’, ‘ನಾರಪ್ಪಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.