ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ ಖಾಸಗೀಕರಣ ನಿಜವೇ?

LIC F
Published on

ಭಾರತೀಯ ಜೀವವಿಮಾ ನಿಗಮದಿಂದ ಸಣ್ಣ ಪ್ರಮಾಣದಲ್ಲಿ ಬಂಡವಾಳ ಹಿಂಪಡೆಯುವ ಕೇಂದ್ರ ಸರ್ಕಾರದ ಬಜೆಟ್ ಪ್ರಸ್ತಾವವು ಮುಂದಿನ ದಿನಗಳಲ್ಲಿ ಇಡೀ ನಿಗಮವನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್​ಐಸಿ ಖಾಸಗೀಕರಣ ಗೊಳಿಸಲು ನಿಜವಾಗಿಯೂ ಸರ್ಕಾರ ಉದ್ದೇಶಿಸಿದೆಯೇ ಎಂಬ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ಕೇಂದ್ರ ಸರ್ಕಾರದ 2020-21ರ ಆಯವ್ಯಯದಲ್ಲಿ ಐಡಿಬಿಐ ಬ್ಯಾಂಕ್​ನ ಖಾಸಗೀಕರಣ, ಬ್ಯಾಂಕ್ ಠೇವಣಿ ಮೊತ್ತಕ್ಕೆ ವಿಮಾ ಭದ್ರತೆಯನ್ನು ಒಂದು ಲಕ್ಷದಿಂದ 5 ಲಕ್ಷ ರೂ.ಗೆ ಏರಿಸಿದ್ದನ್ನು ಬಿಟ್ಟರೆ ಹಣಕಾಸು ವಲಯದಲ್ಲಿ ಅತಿ ಹೆಚ್ಚು ಗಮನಸೆಳೆದಿದ್ದು ಮತ್ತು ಅಸಕ್ತಿ ಕೆರಳಿಸಿದ್ದು ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂಪಡೆತದ ಪ್ರಸ್ತಾವ.

ಸರ್ಕಾರವು ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವನ್ನು ಖಾಸಗಿಯವರಿಗೆ ಭಾಗಶಃ ಮಾರಾಟ ಮಾಡುವ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂಬ ಪುಕಾರು ಕಳೆದ ವಾರವಿಡೀ ದೇಶಾದ್ಯಂತ ಸುದ್ದಿಯಲ್ಲಿತ್ತು. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಯಿತು.

ಈ ನಿಗಮವನ್ನು ಷೇರು ಮಾರುಕಟ್ಟೆಯಲ್ಲಿ ನೋಂದಣಿ ಮಾಡುವುದಕ್ಕೂ ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ. 2021ರ ಎರಡನೇ ಅವಧಿಯಲ್ಲಿ ಐಪಿಓ ಮೂಲಕ ಷೇರುಗಳನ್ನು ಮಾರಲು ಉದ್ದೇಶಿಸಿದೆ. ಸದ್ಯ ಜೀವ ವಿಮಾ ನಿಗಮದ ಶೇ. 100 ಶೇರುಗಳು ಸರ್ಕಾರದ ಕೈಯಲ್ಲಿ ಇವೆ. ಅದರಲ್ಲಿ ಶೇಕಡ ಎಷ್ಟು ಷೇರುಗಳನ್ನು ಮಾರುಕಟ್ಟೆಗೆ ಬಿಡಬಹುದು ಎನ್ನುವುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.

ಆದರೆ ಮಾರುಕಟ್ಟೆ ವಿಶ್ಲೇಷಕರು ಮತ್ತು ಅರ್ಥಿಕ ತಜ್ಞರ ಪ್ರಕಾರ ಕನಿಷ್ಠ ಶೇ. 10 ಷೇರುಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಷ್ಟು ಷೇರುಗಳನ್ನ ಮಾರಾಟ ಮಾಡಿದರೆ 3.10 ಲಕ್ಷ ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.

ಆದರೆ ಸರ್ಕಾರದ ಅವಶ್ಯಕತೆ ಕೇವಲ 2.14 ಲಕ್ಷ ಕೋಟಿ ರೂ.; ಹಾಗಾಗಿ ಸರ್ಕಾರ ಶೇ. 10ಕ್ಕಿಂತ ಕಡಿಮೆ ಷೇರುಗಳನ್ನು ಮಾರಬಹುದು ಎನ್ನುವ ಲೆಕ್ಕಾಚಾರವೂ ಇದೆ. ಎಲ್​ಐಸಿ ಷೇರು ಮಾರಾಟವನ್ನು ಖಾಸಗೀಕರಣದ ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದೆ. ಸರ್ಕಾರ ಶೇ. 51ರಷ್ಟು ಷೇರುಗಳನ್ನು ತನ್ನ ಬಳಿ ಇರಿಸಿಕೊಂಡಿರುವತನಕವೂ ಅದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿಯೇ ಇರುತ್ತದೆ. ಈ ಪ್ರಮಾಣ ಶೇ. 49ಕ್ಕೆ ಇಳಿದ ತಕ್ಷಣ ಅದು ಖಾಸಗಿ ಸಂಸ್ಥೆಯಾಗುತ್ತದೆ. ಮುಂದಿನ ದಿನಗಳಲ್ಲಿ ಷೇರು ಮಾರಾಟ ಹೆಚ್ಚಿದಂತೆ ಎಲ್​ಐಸಿ ಖಾಸಗೀಕರಣದತ್ತ ಹೊರಳುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ಇತರ ಸಂಸ್ಥೆಗಳ ಖಾಸಗೀಕರಣ ಏಕೆ?: ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಕಾಪೋರೇಷನ್, ಶಿಪ್ಪಿಂಗ್ ಕಾಪೋರೇಷನ್ ಮತ್ತು ಕಂಟೇನರ್ ಕಾಪೋರೇಷನ್ ಆಫ್ ಇಂಡಿಯಾ ಖಾಸಗೀಕರಣದ ಚಿಂತನೆಯೂ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ರೈಲ್ವೆಯ ಕ್ಯಾಟರಿಂಗ್ ವಿಭಾಗವನ್ನು ಈಗಾಗಲೇ ಖಾಸಗೀಕರಣಗೊಳಿಸಿದ್ದು, ಸುಮಾರು 200-250 ರೈಲುಗಳು ಮತ್ತು 50 ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಮಾರ್ಗಸೂಚಿ ತಯಾರಿಸುವಂತೆ ಸಮಿತಿ ರಚಿಸಲಾಗಿದೆ.

ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ದೆಹಲಿ-ಲಖನೌ ತೇಜಸ್ ರೈಲನ್ನು ಖಾಸಗಿಯವರಿಗೆ ನೀಡಲಾಗಿದೆ. ದೇಶಾದ್ಯಂತ 6 ವಿಮಾನ ನಿಲ್ದಾಣಗಳ ಖಾಸಗೀಕರಣ ಈಗಾಗಲೇ ಜಾರಿಯಲ್ಲಿದೆ. ಕೆಲವು ಸಂಸ್ಥೆಗಳು ಮತ್ತು ನಿಗಮಗಳು ಸತತವಾಗಿ ನಷ್ಟ ಅನುಭವಿಸುತ್ತಿದ್ದು, ಅವುಗಳನ್ನು ಲಾಭಧ ಹಳಿಯ ಮೇಲೆ ತರಲು ಮತ್ತು ಜನತೆಗೆ ಉತ್ತಮ ಸೇವೆ ಸಲ್ಲಿಸಲು ಖಾಸಗೀಕರಣ ಮಾಡಲಾಗುತ್ತಿದೆ ಎನ್ನುವ ಸಮಜಾಯಿಷಿ ನೀಡಲಾಗುತ್ತಿದೆ.

ಈ ಬಿಳಿಯಾನೆಗಳನ್ನು ತೆರಿಗೆದಾರನ ಹಣದಿಂದ ಮುನ್ನಡೆಸುವುದು ಸರಿಯಲ್ಲ ಎನ್ನುವ ವಾದದಲ್ಲಿ ದೇಶದ ಅರ್ಥಿಕತೆಯ ಬಗೆಗಿನ ವ್ಯಾವಹರಿಕ ಚಿಂತನೆ ಇದೆ. ಆದರೆ, ಎಲ್​ಐಸಿ ಖಾಸಗೀಕರಣ ಏಕೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಎಲ್​ಐಸಿಯಿಂದ ಬಂಡವಾಳ ಹಿಂಪಡೆಯುವಲ್ಲಿ ದೇಶದ ಬಜೆಟ್​ನಲ್ಲಿನ ವಿತ್ತೀಯ ಕೊರತೆಯನ್ನು ಸರಿದೂಗಿಸಲು ಸಂಪತ್ತನ್ನು ಕ್ರೋಡೀಕರಿಸುವ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ.

ಎಲ್​ಐಸಿ ಜೀವ ತಳೆದಿದ್ದು ಹೇಗೆ?

ಜೀವ ವಿಮೆಗೆ ಭಾರತದಲ್ಲಿ ದೀರ್ಘ ಇತಿಹಾಸ ಇದೆ. 1818ರಲ್ಲಿ ಓರಿಯಂಟಲ್ ಲೈಫ್ ಇನ್ಸೂರೆನ್ಸ್ ಕಂಪನಿ ಹೆಸರಿನಲ್ಲಿ ಕೇವಲ ಯುರೋಪಿಯನ್ನರಿಗೆ ವಿಮೆ ಸೌಲಭ್ಯ ಆರಂಭವಾಗಿತ್ತು. ಭಾರತೀಯರನ್ನು ಎರಡನೇ ದರ್ಜೆಯವರಂತೆ ನಡೆಸಿಕೊಳ್ಳುವ ಇಂಗ್ಲಿಷ್ ವಿಮಾ ಕಂಪನಿಗಳಿಗೆ ಸವಾಲೆಸೆದು 1878ರಲ್ಲಿ ಬಾಂಬೆ ಮ್ಯೂಚುವಲ್ ಇನ್ಷೂರೆನ್ಸ್ ಸ್ಥಾಪಿತವಾಯಿತು. ಸ್ವಾತಂತ್ರ್ಯ ಹೋರಾಟ ತೀವ್ರವಾದಂತೆ ಹಲವು ಭಾರತೀಯ ಇನ್ಷೂರೆನ್ಸ್ ಕಂಪನಿಗಳು ತಲೆ ಎತ್ತಿದವು. 1912ರಲ್ಲಿ ಲೈಫ್ ಇನ್ಷೂರೆನ್ಸ್ ಕಾಯ್ದೆ ಜಾರಿಗೆ ಬಂದಿದ್ದು 1956ರಲ್ಲಿ ಸುಮಾರು 245 ಕಂಪನಿಗಳನ್ನು ಒಟ್ಟುಗೂಡಿಸಿ ರಾಷ್ಟ್ರೀಕರಣಗೊಳಿಸಿ ಎಲ್​ಐಸಿಯನ್ನು ಸ್ಥಾಪಿಸಲಾಯಿತು.

ಎಲ್​ಐಸಿ ವ್ಯಾಪಕತೆ

ಆರಂಭದಲ್ಲಿ ಐದು ವಲಯ ಕಚೇರಿ, 33 ವಿಭಾಗೀಯ ಕಚೇರಿಗಳು ಮತ್ತು 212 ಶಾಖೆಗಳು ಇದ್ದವು. ಮೂರೇ ದಶಕದಲ್ಲಿ ವಿಮೆ ಖಾತರಿ ಮೊತ್ತ 200 ಕೋಟಿಯಿಂದ 7000 ಕೋಟಿ ರೂ.ಗೆ ಜಿಗಿಯಿತು. 1956ರಲ್ಲಿ 5 ಕೋಟಿ ರೂ. ಬಂಡವಾಳ ಇದ್ದಿದ್ದು, ಈಗ 31.11 ಲಕ್ಷ ಕೋಟಿ ರೂ. ದಾಟಿದೆ. 1956ರಲ್ಲಿ 168 ಶಾಖೆಗಳು ಇದ್ದು ಈಗ 4851 ಶಾಖೆಗಳು ಇವೆ. ಸಿಬ್ಬಂದಿ ಸಂಖ್ಯೆ ಲಕ್ಷ ಮೀರಿದ್ದರೆ ಏಜೆಂಟ್​ಗಳು 11.56 ಲಕ್ಷ ಸಂಖ್ಯೆಯಲ್ಲಿದ್ದಾರೆ! ವಾರ್ಷಿಕ ಪ್ರೀಮಿಯಂ ಸಂಗ್ರಹ 1.48 ಲಕ್ಷ ಕೋಟಿ ರೂ. (2019) ಇದ್ದು ಮಾರುಕಟ್ಟೆ ಪಾಲು ಶೇ. 66.24. ಮಾರುಕಟ್ಟೆಯಲ್ಲಿ ಎಲ್​ಐಸಿಯವು 2.10 ಕೋಟಿ ಪಾಲಿಸಿಗಳು (76.28%). 2019ರಲ್ಲಿ ಪ್ರೀಮಿಯಂ ಸಂಗ್ರಹ ಮತ್ತು ಹೂಡಿಕೆ ಮೇಲಿನ ಬಡ್ಡಿ ಮತ್ತು ಲಾಭಾಂಶದಿಂದಾಗಿ ಅದರ ಆದಾಯ 5,60,784 ಲಕ್ಷ ಕೋಟಿ ರೂ. ಆಗಿದೆಯಂತೆ. ಇದು ಹಿಂದಿನ ವರ್ಷಕ್ಕಿಂತ 7% ಹೆಚ್ಚು.

ಯಾಕೆ ಈ ಷೇರು ಮಾರಾಟ?

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಾರ ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸುವುದರಿಂದ ಎಲ್​ಐಸಿಗೆ ಆರ್ಥಿಕ ಶಿಸ್ತು ಬರುತ್ತದೆ. ಷೇರುಗಳನ್ನು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡುವುದರಿಂದ ಎಲ್​ಐಸಿ ಆಡಳಿತದಲ್ಲಿ ಪಾರದರ್ಶಕತೆ ಕಾಣುತ್ತದೆ. ಇದರಲ್ಲಿ ಸಾರ್ವಜನಿಕರೂ ಭಾಗಿಯಾಗಬಹುದು. ಸರ್ಕಾರ ವಿತ್ತೀಯ ಕೊರತೆ ಎದುರಿಸುತ್ತಿದ್ದು, ಸಂಪನ್ಮೂಲದ ಕ್ರೋಡೀಕರಣ ಮಾಡಲೇಬೇಕಾಗಿದೆ. ಕಳೆದ ವರ್ಷ (2019-20) ವಿತ್ತೀಯ ಕೊರತೆ ಸಮೀಕರಿಸಲು 65000 ಕೋಟಿ ರೂ. ಬಂಡವಾಳ ಹಿಂತೆಗೆತಕ್ಕೆ ಗುರಿ ಇಟ್ಟುಕೊಂಡು 18000 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು.

ಈ ಬಾರಿ (2020-21) 2.10 ಲಕ್ಷ ಕೋಟಿ ರೂ. ಬಂಡವಾಳ ಹಿಂಪಡೆಯುವಿಕೆಯ ಗುರಿ ಇಟ್ಟುಕೊಂಡಿದ್ದು, ಎಲ್​ಐಸಿ ಮತ್ತು ಐಡಿಬಿಐ ಬ್ಯಾಂಕ್ ಷೇರುಗಳನ್ನು ಮಾರಾಟ ಮಾಡಿ ಈ ಗುರಿ ತಲುಪುವ ವಿಶ್ವಾಸದಲ್ಲಿದೆ ಕೇಂದ್ರ ಸರ್ಕಾರ. ಇದಲ್ಲದೆ ಹೆಚ್ಚುವರಿಯಾಗಿ 90000 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ. ಎಲ್​ಐಸಿ ಶೇ. 10ರಷ್ಟು ಷೇರುಗಳನ್ನು ಮಾರಾಟ ಮಾಡಿದರೂ ಇದು ಮಾರುಕಟ್ಟೆ ಬಂಡವಾಳದ ದೃಷ್ಟಿಯಲ್ಲಿ ರಿಲಯನ್ಸ್ ( 8.77 ಲಕ್ಷ ಕೋಟಿ ) ಮತ್ತು ಟಿಸಿಎಸ್​ಗಿಂತ ( 8.12 ಲಕ್ಷ ಕೋಟಿ) ಮೇಲೆ ಇರುತ್ತದೆ. 2019ರ ಡಿಸೆಂಬರ್​ನಲ್ಲಿದ್ದ ಎಲ್​ಐಸಿಯ ಮಾರುಕಟ್ಟೆ ಬಂಡವಾಳ ಸುಮಾರು 30 ಲಕ್ಷ ಕೋಟಿ ರೂ.; ಆರು ದಶಕಗಳ ಇತಿಹಾಸ ಹೊಂದಿರುವ ಎಲ್​ಐಸಿ ಭಾರಿ ಆಸ್ತಿ ಹೊಂದಿದ್ದು, ಶೇ. 20-25ರಷ್ಟು ಷೇರು ಮಾರಿದರೂ 8-10 ಲಕ್ಷ ಕೋಟಿ ರೂ. ಕ್ರೋಡೀಕರಿಸಬಹುದು.

ಸಿಬ್ಬಂದಿಯ ತೀವ್ರ ಪ್ರತಿಭಟನೆ

ನಿರೀಕ್ಷೆಯಂತೆ ಎಲ್​ಐಸಿ ಸಿಬ್ಬಂದಿ ಕೇಂದ್ರದ ಕ್ರಮವನ್ನು ವಿರೋಧಿಸಿ ಬೀದಿಗಿಳಿಯುತ್ತಿದ್ದಾರೆ. ದೇಶದ ಅತಿ ದೊಡ್ಡ ಮತ್ತು ಸದಾ ಲಾಭ ಗಳಿಸುತ್ತಿರುವ ಸಂಸ್ಥೆಯನ್ನು ಖಾಸಗಿಯವರ ಕೈಗೆ ನೀಡುವುದು ಬೇಡ ಎಂಬುದು ಅವರ ವಾದವಾಗಿದೆ. ಮುಂದಿನ ದಿನಗಳಲ್ಲಿ ಎಲ್​ಐಸಿ ಬಂಡವಾಳಶಾಹಿಗಳ ಸೊತ್ತಾದರೆ ಸಾರ್ವಜನಿಕರ ಹಣ ಎಷ್ಟು ಸುರಕ್ಷಿತವಾಗಿರಬಹುದು ಗಬಹುದು ಎನ್ನುವ ಭಯ ಅವರನ್ನು ಕಾಡುತ್ತಿದೆ. ಖಾಸಗೀಕರಣದ ಪರ ಮತ್ತು ವಿರೋಧ ಅಭಿಪ್ರಾಯಗಳು ಏನೇ ಇರಲಿ ಪಾಲಿಸಿದಾರರು ಈ ನಿಗಮದ ಖಾಸಗೀಕರಣಕ್ಕೆ ಅಂಥ ಒಲವು ತೋರಿಸುತ್ತಿಲ್ಲ ಎನ್ನುವ ಆಭಿಪ್ರಾಯ ಇದೆ.

ಎಲ್​ಐಸಿಯ ಮೌಲ್ಯಮಾಪನಕ್ಕೆ ಇನ್ನೂ ಯಾವುದೇ ಪ್ರಯತ್ನ ಆರಂಭವಾಗಿಲ್ಲ. ಸರ್ಕಾರ ತನ್ನ ಪಾಲಿನ ಸ್ವಲ್ಪ ಭಾಗದ ಹೂಡಿಕೆಯನ್ನು ಮಾತ್ರ ಹಿಂಪಡೆಯಲು ಮುಂದಾಗಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳು ಷೇರು ಮಾರುಕಟ್ಟೆಯಲ್ಲಿದ್ದರೂ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿವೆ. ಹೂಡಿಕೆ ಹಿಂಪಡೆತ-ಖಾಸಗೀಕರಣ ಒಂದೇ ಅಲ್ಲ. ಹಾಗಾಗಿ ಎಲ್​ಐಸಿ ವಿಚಾರದಲ್ಲೂ ಅದರ ನೌಕರರು ಈಗಿನಂತೆಯೇ ಮುಂದುವರಿಯಲಿದ್ದಾರೆ. ಗ್ರಾಹಕರು ಅಥವಾ ವಿಮಾದಾರರಿಗೂ ಇದರಿಂದ ಯಾವುದೇ ತೊಂದರೆ ಆಗುತ್ತದೆ ಎನ್ನಿಸುವುದಿಲ್ಲ. | ಎಂ.ಆರ್. ಕುಮಾರ್ ಎಲ್​ಐಸಿ ಅಧ್ಯಕ್ಷ

| ರಮಾನಂದ ಶರ್ಮಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net