

ರವಿಶಂಕರ್ ಪ್ರಸಾದ್
ಡಾ.ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಸಂವಿಧಾನದ ಶಿಲ್ಪಿ ಮಾತ್ರವಲ್ಲದೆ ಸಮಾಜ ಸುಧಾರಕರೂ ಆಗಿದ್ದರು. ಹಕ್ಕುಗಳು ಮತ್ತು ಬಾಧ್ಯತೆ ಹಾಗೂ ಸಬಲೀಕರಣ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆ ಸ್ವತಂತ್ರ ಭಾರತದ ಚೈತ್ರಯಾತ್ರೆಯಲ್ಲಿ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಸಮಾನ ಮೌಲ್ಯಗಳಾಗಿರುವ ನಮ್ಮ ಸಂವಿಧಾನವನ್ನು ಒಂದು ಸಾಮಾಜಿಕ ದಾಖಲೆಯೆಂದು ಅವರು ವಿವರಿಸಿದ್ದಾರೆ.
ಭಾರತಕ್ಕೊಂದು ಅಸಾಧಾರಣವಾದ ಸಂಪ್ರದಾಯವಿದೆ. ಅದು ಸವಾಲುಗಳನ್ನು ಎದುರಿಸಿದಾಗಲೆಲ್ಲ ದೇಶ ಮತ್ತು ಅದರ ಜನತೆಯ ಆಂತರಿಕ ಬಲ ವೃದ್ಧಿಸುತ್ತದೆ. 60ರ ದಶಕದಲ್ಲಿ ಆಹಾರ ಬಿಕ್ಕಟ್ಟು ಎದುರಾದಾಗ, ಅಂದಿನ ಪ್ರಧಾನಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರತಿದಿನ ಒಂದು ಹೊತ್ತಿನ ಊಟವನ್ನು ಬಿಡುವಂತೆ ದೇಶದ ಜನರಿಗೆ ಮನವಿ ಮಾಡಿದರು ಮತ್ತು ಇಡೀ ದೇಶವು ಆ ಮನವಿಗೆ ಸ್ಪಂದಿಸಿತು. ಯುದ್ಧದ ಸಮಯದಲ್ಲಿ ಬದ್ಧತೆ ಮತ್ತು ಒಗ್ಗಟ್ಟು ಸ್ವಾಭಾವಿಕವಾದದ್ದು. ಆದರೆ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿಯೂ ಸ್ಪೂರ್ತಿದಾಯಕ ನಾಯಕತ್ವಕ್ಕೆ ಭಾರತದ ಜನತೆ ಯಾವಾಗಲೂ ಸ್ಪಂದಿಸಿದ್ದಾರೆ.
ನರೇಂದ್ರ ಮೋದಿ ಆಗಾಗ್ಗೆ ಭಾರತದ ಜನತೆಗೆ ಮನವಿ ಮಾಡುತ್ತಿರುತ್ತಾರೆ ಮತ್ತು ಜನರು ಅದಕ್ಕೆ ಸ್ಪಂದಿಸುತ್ತಾರೆ. ಅಡುಗೆಅನಿಲ ಸಹಾಯಧನವನ್ನು ಉಳ್ಳವರು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುವಂತೆ ಅವರು ಕೇಳಿದರೆ, ಕೋಟ್ಯಂತರ ಜನರು ಅದಕ್ಕೆ ಪ್ರತಿಕ್ರಿಯಿಸಿದರು. ಇದರಿಂದ ಉಜ್ಜಲಾ ಯೋಜನೆಯಲ್ಲಿ ಬಡಮಹಿಳೆಯರಿಗೆ ಅಡುಗೆ ಅನಿಲಸಂಪರ್ಕವನ್ನು ನೀಡಲು ಸಾಧ್ಯವಾಯಿತು. ಸ್ವಚ್ಛಭಾರತ ಕಾರ್ಯಕ್ರಮವನ್ನು ಅವರು ಪ್ರಾರಂಭಿಸಿದಾಗ, ಗ್ರಾಮೀಣ ಶೌಚಗೃಹಗಳ ನಿರ್ವಣದಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುವಂತೆ ಜನರಿಗೆ ಮನವಿ ಮಾಡಿದರು. ಕಳೆದ ಐದೂವರೆ ವರ್ಷಗಳಲ್ಲಿ ಇದೊಂದು ಸಾಮೂಹಿಕ ಆಂದೋಲನವಾಗಿ ಮಾರ್ಪಟ್ಟಿದೆ. ಹಳ್ಳಿಗಳು ಮತ್ತು ಅನೇಕ ಗ್ರಾಮ ಪಂಚಾಯಿತಿಗಳು ಬಯಲು ಶೌಚಮುಕ್ತವಾಗಿವೆ. ‘ಸತ್ಯಾಗ್ರಹಿಯಿಂದ ಸ್ವಚ್ಛಾಗ್ರಹಿ’ ಆಗಬೇಕೆಂಬುದು ಅವರ ಸ್ಪೂರ್ತಿದಾಯಕ ಕರೆ ಮತ್ತು ಭಾರತದ ಜನರು ಸ್ವಇಚ್ಛೆಯಿಂದ ‘ಸ್ವಚ್ಛ ಭಾರತ’ವನ್ನು ರಾಷ್ಟ್ರೀಯ ಅಭಿಯಾನ ಎಂದು ಒಪ್ಪಿಕೊಂಡರು. ಏಕೆಂದರೆ ಅದನ್ನು ಮಾಡುವುದು ತಮ್ಮ ಕರ್ತವ್ಯವೆಂದು ಅವರು ಭಾವಿಸಿದರು. ಕರೊನಾ ಬಿಕ್ಕಟ್ಟಿನ ಹೊತ್ತಲ್ಲೂ, ಪ್ರಧಾನಮಂತ್ರಿ ಮೋದಿಯವರ ಕರೆಗೆ ದೇಶ ಸ್ಪಂದಿಸಿದೆ.
ಸಂವಿಧಾನದಲ್ಲಿ ಮೂಲಭೂತ ಕರ್ತವ್ಯವನ್ನು ನಂತರದ ದಿನಗಳಲ್ಲಿ ಒದಗಿಸಿದರೂ, ಹಕ್ಕುಗಳು ಮತ್ತು ಕರ್ತವ್ಯಗಳು ನಮ್ಮ ಸಾಂವಿಧಾನಿಕ ಶಿಲ್ಪದ ಅವಿಭಾಜ್ಯ ಅಂಗವಾಗಿವೆ. ಕರ್ತವ್ಯದ ಜೊತೆಗೆ ಬಾಧ್ಯತೆಯ ಕಲ್ಪನೆಯು ಸಂವಿಧಾನದ ಮೂಲಭೂತ ಲಕ್ಷಣವಾಗಿದೆ. ಉದಾಹರಣೆಗೆ, 19ನೇ ಪರಿಚ್ಛೇದದ ಅಡಿಯಲ್ಲಿ ಭಾಷಣ, ಸಭೆ, ಚಲನೆ, ನಿವಾಸ ಇತ್ಯಾದಿಗಳು ಮೂಲಭೂತ ಹಕ್ಕುಗಳಾಗಿವೆ. ಹಾಗೆಯೇ ಅದೇ ಪರಿಚ್ಛೇದವು 19 (2)ರ ಅಡಿಯಲ್ಲಿ ಭಾರತದ ಏಕತೆ ಮತ್ತು ಸಮಗ್ರತೆ, ಸುರಕ್ಷತೆ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಇತ್ಯಾದಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನಡೆದುಕೊಳ್ಳಬೇಕು ಎಂಬ ಕರ್ತವ್ಯವನ್ನೂ ಹೇಳಿದೆ. ಹಾಗೆ ನಡೆದುಕೊಳ್ಳದಿದ್ದರೆ ಸೂಕ್ತವಾದ ನಿರ್ಬಂಧಗಳನ್ನು ವಿಧಿಸಬಹುದಾಗಿದೆ. ಆರ್ಟಿಕಲ್ 17
ಅಸ್ಪಶ್ಯತೆಯನ್ನು ತೆಗೆದುಹಾಕಿದೆ ಮತ್ತು ಅದರ ಅಭ್ಯಾಸವನ್ನು ನಿಷೇಧಿಸಿದೆ. ಸಂವಿಧಾನದ 39ನೇ ಪರಿಚ್ಛೇದವು ಸಾಮಾನ್ಯ ಒಳಿತನ್ನು ಮಾಡಲು ಭೌತಿಕ ಸಂಪನ್ಮೂಲಗಳನ್ನು ವಿತರಿಸುವ ನೀತಿಯನ್ನು ಹೊಂದುವ ಜವಾಬ್ದಾರಿಯನ್ನು ರಾಜ್ಯಗಳಿಗೆ ಆದೇಶಿಸುತ್ತದೆ. ಸಾಮಾನ್ಯ ಒಳಿತನ್ನು ಉಂಟುಮಾಡುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯವೂ ಸಾಂವಿಧಾನಿಕ ಬಾಧ್ಯತೆಯಾಗುತ್ತದೆ. ನಂತರ ಸೇರಿಸಲಾದ ಆರ್ಟಿಕಲ್ 51 ಎ, ಮೂಲಭೂತ ಕರ್ತವ್ಯಗಳ ಅಧ್ಯಾಯವನ್ನು ಒಳಗೊಂಡಿದೆ. ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಲು ಮತ್ತು ರಕ್ಷಿಸಲು ರಾಷ್ಟ್ರೀಯ ಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು, ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು ಇವುಗಳಲ್ಲಿ ಮುಖ್ಯವಾದವು. ನನ್ನ ದೃಷ್ಟಿಯಲ್ಲಿ, ಒಂದು ಪ್ರಮುಖ ಕರ್ತವ್ಯವೆಂದರೆ- ‘ಪ್ರತಿಯೊಬ್ಬ ನಾಗರಿಕನು ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಯ ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠತೆಯತ್ತ ತೆರಳಬೇಕು, ಇದರಿಂದಾಗಿ ರಾಷ್ಟ್ರವು ನಿರಂತರವಾಗಿ ಉನ್ನತ ಮಟ್ಟದ ಪ್ರಯತ್ನ ಮತ್ತು ಸಾಧನೆಗೆ ಏರುತ್ತದೆ’ ಎಂದು ಹೇಳುವ 55ಎ (ಜೆ).
ಈ ಕರ್ತವ್ಯಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ? ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಾಮೂಹಿಕ ಇಚ್ಛಾಶಕ್ತಿಯಿಂದ ನಮ್ಮ ಕರ್ತವ್ಯವನ್ನು ಅನುಸರಿಸಿದರೆ, ನಮ್ಮ ದೇಶವು ಅದರಲ್ಲಿ ಯಶಸ್ವಿಯಾದರೆ, ಭಾರತವು ಉನ್ನತ ಮಟ್ಟದ ಸಾಧನೆಗೆ ಏರಲು ಸಹಾಯ ಮಾಡುವ ಸಾಮೂಹಿಕ ಬಾಧ್ಯತೆಯನ್ನು ನಾವು ನಿಭಾಯಿಸಿದಂತಾಗುತ್ತದೆ. ಇಂದು ಪ್ರತಿಯೊಬ್ಬ ಭಾರತೀಯನೂ ನೆನಪಿಟ್ಟುಕೊಳ್ಳಬೇಕಾದ್ದೇನೆಂದರೆ, ದೇಶವು ನನಗೆ ಏನು ನೀಡಬಹುದೆಂದು ಕೇಳುವುದಲ್ಲ. ನಾನು ದೇಶಕ್ಕೆ ಏನು ನೀಡಬಹುದೆಂದು ಕೇಳಿಕೊಳ್ಳಬೇಕು. ಸುಪ್ರೀಂ ಕೋರ್ಟ್ 2012ರಲ್ಲಿ ರಾಮಲೀಲಾ ಮೈದಾನದ ಘಟನೆ ಕುರಿತು ನೀಡಿದ ತೀರ್ಪಿನಲ್ಲಿ, ಹಕ್ಕು ಮತ್ತು ನಿರ್ಬಂಧದ ನಡುವೆ ಸಮತೋಲನ ಇರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಕ್ಕು ಮತ್ತು ಕರ್ತವ್ಯ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಕರ್ತವ್ಯದ ಮಹತ್ವವನ್ನು ಪರಿಗಣಿಸದೆ ನಾಗರಿಕರ ಹಕ್ಕಿನ ಮೇಲೆ ಅನಗತ್ಯ ಒತ್ತಡ ಹಾಕಿದರೆ ಅದು ಅಸಮತೋಲನವನ್ನು ಸೃಷ್ಟಿಸುತ್ತದೆ. ಹಕ್ಕಿನ ನಿಜವಾದ ಮೂಲ ಕರ್ತವ್ಯವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯನೂ ಇದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಎಂಬ ಭರವಸೆ ನನಗಿದೆ. ಖಂಡಿತವಾಗಿಯೂ, ನಾವು ಇದರಲ್ಲಿ ಗೆಲ್ಲುತ್ತೇವೆ.
(ಲೇಖಕರು ಕೇಂದ್ರ ಕಾನೂನು ಮತ್ತು ನ್ಯಾಯ, ದೂರಸಂಪರ್ಕ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು) (ಕೃಪೆ: ಪಿ.ಐ.ಬಿ)