

ಆಸ್ಪತ್ರೆಗಳಿಗೆ ಭೇಟಿ ನೀಡುವ ಬಹುತೇಕ ಎಲ್ಲಾ ರೋಗಿಗಳ ಸಾಮಾನ್ಯ ಸಮಸ್ಯೆಗಳೆಂದರೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳು ವುದು ಹಾಗೂ ಮಲಬದ್ಧತೆ. ಮಲಬದ್ಧತೆಯ ವಿಷಯದಲ್ಲಿ ತುಂಬಾ ಜನರ ಕಲ್ಪನೆಯೇನೆಂದರೆ ಮಲವು ಹೊರಬರದೇ ಉಳಿದುಬಿಡುವುದರಿಂದ ಸಮಸ್ಯೆಯಾಗುತ್ತದೆ ಎಂದು. ಆದರೆ ನಿಜವಾಗಿ ಸಮಸ್ಯೆ ಅದಕ್ಕಿಂತ ಆಳವಾದದ್ದು. ದೊಡ್ಡ ಕರುಳಿನಲ್ಲಿ ಚಲನವಲನವು ತುಂಬಾ ಹೊತ್ತಿನವರೆಗೆ ಆಗದೇ ಉಳಿಯುವುದರಿಂದ ನಮ್ಮ ಮಿದುಳು, ಲಿವರ್, ರೋಗ ನಿರೋಧಕ ಶಕ್ತಿ ಮುಂತಾದ ವ್ಯವಸ್ಥೆಗಳಲ್ಲಿ ಏರುಪೇರಾಗುತ್ತದೆ. ಹಾಗಾಗಿ ಇದನ್ನು ಸಣ್ಣ ಸಮಸ್ಯೆ ಎಂದುಕೊಳ್ಳುವಂತಿಲ್ಲ. ಇದಕ್ಕೆ ಪರಿಹಾರ ಹುಡುಕುವ ಮೊದಲು ಯಾವ ತಪ್ಪಿನಿಂದ ಮಲಬದ್ಧತೆ ಆಗುತ್ತಿದೆ ಎಂಬುದನ್ನು ತಿಳಿದು ಅದನ್ನು ಬಿಡುವ ಬಗ್ಗೆ ಯೋಚಿಸಬೇಕು. ಇಲ್ಲದಿದ್ದರೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಿಲ್ಲ.
ರಾತ್ರಿ ತಡವಾಗಿ ಮಲಗುವುದು, ಬೆಳಿಗ್ಗೆ ಸೂರ್ಯೋದಯದ ಮೊದಲೇ ಏಳದಿರುವುದು, ನಾರಿನ ಪದಾರ್ಥಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದೇ ಇರುವುದು, ದೈಹಿಕ ವ್ಯಾಯಾಮವನ್ನು ಸಾಕಷ್ಟು ಪ್ರಮಾಣದಲ್ಲಿ ಮಾಡದೇ ಇರುವುದು, ರ್ಪಾನ್ಸನ್, ಪ್ಯಾರಾಲಿಸಿಸ್ ನಂತಹ ನರಕ್ಕೆ ಸಂಬಂಧಿಸಿದ ಕಾಯಿಲೆಗಳಿರುವುದು, ದೊಡ್ಡ ಕರುಳಿನ ಕ್ಯಾನ್ಸರ್ ನಂತಹ ತೊಂದರೆಗಳಿರುವುದು, ಕರುಳಿನಲ್ಲಿ ಅಡೆತಡೆಯಾಗಿರುವುದು ಹೀಗೆ ಚಿಕ್ಕಪುಟ್ಟ ಕಾರಣಗಳಿಂದ ಹಿಡಿದು ಗಂಭೀರವಾದ ಕಾರಣಗಳಿಂದಾಗಿಯೂ ಮಲಬದ್ಧತೆಯುಂಟಾಗಬಹುದು. ತುಂಬಾ ಒಣ ಮತ್ತು ಲಘು ಗುಣಗಳನ್ನು ಹೊಂದಿರುವ, ಸ್ವಲ್ಪವೂ ಕೊಬ್ಬಿಲ್ಲದ ಆಹಾರ ವನ್ನೇ ಹೆಚ್ಚಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ ಎಂದು ಆಯುರ್ವೆದ ಹೇಳುತ್ತದೆ. ಮಲವನ್ನು ತೆಳ್ಳಗೆ ಮಾಡುವ ಕೆಲವು ಔಷಧಗಳಿಗೆ ಅವಲಂಬಿತರಾಗಿರುವುದರಿಂದ ಮಲಬದ್ಧತೆಯ ಮೂಲ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಅಡ್ದ ಪರಿಣಾಮಗಳೂ ಆಗಬಹುದು. ಹಾಗಾಗಿ ನಮ್ಮ ದಿನಚರಿಯಲ್ಲಿಯೇ ಬದಲಾವಣೆ ಮಾಡಿಕೊಳ್ಳಬೇಕು.
ಹಣ್ಣುಗಳು, ತರಕಾರಿಗಳು, ಮೆಂತೆ, ಒಣದ್ರಾಕ್ಷಿ, ಸೊಪ್ಪುಗಳು (ವಿಶೇಷವಾಗಿ ಬಸಳೆ ಸೊಪ್ಪು) ಅಂಜೂರ, ಅಗಸೆ ಬೀಜ ಇಂತಹ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಎಷ್ಟೋ ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ, ತಂಬಾಕು, ಸಿಗರೇಟ್ ಸೇವಿಸಿದರೆ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ ಎನ್ನುತ್ತಾರೆ. ಆದರೆ ಇದರಿಂದ ದೀರ್ಘಕಾಲದಲ್ಲಿ ಹಲವು ರೀತಿಯ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಇದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಇಂತಹ ಪದಾರ್ಥಗಳನ್ನು ತ್ಯಜಿಸಿದರೆ ಆರೋಗ್ಯವೃದ್ಧಿಯಾಗುವ ಜೊತೆಗೆ ಮಲಬದ್ಧತೆಯ ನಿವಾರಣೆಯೂ ಆಗುತ್ತದೆ. ಕೆಲವು ಔಷಧಗಳ ಕಾರಣದಿಂದಲೂ ಮಲಬದ್ಧತೆಯಾಗಬಹುದು. ವೈದ್ಯರ ಹತ್ತಿರ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಈ ಸಮಸ್ಯೆಯಲ್ಲಿ ಹಿತಕಾರಿ. ದಿನದಲ್ಲಿ ಕನಿಷ್ಠ 2 ರಿಂದ 4 ಲೀಟರ್ ನೀರು ಕುಡಿಯುತ್ತಿದ್ದರೆ ಆರೋಗ್ಯಕ್ಕೂ ಅನುಕೂಲ; ಮಲಬದ್ಧತೆಯ ನಿವಾರಣೆಯೂ ಸಾಧ್ಯ. ಬೆಳಿಗ್ಗೆ ಎದ್ದು ಬೆಚ್ಚಗಿನ ನೀರು ಕುಡಿದರೆ ದೊಡ್ಡ ಕರುಳಿನಲ್ಲಿ ಚಲನಶೀಲತೆ ಹೆಚ್ಚಾಗಿ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ. ದೈಹಿಕ ವ್ಯಾಯಾಮದ ಕೊರತೆಯೂ ಮಲಬದ್ಧತೆಯ ಅತಿ ಮುಖ್ಯ ಕಾರಣ. ಹಾಗಾಗಿ ಯೋಗಾಸನಗಳು ಈ ವಿಷಯದಲ್ಲಿ ತುಂಬಾ ಪ್ರಯೋಜನಕಾರಿ.
ಶಶಾಂಕಾಸನ, ಪವನ ಮುಕ್ತಾಸನ, ಉತ್ತಾನಪಾದಾಸನ, ಸೂರ್ಯ ನಮಸ್ಕಾರಗಳು ಹೆಚ್ಚು ಲಾಭದಾಯಕ. ಕಪಾಲಭಾತಿ, ಅನುಲೋಮ ವಿಲೋಮ, ಭಸ್ತ್ರಿಕಾ, ಮೂಲಬಂಧದಂತಹ ಪ್ರಾಣಾಯಾಮಗಳು ಮಲಬದ್ಧತೆಯಲ್ಲಿ ತುಂಬಾ ಸಹಕಾರಿ. ಹತ್ತರಿಂದ ಹದಿನೈದು ಒಣದ್ರಾಕ್ಷಿಗಳನ್ನು ಬೆಳಿಗ್ಗೆ ನೆನೆಸಿ ಸಂಜೆಯ ಸಮಯದಲ್ಲಿ ಅದನ್ನು ತಿಂದು ಬಿಸಿನೀರು ಕುಡಿಯುವುದು ಒಳ್ಳೆಯದು. ಬೊಜ್ಜು, ಮಧುಮೇಹದ ಸಮಸ್ಯೆಗಳಿರುವವರು ಅರ್ಧದಿಂದ ಒಂದು ಚಮಚದಷ್ಟು ತ್ರಿಫಲಾ ಚೂರ್ಣವನ್ನು ರಾತ್ರಿ ಮಲಗುವಾಗ ಬಿಸಿನೀರಿನಲ್ಲಿ ಸೇವಿಸಬಹುದು. ಒಣ ಅಥವಾ ತೆಳ್ಳಗಿನ ದೇಹವನ್ನು ಹೊಂದಿರುವವರು ಸಂಜೆ ಸೂರ್ಯೋದಯದ ಮೊದಲು ಒಂದು ಕಪ್ ಬಿಸಿನೀರಿಗೆ ಒಂದು ಚಮಚ ತುಪ್ಪ, ನಾಲ್ಕು ಚಿಟಿಕೆ ಜ್ಯೇಷ್ಠಮಧುವಿನ ಪುಡಿ ಹಾಕಿ ತೆಗೆದುಕೊಳ್ಳಬೇಕು. ಒಂದು ತಾಸಿನ ನಂತರ ಲಘು ಭೋಜನ ಮಾಡಬೇಕು. ಅತ್ಯಂತ ಗಟ್ಟಿಯಾದ, ಕಾಳು ಕಾಳಾದ ಮಲವಿಸರ್ಜನೆಯಾಗುತ್ತಿದ್ದರೆ ಸಂಜೆ ಒಂದು ಲೋಟ ಹಾಲಿಗೆ ಒಂದು ಚಮಚ ಗುಲ್ಕಂದ್ ಹಾಕಿ ಸೇವಿಸಬೇಕು. ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ಲೋಳೇಸರ (ಅಲೊವೆರಾ) ವನ್ನು ಸೇವಿಸುವುದೂ ಈ ಸಮಸ್ಯೆಯಲ್ಲಿ ಹಿತಕಾರಿ. ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿಹಾಲು ಅಥವಾ ಬಿಸಿನೀರಿನ ಜೊತೆ ಇಪ್ಪತ್ತರಿಂದ ಇಪ್ಪತೆôದು ಮಿ.ಲೀ. ಹರಳೆಣ್ಣೆಯನ್ನು ಹಾಕಿ ಕುಡಿದರೆ (ಮಲಬದ್ಧತೆ ಇರುವವರಿಗೆ) ಎರಡರಿಂದ ನಾಲ್ಕು ಬಾರಿ ತೆಳ್ಳಗಿನ ಮಲವಿಸರ್ಜನೆ ಆಗಿ ಕರುಳು ಶುದ್ಧವಾಗುತ್ತದೆ. ನಿತ್ಯ ಇದರ ಸೇವನೆ ಮಾಡುವುದಾದರೆ ವೈದ್ಯರ ಜೊತೆ ಸಮಾಲೋಚನೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಒಳ್ಳೆಯ ದಿನಚರಿ, ಅಗತ್ಯವಾದಾಗ ಸರಿಯಾದ ಔಷಧಗಳ ಸೇವನೆಗಳಿಂದ ಮಲಬದ್ಧತೆಯನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು.