

ಕಾಶ್ಮೀರಿ ಪಂಡಿತರ ಮೇಲೆ ಅವ್ಯಾಹತವಾಗಿ ಹಲ್ಲೆಗಳು ನಡೆಯುತ್ತಿವೆ. ಕಾಶ್ಮೀರದಲ್ಲಿ ಪ್ರತಿನಿತ್ಯ ಹಿಂದೂಗಳನ್ನು, ವಲಸೆ ಕಾರ್ವಿುಕರನ್ನು ಗುರಿಯಾಗಿಸಿ ಹಿಂಸಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಷಾ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ, ಭದ್ರತಾ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆದ ಬಳಿಕ ಅಲ್ಲಿ ಸಹಜ ಸ್ಥಿತಿ ಮರಳುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಒಮ್ಮೆಲೇ ಅಲ್ಲಿ ಹಿಂಸಾಚಾರ ಮರುಕಳಿಸಿದೆ. ಅದೇ ರೀತಿ ನಮ್ಮ ನೆರೆಹೊರೆಯ ದೇಶಗಳಲ್ಲೂ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಂತೂ ಪರಿಸ್ಥಿತಿ ಭೀಕರ. ಆದರೆ ಇದೀಗ ಬಾಂಗ್ಲಾದೇಶದಲ್ಲೂ ಹಿಂದೂಗಳ ಮೇಲೆ ಹಲ್ಲೆಗಳಾಗುತ್ತಿರುವುದು ವಿಷಾದಕರ.
ಮತೀಯ ಸಾಮರಸ್ಯ ಮುಖ್ಯ. ಎಲ್ಲ ಕೋಮುಗಳ ಜನರೂ ಸಹಬಾಳ್ವೆ ನಡೆಸಬೇಕೆಂಬುದು ಸರಿಯೇ. ಆದರೆ 370ನೇ ವಿಧಿ ಹಿಂಪಡೆದ ಸಂದರ್ಭದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಹಿಂದೂಗಳು ಬಂದರೆ ಅವರಿಗೆ ಆಶ್ರಯ ಕೊಡಬೇಕೆಂಬ ನಿರ್ಧಾರಕ್ಕೆ ದೊಡ್ಡದಾಗಿ ಆಕ್ಷೇಪಗಳು ಕೇಳಿಬಂದವು. ಮುಸ್ಲಿಮರೇಕೆ ಬೇಡ, ಇದು ತಾರತಮ್ಯ ನೀತಿ ಎಂದೆಲ್ಲ ಟೀಕಿಸಲಾಯಿತು. ಆದರೆ ಈಗ ಕಾಶ್ಮೀರದಲ್ಲಿ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹೀಗೆ ದಾಳಿ ನಡೆಯುತ್ತಿರುವಾಗ ಯಾರೂ ದನಿ ಎತ್ತುತ್ತಿಲ್ಲ. ನಮ್ಮ ನೆರೆಯ ದೇಶಗಳಿಗೆ ನಾವು ಇತ್ತೀಚೆಗೆ ಲಸಿಕೆ ಸೇರಿದಂತೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದೇವೆ, ಆದರೆ ಆ ಕಡೆಯಿಂದ ಇಂಥ ಸಂದರ್ಭಗಳಲ್ಲಿ ಸೂಕ್ತ ಸ್ಪಂದನೆ ಸಿಗಬೇಕು. ಬಾಂಗ್ಲಾದೇಶದ 20 ಜಿಲ್ಲೆಗಳಿಗೆ ಹಿಂಸಾಚಾರ ಹಬ್ಬಿದೆ. ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆ ದೇಶದ ಪ್ರಧಾನಿ ಬಾಯುಪಚಾರಕ್ಕೆ ಹೇಳಿದರೆ ಸಾಲದು. ಅದನ್ನು ಕಾಯಾ-ವಾಚಾ-ಮನಸಾ ಪಾಲಿಸಬೇಕು. ನಮ್ಮ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ಕೊಡಬೇಕು. ಹಿಂದೂಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು.
| ಬೇ.ನ.ಶ್ರೀನಿವಾಸಮೂರ್ತಿ ತುಮಕೂರು