

ಡೊನಾಲ್ಡ್ ಟ್ರಂಪ್ ಎರಡನೆಯ ಬಾರಿಗೆ ಅಮೆರಿಕಾದ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಅವರ ನೀತಿಗಳು ಬೇರೆಯೇ ಆಗಿರುವಂತಿವೆ. 2017-21ರ ಮೊದಲ ಅವಧಿಯಲ್ಲಿ ಅವರು ಯಾವುದೇ ಹೊಸ ಯುದ್ಧಗಳನ್ನು ಆರಂಭಿಸದೆ, ದ್ವಿತೀಯ ಮಹಾಯುದ್ಧದ ನಂತರ ಯಾವುದೇ ಹೊಸ ಯುದ್ಧವನ್ನು ಆರಂಭಿಸದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜತೆಗೆ ಏಷ್ಯಾದಲ್ಲಿ ಅಮೆರಿಕಾ ನಡೆಸುತ್ತಿದ್ದ ಎರಡು ಸಂಘರ್ಷಗಳ ನಿವಾರಣೆಗೂ ಪರಿಣಾಮಕಾರಿ ಪ್ರಯತ್ನಗಳನ್ನು ಕೈಗೊಂಡರು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಐಎಸ್ಐಎಸ್ ಅನ್ನು ನಿರ್ಣಾಯಕವಾಗಿ ಸೋಲಿಸಿ ಅದರ ಕ್ರೂರ ಮೂಲಭೂತವಾದಿ ಅಟ್ಟಹಾಸಕ್ಕೆ ತೆರೆಯೆಳೆದರು. ಅದರ ಮುಂದುವರಿಕೆಯಾಗಿ ಎರಡೂವರೆ ವರ್ಷಗಳ ನಂತರ ಅಮೆರಿಕಾದ ಸೇನೆ ಅಕ್ಟೋಬರ್ 2019ರಲ್ಲಿ ಐಎಸ್ಐಎಸ್ ನಾಯಕ ಅಬು ಬಕ್ರ್ ಅಲ್-ಬಗ್ದಾದಿಯನ್ನು ಹುಡುಕಿ ಕೊಲ್ಲುವುದರಲ್ಲಿ ಸಫಲವಾಯಿತು.
ಆ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಟ್ರಂಪ್ ಆ ಪೈಶಾಚಿಕ ಮನೋಭಾವದ ಭಯೋತ್ಪಾದಕನ ಹೆಸರನ್ನು ‘ಆಬೂ ಬ್ಯಾಕ್ರ್ ಅಲ್ ಬಗ್ ಡ್ಯಾಡಿ’ ಎಂದು ಉಚ್ಚರಿಸಿ ಸಭೆಯಲ್ಲಿ ನಗೆಯೆಬ್ಬಿಸಿದ್ದು ನಿಮಗೆ ನೆನಪಿರಬಹುದು. ಅದಾದ ಮೇಲೆ 2020ರ ಫೆಬ್ರವರಿಯಲ್ಲಿ ತಾಲಿಬಾನ್ನೊಂದಿಗೆ ಒಪ್ಪಂದ ಮಾಡಿಕೊಂಡು ಅಫ್ಘನ್ ಯುದ್ಧದ ಅಂತ್ಯಕ್ಕೆ ನಾಂದಿ ಹಾಡಿದರು. ಅದೇ ವರ್ಷದ ಸೆಪ್ಟೆಂಬರ್ 15ರಂದು ಯೆಹೂದಿ ರಾಷ್ಟ್ರ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳಾದ ಯುಎಇ ಮತ್ತು ಬಹರೀನ್ಗಳ ನಡುವೆ ‘ಅಬ್ರಹಾಮ್ ಒಪ್ಪಂದ’ಗಳನ್ನು ಮಾಡಿಸಿ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿಗೆ ದೊಡ್ಡ ಕೊಡುಗೆ ನೀಡಿದ್ದು ಉಲ್ಲೇಖನೀಯ. ಅದಕ್ಕಾಗಿ ಅವರಿಗೆ ಆಗಲೇ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕಾಗಿತ್ತು. ಆದರೆ ದುರಂತವೆಂದರೆ ಎಡಪಂಥೀಯರ ಕೊಳಕು ರಾಜಕೀಯದಿಂದಾಗಿ ಆ ಪ್ರಶಸ್ತಿ ಸಿಗುವುದು ಎಡಪಂಥೀಯರ ಕಣ್ಮಣಿ ಬರಾಕ್ ಹುಸೇನ್ ಒಬಾಮ ಅವರಿಗೆ, ಅಧ್ಯಕ್ಷರಾದ ಎಂಟು ತಿಂಗಳಲ್ಲಿ ಅಧ್ಯಕ್ಷರಾದ ಏಕೈಕ ಕಾರಣಕ್ಕೆ!
ಆಮೇಲೆ ಆ ಶಾಂತಿ ಪಾರಿತೋಷಕವನ್ನು ಕೊರಳಲ್ಲಿ ನೇತುಹಾಕಿಕೊಂಡು ಆ ಅಧ್ಯಕ್ಷ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಆರು ದೇಶಗಳಲ್ಲಿ ರಕ್ತದ ಹೊಳೆ ಹರಿಸಿದ್ದು, ವಿನಾಶದ ಅಟ್ಟಹಾಸಗೈದದ್ದು ಸಮಕಾಲೀನ ಇತಿಹಾಸದ ದುರಂತ ಅಧ್ಯಾಯ. ಇಂದು ಟ್ರಂಪ್ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಅವರನ್ನು ಆ ಪ್ರಶಸ್ತಿಗೆ ಪಾಕಿಸ್ತಾನ(?) ಮತ್ತು ಇಸ್ರೇಲ್ಗಳು ನಾಮಾಂಕನ ಮಾಡಿದ್ದು ವ್ಯರ್ಥವಾಗುವಂತಿದೆ. ಯಾಕೆಂದರೆ ಟ್ರಂಪ್ ಈಗಾಗಲೇ ಪಶ್ಚಿಮ ಏಷ್ಯಾದಲ್ಲಿ ಒಂದು ವಾಯುಸೇನಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ ಮತ್ತು ಪೂರ್ವ ಏಷ್ಯಾದಲ್ಲಿ ಭಾರಿ ಯುದ್ಧವೊಂದಕ್ಕೆ ತಯಾರಿ ಮಾಡುತ್ತಿದ್ದಾರೆ! ಈ ಮೂಲಕ ಹಿಂದೆ ಶಾಂತಿಪ್ರಿಯರಾಗಿದ್ದ ತಾವು ಇಂದು ಯುದ್ಧಕೋರರಾಗಿರುವ ಸೂಚನೆ ನೀಡುತ್ತಿದ್ದಾರೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುವ ಪೂರ್ವತಯಾರಿಯಾಗಿ ನಾವು ಟ್ರಂಪ್ ಈಗ ಮಾಡಿದ್ದೇನು, ಮಾಡಹೊರಟಿರುವುದೇನು ಎನ್ನುವುದರ ಕಿರುಚಿತ್ರಣ ಪಡೆದುಕೊಳ್ಳೋಣ.
ಆರೂವರೆ ಟನ್ (6,500 ಕಿಲೋಗ್ರಾಮ್) ಸ್ಪೋಟಕಗಳನ್ನು ಒಡಲಲ್ಲಿ ತುಂಬಿಕೊಂಡ ಹದಿಮೂರೂವರೆ ಸಾವಿರ ಟನ್ ಅಗಾಧ ತೂಕದ ಜಿಬಿಯು-57 ಬಂಕರ್ ಬಸ್ಟರ್ ಬಾಂಬ್ಗಳನ್ನು ಹೊತ್ತ ಬಿ-2 ಸ್ಪಿರಿಟ್ ಬಾಂಬರ್ಗಳು ಮೂರು ವಾರಗಳ ಹಿಂದೆಯಷ್ಟೇ ಮಿಸ್ಸೌರಿ ರಾಜ್ಯದ ವೈಟ್ವ್ಯಾನ್ ವಾಯುನೆಲೆಯಿಂದ ಗಗನಕ್ಕೇರಿ ಹದಿನೇಳು ಸಾವಿರ ಕಿಲೋಮೀಟರ್ ದೂರ ಹಾರಿ ಇರಾನ್ನ ಫೋದೋ, ನತಾಂಜ್, ಇಸ್ಪಹಾನ್ಗಳಲ್ಲಿ ಭೂಕಂಪವೆಬ್ಬಿಸಿದ್ದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಈ ಬಗೆಯ ದಾಳಿಯನ್ನು ಹಿಂದಿನ ಕಟ್ಟಾ ಯುದ್ಧಕೋರ ಅಧ್ಯಕ್ಷರುಗಳಾದ ಬರಾಕ್ ಒಬಾಮ, ಕಿರಿಯ ಜಾರ್ಜ್ ಬುಷ್ ಮತ್ತು ಬಿಲ್ ಕ್ಲಿಂಟನ್ರೂ ನಡೆಸಿರಲಿಲ್ಲ. ಇರಾನ್ ಮೇಲಿನ ಈ ದಾಳಿಯ ಹಿಂದೆಯೇ ಈಗ ತೈವಾನ್ಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಯುದ್ಧ ಆರಂಭವಾಗುವ ಸಾಧ್ಯತೆಯನ್ನು ಟ್ರಂಪ್ ಸೂಚಿಸುತ್ತಿದ್ದಾರೆ ಮತ್ತು ಆ ಯುದ್ಧದಲ್ಲಿ ನಿಮ್ಮ ಪಾತ್ರವೇನು ಎಂದು ಆಸ್ಟ್ರೇಲಿಯಾ ಮತ್ತು ಜಪಾನ್ ಅನ್ನು ನೇರವಾಗಿ ಕೇಳುತ್ತಿದ್ದಾರೆ! ಚೀನಾ ಸಹ ಅಣ್ವಸ್ತ್ರ ರಾಷ್ಟ್ರವೇ.
ಅಮೆರಿಕಾದಲ್ಲಿ ಇಲ್ಲದ ಸೂಪರ್ಸಾನಿಕ್ ಕ್ರೂಯಿಸ್ ಮಿಸೈಲ್ಗಳೂ ಅದರ ಬತ್ತಳಿಕೆಯಲ್ಲಿವೆ! ವಾಸ್ತವ ಹೀಗಿರುವಾಗ ಎರಡು ಮಹಾಶಕ್ತಿಗಳ ನಡುವೆ ಯುದ್ಧ ಆರಂಭವಾದರೆ ಮನುಕುಲಕ್ಕೆ ಉಳಿಗಾಲವುಂಟೇ ಎಂದು ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ. ಇಂತಹ ಪ್ರಳಯಾಂತಕ ಸಂಕಟವನ್ನು ನಮ್ಮ ಮೇಲೆ ತಂದಿಡಲು ಹೊರಟಿರುವ ಟ್ರಂಪ್ಗೆ ಎಲ್ಲಾದರೂ ನೊಬೆಲ್ ಶಾಂತಿ ಪಾರಿತೋಷಕ ಕೊಡಲಾದೀತೆ? ಟ್ರಂಪ್ಗೆ ಈ ದುರ್ಬುದ್ಧಿ ಯಾಕೆ ಬಂತು. ನಾಲ್ಕು ವರ್ಷಗಳ ಹಿಂದೆ ಸರಿಯಾಗಿಯೇ ಇದ್ದರಲ್ಲ? ಟ್ರಂಪ್ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ಎಲ್ಲೆಡೆ ಶಾಂತಿ ಸ್ಥಾಪಿಸಹೊರಟಿದ್ದರು, ನಿಜ. ಆದರೆ ಅವರು ಆಗಲೂ ಚೀನಾ ಮತ್ತು ಇರಾನ್ಗಳ ವಿರುದ್ಧ ಕಠಿಣ ನಿಲುವು ತಳೆದಿದ್ದರು ಎನ್ನುವುದೂ ಅಷ್ಟೇ ನಿಜ. ಆ ಎರಡು ದೇಶಗಳ ಕುರಿತಾಗಿ ಅವರ ಅಸಹನೆ ಹಾಗೂ ಸಿಟ್ಟಿಗೆ ಸ್ಪಷ್ಟ ಕಾರಣಗಳಿದ್ದವು.
ಚೀನಿ ಅಧ್ಯಕ್ಷ ಷಿ ಜಿನ್ಪಿಂಗ್ ತಮ್ಮ ಕುಟಿಲ ನವವಸಾಹತುಶಾಹಿ ಯೋಜನೆಯಾದ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್ಐ) ಮೂಲಕ ಬಡ ದೇಶಗಳನ್ನು ಸಾಲಸಂಕೋಲೆಯೊಳಗೆ ಸಿಲುಕಿಸಿ ಅವುಗಳಲ್ಲಿನ ಆಯಕಟ್ಟಿನ ನೆಲ, ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಬಳಿಸತೊಡಗಿದ್ದುದು ಟ್ರಂಪ್ರಿಗೆ ಸೂಕ್ತವೆನಿಸಲಿಲ್ಲ. ಇದು ಹೀಗೆಯೇ ಮುಂದುವರಿದರೆ ಜಗತ್ತಿನ ಬಹುತೇಕ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಚೀನಾದ ಒಡೆತನ ಏರ್ಪಡುತ್ತದೆ, ಅದೆಲ್ಲವನ್ನೂ ಷಿ ಜಿನ್ಪಿಂಗ್ ಹೇಗೆಲ್ಲ ಉಪಯೋಗಿಸಬಹುದು? ಇಡೀ ಜಗತ್ತಿನ ಮೇಲೆ ಚೀನಿ ನಿಯಂತ್ರಣವನ್ನು ಸ್ಥಾಪಿಸಲು ಹೊರಡಬಹುದಲ್ಲವೇ? ವ್ಯವಹಾರಸ್ಥ ಟ್ರಂಪ್ ಮನಸ್ಸಿನಲ್ಲಿ ಈ ಪ್ರಶ್ನೆ ಏಳುವುದು ಸಹಜವೇ ಆಗಿತ್ತು. ಷಿ ಜಿನ್ಪಿಂಗ್ರ ಆ ಜಗತ್ಕಂಟಕ ಯೋಜನೆಗಳನ್ನು ತಡೆಯಬೇಕಾದರೆ ಅದರ ಆದಾಯವನ್ನು ಕುಗ್ಗಿಸುವುದೇ ಸರಿಯಾದ ‘ಶಾಂತಿಯುತ’ ಮಾರ್ಗ ಎಂದು ರ್ತಸಿದ ಟ್ರಂಪ್ ಚೀನೀ ಆಯಾತಗಳ ಮೇಲೆ ಅಧಿಕ ಆಮದು ಶುಲ್ಕ ವಿಧಿಸಿ ಅಮೆರಿಕಾದಿಂದ ಚೀನಾಗೆ ಹೋಗುತ್ತಿದ್ದ ಬಿಲಿಯನ್ಗಟ್ಟಲೆ ಡಾಲರ್ಗಳನ್ನು ತಡೆಹಿಡಿದರು.
ಇದರಲ್ಲಿ ಅತಿಯಾಗಿ ಹೊಡೆತ ತಿಂದು ಧರಾಶಾಯಿಯಾದದ್ದು ಚೀನಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳು. ಇದರೊಂದಿಗೆ ‘ಯಾರ’ ಕೈವಾಡದಿಂದಲೋ ಹೊರಚಿಮ್ಮಿದ ಕರೊನಾ ವೈರಸ್ ಮೊದಲಿಗೆ ಚೀನಾವನ್ನೇ ಹಿಂಡಿ ಹಿಪ್ಪೆ ಮಾಡಿ ನಂತರ ಇಡೀ ಜಗತ್ತಿನಾದ್ಯಂತ ಸಾವಿನ ತುತ್ತೂರಿ ಊದುತ್ತ ಹಾರಾಡಿತು. ಪೂರೈಕೆ ಸರಪಳಿ ಅವ್ಯವಸ್ಥೆಗಳಿಂದ ಜಗತ್ತಿನ ಬಹುಭಾಗ ಚೇತರಿಸಿಕೊಂಡರೂ ಚೀನಿ ಅರ್ಥವ್ಯವಸ್ಥೆ ಇನ್ನೂ ಚೇತರಿಸಿಕೊಂಡಿಲ್ಲ. ಆದಾಗ್ಯೂ ಆ ದೇಶ ತೈವಾನ್ ಅನ್ನು ಆಕ್ರಮಿಸಿಕೊಳ್ಳುವ ತನ್ನ ಇರಾದೆಯನ್ನು ಕೈಬಿಡುತ್ತಿಲ್ಲ, ತೈವಾನ್ ಅನ್ನು ದಿನನಿತ್ಯವೂ ಕಾಡುವುದನ್ನು ನಿಲ್ಲಿಸುತ್ತಿಲ್ಲ. ಆದರೆ ಟ್ರಂಪ್ರ ಅಸಹನೆಗೆ ಚೀನಾದ ತೈವಾನ್ ನೀತಿಯಷ್ಟೇ ಕಾರಣವಲ್ಲ. ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಇರಾನ್ ಪರವಾಗಿ ಸಹ ಚೀನಾ ನಿಂತಿದೆ!
ಒಬಾಮ ಆಡಳಿತ ಕಾಲದಲ್ಲಿ ಅಮೆರಿಕಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ ಮತ್ತು ಚೀನಾ ಆ ಶಿಯಾ ರಾಷ್ಟ್ರದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದವು. ಆ ಪ್ರಕಾರ ತಾನು ಅಣ್ವಸ್ತ್ರ ಯೋಜನೆಯನ್ನು ಕೈಬಿಡುವುದಾಗಿ ಇರಾನ್ ಮಾತುಕೊಟ್ಟಿತ್ತು. ಪ್ರತಿಯಾಗಿ ಅದರ ಮೇಲೆ ವಿಧಿಸಿದ್ದ ಆರ್ಥಿಕ ದಿಗ್ಬಂಧನಗಳಲ್ಲಿ ಹಲವನ್ನು ಸರಿಸಲಾಯತು. ಆದರೆ ಇರಾನ್ ಆ ಒಪ್ಪಂದಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತಿಲ್ಲವೆಂದೂ, ಅದು ರಹಸ್ಯವಾಗಿ ಅಣ್ವಸ್ತ್ರ ಯೋಜನೆಯನ್ನು ಮುಂದುವರಿಸುತ್ತಿರುವುದಾಗಿಯೂ ಇಸ್ರೇಲ್ ಒಂದು ಲಕ್ಷ ಪುಟಗಳ ಸಾಕ್ಷ್ಯಾಧಾರಗಳನ್ನು ಟ್ರಂಪ್ ಮುಂದಿಟ್ಟಿತು. ಆಗ ಇರಾನ್ ವಿಶ್ವಾಸಕ್ಕೆ ಅರ್ಹವಲ್ಲದ ದೇಶ ಎಂದು ತೀರ್ವನಿಸಿದ ಟ್ರಂಪ್ ಅಮೆರಿಕಾವನ್ನು 2018ರಲ್ಲಿ ಇರಾನ್ ಅಣು ಒಪ್ಪಂದದಿಂದ ಹೊರಗೊಯ್ದರು ಮತ್ತು ಆ ದೇಶದ ಮೇಲೆ ಆರ್ಥಿಕ ದಿಬ್ಬಂಧನಗಳನ್ನು ಮತ್ತೆ ಹೇರಿದರು.
ಇಷ್ಟಾಗಿಯೂ ಇರಾನ್ ತನ್ನ ಅಣ್ವಸ್ತ್ರ ಯೋಜನೆಯನ್ನು ಮುಂದುವರಿಸಿಕೊಂಡೇ ಬಂದಿದೆ ಮತ್ತು ಅದು ಯುರೇನಿಯಂ ಅನ್ನು 60% ಸಂಸ್ಕರಿಸಿಯಾಗಿದೆ. 90% ಸಂಸ್ಕರಣವಾದರೆ ಇರಾನ್ ಕೈಗೆ ಅಣ್ವಸ್ತ್ರಗಳು ಬಂದಂತೆಯೆ. ಇರಾನ್ಗೆ ಬೆಂಬಲವಾಗಿ ನಿಂತಿರುವುದು ಚೀನಾ. ಅಲ್ಲಿ 25 ವರ್ಷಗಳಲ್ಲಿ 400 ಬಿಲಿಯನ್ ಡಾಲರ್ಗಳನ್ನು ಹೂಡುವ ಒಪ್ಪಂದವನ್ನು 2020ರಲ್ಲಿ ಚೀನಾ ಮಾಡಿಕೊಂಡಿದೆ. ಇದು ಟ್ರಂಪ್ರಿಗೆ ಮನವರಿಕೆ ಮಾಡಿದ್ದು ಎರಡು ದುಷ್ಟಶಕ್ತಿಗಳು ಒಟ್ಟುಗೂಡಿವೆಯೆಂದು. ಕೇವಲ ಇರಾನ್ ಅನ್ನು ಮಣಿಸಿದರೆ ಪರಿಸ್ಥಿತಿ ಸುಧಾರಿಸುವುದಿಲ್ಲ, ಚೀನಾವನ್ನೂ ಬಡಿದುಹಾಕಿದರೆ ಇರಾನ್ ಸಹ ತಣ್ಣಗಾಗುತ್ತದೆ ಅಥವಾ ಸುಲಭವಾಗಿ ತಣ್ಣಗಾಗಿಸಬಹುದು ಎನ್ನವುದು ಟ್ರಂಪ್ರ ತರ್ಕ. ಚೀನಾದ ಜಾಗತಿಕ ನಡವಳಿಕೆ, ಇರಾನ್ನ ಪ್ರಾದೇಶಿಕ ನಡವಳಿಕೆಯನ್ನು ಹತ್ತಿರದಿಂದ ಗಮನಿಸಿದ ಯಾರಿಗಾದರೂ ಟ್ರಂಪ್ರ ತರ್ಕದಲ್ಲಿ ತಪ್ಪೇನೂ ಕಾಣುವುದಿಲ್ಲ.
ಟ್ರಂಪ್ ಹಲವು ತಿಂಗಳುಗಳ ಹಿಂದೆಯೇ ಗುರುತಿಸಿದ ಸತ್ಯವನ್ನು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಕಳೆದ ವಾರಾಂತ್ಯದಲ್ಲಿ ತಾವಾಗಿಯೇ ಅರ್ಥಮಾಡಿಕೊಂಡಿವೆ. ನಿಜ ಹೇಳಬೇಕೆಂದರೆ ತಿಂಗಳ ಹಿಂದೆಯೇ ನಡೆದ ಮಾತುಕಥೆಯಲ್ಲಿ ಇರಾನಿ ವಿದೇಶ ಮಂತ್ರಿ ಸೈಯದ್ ಅಬಾಸ್ ಅರಾಘಚಿ ತೋರಿದ ನಕಾರಾತ್ಮಕ ನಡವಳಿಕೆಯಿಂದಲೇ ತೆಹರಾನ್ನ ಮನಸ್ಸಿನಲ್ಲೇನಿದೆ ಎನ್ನುವುದನ್ನು ಆ ಯೂರೋಪಿಯನ್ ಮಹಾಶಕ್ತಿಗಳು ಅರ್ಥಮಾಡಿಕೊಳ್ಳಬೇಕಿತ್ತು. ಇರಲಿ, ಕೆಲವರಿಗೆ ಅರಿವು ತಟ್ಟುವುದು ತಡವಾಗಿ. ರಷ್ಯಾಗೆ ಇದು ಎಂದೋ ಗೊತ್ತಾಗಿದೆ. ಅದರ ಕುಶಾಗ್ರಮತಿ ಅಧ್ಯಕ್ಷ ಮೌನದಲ್ಲೇ ಅರ್ಥಪೂರ್ಣ ಸಂದೇಶ ನೀಡುತ್ತಿದ್ದಾರೆ.
ಇರಾನ್ ಮೇಲಿನ ದಾಳಿಯ ಪೂರ್ಣ ಯಶಸ್ಸಿನ ಬಗ್ಗೆ ಸಂದೇಹಗಳು ಏಳುತ್ತಲೇ ಇವೆ. ಆದಾಗ್ಯೂ, ಆ ದಾಳಿಗಳು ಇರಾನ್ ಕೈಯಿಂದ ಅಣ್ವಸ್ತ್ರವನ್ನು ಹಲವು ತಿಂಗಳುಗಳ ದೂರಕ್ಕೆ ತಳ್ಳಿವೆ ಎನ್ನುವುದನ್ನು ನಿರಾಕರಿಸಲಾಗದು. ಜೂನ್ 22ರಂದು ಬಂಕರ್ ಬಸ್ಟರ್ ಬಾಂಬ್ ದಾಳಿಗಳಾಗಿ, ಎರಡು ದಿನಗಳೊಳಗೆ ಇಸ್ರೇಲ್ ಮತ್ತು ಇರಾನ್ಗಳ ನಡುವೆ ಕದನವಿರಾಮ ಏರ್ಪಟ್ಟರೂ ಅದು ತಾತ್ಕಾಲಿಕ. ತಾನು ತನ್ನ ಅಣ್ವಸ್ತ್ರ ಯೋಜನೆಯನ್ನು ಮುಂದುವರಿಸುವುದಾಗಿಯೂ, ತನ್ನ ಅಣು ಯಂತ್ರಗಳಿಗೆ ‘ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ’ (ಐಎಇಎ) ಪರಿವೀಕ್ಷಣಾಧಿಕಾರಿಗಳನ್ನು ತನ್ನ ಎಲ್ಲೆಯೊಳಗೆ ಬಿಟ್ಟುಕೊಳ್ಳುವುದಿಲ್ಲವೆಂದೂ ಇರಾನ್ ಸ್ಪಷ್ಟವಾಗಿ ಹೇಳಿದೆ.
ಇದರರ್ಥ ಅಮೆರಿಕನ್ ದಾಳಿಗೆ ಎರಡು ದಿನ ಮೊದಲೇ ಫೋದೋ ಸಂಯಂತ್ರದಿಂದ ಅದು ಹೊರಸಾಗಿಸಿ ರಹಸ್ಯತಾಣದಲ್ಲಿ ಅಡಗಿಸಿಟ್ಟಿರುವ 880 ಪೌಂಡ್ 60% ಸಂಸ್ಕರಿತ ಯುರೇನಿಯಂ ಅನ್ನು ತೆಹರಾನ್ ಅಣ್ವಸ್ತ್ರ ಹಂತಕ್ಕೆ ಸಂಸ್ಕರಿಸುವುದನ್ನು ತೀವ್ರಗೊಳಿಸುತ್ತದೆ. ಜತೆಗೆ ಅದು ಟ್ರಂಪ್ ವಿರುದ್ಧ ಫತ್ವಾ ಹೊರಡಿಸಿವುದಷ್ಟೇ ಅಲ್ಲ, ಡ್ರೋನ್ ಮೂಲಕ ಅವರನ್ನು ಅವರ ಮಾರಾ ಲಾಗೋ ನಿವಾಸದಲ್ಲೇ ಹತ್ಯೆಗೈಯಲೂ ಲೆಕ್ಕ ಹಾಕಿದೆಯೆಂದು ಸುದ್ದಿ. ಆ ಕಾರಣವೊಡ್ಡಿ ಇರಾನ್ ಮೇಲೆ ಮತ್ತೆ ದಾಳಿ ಆರಂಭಿಸುವ ಅಗತ್ಯ ಟ್ರಂಪ್ರಿಗಿಲ್ಲ. ಐಎಇಎ ಅಧಿಕಾರಿಗಳನ್ನು ತನ್ನೊಳಗೆ ಸೇರಿಸುವುದಿಲ್ಲ ಎಂಬ ಇರಾನಿ ಮಾತೇ ಸಾಕು. ಹಿಂದೆಲ್ಲ ತಟಸ್ಥರಾಗಿರುತ್ತಿದ್ದ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಈಗ ಐಎಇಎ ವಿಷಯದಲ್ಲಿ ಟ್ರಂಪ್ರೊಂದಿಗೆ ನಿಲ್ಲುತ್ತವೆ.
ಹಾಗಿದ್ದೂ ಇರಾನ್ ಮೇಲೆ ಮತ್ತೊಂದು ದಾಳಿಗೆ ಅಮೆರಿಕಾಗೆ ಸ್ವಲ್ಪ ಸಮಯ ಬೇಕು. ಹಮಾಸ್ ದಾಳಿಗಳ ವಿಷಯದಲ್ಲಿ ಯಶಸ್ವಿಯಾಗಿದ್ದ ಇಸ್ರೇಲ್ನ ಐರನ್ ಡೋಮ್ ವಾಯುಸುರಕ್ಷಾ ವ್ಯವಸ್ಥೆ ಇರಾನಿ ದಾಳಿಗಳ ಮುಂದೆ ಕೇವಲ 60% ಅಷ್ಟೇ ಯಶಸ್ವಿಯಾದದ್ದು, ಅದರಿಂದಾಗಿ ಪುಟ್ಟ ಇಸ್ರೇಲ್ ತೊಂದರೆಗೀಡಾದದ್ದು ಟೆಲ್ ಅವೀವ್ ಹಾಗೂ ವಾಷಿಂಗ್ಟನ್ನ ಕಣ್ಣು ತೆರೆಸಿದೆ. ಐರನ್ ಡೋಮ್ ವ್ಯವಸ್ಥೆಯನ್ನು ಇನ್ನೂ ಉತ್ತಮಗೊಳಿಸಲು ಅಗತ್ಯವಾದ ಏಳು ಸಾವಿರ ಚಿಪ್ಗಳು ಮತ್ತು ಇನ್ನಿತರ ಅಗತ್ಯ ಪರಿಕರಗಳನ್ನು ಇಸ್ರೇಲ್ಗೆ ಪೂರೈಸುವುದರಲ್ಲಿ ಈಗ ಅಮೆರಿಕಾ ತೊಡಗಿದೆ. ಒಮ್ಮೆ ಇಸ್ರೇಲ್ನ ವಾಯು ಸುರಕ್ಷಾ ವ್ಯವಸ್ಥೆ ಸಕ್ಷಮವೆಂದು ತೀರ್ಮಾನವಾದಾಗ ಟ್ರಂಪ್ ತಮ್ಮ ‘ಆಪರೇಷನ್ ಮಿಡ್ನೈಟ್ ಹ್ಯಾಮರ್-2’ ಅನ್ನು ಚಾಲನೆಗೊಳಿಸುತ್ತಾರೆ. ಅದು ಶಾಶ್ವತ ಎನ್ನುವ ಮಟ್ಟಿಗೆ ಯಶಸ್ವಿಯಾಗುವುದು ಚೀನಾದ ರೆಕ್ಕೆಗಳನ್ನೂ ಕತ್ತರಿಸಿದಾಗ. ಅದಕ್ಕಾಗಿ ಟ್ರಂಪ್ ಹೊಸ ನೆಪವನ್ನೇನೂ ಹುಡುಕಬೇಕಾಗಿಲ್ಲ.
ಚೀನಾ ತಾನೇ ತೈವಾನ್ ಪ್ರಶ್ನೆಯನ್ನು ಚಾಲನೆಯಲ್ಲಿಟ್ಟು ದಾಳಿಗೆ ಅಗತ್ಯ ನೆಪವನ್ನು ಟ್ರಂಪ್ರಿಗೆ ಒದಗಿಸುತ್ತಿದೆ. ಈ ವಿಷಯದಲ್ಲಿ ಮುಖ್ಯವೆನಿಸುವುದು ಕ್ವಾಡ್ ದೇಶಗಳಾದ ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ ಹಾಗೂ ಪಾಕಿಸ್ತಾನದ ನಿಲುವುಗಳು. ಪಾಕಿಸ್ತಾನವನ್ನು ಟ್ರಂಪ್ ಈಗಾಗಲೇ ಚೆನ್ನಾಗಿ ಕಾಯಿಸಿ ಬಡಿದು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿಯಾಗಿದೆ. ಆದರೆ ತಮ್ಮದೇ ಕೆಲವು ಅರ್ತಾಕ ನೀತಿಗಳಿಂದಾಗಿ ಕ್ವಾಡ್ ದೇಶಗಳ ಸಹಕಾರದ ಬಗ್ಗೆ ಅವರಿಗೇ ಸಂದೇಹವುಂಟಾಗಿದೆ. ಈ ವಿಷಯಗಳನ್ನು ಮುಂದಿನವಾರ ವಿವರವಾಗಿ ಪರಿಶೀಲಿಸೋಣ.