

ಆದುದರಿಂದಲೇ ಸಂತ ಕಬೀರ್ದಾಸರು ಗುರುವಿನ ಬಗ್ಗೆ ಹಾಡಿ ಹೊಗಳುತ್ತಾ ‘ಸಾರೀ ಸಮುಂದರ್ ಮಸೀ ಬನಾವೋ, ಸಾರೀ ಭೂಮೀ ಕಾಗಜ್; ಫಿರ್ಭೀ ಗುರುಗುನ್ ಲಿಖಾ ನ ಜಾಯೇ’ ಎಂದರು. ‘ಗು’ ಅಂದರೆ, ಅಜ್ಞಾನ, ‘ರು’ ಎಂದರೆ ನಿವಾರಿಸುವವನು ಎಂಬರ್ಥವೂ ಗುರುವಿಗೆ ಇದೆ. ಹಾಗೆಂದು ಬರೇ ವಿಷಯ ಸಂಗ್ರಹಣೆಗೆ, ಮಾಹಿತಿಯನ್ನು ಕಲೆ ಹಾಕಲು ಗುರುಗಳ ಅವಶ್ಯಕತೆ ಇಲ್ಲ. ಕಾರಣ ಈ ನಡುವೆ ಅವೆಲ್ಲವೂ ಅಂತರ್ಜಾಲಗಳಲ್ಲಿ, ಗ್ರಂಥಾಲಯಗಳಲ್ಲಿ ಲಭ್ಯ. ಅದಕ್ಕೆ ನಿನ್ನ ಗುರು ಯಾರು? ಎಂಬ ಪ್ರಶ್ನೆಗೆ ಕಿಲಾಡಿ ಹುಡುಗನ ಉತ್ತರ ನನ್ನ ಗುರು ಗೂಗಲ್ ಎಂಬುದಾಗಿತ್ತು! ಆದರೆ, ಸೂಕ್ತ ಮಾರ್ಗದರ್ಶನಕ್ಕೆ, ಪ್ರೇರಣೆಗೆ, ಸ್ಪೂರ್ತಿಗೆ, ಓರ್ವ ಗುರುವಿನ ಅವಶ್ಯಕತೆ ಇದೆ. ಆದುದರಿಂದಲೇ ಬಲ್ಲವರು ಹೇಳಿದರು ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕೆಂದು!
ತಾವು ಬೋಧಿಸುವ ವಿಷಯಕ್ಕನುಸಾರವಾಗಿ ಗುರುಗಳನ್ನು ನಾನಾ ವಿಧವಾಗಿ ವಿಂಗಡಿಸಬಹುದು - ಅಧ್ಯಾತ್ಮವನ್ನು ತಿಳಿ ಹೇಳುವ ಆಧ್ಯಾತ್ಮಿಕ ಗುರುಗಳು; ತಾವು ಒಪ್ಪಿಕೊಂಡ ಒಂದು ಧರ್ಮವನ್ನು ಪ್ರತಿಪಾದಿಸಿ ಪ್ರಚಾರಗೊಳಿಸುವ ಧರ್ಮಗುರುಗಳು; ತಾವು ಕಲಿತು ಕರಗತ ಮಾಡಿಕೊಂಡಿರುವ ಕಲೆಯನ್ನು ಕಲಾಸಕ್ತರಿಗೆ ಕಲಿಸಿಕೊಡುವ ಕಲಾಗುರುಗಳು ಹಾಗೂ ಆಯ್ದ ವಿಷಯದಲ್ಲಿ ಪರಿಣತಿಪಡೆದು ಆ ವಿಷಯದ ಮೇಲೆ ಶಾಲಾ ಕಾಲೇಜುಗಳಲ್ಲಿ ಪಾಠ ಹೇಳುವ ಶೈಕ್ಷಣಿಕ ಗುರುಗಳು. ಗುರುವಿನ ಅತಿ ಮುಖ್ಯವಾದ ಕರ್ತವ್ಯ ಜವಾಬ್ದಾರಿಗಳೆಂದರೆ ಅಧ್ಯಯನ (ಕಲಿಕೆ), ಅಧ್ಯಾಪನ (ಕಲಿಸೋದು) ಆಚರಣೆ (ಪಾಲನೆ) ಹಾಗೂ ಪ್ರಸರಣ (ಜ್ಞಾನ ಪ್ರಚಾರ). ಓರ್ವ ಆದರ್ಶ ಗುರುವಿನ ಗುಣ ಲಕ್ಷಣಗಳು ಹೀಗಿವೆ:-
ಪಾಂಡಿತ್ಯ: ತಾನು ಬೋಧಿಸಬೇಕಾದ ವಿಷಯದಲ್ಲಿ ಸಂಪೂರ್ಣವಾದ ಪಾಂಡಿತ್ಯ ಇರಬೇಕು. ಈ ದೃಷ್ಟಿಯಿಂದ ಗುರುಗಳಾದವರು ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿರಲೇ ಬೇಕಾಗುತ್ತದೆ. ಇದಕ್ಕೆ ಬೇಕು ನಿರಂತರ ಅಧ್ಯಯನ ಹಾಗೂ ಇನ್ನೂ ತಿಳಿದುಕೊಳ್ಳಬೇಕೆನ್ನುವ ಹಂಬಲ.
ಬೋಧನಾಭಿರುಚಿಂ: ಗುರುವಿಗೆ ಬೋಧನೆ ಒಂದು ಸಂತಸವನ್ನು ನೀಡುವ ಕಾರ್ಯಕ್ರಮವಾಗಬೇಕು. ಸಾಮಾನ್ಯವಾಗಿ ಮೂರು ತರಹದ ಗುರುಗಳಿರುತ್ತಾರೆ- ಪಾಠ ಹೇಳುವವರು, ಪಾಠ ಹೇಳದವರು ಮತ್ತು ಉಳಿದವರಿಗೆ ಪಾಠ ಹೇಳಲು ಬಿಡದವರು.
ಬೋಧನಾ ಸಾಮರ್ಥ್ಯ: ಹುಟ್ಟಿನಿಂದಲೇ ಯಾರೂ ಉತ್ತಮ ಶಿಕ್ಷಕರಾಗಿರೋದಿಲ್ಲ. ಆದರೆ, ಪ್ರಯತ್ನ ಪರಿಶ್ರಮದಿಂದ ಎಲ್ಲರೂ ಒಳ್ಳೆಯ ಶಿಕ್ಷಕರಾಗಲು ಸಾಧ್ಯ. ಯಾವುದೇ ಒಂದು ವಿದ್ಯಾಸಂಸ್ಥೆಯಲ್ಲಿ ಹಲವಾರು ಶಿಕ್ಷಕರಿರಬಹುದು. ಆದರೆ ಎಲ್ಲರೂ ಒಳ್ಳೆಯ ಶಿಕ್ಷಕರಾಗೋದಿಲ್ಲ. ಬೋಧನೆ ಎಂಬುದು ಒಂದು ಕಲೆ, ವಿಜ್ಞಾನ ಹಾಗೂ ತತ್ವ ಸಿದ್ಧಾಂಥ. ಬರೇ ಪುಸ್ತಕದಲ್ಲಿದ್ದುದ್ದನ್ನು ಮಾತ್ರ ತಿಳಿಹೇಳೋದು, ಹೇಗಾದರೂ ಮಾಡಿ ನಿಗದಿತ ಪಠ್ಯ ಕ್ರಮವನ್ನು ಮುಗಿಸಿ ಬಿಡೋದು ಇಲ್ಲವೇ ಮಕ್ಕಳನ್ನು ಗದರಿಸಿ ಅವರ ಬಾಯಿ ಮುಚ್ಚಿಸೋದು ಶಿಕ್ಷಣವಲ್ಲ. ಮಕ್ಕಳನ್ನು ಪರೀಕ್ಷೆಗಳನ್ನು ಎದುರಿಸಲು ಮಾತ್ರ ಸಿದ್ಧಗೊಳಿಸಿ, ಹೆಚ್ಚಿನ ಅಂಕಗಳನ್ನಷ್ಟೇ ಪಡೆಯುವಂತೆ ಮಾಡುವುದು ಕೂಡಾ ಶಿಕ್ಷಣವಲ್ಲ.
ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿಯನ್ನು (ಜ್ಞಾನತೃಷೆ) ಹುಟ್ಟು ಹಾಕೋದೇ ನಿಜವಾದ ಶಿಕ್ಷಣ. ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯವನ್ನು ತುಂಬ ಬೇಕಾದುದು ಗುರುಗಳ ಕರ್ತವ್ಯ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಅವರ ಗೊಂದಲವನ್ನು ನಿವಾರಿಸುವವನೇ ಉತ್ತಮ ಶಿಕ್ಷಕ. ತನಗೆ ತಿಳಿದುದನ್ನು ಮಾತ್ರ ತಿಳಿ ಹೇಳೋದು ಶಿಕ್ಷಣವಲ್ಲ. ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಬೇಕಾದುದನ್ನು ಸಮರ್ಪಕವಾಗಿ ತಿಳಿ ಹೇಳೋದೇ ಶಿಕ್ಷಣ.
ಪ್ರೇರಣಾ ಸಾಮರ್ಥ್ಯಂ: ವಿದ್ಯಾರ್ಥಿಗಳಲ್ಲಿ ಗುಪ್ತವಾಗಿರುವ, ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ, ಅವನ್ನೂ ಪ್ರೇರೇಪಿಸಿ ಪ್ರಚೋದಿಸುವ ಕೆಲಸವನ್ನು ಗುರುಗಳಾದವರು ಮಾಡಬೇಕು. ಯಾವ ವಿದ್ಯಾರ್ಥಿಯು ನಿಷ್ಪ್ರಯೋಜಕನಲ್ಲ.
ಗಾಂಭೀರ್ಯಂ: ಗುರುವಾದವನು ತನ್ನ ನಡೆ ನುಡಿಯಲ್ಲಿ ಗೌರವ-ಘನತೆಯನ್ನು ಕಾಪಾಡಿಕೊಂಡಿರ ಬೇಕು. ಕ್ಲಾಸಿನ ಒಳಗೆ ಹಾಗೂ ಹೊರಗೆ, ನುಡಿದಂತೆ ನಡೆಯಬೇಕು. ನಡೆದಂತೆ ನುಡಿಯಬೇಕು. ಇವನಿಗಿರಬೇಕು ಏಕನೀತಿ- ಏಕಪ್ರೀತಿ- ಏಕರೀತಿ ಹಾಗೂ ಸಮದೃಷ್ಟಿ -ಪ್ರೇಮದೃಷ್ಟಿ-ವಿಶಾಲದೃಷ್ಟಿ.
ವಿಷಯದ ಹೊರತಾಗಿ ಗುರುವಾದವನು ವಿದ್ಯಾರ್ಥಿಗಳಿಗೆ ಸಂಸ್ಕಾರವಂತರಾಗಲು, ಸಭ್ಯ-ಸಂಭಾವಿತ ಸತ್ ಪ್ರಜೆಗಳಾಗಲು ಹಾಗೂ ಓರ್ವ ಒಳ್ಳೆಯ ವ್ಯಕ್ತಿಯಾಗಲು ಬೇಕಾದ ಮಾರ್ಗದರ್ಶವನ್ನು ಮಾಡುತ್ತಲೇ ಇರಬೇಕು. ಒಳ್ಳೆಯ ನಾಗರೀಕನಾಗಲು, ಪರಿಸರ ಪ್ರೇಮಿಯಾಗಲು ಸಾಮಾಜಿಕ ಕಳಕಳಿ ಉಳ್ಳವನಾಗಲು ಬೇಕಾದ ಸೂಕ್ಷ್ಮ ಸಂದೇಶ ಗುರುಗಳಿಂದಲೇ ಬರಬೇಕು.
ಪರೀಕ್ಷಕರಾದಾಗ ಯಾವುದೇ ರೀತಿಯ ಆಸಡ್ಡೆ ಅನಾಸಕ್ತಿ ಬೇಜಾವಾಬ್ದಾರಿತನ, ಭೇದ ಭಾವ ಅವ್ಯವಹಾರ ಗುರುಗಳಿಗೆ ಶೋಭೆಯೇ ಅಲ್ಲ.
ಆದರ್ಶ ಗುರುವಿಗೆ ಮೂರರ ಮೇಲೆ ಪ್ರೀತಿ ಇರಬೇಕು - ತನ್ನ ವೃತ್ತಿ, ತಾನು ಬೋಧಿಸುವ ವಿಷಯ ಹಾಗೂ ತನ್ನ ವಿದ್ಯಾರ್ಥಿಗಳು.
ಉತ್ತಮ ಗುರು ಶಿಷ್ಯ ಸಂಬಂಧವನ್ನು ಏರ್ಪಡಿಸಬೇಕಾದುದು ಆದರ್ಶ ಗುರುವಿನ ಲಕ್ಷಣ. ಹಿಂದಿನ ಕಾಲದಲ್ಲಿ ಗುರುವೇ ನಮಃ ಈಗಿನ ಕಾಲದಲ್ಲಿ ಗುರುವೇನು ಮಹಾ? ಹೀಗಾಗಬಾರದು.
ಆದರ್ಶ ಗುರುವಾಗಬೇಕಾದರೆ ಮೂಲತಃ ಶಿಕ್ಷಕ ಓರ್ವ ಒಳ್ಳೆಯ ವ್ಯಕ್ತಿಯಾಗಬೇಕು. ಪಾಠ ಹೇಳಲು ಬಾರದ, ಬಂದರೂ ಪಾಠಗಳನ್ನು ಮಾಡದ, ಪಾನಮತ್ತನಾಗಿ ತರಗತಿಗೆ ಬರುವ, ಶಿಷ್ಯೆಯರಿಗೆ ಲೈಂಗಿಕ ಕಿರುಕುಳವನ್ನು ಕೊಡುವ ಗುರು ಒಳ್ಳೆಯ ಶಿಕ್ಷಕನಲ್ಲ. ಅಂತೆಯೇ ಸಂಬಳ ತೆಗೆದುಕೊಂಡು ಮಾಡುವ ಯಾವುದೇ ನೌಕರಿ ಸಮಾಜ ಸೇವೆಯಲ್ಲ!
ಒಟ್ಟಿನಲ್ಲಿ ಓರ್ವ ಶಿಕ್ಷಕನ ಅತಿ ದೊಡ್ಡ ಸಂಪತ್ತು ಎಂದರೆ ಆತನ ಶಿಷ್ಯ ಸಂಪತ್ತು ಹಾಗೂ ಅತಿ ದೊಡ್ಡ ಆನಂದವೆಂದರೆ ಆತ್ಮಾನಂದ. ತಾನೂ ಬಡವನಾಗದೆ ಇತರರನ್ನು ಜ್ಞಾನದಿಂದ ಶ್ರೀಮಂತಗೊಳಿಸುವ ಏಕೈಕ ವೃತ್ತಿ ಎಂದರೆ ಅದು ಶಿಕ್ಷಕವೃತ್ತಿ. ದಡ್ಡರನ್ನು ಬುದ್ಧಿವಂತರನ್ನಾಗಿ ಮಾಡುವ, ತುಂಟರನ್ನು ಸರಿದಾರಿಗೆ ತರುವ, ಬೇಜವಾಬ್ದಾರಿ ಹುಡುಗರನ್ನು ಓರ್ವ ಜವಾಬ್ದಾರಿಯುತ ಸತ್ಪ್ರಜೆಯನ್ನಾಗಿ ಮಾಡುವ ಗುರುತರ ಜವಾಬ್ದಾರಿ ಗುರುಗಳಿಗಿದೆ. ಇಂತಹ ಶಿಕ್ಷಕರ ಸಂತತಿ ಸಾವಿರವಾಗಲಿ. ಧ್ಯಾನ ಮೂಲಂ ಗುರುರ್ ಮೂರ್ತಿ; ಪೂಜಾ ಮೂಲಂ ಗುರುರ್ ಪಾದಂ, ಮಂತ್ರಂ ಮೂಲಂ ಗುರುರ್ ವಾಕ್ಯಂ, ಮೋಕ್ಷ ಮೂಲಂ ಗುರುಕೃಪಾ.
ಗುರುವಿಗೆ ಜ್ಞಾನವೇ ಮುಖ್ಯ
ಗುರುವಿಗೆ ಅವನ ಜಾತಿ ಮುಖ್ಯವಲ್ಲ; ಅವನ ಜ್ಞಾನವೇ ಮುಖ್ಯ. ವೇದಗಳನ್ನು ವಿಂಗಡಿಸಿದ ಮಹರ್ಷಿ ವೇದವ್ಯಾಸರು ಓರ್ವ ಅಂಬಿಗರ ಸ್ತ್ರೀಗೆ ಜನಿಸಿದವರು. ಶ್ರೀಮದ್ ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿ ಜಾತಿಯಲ್ಲಿ ವ್ಯಾಧರು. ಎಲ್ಲರೂ ನಿತ್ಯ ಪೂಜೆ ಮಾಡುವ ಶ್ರೀರಾಮಚಂದ್ರ ಜಾತಿಯಲ್ಲಿ ಕ್ಷತ್ರಿಯ; ಗೀತಚಾರ್ಯ ಶ್ರೀಕೃಷ್ಣ ಪರಮಾತ್ಮ ಗೊಲ್ಲ, ಕವಿರತ್ನ ಕಾಳಿದಾಸ, ಕನಕದಾಸ ಜಾತಿಯಲ್ಲಿ ಕುರುಬರು. ಮಹಾಭಾರತದಲ್ಲಿನ ಬ್ರಾಹ್ಮಣ ಮುನಿ, ಧರ್ಮ ವ್ಯಾಧನೆಂಬ ಕಿರಾತನ ಬಳಿ ಧರ್ಮಗಳ ಮರ್ಮಗಳನ್ನು ತಿಳಿದುಕೊಳ್ಳುತ್ತಾನೆ.
ಮಾತಂಗ ಮುನಿ ಕೆಳಜಾತಿಯವ; ಜಾಬಾಲಿ ಶೂದ್ರ. ಹೆಸರಾಂತ ಮುಸ್ಲಿಂ ಕವಿ ಸಂತ ಶಿಶುನಾಳ ಶರೀಫರ ಆರಾಧ್ಯ ಗುರು ಬ್ರಾಹ್ಮಣರಾದ ಗೋವಿಂದ ಭಟ್ಟರಾಗಿದ್ದರು. ಇದೇ ರೀತಿ ಓರ್ವ ಸಮರ್ಥ ಗುರುವಾಗಲು, ವಯಸ್ಸಿನ ಇತಿ ಮಿತಿ ಇಲ್ಲ. ಜಗದ್ಗುರುಗಳಾದ ಆದಿ ಶಂಕರಾಚಾರ್ಯರು ಬದುಕಿದ್ದು 32-33 ವರುಷಗಳು ಮಾತ್ರ. ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದದ ಜೀವಿತದ ಕಾಲ ಕೇವಲ 39 ವರುಷಗಳು.
ಅಂತೆಯೇ ಗುರುವಿನ ಪಟ್ಟ ಪಡೆದುಕೊಳ್ಳಲು ಅವನ ಸ್ಥಾನಮಾನಗಳು ಮುಖ್ಯವಲ್ಲ. ಶ್ರೀರಾಮಚಂದ್ರ ತನ್ನ ಕಡು ವೈರಿಯಾದ ರಾವಣನಿಂದಲೂ ರಾಜನೀತಿಯನ್ನು ಕಲಿತುಕೊಳ್ಳುತ್ತಾನೆ. ಆದಿ ಶಂಕರಾಚಾರ್ಯರು ಸಂಚರಿಸುತ್ತಿರುವಾಗ ದಾರಿಗೆ ಅಡ್ಡ ಬಂದ ಚಾಂಡಲನಿಂದಲೂ ಪಾಠವೊಂದನ್ನು ಕಲಿತುಕೊಂಡು ಅವನಿಗೆ ನಮಿಸುತ್ತಾರೆ.