ಪ್ರೇರಣೆ: ಪ್ರೀತಿಸುವವರು ನೀಡುವ ಶಿಕ್ಷೆಯಲ್ಲಿ ನೋವೇ ಇಲ್ಲ!

PRERANE
Published on
ಮಕ್ಕಳು ತಪ್ಪು ಮಾಡೋದು ಸಹಜ. ಹೆತ್ತವರ ಅತಿಯಾದ ವ್ಯಾಮೋಹ, ಸಿರಿತನ, ಸಂಗದೋಷ, ಸೂಕ್ತ ಮಾರ್ಗದರ್ಶನದ ಕೊರತೆ, ತಾರುಣ್ಯದ ತಲ್ಲಣಗಳು, ಯಾರದೂ ಭಯ ಇಲ್ಲದ ಸಂದರ್ಭಗಳು - ಹೀಗೆ ಹಲವಾರು ವಿಷಯಗಳು ಕಾರಣಗಳಾದರೆ, ಮಾಡಿದ ತಪ್ಪಿಗೆ ಶಿಕ್ಷೆ ಇಲ್ಲದಿರೋದು ಇನ್ನೊಂದು ಕಾರಣ.

ತಪ್ಪಿತಸ್ಥನಿಗೆ ಶಿಕ್ಷೆ ಆಗಲೇಬೇಕೆಂಬುದು ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದ ಕಾನೂನುಬದ್ಧವಾದ ನ್ಯಾಯವೆನಿಸಿದರೂ, ತಪ್ಪುಗಳನ್ನು ಮಾಡಿದ ಹಾಗೂ ಮಾಡುತ್ತಲೇ ಇರುವ ಮಕ್ಕಳನ್ನು ಶಿಕ್ಷಿಸಬೇಕೇ / ಶಿಕ್ಷಿಸಬಾರದೇ ಎಂಬುದು ವಿವಾದಾತ್ಮಕ ವಿಷಯ. ಅಮೆರಿಕದಂತಹ ಮುಂದುವರೆದ ದೇಶದಲ್ಲಂತೂ, ಮಕ್ಕಳನ್ನು ಕೆಟ್ಟ ಶಬ್ದಗಳಿಂದ ಬೈಯೋದು, ನಿಂದಿಸೋದು ಮಹಾಪರಾಧ. ಹೊಡೆಯುವುದಂತೂ ಶಿಕ್ಷಾರ್ಹ. ಆದರೆ ಭಾರತೀಯ ಪದ್ಧತಿಯಲ್ಲಿ ‘ಲಾಲಯೇತ್ ಪಂಚ ವರ್ಷಾಣಿ, ತಾಡಯೇತ್ ದಶ ವರ್ಷಾಣಿ, ಸಂಪ್ರಾಪ್ತೇ ಶೋಡಷೇ ವರ್ಷೆ ಪುತ್ರಂ ಮಿತ್ರಂ ವದಾಚರೇತ್’ ಎಂಬ ಮಾತಿನಂತೆ, ಮಕ್ಕಳನ್ನು ಅವರ ಐದು ವಯಸ್ಸಿನವರೆಗೆ ಮುದ್ದು ಮಾಡುತ್ತಾ ಅವರ ಲಾಲನೆ-ಪಾಲನೆ ಮಾಡಬೇಕಂತೆ.

ನಂತರದ ಹತ್ತು ವರುಷಗಳವರೆಗೆ ಗುದ್ದಿ-ತಿದ್ದಿ-ತೀಡಿ ಬುದ್ಧಿವಾದಗಳನ್ನು ಹೇಳುತ್ತಿರಬೇಕಂತೆ. ಮತ್ತೆ ಅವರು 16ನೇ ವಯಸ್ಸಿನಿಂದ ಪ್ರೌಢರಾಗುತ್ತಿದ್ದಂತೆ, ಹೆತ್ತವರು ಮಕ್ಕಳನ್ನು ಗೆಳೆಯರಂತೆ ಕಾಣಬೇಕು ಎನ್ನಲಾಗಿದೆ. ತಪ್ಪು ಮಾಡುವ ಮಕ್ಕಳಿಗೆ ಶುರುವಿನಲ್ಲಿ, ಸಾವಧಾನವಾಗಿ ಗೈದ ತಪ್ಪುಗಳನ್ನು ತಿಳಿ ಹೇಳಬೇಕು. ಇದರಿಂದಲೂ ಮಗು ಸುಧಾರಿಸಿಲ್ಲವೆಂದಾದರೆ, ಸಾಮ-ದಾನ- ಭೇದ- ದಂಡವೆಂಬ ಸೂತ್ರದನ್ವಯ, ಅವಶ್ಯ ಬಿದ್ದಲ್ಲಿ ದಂಡ ಪ್ರಯೋಗವನ್ನೂ ಮಾಡುವ ಅವಕಾಶವನ್ನು ನೀಡಲಾಗಿದೆ. ಸಾಮಾನ್ಯವಾಗಿ ನೀಡುವ ಶಿಕ್ಷೆಗಳು 5 ತೆರನಾಗಿರುತ್ತವೆ.

‘ತಪ್ಪು ಮರುಕಳಿಸದಂತೆ ಎಚ್ಚರಿಕಾ ಕ್ರಮವಾಗಿ ನೀಡುವ ಶಿಕ್ಷೆ’ ವ್ಯಕ್ತಿಯ ಮೇಲಿನ ದ್ವೇಷದಿಂದ, ಪ್ರತೀಕಾರದ ರೂಪದಲ್ಲಿ, ಅವಶ್ಯಕತೆಗಿಂತಲೂ ಮಿಗಿಲಾದ ಪ್ರಮಾಣದಲ್ಲಿ ನೀಡುವ ಕಠಿಣ ಶಿಕ್ಷೆ ಕೋಪದ ಭರದಲ್ಲಿ ನೀಡುವ ದೊಡ್ಡ ಶಿಕ್ಷೆ. ‘ಯಾರದೋ ಮೇಲಿನ ಸಿಟ್ಟನ್ನು / ಸೇಡನ್ನು, ಇನ್ಯಾರದೋ ಮೇಲೆ ಪ್ರಯೋಗಿಸುವ ಶಿಕ್ಷೆ’ ವ್ಯಕ್ತಿಯ ಮೇಲಿನ ಪ್ರೀತಿಯಿಂದ ನೀಡುವ ಶಿಕ್ಷೆ. ಇಂಥ ಶಿಕ್ಷೆ, ಪ್ರತೀಕಾರ, ದ್ವೇಷದ ಭಾವನೆಗಳನ್ನು ಹುಟ್ಟು ಹಾಕಿದರೆ, ಪ್ರೀತಿಸುವವರು ನೀಡಿದ ಶಿಕ್ಷೆಯನ್ನು ವ್ಯಕ್ತಿ ಬೇಗನೇ ಮರೆತು ಬಿಡುತ್ತಾನೆ. ಕಾರಣ, ಆ ಶಿಕ್ಷೆಯಲ್ಲಿ ಅವನಿಗೆ ತನ್ನ ತಪ್ಪಿನ ಅರಿವು ಆಗಿರುತ್ತದೆ. ಆದರೆ ನೋವೇ ಆಗಿರೋದಿಲ್ಲ. ಇದನ್ನು ವಿವರಿಸಲು 2 ಸುಂದರ ಘಟನೆಗಳು ಇಂತಿವೆ.

ನಾನು ಓದಿದ ಶಾಲೆಯಲ್ಲಿ ಪ್ರತಿ ದಿನ 9 ಗಂಟೆಗೆ ಅಸೆಂಬ್ಲಿ ನಡೆಯುತ್ತಿತ್ತು. 5 ಕಿ.ಮೀ ದೂರದ ಹಳ್ಳಿಯಿಂದ, ಬರಿಗಾಲಿನಲ್ಲಿ ಶಾಲೆಗೆ ಬರುತ್ತಿದ್ದ ನಾನು, ಒಂದು ದಿನ ಜೋರಾಗಿ ಮಳೆ ಇದ್ದುದರಿಂದ ಶಾಲೆ ಸೇರುವಾಗ ಹತ್ತು ನಿಮಿಷಗಳ ತಡವಾಗಿತ್ತು. ಯಾರಿಗೂ ತಿಳಿಯದಂತೆ ಅಸೆಂಬ್ಲಿಗೆಂದು ಸೇರಿದ್ದ, ಸಾಲುಗಳ ಮಧ್ಯೆ ನಾನು ಸೇರಿಕೊಂಡು ಬಿಟ್ಟೆ. ಇದನ್ನು ಗಮನಿಸಿದ ಪ್ರಿನ್ಸಿಪಾಲ್, ಅಸೆಂಬ್ಲಿ ಮುಗಿಯುತ್ತಲೇ ನನ್ನನ್ನು ಕರೆದು ಕೈ ಚಾಚುವಂತೆ ಹೇಳಿ ಎಲ್ಲರ ಎದುರಿಗೆ ಬೆತ್ತದಿಂದ ಎರಡು ಏಟು ನೀಡಿದರು - ಒಂದು ತಡವಾಗಿ ಬಂದುದಕ್ಕೆ, ಇನ್ನೊಂದು ಗುಟ್ಟಾಗಿ ಸಾಲಿನೊಳಗೆ ಸೇರಿಕೊಂಡಿದ್ದಕ್ಕೆ.

ಏಟಿನ ನೋವಿಗಿಂತಲೂ, ನನ್ನ ಸಹಪಾಠಿಗಳ ಮತ್ತು ಶಿಕ್ಷಕರ ಎದುರಿಗೆ ಆದ ಅವಮಾನದಿಂದ ನಾನು ಬಹಳ ನೊಂದುಕೊಂಡೆ. ಅಸೆಂಬ್ಲಿ ಮುಗಿಯುತ್ತಲೇ ಪ್ರಿನ್ಸಿಪಾಲರು ಮತ್ತೆ ನನ್ನನ್ನು ಅವರ ಕೊಠಡಿಗೆ ಬರುವಂತೆ ತಿಳಿಸಿದರು. ಮತ್ತೆ ಬೇರೆ ಶಿಕ್ಷೆ ಕಾದಿದೆಯೋ ಎಂಬ ಭಯದಿಂದಲೇ ನಾನು ಅವರ ಕೊಠಡಿಯನ್ನು ಪ್ರವೇಶಿಸಿದೆ. ತಕ್ಷಣ ಅವರು ಬಾ ಮಗು, ನನ್ನ ಬಳಿ ಬಾ. ಮಳೆಯಲ್ಲಿ ನೆನೆದಿದ್ದೀಯಾ, ನಾಳೆ ಶೀತ ಜ್ವರ ಬಂದರೆ! ಎನ್ನುತ್ತಾ ನನ್ನ ಒದ್ದೆಯಾದ ತಲೆ ಕೂದಲನ್ನು ಅವರ ಬಿಳಿ ನಿಲುವಂಗಿಯಿಂದ ಒರೆಸಿ, ಕೈಗೊಂದು ಚಾಕಲೇಟನ್ನು ಕೊಟ್ಟು, ನನ್ನ ತಲೆಗೆ ಮುತ್ತಿಟ್ಟು ‘ಇನ್ನು ಮುಂದೆ ಹೀಗೆಲ್ಲಾ ಮಾಡಬೇಡ’ ಎಂದು ಹೇಳುತ್ತಾ ಪ್ರೀತಿಯಿಂದ ಹೊರಗೆ ಕಳುಹಿಸಿದರು. ಅಷ್ಟರಲ್ಲಿ ಅವರ ಬೆಚ್ಚಗಿನ ಅಪ್ಪುಗೆಯಿಂದ, ನನ್ನ ಕಣ್ಣಲ್ಲಿ ನೀರು ತುಂಬಿತ್ತು; ಅವರು ಕೊಟ್ಟ ಏಟಿನ ನೋವಂತೂ ಎಂದೋ ಮಾಯವಾಗಿತ್ತು !

ಯುವಕನೊಬ್ಬ ತನ್ನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ತನ್ನ ಗೆಳೆಯರ ಮದುವೆಯ ಸಮಾರಂಭದಲ್ಲಿ ನೋಡಿದ. ಹಳೆಯ ಮೇಷ್ಟ್ರನ್ನು ನೋಡುತ್ತಲೇ ಪುಳಕಿತನಾದ ಈ ಯುವಕ, ಅವರಿಗೆ ನಮಸ್ಕರಿಸುತ್ತಾ ನಾನು ಯಾರೂಂತ ಗೊತ್ತಾಯಿತೇ ಸಾರ್ ಎಂದು ಕೇಳಿದ. ಇಲ್ಲಪ್ಪಾ, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ನನಗೆ ಎಲ್ಲರ ಗುರುತು ಹಿಡಿಯೋಕೆ ಆಗ್ತಾ ಇಲ್ಲ. ನಿನ್ನ ಪರಿಚಯವನ್ನು ನೀನೇ ಹೇಳಿ ಬಿಡು ಎಂದರು ಆ ಮೇಷ್ಟ್ರು. ಯುವಕ ಹೇಳಿದ: ‘ನಾನು 5ನೆಯ ತರಗತಿಯಲ್ಲಿ ನಿಮ್ಮ ವಿದ್ಯಾರ್ಥಿಯಾಗಿದ್ದೆ. ಒಮ್ಮೆ ನನ್ನ ಸಹಪಾಠಿಯೊಬ್ಬ ಕೈ ಗಡಿಯಾರ ಬಿಚ್ಚಿಟ್ಟಿದ್ದಾಗ ನಾನು ಕದ್ದು ಬಿಟ್ಟಿದ್ದೆ. ಕಳ್ಳನನ್ನು ಪತ್ತೆ ಹಚ್ಚುವ ಸಲುವಾಗಿ, ನಮ್ಮ ಜೇಬುಗಳನ್ನು ಹುಡುಕಲು ಅನುವಾಗುವಂತೆ, ನೀವು ಕ್ಲಾಸಿನ ಎಲ್ಲಾ ಹುಡುಗರನ್ನು ಗೋಡೆಗೆ ಎದುರಾಗಿ ನಿಲ್ಲಿಸಿ, ಕಣ್ಣುಗಳನ್ನು ಮುಚ್ಚುವಂತೆ ಹೇಳಿದಿರಿ. ಮಾಡಿದ ಕಳ್ಳತನವು ಎಲ್ಲಿ ಬಯಲಾಗುತ್ತೋ ಎಂದು ನಾನು ಭಯದಿಂದ ನಾನು ಇನ್ನೊಂದು ತಪ್ಪು ಮಾಡಿದೆ.

ವಾಚನ್ನು ಪಕ್ಕದ ಹುಡುಗನ ಜೇಬಿನೊಳಗೆ ಮೆತ್ತಗೆ ತುರುಕಿಬಿಟ್ಟೆ. ಇದನ್ನು ತಿಳಿದ ಆ ಚಾಲೂ ಹುಡುಗ ಮತ್ತೆ ಆ ವಾಚನ್ನು ನನ್ನ ಜೇಬಿನೊಳಗೇ ಹಾಕಿಬಿಟ್ಟ. ನನ್ನ ಜೇಬಿನಿಂದ ವಾಚನ್ನು ಹೊರತೆಗೆದು ಆ ವಿದ್ಯಾರ್ಥಿಗೆ ಕೊಟ್ಟಿರಿ. ನಾನು ಹೆದರುತ್ತಲೇ ಇದ್ದೆ. ಆದರೆ ನೀವು ಮಾತ್ರ ನನ್ನ ಹೆಸರು ಹೇಳಲೇ ಇಲ್ಲ. ನಿಮ್ಮ ವರ್ತನೆ, ನನ್ನಲ್ಲಿ ಪರಿವರ್ತನೆಯನ್ನು ತಂದಿತು. ಜೀವನದಲ್ಲಿ ಮತ್ತೆ ನಾನು ಕಳ್ಳತನ ಮಾಡಲೇ ಇಲ್ಲ. ಏನೂ ಶಿಕ್ಷೆಯನ್ನು ನೀಡದೆ, ನನ್ನಲ್ಲಿ ಈ ಬದಲಾವಣೆಯನ್ನು ತಂದ, ನಿಮ್ಮನ್ನು ನಾನು ಹೇಗೆ ಮರೆಯಲಿ ಸಾರ್. ಈಗಲಾದರೂ ನಾನು ಯಾರೆಂಬುದು ಗೊತ್ತಾಯಿತೇ?’ ಎಂದು ಹೇಳಲಾಗಿ, ಆ ಗುರುಗಳು ಹೇಳಿದರು ನಿಜ ಹೇಳಬೇಕೆಂದರೆ, ಕಳ್ಳ ಯಾರೂಂತ ನನಗೆ ಗೊತ್ತಾಗುವುದು ಬೇಡವಾಗಿತ್ತು. ಆದ್ದರಿಂದಲೇ ನಾನೂ ಕಣ್ಣುಗಳನ್ನು ಮುಚ್ಚಿಕೊಂಡೇ ಎಲ್ಲರ ತಪಾಸಣೆ ನಡೆಸಿದ್ದೆ. ವ್ಯಕ್ತಿಯು ಗೈದ ತಪ್ಪಿಗೆ ಶಿಕ್ಷೆಯನ್ನು ನೀಡೋದಕ್ಕಿಂತಲೂ ತನ್ನ ತಪ್ಪಿನ ಅರಿವನ್ನು ಆತನಿಗೆ ಮಾಡಿ ಕೊಡೋದೇ ಸರಿಯಲ್ಲವೇ? ನೀನು ನಿನ್ನ ತಪ್ಪನ್ನು ಅರಿತುಕೊಂಡು ಓರ್ವ ಪ್ರಾಮಾಣಿಕ ವ್ಯಕ್ತಿಯಾಗಿದ್ದೀಯಾ. ಇದುವೇ ನನಗೆ ಬೇಕಾಗಿದ್ದ ಸಂತಸ ನೀಡಿದ ಫಲಿತಾಂಶ’ ಎಂದಾಗ ಈ ಯುವಕ ಭಾವುಕನಾದ.

ತಾತ್ಪರ್ಯ ಇಷ್ಟೆ : ಶಿಕ್ಷೆಯ ಉದ್ದೇಶ ಶಿಕ್ಷಿಸೋದಲ್ಲ. ವ್ಯಕ್ತಿಯು ತಾನು ಗೈದ ತಪ್ಪನ್ನು ತಾನೇ ಅರಿತುಕೊಂಡು, ತನ್ನಲ್ಲಿ ಸುಧಾರಣೆಯನ್ನು ತರುವಂತೆ ಮಾಡೋದು. ಈ ಪ್ರಕ್ರಿಯೆ, ತಪ್ಪುಗಳು ಪುನರಾವೃತ್ತಿಯಾಗದಂತೆ ನೋಡಿಕೊಳ್ಳುತ್ತವೆ. ಅಂತೆಯೇ, ಪ್ರೀತಿಸುವ ಹೆತ್ತವರು, ಗುರುಗಳು, ಮಕ್ಕಳು ತಪ್ಪು ಮಾಡಿದಾಗ ದಂಡಿಸಿದರೂ, ಆ ದಂಡನೆಯನ್ನು ಮಕ್ಕಳು ತಕ್ಷಣ ಮರೆಯುತ್ತಾರೆ; ಶಿಕ್ಷಿಸಿದವರ ವಿರುದ್ಧ ಯಾವುದೇ ರೀತಿಯ ದ್ವೇಷವನ್ನಾಗಲೀ, ಪ್ರತೀಕಾರವನ್ನಾಗಲೀ ಸಾಧಿಸೋದಿಲ್ಲ. ಕಾರಣ, ನೋವನ್ನೂ, ಅವಮಾನವನ್ನೂ ಮರೆಸುವ ಶಕ್ತಿ ಪ್ರೀತಿಗೆ ಇದೆ. ಮಾತ್ರವೆ ಅಲ್ಲ, ಪ್ರೀತಿಸುವವರಿಗೆ ಮಾತ್ರ ಶಿಕ್ಷಿಸುವ ಹಕ್ಕು ಕೂಡ ಪ್ರಾಪ್ತವಾಗುತ್ತದೆ. ಒಂದು ರೀತಿಯಲ್ಲಿ ನೋಡಿದರೆ, ಸದುದ್ದೇಶವನ್ನು ಹೊಂದಿರುವ ಶಿಕ್ಷೆ, ದಂಡನೆಗಳು ಕೆಲವೊಮ್ಮೆ ಅನಿವಾರ್ಯ ಹಾಗೂ ಅವಶ್ಯಕ. ಶಿಕ್ಷಿಸುವವರು ಇದನ್ನು ದುರುಪಯೋಗ ಮಾಡಬಾರದು ಹಾಗೂ ಶಿಕ್ಷಿಸಲ್ಪಟ್ಟವರೂ ಇದನ್ನು ಅನ್ಯಥಾ ಭಾವಿಸಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net