ಅಂಕಣ ಪ್ರೇರಣೆ: ಎಲ್ಲದಕ್ಕೂ ತುಲನೆ ತರವಲ್ಲ

PREARANE
Published on
ಕೆಲವರಿಗೆ ತಮ್ಮನ್ನು ಇತರರ ಜತೆ ತುಲನೆ ಮಾಡಿಕೊಳ್ಳುವ ದುರಭ್ಯಾಸವಿರುತ್ತದೆ. ಈ ರೀತಿ ಹೋಲಿಕೆ ಮಾಡಿಕೊಂಡಾಗ, ಇತರರಿಗಿಂತ ತಮ್ಮಲ್ಲಿ ಚೆನ್ನಾಗಿದ್ದರೆ ಕೆಟ್ಟ ಸಂತೋಷ ಪಟ್ಟುಕೊಳ್ಳೋದು; ಒಂದು ವೇಳೆ ಕೆಟ್ಟದಾಗಿದ್ದರೆ ಒಳಗೊಳಗೇ ದುಃಖ ಪಡೋದು ಸಾಮಾನ್ಯವಾಗಿದೆ.

ಈ ದುಃಖ ತಮಗಿಲ್ಲವಲ್ಲಾ ಎಂಬ ದುಃಖವಲ್ಲ; ಇನ್ನೊಬ್ಬರಿಗೆ ಇದೆಯಲ್ಲಾ; ಇಲ್ಲವೇ ಅವರಲ್ಲಿ ತಮಗಿಂತ ಜಾಸ್ತಿ ಇದೆಯಲ್ಲಾ ಎಂಬ ಸಂಕಟ. ಮನುಷ್ಯನ ಸ್ವಭಾವವೇ ಹಾಗೆ; ತನ್ನಲ್ಲಿ ಇದ್ದುದ್ದರ ಬಗ್ಗೆ ಆತನಿಗೆ ಬೆಲೆಯೂ ಇಲ್ಲ; ಸಂತೋಷವೂ ಇಲ್ಲ. ಇಲ್ಲದುದರ ಬಗ್ಗೆ ಮಾತ್ರ ಚಿಂತೆ. ಈ ಚಿಂತೆ, ತಮ್ಮಲ್ಲಿ ಇಲ್ಲದುದನ್ನು ಪಡೆಯಲು ಒಂದು ಪ್ರೇರಣೆಯಂತೆ ಕೆಲಸ ಮಾಡಿದರೆ ಪರವಾಗಿಲ್ಲ, ಆದರೆ ಇನ್ನೊಬ್ಬರಲ್ಲಿ ಇದ್ದುದನ್ನು ಕಂಡು ಬೇಸರಪಟ್ಟುಕೊಂಡು, ಇದ್ದ ಸಂತೋಷವನ್ನು ಅನುಭವಿಸದೆ, ತಮ್ಮ ಮನಃಶಾಂತಿಯನ್ನು ಹಾಳು ಮಾಡುಕೊಳ್ಳುವಂತಾದರೆ ಇಂತಹ ತುಲನೆಗಳು ಏಕೆ ಬೇಕು? ಕೆಲವರಿಗೆ ತಮ್ಮ ಮನೆಯಲ್ಲಿ ಟಿ.ವಿ, ಕಾರುಗಳಿದ್ದರೆ ಸಾಲದು.

ಅವು ಪಕ್ಕದ ಮನೆಯವರಿಗಿಂತ, ಹಾಗೂ ತಮ್ಮ ಸಂಬಂಧಿಗಳಿಗಿಂತ ಇನ್ನೂ ಲೇಟೆಸ್ಟ್ ಹಾಗೂ ಬೆಲೆಬಾಳುವಂತಿರಬೇಕೆಂಬ ಆಸೆ. ಇದು ಕೆಲವೊಮ್ಮೆ ಮೂದಲಿಕೆಗಳಿಗೂ ಕಾರಣವಾಗುತ್ತವೆ. ‘ನೀವು ಯೂಸ್​ಲೆಸ್ ಮನುಷ್ಯ, ನಿಮ್ಮ ತಮ್ಮನನ್ನು ನೋಡಿ, ಕಡಿಮೆ ಆದಾಯ ಇದ್ದರೂ ಎರಡೆರಡು ಕಾರುಗಳನ್ನಿಟ್ಟುಕೊಂಡು ಮೆರೆಯುತ್ತಿದ್ದಾನೆ. ನಮಗಿರೋದು ಒಂದೇ ಕಾರು. ನಮಗೂ ಆ ಒಳ್ಳೆಯ ದಿನ ಯಾವಾಗ ಬರುತ್ತೋ ನಾ ಬೇರೆ ಕಾಣೆ’ ಎಂಬ ಹೆಂಡತಿಯ ಚುಚ್ಚು ಮಾತುಗಳು ಗಂಡನನ್ನು ಕಾಡಲಾರಂಭಿಸಿ, ಆತನ ನೆಮ್ಮದಿಯನ್ನು ಕೆಡಿಸುತ್ತದೆ. ಇಂಥವರಿಗೆ ಸಮಾಧಾನವಿಲ್ಲ.

ಮಗ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದರೂ, ಅಪ್ಪನಿಗೆ ತೃಪ್ತಿಯೂ ಇಲ್ಲ, ಒಂದು ಹೊಗಳಿಕೆಯ ಮಾತೂ ಇಲ್ಲ. ‘ದಡ್ಡ, ಉಳಿದ ಶೇ.10 ಅಂಕಗಳು ಎಲ್ಲಿಗೆ ಹೋದುವು?’ ಎಂಬ ಪ್ರಶ್ನೆ. ತಮ್ಮ ಬಂಧು ಮಿತ್ರರ ಮಕ್ಕಳು ಹೆಚ್ಚಿನ ಅಂಕಗಳನ್ನು ತೆಗೆದುಕೊಂಡರಲ್ಲ ಎಂಬ ಸಂಕಟ. ಮಗನನ್ನು ಕರೆದು ಹೇಳ್ತಾನೆ. ‘ಪಕ್ಕದ ಮನೆಯ ಶೋಭಾಳನ್ನು ನೋಡೋ ಫಿಸಿಕ್ಸ್​ನಲ್ಲಿ 93%, ಕೆಮಿಸ್ಟ್ರಿಯಲ್ಲಿ 95%, ಗಣಿತದಲ್ಲಿ 100% ನೋಡು ಅವಳನ್ನ!’. ಉತ್ತರವಾಗಿ ತಂಗಿ ಹೇಳ್ತಾಳೆೆ ‘ಹೌದು ಅವಳನ್ನು ದಿನಾ ನೋಡಿದ್ದಕ್ಕೆ ಇವನಿಗೆ ಕಡಿಮೆ ಅಂಕಗಳು ಬಂದಿದ್ದು!’.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಮಗನಿಗೆ ಇನ್ನೂ ಹೆಚ್ಚಿನ ಅಂಕಗಳು ಬರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಶಿಸೋದು ತಪ್ಪಲ್ಲವಾದರೂ ಅವರ ಇತಿಮಿತಿಗಳನ್ನು ಅರಿತುಕೊಳ್ಳದೆ, ಅವರನ್ನು ಇತರ ಮಕ್ಕಳೊಂದಿಗೆ ಹೋಲಿಸಿ, ನಮ್ಮ ಮತ್ತು ಅವರ ನೆಮ್ಮದಿಯನ್ನು ಹಾಳು ಮಾಡುತ್ತೇವಲ್ಲ; ಇದು ತರವಲ್ಲ.

ಈ ಹೋಲಿಕೆ, ಮಕ್ಕಳ ಆತ್ಮವಿಶ್ವಾಸವನ್ನೂ ಕುಂಠಿತಗೊಳಿಸಿ, ಕೆಲವೊಮ್ಮೆ ಈ ನಿಂದನೆ, ಅವರ ಆತ್ಮಹತ್ಯೆಗೂ ಕಾರಣವಾಗಬಹುದು. ಇದು ಬೇಕೆ ನಮಗೆ? ಇತರರ ಸಾಧನೆ, ಸೌಂದರ್ಯಗಳ ಕುರಿತಾದ ತುಲನೆಗಳು ಹಾಗೂ ಅವುಗಳಿಂದಾಗಿ ಹುಟ್ಟಿಕೊಂಡ ಪ್ರತಿಕ್ರಿಯೆಗಳು ಕೆಲವೊಮ್ಮೆ ಸಂಬಂಧಗಳನ್ನೂ ಕೆಡಿಸಬಲ್ಲುದು.

ಎದುರು ಮನೆಯ ಹೆಂಗಸು ಒಳ್ಳೆಯ ಸೀರೆ ಉಟ್ಟುಕೊಂಡಾಗ, ಹೆಂಡತಿ ಗಂಡನಿಗೆ, ‘ರೀ ಆಕೆಯದು ನನ್ನ ಸೀರೆಗಿಂತಲೂ ಚೆಂದದ ಸೀರೆ. ನನಗೂ ಅಂತಹುದೇ ಒಂದು ಸೀರೆಯನ್ನು ತಂದು ಕೊಡುವಿರಾ’ ಎಂಬುದು, ಹೋಲಿಕೆ ಮಾಡಿಕೊಂಡ ಪರಿಣಾಮದ ಬೇಡಿಕೆ. ಉತ್ತರವಾಗಿ ‘ಸುಮ್ಮನಿರೆ, ಆಕೆಗೆ ನಾನು ಸಾಲ ಮಾಡಿ ಸೀರೆ ಕೊಡಿಸಬೇಕಾಯಿತು. ಇನ್ನು ನಿನಗೆ ಬೇರೆ, ಸೀರೆ ಎಲ್ಲಿಂದ ತರಲಿ?’ ಎಂಬುದಾಗಿ ಕಿಲಾಡಿ ಗಂಡ ಹೇಳಿದರೆ, ಈ ಹೋಲಿಕೆ ಬೇಕಿತ್ತೇ ಎಂದು ಹೆಂಡತಿಗೆ ಅನಿಸೋದಿಲ್ಲವೇ? ‘ರೀ ಪಕ್ಕದ ಮನೆಯ ಪಂಕಜ ದಿನದಲ್ಲಿ ಎಷ್ಟೊಂದು ಸಲ ತನ್ನ ಸೀರೆಗಳನ್ನು ಚೇಂಜ್ ಮಾಡ್ತಾಳೆ ನೋಡಿದಿರಾ? ನಾನಾದರೋ ಉಟ್ಟ ಸೀರೆಯಲ್ಲೇ ದಿನ ಕಳೆಯುತ್ತೇನೆ’ ಎಂಬ ಮಡದಿಯ ಮಾತಿಗೆ ‘ಹೌದಾ.. ನಾನು ನೋಡೇ ಇಲ್ವಲ್ಲ’ ಎಂದು ಕಿಲಾಡಿ ಗಂಡ ಹೇಳಿ ನಕ್ಕರೆ, ಪಾಪ ಹೆಂಡತಿ ಏನು ಮಾಡಬೇಕು? ಪಕ್ಕದ ಮನೆಯಾಕೆಯನ್ನು ನೋಡಿದ ಹೆಂಡತಿ ಗಂಡನ ಬಳಿ, ‘ಪಕ್ಕದ ಮನೆಯ ದಂಪತಿಯನ್ನು ನೋಡಿದಿರಾ? ಆ ಗಂಡನಿಗೆ ತನ್ನ ಮಡದಿಯ ಮೇಲೆ ಎಷ್ಟೊಂದು ಪ್ರೀತಿ, ನಿತ್ಯ ಆಫೀಸಿಗೆ ಹೊರಡುವಾಗ ಸ್ಕೂಟರ್ ಏರುವ ಮೊದಲೇ ತನ್ನ ಮಡದಿಗೆ ಮುತ್ತುಕೊಟ್ಟು ಹೋಗುತ್ತಾನೆ. ನೀವು ಕೂಡ ಹಾಗೆ ಏಕೆ ಮಾಡಬಾರದು?’ ಎಂಬ ಬಯಕೆಯನ್ನು ವ್ಯಕ್ತಪಡಿಸಿದಾಗ ಉತ್ತರವಾಗಿ ಕಿಲಾಡಿ ಗಂಡ ಹೇಳುತ್ತಾನೆ. ‘ಮಾಡಬಹುದಿತ್ತು, ಆದರೆ ಹಾಗೆ ಮಾಡಲು ಆಕೆ ಒಪ್ಪುತ್ತಾಳೋ ಇಲ್ಲವೊ ನಾ ಬೇರೆ ಕಾಣೆ...’

ಇವೆಲ್ಲಾ ಅನವಶ್ಯಕವಾದ ಹೋಲಿಕೆ ಮಾಡಿಕೊಳ್ಳೋದರಿಂದ ಆಗುವ ಅನರ್ಥಗಳು.

ತುಲನೆ ಮಾಡಿಕೊಳ್ಳೋದರಿಂದ, ನಮಗೆ ಹೆಚ್ಚಿನ ಸ್ಪೂರ್ತಿ, ಪ್ರೇರಣೆ ಬರುವುದಾದರೆ ಪರವಾಗಿಲ್ಲ. ಬದಲಾಗಿ ಅದು ಕೈ ಕೈ ಹಿಚುಕಿಕೊಳ್ಳುವಂತೆ ಮಾಡಿ ಅಸಮಾಧಾನ, ದುಃಖದ ಹೊಗೆಯನ್ನು ಹುಟ್ಟು ಹಾಕುವಂತಾದರೆ, ಅಂಥ ತುಲನೆಯಿಂದ ಏನು ಪ್ರಯೋಜನ? ವಾಸ್ತವದಲ್ಲಿ ಎಲ್ಲರೂ ಎಲ್ಲವೂ ಒಂದೇ ತೆರನಾಗಿ ಇರೋದಿಲ್ಲ. ಒಬ್ಬರಲ್ಲಿ ಇರೋದು ಇನ್ನೊಬ್ಬರಲ್ಲಿ ಇರೋದಿಲ್ಲ. ಇನ್ನೊಬ್ಬರಲ್ಲಿ ಇಲ್ಲದುದು ತಮ್ಮ ಬಳಿ ಇದೆ ಎಂಬುದು ಇವರಿಗೆ ಗೊತ್ತೇ ಆಗೋದಿಲ್ಲ; ಗೊತ್ತಾದರೂ ಅದಕ್ಕೆ ಬೆಲೆನೇ ಇಲ್ಲ.

ಇಷ್ಟಕ್ಕೂ ತುಲನೆ ಮಾಡಿಕೊಳ್ಳಲೇಬೇಕೆಂದರೆ ಯಾವತ್ತೂ, ಎಲ್ಲಾ ವಿಚಾರದಲ್ಲೂ, ನಮಗಿಂತ ಕೆಳಮಟ್ಟದಲ್ಲಿ ಇರುವವರ ಜತೆ ತುಲನೆ ಮಾಡಿಕೊಳ್ಳಬೇಕು. ಆಗ ನಾವೆ ಅದೆಷ್ಟು ಅದೃಷ್ಟವಂತರು, ಭಾಗ್ಯವಂತರು ಎಂಬುದರ ಅರಿವು ಉಂಟಾಗಿ ನೆಮ್ಮದಿಯಿಂದ ಇರಲು ಸಾಧ್ಯ.

ಜೀವನವನ್ನು ಅರ್ಥೈಸಿಕೊಳ್ಳಬೇಕಾದರೆ ಆಸ್ಪತ್ರೆ, ಜೈಲು ಮತ್ತು ಸ್ಮಶಾನಗಳನ್ನು ಸಂದರ್ಶಿಸಬೇಕು. ಆರೋಗ್ಯಕ್ಕಿಂತ ಮಿಗಿಲಾದುದು ಈ ಜೀವನದಲ್ಲಿ ಬೇರೊಂದಿಲ್ಲವೆಂಬುದು ಆಸ್ಪತ್ರೆಯಲ್ಲಿ ಅರಿವಾದರೆ, ಸ್ವಾತಂತ್ರ್ಯ್ರವೆಂಬುದು ಎಷ್ಟು ಅಮೂಲ್ಯವೆಂಬ ಸತ್ಯ ಜೈಲಲ್ಲಿ ಅರಿವಾಗುತ್ತದೆ. ಸ್ಮಶಾನದಲ್ಲಿ ನಮ್ಮ ಜೀವನ ಎಷ್ಟೊಂದು ಅಪೂರ್ವ, ಅಮೂಲ್ಯವೆಂಬುದರ ಅರಿವಾಗುತ್ತದೆ. "The ground that we walk today, will be our roof one day' ಎಂಬುದರ ಅರಿವಾಗೋದು ಗೋರಿ ಸಮಾಧಿಯಲ್ಲೇ.

ಒಂದು ದೃಷ್ಟಿಯಲ್ಲಿ ನೋಡಿದರೆ ತುಲನೆ ಮಾಡಿಕೊಳ್ಳೋದೆಂದರೆ, ನಮಗೆ ನಾವೇ ಮಾಡಿಕೊಳ್ಳುವ ಅವಮಾನವೂ ಹೌದು, ನಿಂದನೆಯೂ ಹೌದು. ಆದುದರಿಂದ ಅವರವರು ಅವರವರಂತೆಯೇ ಇರಲಿ; ನಾವು ನಮ್ಮಂತೆಯೇ ಇರೋಣ. ಆಗ ಎಲ್ಲರಿಗೂ ನೆಮ್ಮದಿ. ಎಷ್ಟಾದರೂ ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗಲ್ಲವೇ! ಅದು ನಮಗೆ ಹೇಗೆ ಗೊತ್ತಾಗುತ್ತದೆ! ‘ಅವರಿವರ ಹೋಲಿಸುತ್ತಾ ನಿನ್ನ ಅದೃಷ್ಟವನ್ನು ಹಳಿದು ನೀ ವೃಥಾ ಕೊರಗಬೇಕೇ? ಪ್ರತಿಯೊಬ್ಬರೂ ಹೊಳೆದಾರು. ಸೂರ್ಯ ಚಂದ್ರರ ಹಾಗೆ, ತಮ್ಮ ತಮ್ಮ ಸರದಿ ಬಂದಾಗ’ ಎಂಬ ಮಾತು ಸದಾ ನೆನಪಿರಲಿ.

ತುಲನೆ ಹೇಗಿರಬೇಕು?

ಕಾಲಿಗೆ ಶೂಗಳು ಬೇಕೇ ಬೇಕು ಎಂದು ಹಠ ಹಿಡಿದ ಹುಡುಗ, ಕಾಲಿಲ್ಲದ ಕುಂಟನನ್ನು ಕಂಡು, ‘ಈ ವ್ಯಕ್ತಿಗೆ ಶೂ ಧರಿಸಲು ಕಾಲುಗಳೇ ಇಲ್ಲ; ಪರವಾಗಿಲ್ಲ ಇವನಿಗಿಂತ ನಾನೇ ಎಷ್ಟೋ ವಾಸಿ, ಶೂಗಳಿಲ್ಲದಿದ್ದರೆ ಏನಂತೆ, ಕಾಲುಗಳಾದರೂ ಇವೆಯಲ್ಲಾ’ ಎಂದು ತಿಳಿದು ಶೂಗಳಿಗಾಗಿ ಹಠ ಹಿಡಿಯೋದನ್ನೇ ನಿಲ್ಲಿಸಿ ಬಿಟ್ಟನಂತೆ.

ಮನೆಯ ಮುಂದೆ ಇದ್ದ ಕಸದ ಬುಟ್ಟಿಯಲ್ಲಿ ಉಪಯೋಗಕ್ಕೆ ಬರುವ ವಸ್ತುಗಳನ್ನು ಹೆಕ್ಕುತ್ತಿರುವ ಬಡವನನ್ನು ಕಂಡು, ಬಾಲ್ಕನಿಯಲ್ಲಿ ನಿಂತ ವ್ಯಕ್ತಿ ತನಗೇ ತಾನೇ ಹೇಳಿಕೊಂಡನಂತೆ. ‘ಹೇ ದೇವರೇ ಧನ್ಯವಾದಗಳು, ನಾನು ಇವನಷ್ಟು ಬಡವನಲ್ಲವಲ್ಲ!’. ಆ ಬಡವ, ರಸ್ತೆಯ ಮೇಲೆ ಹರಕು ಬಟ್ಟೆ ತೊಟ್ಟು ಓಡಾಡುತ್ತಿರುವ ಹುಚ್ಚನನ್ನು ಕಂಡು ಅಂದುಕೊಂಡನಂತೆ ‘ಧನ್ಯವಾದಗಳು ದೇವರೇ ನಾನು ಅವನಂತೆ ಹುಚ್ಚನಲ್ಲವಲ್ಲ!’. ಪ್ರತಿಯಾಗಿ ಆಂಬುಲೆನ್ಸ್ ನಲ್ಲಿ ಕೊಂಡೊಯ್ಯುತ್ತಿದ್ದ ರೋಗಿಯನ್ನು ಕಂಡು ಆ ಹುಚ್ಚ ತನಗೆ ತಾನೇ ಹೇಳಿಕೊಂಡನಂತೆ ‘ಹೇ ದೇವರೇ ಧನ್ಯವಾದಗಳು.

ನಾನು ಈ ಮನುಷ್ಯನಂತೆ ರೋಗಿಯಲ್ಲವಲ್ಲ’. ಮತ್ತೆ ಆ ರೋಗಿ ಆಸ್ಪತ್ರೆಯಿಂದ ಹೊರತರುತ್ತಿರುವ ಹೆಣವನ್ನು ಕಂಡು ಹೇಳಿಕೊಂಡನಂತೆ ‘ಹೇ ದೇವರೇ ಧನ್ಯವಾದಗಳು ನಾನಿನ್ನೂ ಸತ್ತಿಲ್ಲವಲ್ಲ!’. ಆದರೆ, ಸತ್ತ ವ್ಯಕ್ತಿ ಮಾತ್ರ ಏನೂ ಹೇಳಲಾರದವನಾಗಿದ್ದ. ತಾತ್ಪರ್ಯ ಇಷ್ಟೆ; ತುಲನೆ ಮಾಡಿಕೊಳ್ಳುವಂತಿದ್ದರೆ, ನಮಗಿಂತಲೂ ಹೆಚ್ಚಿನ ಕಷ್ಟದಲ್ಲಿರುವವರ ಜತೆ ಮಾಡಿಕೊಳ್ಳಬೇಕು. ಆಗ ನಮ್ಮ ಕಷ್ಟ ಮಹಾಕಷ್ಟವೆಂದು ಅನಿಸೋದೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net