ಕಬ್ಬು ಉತ್ಪಾದಕತೆ, ಸಕ್ಕರೆ ಅಂಶ ವೃದ್ಧಿಗೆ ತಯಾರಿ

5-67f8096943146
Published on

ಸಕ್ಕರೆ ಉತ್ಪಾದನೆ ದಕ್ಷಿಣದಲ್ಲಿರಾಜ್ಯಕ್ಕೆ 2ನೇ ಸ್ಥಾನ | ಎಥೆನಾಲ್ ಉತ್ಪಾದನೆ ಕಾರ್ಖಾನೆಗಳಿಗೆ ವರದಾನ

| ಮೃತ್ಯುಂಜಯ ಕಪಗಲ್ ಬೆಂಗಳೂರು

ಉತ್ತರಪ್ರದೇಶ ಮಾದರಿಯಲ್ಲಿ ಕಬ್ಬು ಉತ್ಪಾದಕತೆ, ಸಕ್ಕರೆ ಅಂಶ ರಿಕವರಿ ರೇಟ್ ವೃದ್ಧಿಗೆ ಒತ್ತು ನೀಡಿ, ರೈತರಿಗೆ ಅನುಕೂಲ ಮಾಡಿಕೊಡಲು ಹಾಗೂ ಕಾರ್ಖಾನೆಗಳಿಗೆ ಉತ್ಪಾದನಾ ವೆಚ್ಚ ತಗ್ಗಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕಬ್ಬು ಹೊಸ ತಳಿಗಳ ಸಂಶೋಧನೆ ಮತ್ತು ಅಭಿವೃದ್ಧಿ, ಸಕ್ಕರೆ ಉತ್ಪಾದನೆ ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿ ಕೆಲಸ ಮಾಡುತ್ತಿರುವ ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಈ ಹೊಣೆ ಒಪ್ಪಿಸಲು ಸರ್ಕಾರ ಮುಂದಾಗಿದೆ.

ಸ್ವಂತ ಆರ್ಥಿಕ ಬಲವನ್ನೇ ನೆಚ್ಚಿಕೊಂಡಿರುವ ಸಂಸ್ಥೆಗೆ ಹೆಚ್ಚಿನ ಕೆಲಸ ಮಾಡಲು ಅವಕಾಶಗಳಿದ್ದರೂ ಹಣಕಾಸಿನ ಸಮಸ್ಯೆ ಕೈಕಟ್ಟಿ ಹಾಕಿದ್ದು, ರಾಜ್ಯ ಸರ್ಕಾರ ಕನಿಷ್ಠ 10 ಕೋಟಿ ರೂ. ಅನುದಾನ ಕೊಟ್ಟರೆ ತೆರಿಗೆ ರೂಪದಲ್ಲಿ ಸರ್ಕಾರದ ಖಜಾನೆಗೆ ಹಣ ಮರಳಿ ಸೇರುತ್ತದೆ. ಕಬ್ಬು ಬೆಳೆಗಾರರಿಗೆ ಹೆಚ್ಚು ಇಳುವರಿ, ಕಡಿಮೆ ನೀರು ಬೇಡುವ ತಳಿಗಳ ಪೂರೈಕೆ, ಉತ್ಪಾದಕತೆ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಸಕ್ಕರೆ ಕಾರ್ಖಾನೆಗಳಿಗೆ ಉತ್ಪಾದನಾ ವೆಚ್ಚ ತಗ್ಗಿಸುವ ತಂತ್ರಜ್ಞಾನ ಮಾರ್ಗದರ್ಶನ, ತರಬೇತಿಗೆ ನೀಡಬಹುದಾಗಿದೆ ಮೂಲಗಳು ತಿಳಿಸಿವೆ.

ಎಥೆನಾಲ್ ಉತ್ಪಾದನೆ ವೃದ್ಧಿ: ರಾಜ್ಯದಲ್ಲಿ ಒಟ್ಟು ಉತ್ಪಾದಿತ ಕಬ್ಬು/ಸಕ್ಕರೆಯಲ್ಲಿ ಶೇ. 30ರಷ್ಟು ಎಥೆನಾಲ್ ತಯಾರಾಗುತ್ತದೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಬೇಡಿಕೆ ಹೆಚ್ಚಿದೆ. ಸದ್ಯಕ್ಕೆ 80 ಸಕ್ಕರೆ ಕಾರ್ಖಾನೆಗಳಿವೆ.

ಹೊಸದಾಗಿ 15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೋರಿದ ಪ್ರಸ್ತಾವನೆಗಳು ಸರ್ಕಾರದ ಮುಂದಿವೆ. ಎಥೆನಾಲ್​ಗೆ ಕಬ್ಬಿನ ರಸ, ಮೊಲ್ಯಾಸಿಸ್ ಮಾತ್ರವಲ್ಲದೆ ಮೆಕ್ಕೆಜೋಳ, ಜೈವಿಕ ತ್ಯಾಜ್ಯದ ಜತೆಗೆ ಎಫ್​ಸಿಐ ಅಕ್ಕಿ ಪೂರೈಸುತ್ತಿದೆ.

ವರ್ಷಾಂತ್ಯದ ವೇಳೆಗೆ ಪೆಟ್ರೋಲ್​ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡುವುದು ಕೇಂದ್ರ ಸರ್ಕಾರದ ಗುರಿ. ದೇಶದಲ್ಲಿ ಎಥೆನಾಲ್ ತಯಾರಿಕೆಯು 1,685 ಕೋಟಿ ಲೀಟರ್​ಗೆ ತಲುಪಿದೆ. ಸಹ ವಿದ್ಯುತ್ ಜತೆಗೆ ಎಥೆನಾಲ್ ಉತ್ಪಾದನೆಯು ಸಕ್ಕರೆ ಕಾರ್ಖಾನೆಗಳಿಗೆ ವರದಾನವಾಗಿದ್ದರೆ, ಲಾಭಾಂಶವು ಲಭಿಸುತ್ತಿರುವ ಕಾರಣ ಕಬ್ಬು ಬೆಳೆದ ರೈತರಿಗೂ ಸಮಾಧಾನ ತಂದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ 2024-25ನೇ ಸಾಲಿಗೆ ರಿಕವರಿ ಪ್ರಮಾಣ ಆಧರಿಸಿ, ಪ್ರತಿ ಟನ್​ಗೆ 3,400 ರೂ. ನಿಗದಿಪಡಿಸಿದೆ. ಆದರೆ ಕೆಲವು ಸಕ್ಕರೆ ಕಾರ್ಖಾನೆಗಳು ಉತ್ಪಾದನೆ ವೆಚ್ಚ ತಗ್ಗಿದ್ದರಿಂದ ಎಫ್​ಆರ್​ಪಿಗೆ ಬದಲು ಹೆಚ್ಚಿನ ದರವನ್ನೇ ರೈತರಿಗೆ ನೀಡಿವೆ.

ಕರ್ನಾಟಕಕ್ಕೆ ಎರಡನೇ ಸ್ಥಾನ: ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣ ಅಭಿಯಾನದಲ್ಲಿ ಕೈಜೋಡಿಸಿರುವ 8 ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ದಕ್ಷಿಣ ಭಾರತದಲ್ಲಿ ಮಹಾರಾಷ್ಟ್ರ ನಂತರ ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.

ಆಂಧ್ರಪ್ರದೇಶದಲ್ಲಿ ಫಲವತ್ತತೆ, ಕಬ್ಬು ಇಳುವರಿ ಕುಸಿತ, ಕೀಟಬಾಧೆ, ರಿಕವರಿ ಪ್ರಮಾಣ ಇಳಿಕೆಯಿಂದ ರೈತರು ಕ್ರಮೇಣ ಕಬ್ಬು ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್ ಸೇರಿ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆ ಪ್ರಮಾಣ ಏರುಗತಿಯಲ್ಲಿದೆ.

ಕೃಷ್ಣಾ ನದಿ ನೀರು ಮತ್ತು ಕಪು್ಪ ಮಣ್ಣು ಅನುಕೂಲಕರವಾಗಿದೆ. ಎಕರೆಗೆ 40 ಟನ್ ಕಬ್ಬು ಇಳುವರಿ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಕೆಲವು ರೈತರು 80 ಟನ್​ವರೆಗೆ ಪಡೆದಿದ್ದಾರೆ.

ಕೆಲವು ಕಾರ್ಖಾನೆಗಳು ಪ್ಯಾಕೇಜ್ ರೂಪದಲ್ಲಿ ರೈತರಿಗೆ ನೆರವಾಗಿದ್ದರಿಂದ ಇದು ಸಾಧ್ಯವಾಗಿದೆ. ಸರ್ಕಾರಕ್ಕೂ ಪ್ರೇರಣೆ ನೀಡಿದೆ. ಉತ್ತರಪ್ರದೇಶದಲ್ಲಿ ರಿಕವರಿ ಪ್ರಮಾಣ ಸರಾಸರಿ 11ರಷ್ಟಿದ್ದು, ಅದೇ ರೀತಿ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಅವಕಾಶಗಳಿವೆ.

ಸಕಾಲಕ್ಕೆ ರೈತರಿಗೆ ಹಣ: ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆದ 15 ದಿನಗಳೊಳಗೆ ರೈತರಿಗೆ ಹಣ ಪಾವತಿ ಮಾಡಬೇಕೆಂದಿದೆ. ಕೆಲ ವರ್ಷಗಳ ಹಿಂದೆ ಕಬ್ಬು ಬೆಳೆಗಾರರ ಹಣ ಪಾವತಿಯೇ ದೊಡ್ಡ ಸಮಸ್ಯೆಯಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗಾರರಿಗೆ ಹಣ ಪಾವತಿ ಹೊಸ ಆಯಾಮ ನೀಡಿದೆ. ಹಿಂದಿನ ವರ್ಷ ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆಗಳು ಶೇ.100ರಷ್ಟು ಹಣ ಪಾವತಿಸಿವೆ. ಕಳೆದ ಆರ್ಥಿಕ ವರ್ಷ (2024-25)ದ ಮೊತ್ತದಲ್ಲಿ ಶೇ.90ರಷ್ಟು ಹಣ ಪಾವತಿಸಿದ್ದು, ಬಾಕಿಗಾಗಿ ರೈತರು ಬೀದಿಗೆ ಇಳಿಯುವ ಪರಿಸ್ಥಿತಿ ತಪ್ಪಿದೆ ಎನ್ನುತ್ತಾರೆ ಅಧಿಕಾರಿಗಳು.

ಅನ್ಯ ಉದ್ದೇಶಕ್ಕೆ ಬಳಕೆ

ರಾಜ್ಯದಲ್ಲಿ 41.88 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದೆ. ದೇಶೀಯ ಬಳಕೆಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿದೆ. ಇದರಲ್ಲಿ ಶೇ.10ರಷ್ಟು ಸಕ್ಕರೆಯನ್ನು ಅನ್ಯ ಉದ್ದೇಶಕ್ಕೆ ತಿರುಗಿಸಲಾಗಿದೆ. ಜತೆಗೆ ಕೇಂದ್ರ ಸರ್ಕಾರ ಸಕ್ಕರೆ ರಫ್ತು ಮೇಲೆ ವಿಧಿಸಿದ್ದ ನಿರ್ಬಂಧವನ್ನು ಆಂಶಿಕವಾಗಿ ತೆರವು ಮಾಡಿದ್ದರಿಂದ ಸಕ್ಕರೆ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು

79 ಸಕ್ಕರೆ ಕಾರ್ಖಾನೆಗಳು ಪ್ರತಿದಿನ ಕಬ್ಬು ಅರೆಯುವ ಸಾಮರ್ಥ್ಯ 5.60 ಲಕ್ಷ ಟನ್, 2024-25ನೇ ಸಾಲಿನಲ್ಲಿ ಅರೆದ ಕಬ್ಬು 5.22ಕೋಟಿ ಟನ್, ಉತ್ಪಾದನೆಯಾದ ಸಕ್ಕರೆ 41.88 ಲಕ್ಷ ಟನ್. ರಿಕವರಿ (ಸಕ್ಕರೆ ಅಂಶ) ಪ್ರಮಾಣ ಪ್ರತಿಶತ 8.2, ಎಫ್​ಆರ್​ಪಿ ಪ್ರಕಾರ ಪಾವತಿಸಬೇಕಾದ ಮೊತ್ತ 18,235.60 ಕೋಟಿ ರೂ.,  ಕಬ್ಬು ಬೆಳೆಗಾರರಿಗೆ ಪಾವತಿಯಾದ ಮೊತ್ತ 16,741.93 ಕೋಟಿ ರೂ. (ಶೇ. 90), ಪಾವತಿ ಬಾಕಿಯಿರುವ ಮೊತ್ತ 1832.09 ಕೋಟಿ ರೂ., ಕೆಲವು ಕಾರ್ಖಾನೆಗಳು ಕಬ್ಬಿನ ರಸ, ಬಿ-ಹೆವಿ ಮೊಲ್ಯಾಸಿಸ್​ನ್ನು ತಿರುಗಿಸಿರುವ ಕಾರಣ ಸಕ್ಕರೆ ರಿಕವರಿ ಪರಿಷ್ಕರಣೆ ಸಾಧ್ಯತೆ ಕೆ ಲವು ಕಾರ್ಖಾನೆಗಳು ಕೇಂದ್ರ ನಿಗದಿಪಡಿಸಿದ ಎಫ್​ಆರ್​ಪಿಗಿಂತಲೂ ಹೆಚ್ಚಿನ ದರ ಪಾವತಿಸಿರುವ ಕಾರಣ ಒಟ್ಟು ಪಾವತಿ, ಬಾಕಿ ಮೊತ್ತದಲ್ಲಿ ವ್ಯತ್ಯಾಸಗಳಿವೆ

ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆದ 15 ದಿನಗಳೊಳಗೆ ಹಣ ಪಾವತಿಸುತ್ತಿವೆ. ಕೆಲವು ಕಾರ್ಖಾನೆಗಳು ಎಫ್​ಆರ್​ಪಿಗಿಂತೆ ಹೆಚ್ಚಿನ ಬೆಲೆ ನೀಡಿವೆ. ಎಥೆನಾಲ್ ಲಾಭಾಂಶವು ರೈತರಿಗೆ ಲಭಿಸುತ್ತಿದ್ದು, ಕಬ್ಬು ಉತ್ಪಾದಕತೆ, ಸಕ್ಕರೆ ರಿಕವರಿ ವೃದ್ಧಿ, ಕಾರ್ಖಾನೆಗಳ ಉತ್ಪಾದನಾ ವೆಚ್ಚ ತಗ್ಗಿಸುವಂತಹ ಉಪಕ್ರಮಗಳ ಬಗ್ಗೆ ಆಲೋಚಿಸಲಾಗುತ್ತಿದೆ. | ಶಿವಾನಂದ ಪಾಟೀಲ ಸಕ್ಕರೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net