

ರೈತಾಪಿ ವರ್ಗ ಹವಾಮಾನ ವೈಪರೀತ್ಯದ ಸಮಸ್ಯೆಗಳೊಂದಿಗೆ ಹೋರಾಡುತ್ತಲೇ ಇರುತ್ತದೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಕರೊನಾ ಸೋಂಕಿನ ಹಾವಳಿ ಮತ್ತು ಅದನ್ನು ನಿಯಂತ್ರಿಸಲು ವಿಧಿಸಲಾಗಿರುವ ದಿಗ್ಬಂಧನದಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೃಷಿ ಉತ್ಪನ್ನಗಳ ಸಾಗಾಣಿಕೆ, ಮಾರಾಟಕ್ಕೆ ಅವಕಾಶ ನೀಡಿರುವುದು ಸ್ವಲ್ಪ ಮಟ್ಟಿಗೆ ಅನುಕೂಲ ಕಲ್ಪಿಸಿದೆಯಾದರೂ, ಸೂಕ್ತ ಮಾರುಕಟ್ಟೆ, ಗ್ರಾಹಕರು ಮತ್ತು ಬೆಲೆ ಸಿಗದೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.
ಅಲ್ಲದೆ, ಈ ಬಾರಿ ಮುಂಗಾರು ಸಾಮಾನ್ಯವಾಗಿ ಇರಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಮುಂಗಾರು ಕೃಷಿ ಚಟುವಟಿಕೆಗಳಿಗೆ ರೈತರು ತಯಾರಿ ಆರಂಭಿಸಿದ್ದಾರೆ. ಹಾಗಾಗಿ, ಸರ್ಕಾರ ಕೂಡ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಿದೆ. ಗುಣಮಟ್ಟದ ಬೀಜ, ರಸಗೊಬ್ಬರ ಸಕಾಲಕ್ಕೆ ಸಿಗುವಂತೆ ಮಾಡಿದರೆ ಬಿತ್ತನೆ ಕಾರ್ಯಗಳು ವಿಳಂಬವಿಲ್ಲದೆ ಪೂರ್ಣಗೊಳ್ಳಲು ಸಾಧ್ಯ. ಹಲವು ಸಮಸ್ಯೆಗಳ ನಡುವೆ ಕೃಷಿವಲಯ ನಿರ್ಲಕ್ಷ್ಯಕ್ಕೆ ಗುರಿಯಾಗಬಾರದು. ಅಲ್ಲದೆ, ತುಂಬ ಜನ ಕಾರ್ವಿುಕರು ಮಹಾನಗರಗಳಿಂದ ಗ್ರಾಮಗಳಿಗೆ ಮರಳಿರುವುದರಿಂದ ಕೃಷಿಚಟುವಟಿಕೆ ಅಥವಾ ಕೃಷಿಉದ್ದಿಮೆ ಆಧಾರಿತ ಉದ್ಯೋಗ ಸೃಷ್ಟಿಗೆ ಇದು ಸಕಾಲ. ಅಲ್ಲದೆ, ಸ್ಥಳೀಯ ಉತ್ಪನ್ನಗಳ ಮಾರು ಕಟ್ಟೆಗೂ ಪೂರಕ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿ, ಪೂರಕ ಕ್ರಮ ಕೈಗೊಳ್ಳಲಿ.
| ರವಿ ಮಂಗಳೂರು