

ಸ್ಥಳೀಯರು ಉಕ್ರೖೆನ್ ಎಂದು ಕರೆದುಕೊಳ್ಳುವ, ಇಂಗ್ಲಿಷ್ ಮಾತಾಡುವ ಹೊರಗಿನವರಿಗೆ ಯೂಕ್ರೇನ್ ಎಂದು ಪರಿಚಿತವಾಗಿರುವ, ಭೌಗೋಳಿಕವಾಗಿ ಯುರೋಪ್ನ ಎರಡನೆಯ ದೊಡ್ಡ ದೇಶದ ಮೂರೂ ಕಡೆ- ಉತ್ತರ, ಪೂರ್ವ, ದಕ್ಷಿಣ- ಯುರೋಪ್ನ ಹಾಗೂ ಜಗತ್ತಿನ ಅತಿದೊಡ್ಡ ಭೂವಿಸ್ತಾರದ ರಷ್ಯಾ ಅಗಾಧ ಪ್ರಮಾಣದಲ್ಲಿ ಸೇನೆ ಜಮಾಯಿಸಿದೆ. ಕಳೆದ ನವೆಂಬರ್ನಲ್ಲಿ ಆರಂಭವಾದ ಈ ಸೇನಾಜಮಾವಣೆಯಲ್ಲಿ ನಿಯೋಜಿತರಾಗಿರುವ ರಷ್ಯನ್ ಸೈನಿಕರ ನಿರ್ದಿಷ್ಟ ಸಂಖ್ಯೆ ಸ್ಪಷ್ಟವಾಗಿ ತಿಳಿಯಲಾಗದಿದ್ದರೂ ಅದು ಅರವತ್ತು ಬೆಟಾಲಿಯನ್ಗಳು ಅಂದರೆ ಒಂದು ಲಕ್ಷದ ಹನ್ನೆರಡು ಸಾವಿರದಿಂದ ಇಪ್ಪತ್ತು ಸಾವಿರದವರೆಗೆ ಎಂದು ಕೆಲವು ಅಂದಾಜುಗಳು ಹೇಳುತ್ತವೆ. ಜತೆಗೆ ಟ್ಯಾಂಕ್ಗಳು ಮತ್ತು ಯುದ್ಧವಿಮಾನಗಳೂ ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳನ್ನೂ ರಷ್ಯಾ ಗಡಿಪ್ರದೇಶಕ್ಕೆ ತಂದಿದೆಯೆಂಬ ಸುದ್ದಿ.ಗಡಿಯಲ್ಲಿ ರಕ್ತಪೂರೈಕೆ ವ್ಯವಸ್ಥೆಯನ್ನೂ ರಷ್ಯಾ ಮಾಡಿದೆಯಂತೆ. ಇದು ರಷ್ಯಾದ ಆಕ್ರಮಣದ ಬೆದರಿಕೆ ಹುಸಿಯಲ್ಲ ಎಂಬ ಸ್ಪಷ್ಟ ಸುಳಿವು ನೀಡಿದೆ ಎಂದು ಪಶ್ಚಿಮದ ನಾಯಕರು ಆಪಾದಿಸುತ್ತಿದ್ದಾರೆ. ಜತೆಗೆ ರಷ್ಯಾ ಪರವಾಗಿ ಹೋರಾಡಬಲ್ಲ, ಸೇನಾ ತರಬೇತಿ ಪಡೆದ ಹದಿನೈದು ಸಾವಿರ ಯೂಕ್ರೇನಿಗಳು ಪೂರ್ವ ಯೂಕ್ರೇನ್ನಲ್ಲಿದ್ದಾರಂತೆ! ಇದಕ್ಕೆ ಪ್ರತಿಯಾಗಿ ಯೂಕ್ರೇನ್ ಏನೇನು ತಯಾರಿ ಮಾಡಿಕೊಳ್ಳುತ್ತಿದೆ?
ಯೂಕ್ರೇನ್ ಸಹ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಸೈನಿಕರನ್ನು ಜಮಾಯಿಸಿದೆಯಂತೆ. ರಾಜಧಾನಿ ಕಿಯೆವ್ನಲ್ಲಿ ನಾಗರಿಕರು ಶಸ್ತ್ರಾಸ್ತ್ರ ಬಳಕೆಯ ಹಾಗೂ ಸ್ವರಕ್ಷಣೆಯ ತರಾತುರಿಯ ತರಬೇತಿ ಪಡೆಯುತ್ತಿದ್ದಾರೆ. ಆದರೆ ಪೂರ್ಣ ರಷ್ಯನ್ ಆಕ್ರಮಣ ತಡೆಯಲು ಅಗತ್ಯವಿರುವ ಶಸ್ತ್ರಾಸ್ತ್ರ ಭಂಡಾರ ಯೂಕ್ರೇನ್ನಲ್ಲಿಲ್ಲ ಮತ್ತು ರಷ್ಯನ್ ಸೇನೆಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಆ ದೇಶದ ರಕ್ಷಣಾಪಡೆಗಳಿಗಿಲ್ಲ ಎನ್ನುವುದು ಯೂಕ್ರೇನಿಗಳಿಗಿರಲಿ ಇಡೀ ಜಗತ್ತಿಗೇ ಸ್ಪಷ್ಟವಾಗಿಹೋಗಿದೆ. ರಷ್ಯಾ ಪರವಾಗಿ ಹೋರಾಡಲು ತಯಾರಿರುವ ಜನರಿರುವ ಪೂರ್ವ ಯೂಕ್ರೇನ್ನ ದೊನೆತ್ಜ್ ಪ್ರದೇಶದಿಂದ ಯೂಕ್ರೇನಿಗಳು ಓಡಿಹೋಗುತ್ತಿದ್ದಾರೆ, ಇಂತಹದೊಂದು ಸ್ಥಿತಿ ನಿರ್ವಣವಾದದ್ದು ಹೇಗೆ?
ವಸಾಹತುಶಾಹಿ ಫ್ರಾನ್ಸ್ ಮತ್ತು ವಿಸ್ತರಣಾವಾದಿ ಪ್ರಶಿಯಾ ಸೇನಾ ಸಾಮರ್ಥ್ಯವನ್ನು ಅಗಾಧ ಪ್ರಮಾಣದಲ್ಲಿ ವೃದ್ಧಿಸಿಕೊಂಡಂತೇ ಅದು ರಷ್ಯಾದ ಪೂರ್ವ ಗಡಿಗೆ ಅಪಾಯಕರವಾಗತೊಡಗಿದ್ದನ್ನು ಹದಿನೆಂಟನೇ ಮತ್ತು ಹತ್ತೊಂಬತ್ತನೇ ಶತಮಾನದ ಆದಿಭಾಗದ ಯುರೋಪಿಯನ್ ಇತಿಹಾಸ ವಿವರವಾಗಿ ಹೇಳುತ್ತದೆ. ಇದೇ ಅವಧಿಯಲ್ಲಿ ವಿಶಾಲ ಆಸ್ಟ್ರಿಯನ್ ಸಾಮ್ರಾಜ್ಯ ರಷ್ಯಾದೊಂದಿಗೆ ದೀರ್ಘ ಗಡಿ ಹೊಂದಿದ್ದರೂ ಮಾಸ್ಕೋಗೆ ಅಪಾಯವೊಡ್ಡುವ ಮಟ್ಟದ ಸೇನಾಶಕ್ತಿಯನ್ನು ವಿಯೆನ್ನಾ ಪ್ರದರ್ಶಿಸಿದ್ದು ಅಪರೂಪ. ಹೀಗಾಗಿ ಆ ದಿಕ್ಕಿನಲ್ಲಿ ರಷ್ಯಾ ತಲೆಕೆಡಿಸಿಕೊಂಡದ್ದಿಲ್ಲ. ಪ್ರಶಿಯಾ ಜತೆ ಹಲವಾರು ಜರ್ಮನ್ ರಾಜ್ಯಗಳು ಒಂದುಗೂಡಿ ವಿಶಾಲ ಹಾಗೂ ಬಲಾಢ್ಯ ಜರ್ಮನಿ ಉದಯವಾದದ್ದೇ ರಷ್ಯಾದ ತಲೆನೋವು ಇನ್ನಷ್ಟು ಹೆಚ್ಚತೊಡಗಿದ್ದನ್ನೂ 1870ರ ನಂತರದ ಇತಿಹಾಸ ದಾಖಲಿಸಿದೆ. ಅದರಲ್ಲೂ ಮೊದಲನೆಯ ಮಹಾಯುದ್ಧದ ನಂತರ ಆಸ್ಟ್ರೋ-ಹಂಗೇರಿಯನ್ ಮತ್ತು ಅಟೋಮಾನ್ ತುರ್ಕಿ ಸಾಮ್ರಾಜ್ಯಗಳು ಛಿದ್ರವಾಗಿ ರಷ್ಯಾದ ಪೂರ್ವ ಗಡಿಯಲ್ಲಿ ಹಲವಾರು ಸಣ್ಣ ಸ್ವತಂತ್ರ ದೇಶಗಳು ಉದಯವಾದದ್ದು ಹಾಗೂ ರಾಜಕೀಯ ಸ್ಥಿರತೆ ಸ್ಥಾಪಿಸಿಕೊಳ್ಳಲು ಹೆಣಗುತ್ತಿದ್ದ ಅವುಗಳ ವ್ಯವಹಾರದಲ್ಲಿ ಪಶ್ಚಿಮ ಯುರೋಪ್ನ ಪರಂಪರಾಗತ ರಷ್ಯನ್ವಿರೋಧಿ ದೇಶಗಳು ಕೈಯಾಡಿಸಿತೊಡಗಿದ್ದು ರಷ್ಯಾಗೆ ಇನ್ನಷ್ಟು ಆತಂಕವನ್ನುಂಟುಮಾಡಿತು. ಪರಿಣಾಮವಾಗಿ ಆ ಹೊಸ ದೇಶಗಳು ತನ್ನ ಪ್ರಭಾವವಲಯದೊಳಗಿರುವುದು ತನ್ನ ರಕ್ಷಣೆಗೆ ಅತ್ಯಗತ್ಯ ಎಂದೂ ಮಾಸ್ಕೋ ಭಾವಿಸಿತು. ಹೀಗಾಗಿ ಫ್ರಾನ್ಸ್, ಪ್ರಶಿಯಾ ಅಥವಾ ಅದರ ಮುಂದುವರಿದ ಹಾಗೂ ವಿಸ õತ ಅವತಾರ ಜರ್ಮನಿಗಳ ಗಡಿ ತನ್ನ ಪೂರ್ವ ಗಡಿಯನ್ನು ರ್ಸ³ಸಬಾರದೆಂದೂ, ತಾನು ಮತ್ತು ತನ್ನ ಆ ಪರಂಪರಾಗತ ಶತ್ರುಗಳ ನಡುವೆ ಉತ್ತರದ ಬಾಲ್ಟಿಕ್ ತೀರದಿಂದ ದಕ್ಷಿಣದ ಕಪು್ಪ ಸಮುದ್ರ ಮತ್ತು ಏಜಿಯನ್ ಸಮುದ್ರಗಳವರೆಗೆ ಹಲವು ‘ಮೆತ್ತೆ ರಾಷ್ಟ’ಗಳ (ಆfಛ್ಟಿ ಖಠಿಚಠಿಛಿ) ಸರಣಿ ಇರಬೇಕೆನ್ನುವುದು ಕಳೆದ ಸರಿಸುಮಾರು ಮೂರು ಶತಮಾನಗಳಿಂದಲೂ ರಷ್ಯಾದ ವಿದೇಶನೀತಿ ಹಾಗೂ ರಕ್ಷಣಾ ನೀತಿಗಳ ಅಡಿಪಾಯ. ಹೀಗೆ ಪಶ್ಚಿಮ ದಿಕ್ಕಿನಿಂದ ಬರುವ ಅಪಾಯಗಳನ್ನು ತಡೆಯಲು ರಷ್ಯಾ ನಡೆಸಿದ ಹೆಣಗಾಟದ ಇತಿಹಾಸ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಇತಿಹಾಸಕ್ಕಿಂತ ದೀರ್ಘವಾದುದು.
ಹಿಂದಿನ ಝಾರಿಸ್ಟ್ ರಷ್ಯಾದ ಐತಿಹಾಸಿಕ ರಕ್ಷಣಾ ನೀತಿಗಳಿಗನುಗುಣವಾಗಿಯೇ ಅದರ ಉತ್ತರಾಧಿಕಾರಿ ಕಮ್ಯೂನಿಸ್ಟ್ ಸೋವಿಯತ್ ಯೂನಿಯನ್ ದ್ವಿತೀಯ ಮಹಾಯುದ್ಧದ ತರುವಾಯ ಪೂರ್ವ ಯುರೋಪಿನ ಪೋಲೆಂಡ್, ಝೆಕೋಸ್ಲೊವೇಕಿಯಾ, ಹಂಗೆರಿ, ಬಲ್ಗೇರಿಯಾ ಮತ್ತು ರುಮೇನಿಯಾಗಳಲ್ಲಿ ತನ್ನ ಕೈಗೊಂಬೆ ಕಮ್ಯೂನಿಸ್ಟ್ ಸರ್ಕಾರಗಳನ್ನು ಸ್ಥಾಪಿಸಿ ಆ ದೇಶಗಳನ್ನು ತನ್ನ ಪ್ರಭಾವವಲಯದೊಳಗೆ ಇರಿಸಿಕೊಂಡಿತು. ಬಾಲ್ಟಿಕ್ ತೀರದ ಲಾತ್ವಿಯ, ಲಿಥುವಾನಿಯಾ ಮತ್ತು ಎಸ್ತೋನಿಯಾಗಳನ್ನು ಯುದ್ಧ ಆರಂಭವಾಗುತ್ತಿದ್ದಂತೇ ಸ್ಟಾಲಿನ್ ಆಕ್ರಮಿಸಿಕೊಂಡು ಸೋವಿಯತ್ ಯೂನಿಯನ್ಗೇ ಸೇರಿಸಿಕೊಂಡಾಗಿತ್ತು. ಅತಿ ಉತ್ತರದ ಪ್ರಜಾಪ್ರಭುತ್ವವಾದಿ ಫಿನ್ಲ್ಯಾಂಡ್ ಮತ್ತು ಅತಿ ದಕ್ಷಿಣದ ಕಮ್ಯೂನಿಸ್ಟ್ ಯುಗೋಸ್ಲಾವಿಯಾ ಸೋವಿಯತ್ ಹಿಡಿತದೊಳಗೆ ಸಿಲುಕದಿದ್ದರೂ ಅವುಗಳೆಂದೂ ಮಾಸ್ಕೋ ವಿರುದ್ಧವಾಗಿ ಇತರರ ಜತೆ ಸೇರಬಾರದೆಂಬ ವ್ಯವಸ್ಥೆಯೂ ಆಯಿತು. ಪುಟಾಣಿ ಅಲ್ಬಾನಿಯಾ ಕಮ್ಯೂನಿಸ್ಟ್ ಆದರೂ ಎಲ್ಲರಿಂದಲೂ ದೂರ ಸರಿದು ಸ್ವನಿರ್ವಿುತ ಚಿಪ್ಪಿನೊಳಗೆ ಅಡಗಿ ಕೂತಿತು. ಇಲ್ಲಿಗೆ ಶತಮಾನಗಳ ರಷ್ಯನ್ ಕನಸು ನಿಜವಾಗಿ ಪೂರ್ವ ಗಡಿ ಸುರಕ್ಷಿತವಾಯಿತೆಂದು ರಷ್ಯನ್ನರು ನೆಮ್ಮದಿಯ ಉಸಿರು ಹಾಕಿದರು. ಆದರೆ ಈ ನೆಮ್ಮದಿ ತಾತ್ಕಾಲಿಕವಾಗಿತ್ತು.
1949ರ ಏಪ್ರಿಲ್ನಲ್ಲಿ ಅಮೆರಿಕ ನ್ಯಾಟೋ ಸೇನಾಕೂಟವನ್ನು ಸ್ಥಾಪಿಸಿದಾಗ ಅದರ ಗಡಿ ತನ್ನ ಹಿಡಿತದಲ್ಲಿದ್ದ ಪೂರ್ವ ಯುರೋಪಿಯನ್ ದೇಶಗಳ ಗಡಿಯನ್ನು ರ್ಸ³ಸಬಾರದೆನ್ನುವುದು ಸೋವಿಯತ್ ನಿಲುವಾಯಿತು. ಎರಡು ದೇಶಗಳ ಅಥವಾ ಎರಡು ಸೇನಾಕೂಟಗಳ ಗಡಿಗಳು ಪರಸ್ಪರ ರ್ಸ³ಸಿದರೆ ಆಕಸ್ಮಿಕಗಳು ಘಟಿಸುವ, ಅವು ಪೂರ್ಣಪ್ರಮಾಣದ ಘರ್ಷಣೆಗೆ ನಾಂದಿಯಾಗುವ ಸಾಧ್ಯತೆ ಸಹಜ. ಈ ಹಿನ್ನೆಲೆಯಲ್ಲಿ ಸೋವಿಯತ್ ನಿಲುವು ಸರಿಯಾದುದೇ ಆಗಿತ್ತು. ತನ್ನ ಹಿಡಿತದಲ್ಲಿದ್ದ ಪೂರ್ವ ಯುರೋಪಿಯನ್ ದೇಶಗಳನ್ನು ಯಾವುದೇ ಸಮಯದಲ್ಲಿ ತನ್ನ ಪರವಾಗಿ ಯುದ್ಧಕ್ಕಿಳಿಯುವಂತೆ ಮಾಡುವುದಕ್ಕಾಗಿ ಮಾಸ್ಕೋಗೆ ಅವುಗಳೊಂದಿಗೆ ಅಧಿಕೃತ ಲಿಖಿತ ಒಪ್ಪಂದದ ಅಗತ್ಯವಿರಲಿಲ್ಲ ಎಂಬುದು ನಿಜವಾದರೂ ನ್ಯಾಟೋ ತನ್ನ ಹಾಗೂ ತನ್ನ ಸಹವರ್ತಿಗಳ ಗಡಿಯನ್ನು ರ್ಸ³ಸಬಾರದೆಂಬ ಸೋವಿಯತ್ ನೀತಿ ಒಂದು ಹಂತಕ್ಕೆ ಶಾಂತಿಗೆ ಪೂರಕವಾಗಿತ್ತು ಎನ್ನುವುದನ್ನು ಅಲ್ಲಗಳೆಯಲಾಗದು. ಆದರೆ 1955ರಲ್ಲಿ ಪಶ್ಚಿಮ ಜರ್ಮನಿಯನ್ನು ನ್ಯಾಟೋ ತನ್ನೊಳಗೆ ಸೇರಿಸಿಕೊಂಡಾಗ ಆ ಸೇನಾಕೂಟದ ಗಡಿ ಸೋವಿಯತ್ ವಲಯದ ಪೂರ್ವ ಜರ್ಮನಿ ಮತ್ತು ಝೆಕೊಸ್ಲೋವಾಕಿಯಾಗಳನ್ನು ರ್ಸ³ಸಿಬಿಟ್ಟಿತು. ಪ್ರತಿಕಾರ್ಯಾಚರಣೆಯಾಗಿ ಸೋವಿಯತ್ ಯೂನಿಯನ್ ತನ್ನ ಪೂರ್ವ ಯುರೋಪಿಯನ್ ಸಹವರ್ತಿಗಳನ್ನು ಸೇರಿಸಿ ‘ವಾರ್ಸಾ ಸೇನಾಕೂಟ’ ಕಟ್ಟಿತು. 1947-48ರಿಂದಲೂ ಹೊಗೆಯಾಡುತ್ತಿದ್ದ ಶೀತಲಸಮರ ಉಲ್ಬಣಗೊಳ್ಳತೊಡಗಿದ್ದು ಆಗ.
ನಾಲ್ಕೂವರೆ ದಶಕಗಳ ನಂತರ ಆರ್ಥಿಕ ದುರವಸ್ಥೆಯ ಪರಿಣಾಮವಾಗಿ ಕಮ್ಯೂನಿಸ್ಟ್ ವ್ಯವಸ್ಥೆ ಕುಸಿಯತೊಡಗಿದಾಗ, ಅರ್ಥವ್ಯವಸ್ಥೆ ಸುಧಾರಿಸಲು ಅಮೆರಿಕದ ನೆರವನ್ನೇ ಬಯಸುವಂಥ ದುಃಸ್ಥಿತಿಗೆ ಸೋವಿಯತ್ ಯೂನಿಯನ್ ಇಳಿದಾಗ ಯುರೋಪ್ನ ಶಕ್ತಿರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯವನ್ನು ಮಾಸ್ಕೋ ಕಳೆದುಕೊಂಡಿತು. ಅಷ್ಟಾಗಿಯೂ ಅದು ತನ್ನ ಹಿಡಿತದಲ್ಲಿದ್ದ ಪೂರ್ವ ಜರ್ಮನಿ ನ್ಯಾಟೋದ ಸದಸ್ಯನಾಗಿದ್ದ ಪಶ್ಚಿಮ ಜರ್ಮನಿಯೊಂದಿಗೆ ಐಕ್ಯಗೊಳ್ಳಲು ಅವಕಾಶ ಮಾಡಿಕೊಡುವಾಗ, ಪೂರ್ವ ಜರ್ಮನಿಯಿಂದಾಚೆಗೆ ನ್ಯಾಟೋ ವಿಸ್ತರಿಸಬಾರದು, ಅಂದರೆ ತನ್ನ ಗಡಿಗೆ ಇನ್ನಷ್ಟು ಹತ್ತಿರ ಬರಬಾರದು ಎಂಬ ಬೇಡಿಕೆಯನ್ನು ನಿಬಂಧನೆ ರೂಪದಲ್ಲಿ ಅಮೆರಿಕದ ಮುಂದಿಟ್ಟಿತು ಮತ್ತು ಅಮೆರಿಕ ಅದಕ್ಕೆ ಸಮ್ಮತಿಸಿತಾದರೂ, ಮುಂದೆ ಅದನ್ನು ಮರೆತುಬಿಟ್ಟಿತು. ಪೂರ್ವ ಯುರೋಪಿನ ದೇಶಗಳನ್ನು ಒಂದೊಂದಾಗಿ ನ್ಯಾಟೋಗೆ ಸೇರಿಸಿಕೊಳ್ಳತೊಡಗಿದರು. ಒಂದು ಕಾಲದಲ್ಲಿ ಮಾಸ್ಕೋದ ಪ್ರಭಾವವಲಯದೊಳಗಿದ್ದ ಪೋಲೆಂಡ್, ಝೆಕ್ ರಿಪಬ್ಲಿಕ್, ಸ್ಲೊವಾಕಿಯಾ, ಹಂಗೆರಿ, ಬಲ್ಗೇರಿಯಾ ಮತ್ತು ರುಮೇನಿಯಾಗಳಲ್ಲದೆ ಸೋವಿಯತ್ ಯೂನಿಯನ್ನದೇ ಭಾಗಗಳಾಗಿದ್ದ ಲಾತ್ವಿಯಾ, ಎಸ್ತೋನಿಯಾ ಮತ್ತು ಲಿಥುವೇನಿಯಾ ಇಂದು ನ್ಯಾಟೋದ ಸದಸ್ಯರಾಗಿವೆ! ಅಂದರೆ ನ್ಯಾಟೋ ರಷ್ಯಾದ ಗಡಿಗೇ ಬಂದು ನಿಂತಿದೆ! ಅಷ್ಟು ಸಾಲದೆಂಬಂತೆ ಮತ್ತೊಂದು ಮಾಜಿ ಸೋವಿಯತ್ ಗಣರಾಜ್ಯ ಯೂಕ್ರೇನ್ ಅನ್ನೂ ನುಂಗಲು ತುದಿಗಾಲಿನಲ್ಲಿ ನಿಂತಿದೆ! ಅಧ್ಯಕ್ಷ ಪೂತಿನ್ರನ್ನು ಕೆರಳಿಸಿರುವುದು ಇದು.
ಅಧ್ಯಕ್ಷ ಬರಾಕ್ ಒಬಾಮರ ನೀತಿಗಳಿಂದಾಗಿ ಯೂಕ್ರೇನ್ ಬಗ್ಗೆ 2014ರಲ್ಲೇ ಆತಂಕಗೊಂಡ ಪೂತಿನ್ ಆ ವರ್ಷವೇ ಯೂಕ್ರೇನ್ಗೆ ಸೇರಿದ, ರಷ್ಯನ್ನರೇ ಬಹುಸಂಖ್ಯಾತರಾಗಿದ್ದ ಕ್ರಿಮಿಯಾ ಪರ್ಯಾಯದ್ವೀಪವನ್ನು ಆಕ್ರಮಿಸಿ ರಷ್ಯಾಗೆ ಸೇರಿಸಿಕೊಂಡರು. ಹಾಗೆ ಮಾಡದಿದ್ದರೆ ನ್ಯಾಟೋ ಯುದ್ಧನೌಕೆಗಳು ಕಪ್ಪು ಸಮುದ್ರಕ್ಕೆ ಅಂದರೆ ರಷ್ಯಾದ ತೀರಕ್ಕೇ ಬಂದು ಲಂಗರು ಹಾಕುತ್ತಿದ್ದವು!
ನಂತರ ಡೊನಾಲ್ಡ್ ಟ್ರಂಪ್ ವಿವೇಕ ಪ್ರದರ್ಶಿಸಿದ್ದರಿಂದ ಪೂತಿನ್ರ ಆತಂಕ ಸಾಕಷ್ಟು ತಗ್ಗಿತ್ತು. ಆದರೆ ಅಮೆರಿಕದ ನೀತಿ ಮತ್ತೆ ಒಬಾಮ ಕಾಲಕ್ಕೇ ಹಿಂತಿರುಗುವ ಸೂಚನೆ ಸಿಕ್ಕಿದ್ದು ಅಂದು ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ಇಂದು ಅಧ್ಯಕ್ಷರಾಗಿ ಬಂದು ಕೂತಾಗ. ಯೂಕ್ರೇನ್ ನ್ಯಾಟೋಗೆ ಸೇರುವ ಮಾತುಗಳು ಮತ್ತೊಮ್ಮೆ ಕಿಯೆವ್, ಬ್ರುಸೆಲ್ಸ್ ಮತ್ತು ವಾಷಿಂಗ್ಟನ್ಗಳಿಂದ ಕೇಳಿಬರತೊಡಗಿದ್ದೇ ಕಳೆದ ಏಪ್ರಿಲ್ನಲ್ಲೇ ಯೂಕ್ರೇನ್ ಮೇಲೆ ಸೇನಾ ಒತ್ತಡ ಹೇರುವ ಪ್ರಯತ್ನವನ್ನು ಪೂತಿನ್ ಆರಂಭಿಸಿದರು. ಅವರ ಬೇಡಿಕೆ ಇಷ್ಟೇ- ‘ಯೂಕ್ರೇನ್ ಅನ್ನು ನ್ಯಾಟೋಗೆ ಸೇರಿಸಿಕೊಳ್ಳಬೇಡಿ, ರಷ್ಯಾದ ಸುರಕ್ಷೆಗೆ ಅಪಾಯವೊಡ್ಡುವ ಕ್ರಮಗಳಿಗೆ ಮುಂದಾಗ ಬೇಡಿ.’ ಅಧ್ಯಕ್ಷ ವ್ಲಾದಿಮಿರ್ ಪೂತಿನ್ ಮತ್ತು ವಿದೇಶ ಮಂತ್ರಿ ಸೆರ್ಗೆಯಿ ಲ್ಯಾವ್ರೋವ್ ಮುಂದಿಟ್ಟ ಈ ಸಹಜ ಬೇಡಿಕೆಗೆ ಅಧ್ಯಕ್ಷ ಜೋ ಬೈಡೆನ್, ವಿದೇಶಾಂಗ ಕಾರ್ಯ ದರ್ಶಿ ಆಂಟನಿ ಬ್ಲಿಂಕನ್ರಂತಹ ‘ದೊಡ್ಡವರಿಂದ’ ಹಿಡಿದು, ಪುಟಗೋಸಿ ಉಪ ಕಾರ್ಯದರ್ಶಿ ವೆಂಡಿ ಶೆರ್ವನ್ರವರೆಗೆ ಅಮೆರಿಕನ್ನರು ಕೊಡುತ್ತಿರುವ ಉತ್ತರ ‘ಇಲ್ಲ’ ಎಂದು! ಯೂಕ್ರೇನ್ ಸ್ವತಂತ್ರ ದೇಶ, ತಾನಾಗಿ ಬಯಸಿದರೆ ನ್ಯಾಟೋಗೆ ಸೇರುವ ಹಕ್ಕು ಅದಕ್ಕಿದೆ ಎಂದು ತಿಪ್ಪೆ ಸಾರಿಸುವಿಕೆ ಬೇರೆ! ಇತಿಹಾಸದ ಅರಿವಿಲ್ಲದ, ವರ್ತಮಾನವನ್ನು ಅರಿಯಲೊಲ್ಲದ, ಮಹತ್ವದ ದೇಶವೊಂದರ ಸ್ವರಕ್ಷಣಾ ಆತಂಕಗಳ ಬಗ್ಗೆ ಸ್ಪಂದಿಸುವುದನ್ನು ಕಲಿಯದ ಇಂಥವರೂ ಅಮೆರಿಕದ ನಾಯಕ ರಾಗುತ್ತಾರೆ, ಜಾಗತಿಕ ರಾಜಕಾರಣವನ್ನು ನಿರ್ದೇಶಿಸುತ್ತಾರೆ ಎನ್ನುವುದೇ ದುರಂತ.
ಇಂತಹ ಸನ್ನಿವೇಶದಲ್ಲಿ ನಿಜವಾದ ಕಾರಣಕ್ಕೇ ಇರಲಿ, ಕಝಾಖ್ಸ್ತಾನ್ನಲ್ಲಿ ಅಶಾಂತಿ ಭುಗಿಲೆದ್ದಾಗ, ಅಲ್ಲಿಯೂ ಅಮೆರಿಕ ಮತ್ತು ಪಶ್ಚಿಮ ಯುರೋಪ್ ಕೈಯಾಡಿಸುವ ಸೂಚನೆ ಸಿಕ್ಕಿದಾಗ ಅದು ಪೂತಿನ್ರಿಗೆ ಅನಗತ್ಯ ಕಿರಿಕಿರಿಯೇ ಸರಿ. ಹೀಗಾಗಿಯೇ ಅವರು ಕಝಾಖ್ ಅಧ್ಯಕ್ಷ ಕಾಸಿಂ ಜೊಮಾರ್ತ್ ತೊಕಾಯೇವ್ ಬೇಡಿಕೆ ಸಲ್ಲಿಸಿದ ಇಪ್ಪತ್ತನಾಲ್ಕು ಗಂಟೆಗಳೊಳಗೆ ಸೇನೆ ಕಳುಹಿಸಿ ದಂಗೆಯನ್ನು ಅಡಗಿಸಿದರು. ರಷ್ಯಾದ ಮತ್ತೊಂದು ಗಡಿಯಲ್ಲಿ ಅಶಾಂತಿಯ ವ್ರಣವೊಂದು ಕೀವುಗಟ್ಟುವುದು ಅವರಿಗೆ ಬೇಕಾಗಿರಲಿಲ್ಲ. ಪೂತಿನ್ರ ಈ ಕ್ರಮವನ್ನು ಖಂಡಿಸುತ್ತ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ‘ನೆರೆಯ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ರಷ್ಯಾ ಕೈಹಾಕುವುದನ್ನು ನಾವು ಸಹಿಸುವುದಿಲ್ಲ’ ಎಂದು ಗುಡುಗಿದರು. ಕೆರಿಬಿಯನ್ ಸಮುದ್ರ, ಮಧ್ಯ ಮತ್ತು ದಕ್ಷಿಣ ಅಮೆರಿಕಗಳಲ್ಲಿ ತನ್ನ ದೇಶ ಎರಡು ಶತಮಾನಗಳಿಂದಲೂ ನಿರಂತರವಾಗಿ ಮಾಡುತ್ತ ಬಂದಿರುವುದನ್ನು ಬ್ಲಿಂಕನ್ ಅದೆಷ್ಟು ತಣ್ಣಗೆ ಮರೆತುಬಿಟ್ಟಿದ್ದಾರೆ! ಮೆಕ್ಸಿಕೋದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಹಸ್ತಕ್ಷೇಪಗಳಿಂದ ಬೇಸತ್ತುಹೋದ ಆ ದೇಶದ ಅಧ್ಯಕ್ಷ ಪೋರ್ಫೀರಿಯೋ ಡಯಾಸ್, ‘ಬಡಪಾಯಿ ಮೆಕ್ಸಿಕೋ! ಅಮೆರಿಕಕ್ಕೆ ಬಲುಹತ್ತಿರ, ದೇವರಿಂದ ಬಲುದೂರ!’ ಎಂದು ಒಂದೂವರೆ ಶತಮಾನದ ಹಿಂದೆಯೇ ಅತ್ತದ್ದು ಇತಿಹಾಸದಲ್ಲಿ ದಾಖಲಾಗಿದೆ. ಇಂಥ ಹೊತ್ತಲ್ಲಿ ಸ್ವಾಭಿಮಾನಿ ಪೂತಿನ್ ಕಠಿಣ ಕ್ರಮಕ್ಕೆ ಮುಂದಾಗದೇ ಬೇರೆ ದಾರಿಯಿಲ್ಲ. ಯೂಕ್ರೇನ್ ವಿಷಯದಲ್ಲಿ ಅವರೀಗ ಮಾಡುತ್ತಿರುವುದು ಅದೇ. ಅವರ ಸೇನಾಬೆದರಿಕೆಯನ್ನು ಅರ್ಥಮಾಡಿಕೊಳ್ಳುವ, ರಷ್ಯಾದ ಹಿತಾಸಕ್ತಿಗಳಿಗೆ ಹಾನಿಯಾಗದಂತೆ ನೀತಿಗಳನ್ನು ರೂಪಿಸಿಕೊಳ್ಳುವ ವಿವೇಕವನ್ನು ಯೂಕ್ರೇನಿಯನ್ನರು ಬೆಳೆಸಿಕೊಳ್ಳುವುದೇ ಸಮಸ್ಯೆಗೆ ಸರಿಯಾದ ಪರಿಹಾರ. ದೂರದ ಅಮೆರಿಕ ತಮ್ಮ ಕಡೆಗಿದೆ ಎಂದು ನಂಬಿ ಹತ್ತಿರದ ರಷ್ಯಾದ ವಿರುದ್ಧ ನಡೆದರೆ ಹಾನಿಯಾಗುವುದು ಅವರಿಗೇ. ‘ಅಪರಿಚಿತ ದೇವದೂತನಿಗಿಂತಲೂ ಪರಿಚಿತ ದೆವ್ವವೇ ಉತ್ತಮ’ ಎಂಬ ಮಾತು ಅವರಿಗೆ ಈಗಲಾದರೂ ನೆನಪಾದರೆ ಸರಿ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)