ಅರಬ್ ವಸಂತದಿಂದ ಅರಬ್ ಚಳಿಗಾಲಕ್ಕೆ...

Column F 1
Published on
ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರದಿಂದ ಪೂರ್ವದಲ್ಲಿ ಪರ್ಷಿಯನ್ ಖಾರಿಯವರೆಗೆ ಕರ್ಕಾಟಕ ಸಂಕ್ರಾಂತಿ ವೃತ್ತದ ಇಕ್ಕೆಲಗಳಲ್ಲಿ ಹರಡಿರುವ ವಿಶಾಲ ಅರಬ್ ಜಗತ್ತಿನ ಸಮಕಾಲೀನ ಇತಿಹಾಸದಲ್ಲಿ 2011ನೇ ಇಸವಿ ಮುಖ್ಯವಾದುದು. ಅರಸುಮನೆತನಗಳ, ಸೇನೆಯ, ಸರ್ವಾಧಿಕಾರಿಗಳ ದಬ್ಬಾಳಿಕೆಯಲ್ಲಿ, ನಕಲಿ ಪ್ರಜಾಪ್ರಭುತ್ವವಾದಿಗಳ ಆಟಾಟೋಪದಲ್ಲಿ ನಲುಗುತ್ತಿರುವ ಇಡೀ ಅರಬ್ ಜಗತ್ತು ವ್ಯಾಪಕ ರಾಜಕೀಯ ಪ್ರತಿಭಟನೆ, ಚಳವಳಿ, ದೊಂಬಿ, ದಂಗೆ, ರಕ್ತಪಾತಗಳನ್ನು ಕಂಡ ವರ್ಷ ಅದು. ಟ್ಯುನೇಶಿಯಾ, ಈಜಿಪ್ಟ್, ಲಿಬಿಯಾ, ಮಾರಿಟಾನಿಯಾ, ಸುಡಾನ್, ಲೆಬನಾನ್, ಜೋರ್ಡಾನ್, ಸಿರಿಯಾ, ಸೌದಿ ಅರೇಬಿಯಾ, ಬಹ್ರೇನ್, ಯೆಮೆನ್, ಒಮಾನ್​ಗಳ ಜನತೆ ಹೆಚ್ಚಿನ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ, ಆಡಳಿತದಲ್ಲಿ ತಮ್ಮ ಪಾತ್ರಕ್ಕಾಗಿ ಬೇಡಿಕೆಯಿತ್ತು ನಡೆಸಿದ ಆ ಆಂದೋಲನಗಳನ್ನು ಜಗತ್ತು ‘ಅರಬ್ ವಸಂತ’ವೆಂದು ಕೊಂಡಾಡಿ ಅಲ್ಲೆಲ್ಲ ಪ್ರಜಾಪ್ರಭುತ್ವ, ಅದೂ ನಿಜವಾದದ್ದು, ನೆಲೆಗೊಳ್ಳುತ್ತದೆಂದು ಆಶಿಸಿತ್ತು. ಒಂದು ಅಂದಾಜಿನ ಪ್ರಕಾರ ಸುಮಾರು 60,000ಕ್ಕೂ ಹೆಚ್ಚಿನ ಜೀವಗಳನ್ನು ಬಲಿತೆಗೆದುಕೊಂಡ ಆ ವರ್ಷ ಇಂದು ನಮಗೆ ಹೇಗೆ ಕಾಣುತ್ತದೆ? ಅಲ್ಲಿಂದೀಚಿಗಿನ ಒಂದು ದಶಕದಲ್ಲಿ ಅರಬ್ಬರು ಪಡೆದುಕೊಂಡದ್ದೇನು, ಕಳೆದುಕೊಂಡದ್ದೇನು ಎಂದು ಲೆಕ್ಕ ಹಾಕಿದರೆ ತಕ್ಕಡಿಯಲ್ಲಿ ಪಡೆದುಕೊಂಡಿರುವ ತಟ್ಟೆ ಎವರೆಸ್ಟ್​ಗೇರಿದರೆ ಕಳೆದುಕೊಂಡ ತಟ್ಟೆ ಮಾರಿಯಾನಾ ಟ್ರೆಂಚ್​ಗಿಳಿಯುತ್ತದೆ. ಬನ್ನಿ, ಈ ಎತ್ತರ, ಆ ಆಳದ ನಡುವೆ ಒಂದಿಷ್ಟು ಕಾಲಾಡಿಸಿಕೊಂಡು ಬರೋಣ.

ಪುರಾತನ ಕಾರ್ಥೇಜ್ ಸಾಮ್ರಾಜ್ಯದ ಆಧುನಿಕ ಉತ್ತರಾಧಿಕಾರಿಯಾದ ಟ್ಯುನೇಶಿಯಾದಲ್ಲಿ 2010ರ ಅಂತ್ಯದಲ್ಲಿ ಆರಂಭವಾದ ಸರ್ಕಾರ-ವಿರೋಧಿ ಜನಾಂದೋಲನ ಒಂದು ತಿಂಗಳಲ್ಲಿ ಪೂರ್ವದ ಈಜಿಪ್ಟ್​ಗೆ ಹಬ್ಬಿದಾಗಲೇ ಜಗತ್ತು ದಿಗ್ಗನೆದ್ದು ಅದನ್ನು ನೋಡತೊಡಗಿದ್ದು. 2011 ಜನವರಿ 25ರಂದು ಕೈರೋ ನಗರದ ‘ತೆಹ್ರೀರ್ ಚೌಕ’ದಲ್ಲಿ ಜನಾಂದೋಲನ ಆರಂಭವಾದ ಹದಿನೆಂಟು ದಿನಗಳಲ್ಲಿ ಈಜಿಪ್ಟ್​ನಲ್ಲಿ ಅಧಿಕಾರ ಬದಲಾಯಿತು. ಮೂರು ದಶಕಗಳ ಆಳ್ವಿಕೆಗೆ ಅಂತ್ಯ ಹಾಡಿ ಅಧ್ಯಕ್ಷ ಹೋಸ್ನಿ ಮುಬಾರಕ್ ಫೆಬ್ರವರಿ 11ರಂದು ರಾಜೀನಾಮೆ ನೀಡಿ ಕೈರೋದಿಂದ ಜಾಗ ಖಾಲಿ ಮಾಡುತ್ತಿದ್ದಂತೇ ತೆಹ್ರೀರ್ ಚೌಕದಲ್ಲಿ ಸೇರಿದ್ದ ಜನ ತಾವು ಸಾಧಿಸಿದ ‘ಪ್ರಜಾಪ್ರಭುತ್ವ ವಿಜಯ’ವನ್ನು ಉತ್ಸಾಹದಿಂದ ಆಚರಿಸಿಕೊಂಡರು. ಜಗತ್ತೂ ಸಂಭ್ರಮಿಸಿತು. ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧ ಮುಕ್ತಾಯವಾದಾಗ ಕುರು ರಾಜಕೀಯ ಸಂಪೂರ್ಣವಾಗಿ ಬದಲಾಗಿಹೋಗಿತ್ತು, ಒಂದು ಪಕ್ಷ ನಿರ್ನಾಮವಾಗಿ ಅದರ ಕೈಯಲ್ಲಿದ್ದ ಅಧಿಕಾರದ ಎಲ್ಲ ಸೂತ್ರಗಳು ಮತ್ತೊಂದು ಪಕ್ಷದ ಕೈವಶವಾದವು ಎಂದು ಮಹಾಭಾರತ ಹೇಳುತ್ತದೆ. ಈಜಿಪ್ಟ್​ನ ಈ ಹದಿನೆಂಟು ದಿನಗಳ ಜನಾಂದೋಲನದ ಬಗ್ಗೆ ಹೀಗೆ ನಿಖರವಾಗಿ ಹೇಳಲಾಗುವುದಿಲ್ಲ. ತೆಹ್ರೀರ್ (ವಿಮೋಚನೆ) ಚೌಕದಲ್ಲಿ ಸೇರಿದ್ದ ಸುಮಾರು ಮೂರು ಲಕ್ಷ ಜನರು ತಮ್ಮನ್ನು ಯಾರಿಂದ ವಿಮೋಚನೆಗೊಳಿಸಿಕೊಂಡಿದ್ದಾರೆಂದು ಇಂದಿಗೂ ಸ್ಪಷ್ಟವಾಗಿಲ್ಲ. ತಮಗರಿವಿಲ್ಲದಂತೇ ಅವರು ತಮ್ಮ ಆಶಯಗಳಿಗೆ ವಿರುದ್ಧವಾದ ಫಲಿತಾಂಶವನ್ನು ‘ಸೃಷ್ಟಿ’ಸಿಕೊಂಡರು ಎಂಬುದು ಕೆಲವೇ ದಿನಗಳಲ್ಲಿ ಎಲ್ಲರ ಮುಂದೆ ಅನಾವರಣಗೊಂಡ ಕಹಿಸತ್ಯ.

ಫೆಬ್ರವರಿ 11ರಂದು ಮುಬಾರಕ್ ರಾಜೀನಾಮೆ ನೀಡಿ ದೇಶವನ್ನಾಳಲು ಸೇನಾಸಮಿತಿ ಅಸ್ತಿತ್ವಕ್ಕೆ ಬಂದು ಆ ಸಮಿತಿ ಎರಡು ದಿನಗಳ ನಂತರ ಸಂವಿಧಾನವನ್ನು ರದ್ದುಪಡಿಸಿ, ಸಂಸತ್ತನ್ನು ವಿಸರ್ಜಿಸಿ ಆರು ತಿಂಗಳಲ್ಲಿ ಚುನಾವಣೆ ನಡೆಸುವ ಹೇಳಿಕೆ ನೀಡಿತಷ್ಟೆ. ಇದರ ಅರ್ಥ- ಮುಬಾರಕ್ ಹೋದ, ಸೇನೆ ಬಂತು ಡುಂ ಡುಂ ಡುಂ!

ಮುಬಾರಕ್ ಆಳ್ವಿಕೆ ಅಂತ್ಯದ ಹಿಂದಿದ್ದದ್ದು ಈಜಿಪ್ಟಿನ ಸೇನೆ. ತೆಹ್ರೀರ್ ಚೌಕದಲ್ಲಿ ಸೇರಿದ್ದ ಮೂರು ಲಕ್ಷ ಜನರಲ್ಲ. ರಾಷ್ಟ್ರೀಯ ಪೊಲೀಸ್ ದಿನವಾದ ಜನವರಿ 25ರಂದು ಪೊಲೀಸ್ ದೌರ್ಜನ್ಯ-ವಿರೋಧಿ ದಿನವಾಗಿ ಆಚರಿಸಲು ತೆಹ್ರೀರ್ ಚೌಕದಲ್ಲಿ ಸೇರಿದ ಜನರನ್ನು ಮುಬಾರಕ್-ವಿರೋಧಿಯಾಗಿ ಬದಲಾಯಿಸಿದ್ದು ಸೇನೆ. ತಮಗರಿವಿಲ್ಲದಂತೇ ಸೇನೆಯ ಹುನ್ನಾರಕ್ಕೆ ಸಹಕರಿಸುತ್ತಿದ್ದೇವೆಂದು ಜನರಿಗೆ ತಿಳಿಯಲೇ ಇಲ್ಲ! ತಿಳಿಯುವ ಹೊತ್ತಿಗೆ ಕೈಮೀರಿಹೋಗಿತ್ತು. ಮುಬಾರಕ್ ರಾಜೀನಾಮೆ ನೀಡಿ ಹೊರನಡೆಯುತ್ತಿದ್ದಂತೇ ಸೇನೆ ತೆಹ್ರೀರ್ ಚೌಕದಿಂದ ಜನರನ್ನು ಹೊರಗಟ್ಟಿತು. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ?

ಮುಬಾರಕ್ ಕಾಲದಲ್ಲಿ ಜನರಿಗೆ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವಾದರೂ ಇತ್ತು. ಸೇನೆ ಬಂದಮೇಲೆ ಅದೂ ಹೋಯಿತು. ಹೋಗಲಿ, ನಂತರವಾದರೂ ಈಜಿಪ್ಟಿಯನ್ನರಿಗೆ ಅವರು ಬಯಸಿದ್ದ ಪ್ರಜಾಪ್ರಭುತ್ವ ಸಿಕ್ಕಿತೇ? ಆರು ತಿಂಗಳಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದ ಸೇನೆ ತನ್ನ ಮಾತು ಉಳಿಸಿಕೊಂಡದ್ದು ಹದಿನೈದು ತಿಂಗಳುಗಳ ನಂತರ. ‘ನೈಲ್ ನದಿಯ ವರಪ್ರಸಾದ’ ಪುರಾತನ ಈಜಿಪ್ಟ್ ನಾಗರಿಕತೆಯ ಇಂದಿನ ಉತ್ತರಾಧಿಕಾರಿಗಳು ತಾವು ತಮ್ಮ ತಲೆಯ ಮೇಲೆ ಮಣ್ಣು ಎರಚಿಕೊಳ್ಳುವುದರಲ್ಲಿ ನಿಸ್ಸೀಮರು ಎನ್ನುವುದನ್ನು ಆ ಚುನಾವಣೆಗಳಲ್ಲಿ ಮತ್ತೊಮ್ಮೆ ತೋರಿಸಿದರು. ಅದರಲ್ಲಿ ಅವರು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ ‘ಇಸ್ಲಾಮಿಕ್ ಬ್ರದರ್​ಹುಡ್’ನ ನೇತಾರ ಮಹಮದ್ ಮೋರ್ಸಿಯನ್ನು. ಈ ಮೋರ್ಸಿ ಮಹಾಶಯ ಮುಂದಿನ ನಾಲ್ಕು ತಿಂಗಳಲ್ಲಿ ಶರಿಯಾ ಜಾರಿಗೆ ಬರುತ್ತದೆ ಅಂತೆಲ್ಲ ಕಥೆ ಶುರುಹಚ್ಚಿಕೊಂಡಾಗ ಮತ್ತೊಮ್ಮೆ ಎಚ್ಚೆತ್ತ ಈಜಿಪ್ಟಿಯನ್ನರು ಅವನ ವಿರುದ್ಧ ಆಂದೋಲನ ಆರಂಭಿಸಿದರು. ಈ ಆಂದೋಲನವನ್ನು ಬೆಳೆಯಲು ಬಿಟ್ಟ ಸೇನೆ, 2013ರ ಜುಲೈನಲ್ಲಿ ಕಬ್ಬಿಣ ಸರಿಯಾಗಿ ಕಾದಿದೆ ಎನಿಸಿದಾಗ ಮೋರ್ಸಿ ಮೇಲೆ ಎರಗಿ ಅಧಿಕಾರವನ್ನು ಕೈಗೆ ತೆಗೆದುಕೊಂಡಿತು. ಮೊದಲಿಗೆ ಪ್ರಧಾನಮಂತ್ರಿಯ ಸ್ಥಾನ ಹಿಡಿದ ಜನರಲ್ ಅಬ್ದೆಲ್ ಫತಾ ಸಯೀದ್ ಹುಸೇನ್ ಖಲೀಲ್ ಎಲ್-ಸೀಸಿ ನಂತರ ಯೂನಿಫಾಮ್ರ್ ತೊರೆದು ಅಧ್ಯಕ್ಷರಾದರು, ಇನ್ನೂ ಆಗಿಯೇ ಇದ್ದಾರೆ. ಇದು ಈಜಿಪ್ಟ್​ನಲ್ಲಿ ಅರಬ್ ವಸಂತ ಅರಬ್ ಚಳಿಗಾಲವಾದ ದುರಂತ ಕಥೆ.

ಈಜಿಪ್ಟ್​ನಲ್ಲಿ ಹೀಗಾದರೆ ಇನ್ನುಳಿದ ಹಲವೆಡೆ ಅದು ಹಳವಂಡವೇ ಆಗಿಹೋಗಿದೆ. 2011ರ ಫೆಬ್ರವರಿಯಲ್ಲಿ ಈಜಿಪ್ಟ್​ನಲ್ಲಿ ಹೋಸ್ನಿ ಮುಬಾರಕ್​ರನ್ನು ಇಳಿಸಿದ ಜನಾಂದೋಲನ ಅಲ್ಲಿಂದಾಚೆಗೆ ಕೆಂಪುಸಮುದ್ರವನ್ನು ದಾಟಿ ಯೆಮೆನ್, ಒಮಾನ್, ಬಹ್ರೇನ್​ಗಳಲ್ಲಿ ಬುಸುಗುಟ್ಟಿ ಮತ್ತೆ ಪಶ್ಚಿಮಕ್ಕೆ ಹಿಂದಿರುಗಿ ಲಿಬಿಯಾಗೆ ಬಂದು ನಲವತ್ತೆರಡು ವರ್ಷಗಳಿಂದ ಜಪ್ಪಯ್ಯ ಅನ್ನದೇ ಕುಳಿತಿದ್ದ ಕ್ರೂರ ಸರ್ವಾಧಿಕಾರಿ ಗಢಾಪಿಯ ಎದೆಗೆ ಗಢಾರಿಯಂತೆ ಎರಗಿ ಅವನ ಬಲಿ ತೆಗೆದುಕೊಂಡು ಮತ್ತೆ ಪೂರ್ವಕ್ಕೆ ಹಾರಿ ಸಿರಿಯಾವನ್ನು ಸಾಸಿವೆಯಾಗಿಸಿ ಮೂಲಭೂತವಾದಿ ಬಾಣಲೆಯಲ್ಲಿ ಸಿಡಿಯಲು ಬಿಟ್ಟು ದಕ್ಷಿಣಕ್ಕೆ ತಿರುಗಿ ಯೆಮೆನ್​ಗೆ ಕಂಟಕವಾಗಿ ಅಮರಿಕೊಂಡಿತು. ಸಿರಿಯಾ ಅಂದಿನಿಂದಲೂ ಸಿಡಿಯುತ್ತಲೇ ಇದೆ, ಯೆಮೆನ್ ಏಮಾರಿಹೋಗಿರುವುದನ್ನು ಜಗತ್ತೇ ನೋಡುತ್ತಿದೆ.

ಈಗ ಈ ಮೂರೂ ದೇಶಗಳ ದುರ್ಗತಿಗಳ ಸಂಕ್ಷಿಪ್ತ ವಿವರಗಳನ್ನು ನಿಮಗೆ ನೀಡುತ್ತೇನೆ. ಲಿಬಿಯಾದಲ್ಲಿನ ಆಂದೋಲನ ಯಶಸ್ವಿಯಾದರೂ, ಸರ್ವಾಧಿಕಾರಿ ಗಢಾಫಿಯ ಅಂತ್ಯವಾಗಿ ದಶಕ ಗತಿಸಿದರೂ ಆ ದೇಶದಲ್ಲಿ ಪ್ರಜಾಪ್ರಭುತ್ವವಿರಲಿ, ಇನಿತು ಶಾಂತಿಯೂ ಇಲ್ಲ. ಬದಲಾಗಿ ಆ ದೇಶ ಬುಡಕಟ್ಟುಗಳ ನಡುವಿನ ಅಂತರ್ಯುದ್ಧದಲ್ಲಿ ಛಿದ್ರಗೊಂಡು ನರಳುತ್ತಿದೆ. ಇನ್ನು ಸಿರಿಯಾದ ಬಗ್ಗೆ ಹೇಳುವುದೇ ಬೇಡ. ಅನತಿಕಾಲದಲ್ಲೇ ಇಸ್ಲಾಮಿಕ್ ಮೂಲಭೂತವಾದದ ಕಪಿಮುಷ್ಟಿಗೆ ಸಿಲುಕಿಹೋದ ಅಲ್ಲಿನ ಜನಾಂದೋಲನ ಅಧ್ಯಕ್ಷ ಅಸದ್​ರನ್ನು ಕಿತ್ತೊಗೆಯುವುದರಲ್ಲಿ ಸಹಜವಾಗಿಯೇ ವಿಫಲವಾಯಿತು. ನಿಜ ಹೇಳಬೇಕೆಂದರೆ ಹೊಸ ಬೆಳವಣಿಗೆಗಳು ಅಧ್ಯಕ್ಷ ಅಸದ್​ಗೆ ವರವೇ ಆದವು. ಮೊದಲಿಗೆ ಸ್ಥಳೀಯ ಮೂಲಭೂತವಾದಿಗಳ ನಂತರ ಕ್ರೂರ ಐಸಿಸ್​ನ ಹಾವಳಿ ಶುರುವಾದಂತೆ ರಷ್ಯಾ, ಅಮೆರಿಕಗಳು ಪ್ರಜಾಪ್ರಭುತ್ವ ಅತ್ತ ಇರಲಿ, ಮೊದಲು ಮೂಲಭೂತವಾದಿಗಳ ಮೂಲೋತ್ಪಾಟನೆ ಮಾಡೋಣ ಎಂದು ನಿರ್ಧರಿಸಿ ಆ ಕಾರ್ಯಕ್ರಮದ ಭಾಗವಾಗಿ ಯಾವ ಅಸದ್​ನನ್ನು ಸಿರಿಯನ್ನರು ಮೊದಲಿಗೆ ವಿರೋಧಿಸಿದ್ದರೋ ಅದೇ ಅಸದ್​ನನ್ನು ಬಲಪಡಿಸತೊಡಗಿದವು!

ಯೆಮೆನ್​ನ ವಿಚಾರಕ್ಕೆ ಬಂದರೆ ಲಿಬಿಯಾದಂತೆ ಅಲ್ಲಿಯೂ ನಡೆಯುತ್ತಿರುವುದು ಬುಡಕಟ್ಟುಗಳ ಮತ್ತು ಮಹತ್ವಾಕಾಂಕ್ಷಿ ವ್ಯಕ್ತಿಗಳ ರಾಜಕೀಯ ಅಧಿಕಾರಕ್ಕಾಗಿನ ಘರ್ಷಣೆ. ತನ್ನ ಉತ್ತರ ಯೆಮೆನ್​ಗಿಂತಲೂ ದುಪ್ಪಟ್ಟು ವಿಸ್ತಾರದ ದಕ್ಷಿಣ ಯೆಮೆನ್ ಅನ್ನು ತನ್ನ ದೇಶದ ಜತೆ ಒಗ್ಗೂಡಿಸಿ ಏಕೀಕೃತ ಯೆಮೆನ್​ನ ನಿರ್ವಣಕ್ಕೆ ಕಾರಣನಾದ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಯೆಮೆನಿಗರಿಗೆ ಪ್ರಿಯನಾದದ್ದೇನೋ ನಿಜ. ದಕ್ಷಿಣ ಯೆಮೆನ್​ನ ಮಾರ್ಕ್್ಸಾದಿ ಪ್ರಭುತ್ವ ವನ್ನು ಕೊನೆಗಾಣಿಸಿದ ಮಹತ್ಸಾಧನೆಗಾಗಿ ಆತ ಪಶ್ಚಿಮದ ದೇಶಗಳು ಹಾಗೂ ಸೌದಿ ಅರೇಬಿಯಾಗೂ ಪ್ರಿಯನಾದದ್ದೂ ಅಷ್ಟೇ ನಿಜ. ಕಾಲಾನುಕ್ರಮದಲ್ಲಿ ಸರ್ಕಾರ ಮತ್ತು ಸೇನೆಯ ಎಲ್ಲ ಪ್ರಮುಖ ಸ್ಥಾನಗಳಲ್ಲಿ ತನ್ನ ರಕ್ತಸಂಬಂಧಿಗಳು ಮತ್ತು ಬುಡಕಟ್ಟಿನ ವ್ಯಕ್ತಿಗಳನ್ನು ಕೂರಿಸಿದ ಅವನ ವಿರುದ್ಧ ಜನಾಭಿಪ್ರಾಯ ತಿರುಗಿಬಿದ್ದದ್ದು ಸಹಜವೇ. ಆದರೆ ಈ ಜನಾಂದೋಲನದ ಅಲೆಯೇರಿ ಅಧ್ಯಕ್ಷ ಸಲೇಹ್​ಗೆ ಸೆಡ್ಡು ಹೊಡೆಯಹೊರಟಿದ್ದು ಬ್ರಿಗೇಡಿಯರ್ ಜನರಲ್ ಅಲಿ ಮೊಹ್ಸೆನ್ ಅಲ್-ಅಹ್ರಾರ್.

ಈತ ಸಲೇಹ್​ನ ಮಲಸಹೋದರ. ಅಂತಿಮವಾಗಿ 2012ರಲ್ಲಿ ಅಬ್​ದ್ರಾಬುಹ್ ಮನ್ಸೂರ್ ಹಾದಿ ಅಧ್ಯಕ್ಷರಾದಾಗ ಅಲ್ಲಿ ರಾಜಕೀಯ ಸ್ಥಿರತೆ ಉಂಟಾದಂತಿತ್ತು. ಆದರೆ ಇರಾನ್ ಬೆಂಬಲಿತ ಶಿಯಾ ಧರ್ವಿುಯ ಹೂತಿಗಳು ಯಾವಾಗ ಸಶಸ್ತ್ರ ಸಂಘರ್ಷ ಆರಂಭಿಸಿದರೋ ಆಗ ಯೆಮೆನ್ ದಳ್ಳುರಿಗೆ ಸಿಲುಕಿಹೋಯಿತು. ಎರಡೂವರೆ ಲಕ್ಷ ಜನರನ್ನು ಬಲಿ ತೆಗೆದುಕೊಂಡಿರುವ ಈ ಸಂಘರ್ಷದಿಂದ ಹೊರಬರುವ ದಾರಿಯೇ ಕಾಣದಾಗಿದೆ. ಈಗಂತೂ ಯುದ್ಧ ಸೌದಿ ಅರೇಬಿಯಾಗೂ ಕಾಲಿಟ್ಟಿದೆ. ಮೂರು ದಿನಗಳ ಹಿಂದೆ ಹೂತಿಗಳೂ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್ ಮೇಲೇ ಡ್ರೋನ್ ದಾಳಿ ನಡೆಸಿದ್ದಾರೆ. ಹಲವಾರು ಸೌದಿ ನಗರಗಳು ಹಾಗೂ ತೈಲ ಶುದ್ಧೀಕರಣ ಕೇಂದ್ರಗಳೂ ದಾಳಿಗೊಳಗಾಗಿವೆ.

ಪುಟ್ಟ ಬಹ್ರೇನ್​ನ ವಿಷಯಕ್ಕೆ ಬಂದರೆ, 2011ರ ಮೊದಲರ್ಧದಲ್ಲಿ ಅಲ್ಲಿ ನಡೆದದ್ದು ಸುನ್ನಿ ಮತ್ತು ಶಿಯಾಗಳ ನಡುವೆ ರಾಜಕೀಯ ಅಧಿಕಾರಕ್ಕಾಗಿನ ಘರ್ಷಣೆ. ಆ ಪುಟ್ಟ ದ್ವೀಪರಾಷ್ಟ್ರದ ರಾಜಕೀಯ ಅಧಿಕಾರ ಅಲ್ಪಸಂಖ್ಯಾತ ಸುನ್ನಿ ಮುಸಲ್ಮಾನರ ಕೈಯಲ್ಲಿದೆ. ಅಧಿಕಾರದ ಪಾಲಿಗಾಗಿ ದನಿಯೆತ್ತಿದ ಬಹುಸಂಖ್ಯಾತ ಶಿಯಾಗಳ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವವಾದೀ ಚುನಾವಣೆಗಳು ನಡೆದರೆ ರಾಜಕೀಯ ಅಧಿಕಾರ ತಮ್ಮ ಕೈ ಸೇರುವುದು ನಿಶ್ಚಿತ ಎಂದಾಗಿತ್ತು. ಸಂಸದೀಯ ಪ್ರಜಾಪ್ರಭುತ್ವ ಅಂದರೆ ಬಹುಸಂಖ್ಯಾತರ ಆಳ್ವಿಕೆ ಎನ್ನುವುದು ಸರ್ವವಿದಿತ. ಆದರೆ ಬಹ್ರೇನ್​ನ ಶಿಯಾಗಳು ಬಯಸಿದ ಚುನಾವಣೆಗಳು ನಿಜವಾಗಿಯೂ ನಡೆದಿದ್ದರೆ ರಾಜಕೀಯ ಅಧಿಕಾರ ಅವರ ಕೈಸೇರುತ್ತಿದುದೇನೋ ನಿಜ, ಆದರೆ ಆ ದೇಶಕ್ಕೆ ಪ್ರಜಾಪ್ರಭುತ್ವ ಬಂದರೂ ಏನೂ ಆಗುತ್ತಿರಲಿಲ್ಲ. ಬಹ್ರೇನ್ ಶಿಯಾಗಳ ಹಿಂದಿದ್ದದ್ದು ನೆರೆಯ ಶಿಯಾ ದೈತ್ಯ ಇರಾನ್. ಕೊಲ್ಲಿಯ ಪ್ರದೇಶದಲ್ಲಲ್ಲದೇ ಇಡೀ ಇಸ್ಲಾಮಿಕ್ ಜಗತ್ತಿನಲ್ಲಿ ಪ್ರಭಾವಕ್ಕಾಗಿ ಸೌದಿ ಅರೇಬಿಯಾದ ಜತೆ 1979ರಿಂದಲೂ ಸೆಣಸಾಟಕ್ಕಿಳಿದಿರುವ ಇರಾನ್ ಭೌಗೋಳಿಕವಾಗಿ ಸೌದಿ ಅರೇಬಿಯಾಗೆ ಹತ್ತಿರದಲ್ಲಿರುವ ಬಹ್ರೇನ್​ನಲ್ಲಿ ವರ್ಚಸ್ಸು ಸ್ಥಾಪಿಸಿಕೊಳ್ಳಲು ಹುಡುಕಿದ ಹೊಸ ಮಾರ್ಗ ಈ ಶಿಯಾ ಆಂದೋಲನ. ಇರಾನ್ ಮನಾಮಾದಲ್ಲಿ ಸ್ಥಾಪಿಸಬಯಸಿದ್ದ ಸರ್ಕಾರ ಶಿಯಾ ಸರ್ವಾಧಿಕಾರ. ತನ್ನ ಹಿತಾಸಕ್ತಿಗಳಿಗೆ ಮುಂದೊದಗಬಹುದಾಗಿದ್ದ ಅಪಾಯವನ್ನು ಮನಗಂಡ ಸುನ್ನಿ ಸೌದಿ ಅರೇಬಿಯಾ ಶಿಯಾ ಅಂದೋಲನದ ಮೂಲೋತ್ಪಾಟನೆಗಾಗಿ ಬಹ್ರೇನ್​ಗೆ ತನ್ನ ಸೇನೆ ಕಳುಹಿಸಿತು. ಈ ಕ್ರಮಕ್ಕೆ ಪಶ್ಚಿಮದ ದೇಶಗಳ ಸಹಮತವಿತ್ತು. ಅಲ್ಲಿಗೆ ಬಹ್ರೇನಿನ ‘ಜನಾಂದೋಲನ’ದ ಅಂತ್ಯವಾಯಿತು!

ಈ ಎಲ್ಲ ನಿರಾಶಾದಾಯಕ ಬೆಳವಣಿಗೆಗಳ ನಡುವೆ ‘ಅರಬ್ ವಸಂತ’ ತನ್ನ ಜನ್ಮಸ್ಥಳ ಟ್ಯುನೇಶಿಯಾದಲ್ಲಿ ಯಶಸ್ಸು ಸಾಧಿಸಿದೆ. 2014 ಫೆಬ್ರವರಿಯಲ್ಲಿ ಅನುಷ್ಠಾನಗೊಂಡ ಹೊಸ ಸಂವಿಧಾನ ಪ್ರಜಾಪ್ರಭುತ್ವವನ್ನು ಬಲಗೊಳಿಸುವುದರ ಜತೆಗೆ ಕಾನೂನಿನ ಮುಂದೆ ಪುರುಷರೂ ಮಹಿಳೆಯರೂ ಸರಿಸಮಾನರು ಎಂದು ಘೊಷಿಸಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರ ಟ್ಯುನೀಷಿಯನ್ನರು ನಂಬಿಕೆ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದಾರೆ. ಇಸ್ಲಾಂಗೆ ಹೊರತಾಗಿ ಬೇರೆ ಧರ್ಮವನ್ನು ಅನುಸರಿಸುವ ಹಾಗೂ ನಾಸ್ತಿಕತೆಯನ್ನೂ ಪಾಲಿಸುವ ಸ್ವಾತಂತ್ರ್ಯವನ್ನು ಸಂವಿಧಾನದ ಒಂದು ಪರಿಚ್ಛೇದ ಜನತೆಗೆ ನೀಡಿದೆ. ಕಟ್ಟುನಿಟ್ಟಾದ ಇಸ್ಲಾಮಿಕ್ ಕಾನೂನುಗಳ, ಲಿಂಗ ತಾರತಮ್ಯದ ತಳಹದಿಯ ಮೇಲೆ ನಿಂತಿರುವ ಅರಬ್ ಜಗತ್ತಿನಲ್ಲಿ ಟ್ಯುನೇಶಿಯಾ ಹಿಡಿದಿರುವ ಈ ಹೊಸ ಹಾದಿ ಅಭೂತಪೂರ್ವ ಹಾಗೂ ಅಸಾಮಾನ್ಯ. ಪುಟ್ಟ ಟ್ಯುನೇಶಿಯಾದ ಈ ಹೆಜ್ಜೆ ದೀರ್ಘ ಕತ್ತಲ ಸುರಂಗದಲ್ಲೊಂದು ಬೆಳ್ಳಿರೇಖೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net