ನೆರೆದೇಶದ ದ್ವೇಷದ ಸಂಬಳ ಸ್ವದೇಶದ ಮರಣ!

sdf
Published on
‘ಪಾಪದ ಸಂಬಳ ಮರಣ!’ ಎಳೆಯ ವಯಸ್ಸಿನಲ್ಲಿ ನಾನು ಓದುತ್ತಿದ್ದ ಮಿಷನರಿ ಶಾಲೆಗೆ ಬರುತ್ತಿದ್ದ ಕ್ರಿಶ್ಚಿಯನ್ ಪ್ರವಚನಕಾರರು ಅಡಿಗಡಿಗೆ ಹೇಳುತ್ತಿದ್ದ ಈ ಮಾತು ಕಿವಿಗಳಲ್ಲಿನ್ನೂ ಗುಂಯ್ಗುಡುತ್ತಿದೆ. ಪಾಕಿಸ್ತಾನದ ದುರ್​ನಾಯಕರು ಆ ದೇಶವನ್ನಿಂದು ದೂಡಿರುವ ಪ್ರಪಾತವನ್ನು ನೋಡಿದಾಗೆಲ್ಲಾ ಆ ಹೇಳಿಕೆಯನ್ನು ‘ದ್ವೇಷದ ಸಂಬಳ ಮರಣ’ ಎಂದು ಬದಲಾಯಿಸಬೇಕೆಂದೆನಿಸುತ್ತದೆ. ಒಂದು ದೇಶವಾಗಿ ಪಾಕಿಸ್ತಾನ ಮರಣದತ್ತ ಸಾಗುತ್ತಿದೆ, ಶವಪೆಟ್ಟಿಗೆಯನ್ನು ಚೀನಾ ಈಗಾಗಲೇ ತಯಾರಿಸಿದೆ!

ಪಾಕಿಸ್ತಾನ ತನ್ನ ಅಸ್ತಿತ್ವದ 75 ವರ್ಷಗಳನ್ನು ಪೂರೈಸಲು ಇನ್ನು ಮೂರು ವಾರಗಳಿವೆ, ಆ ದೇಶದ ಅರ್ಥವ್ಯವಸ್ಥೆಯೀಗ ಮೂರಾಬಟ್ಟೆಯಾಗಿದೆ. ಎರಡು ವರ್ಷಗಳ ಹಿಂದೆ ನಕಾರಾತ್ಮಕತೆಗೆ ಇಳಿದ ಅದರ ವಾರ್ಷಿಕ ಅಭಿವೃದ್ಧಿ ದರ ಇನ್ನೂ ಅಲ್ಲೇ ಇದೆ. ಅಲ್ಲೀಗ ಹಣದುಬ್ಬರ 22%! ಪಾಕಿಸ್ತಾನೀ ರೂಪಾಯಿಯ ಮೌಲ್ಯ ಅದೆಷ್ಟು ಕುಸಿದಿದೆಯೆಂದರೆ ಒಂದು ಅಮೆರಿಕನ್ ಡಾಲರ್​ಗೆ 224 ರೂಪಾಯಿಗಳನ್ನು ತೆರಬೇಕು! ಇದಕ್ಕಿಂತ ಅಫ್ಘಾನಿಸ್ತಾನ ಎಷ್ಟೋ ವಾಸಿ. 87 ಅಫ್ಘನಿಗಳು ಒಂದು ಡಾಲರ್​ಗೆ ಸಮ! ಹನ್ನೊಂದು ತಿಂಗಳ ಹಿಂದೆ ತಾಲಿಬಾನಿಗಳ ಕೈಗೆ ಬಿದ್ದಾಗ ಇನ್ನು ಮುಳುಗಿಯೇಹೋಯಿತು ಎಂದು ಜಗತ್ತು ಕೈಬಿಟ್ಟ ಅಫ್ಘಾನಿಸ್ತಾನದಿಂದ ಇಂದು ಪಾಕಿಸ್ತಾನ ಆಹಾರಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದೆ!

ದ್ವೇಷದಲ್ಲೇ ಹುಟ್ಟಿ, ದ್ವೇಷವನ್ನೇ ಉಸಿರಾಡುತ್ತಾ, ಉಳಿದೆಲ್ಲವನ್ನೂ ನಿರ್ಲಕ್ಷಿಸಿದ್ದಕ್ಕಾಗಿ ಪಾಕಿಸ್ತಾನ ತೆರುತ್ತಿರುವ ಬೆಲೆ ಇದು. ತನ್ನ ಆಯಕಟ್ಟಿನ ಸ್ಥಾನವನ್ನೇ ಬಂಡವಾಳವಾಗಿಸಿಕೊಂಡು ಪಶ್ಚಿಮದ ಶ್ರೀಮಂತ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳ ಕೊಳ್ಳೆಹೊಡೆಯಬಹುದೆಂದು ಪಾಕಿಸ್ತಾನ ಲೆಕ್ಕಹಾಕಿದ್ದು ಅಮೆರಿಕಾದ ಶೀತಲಸಮರ ರಾಜಕಾರಣ ಮತ್ತು ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧದ ಸಮರದ ಅಗತ್ಯಗಳಿಂದಾಗಿ ನಿಜವಾಯಿತು. ಆದರೆ ನಿರಂತರವಾಗಿ ಬದಲಾಗುತ್ತಲೇ ಇರುವ ಅಂತಾರಾಷ್ಟ್ರೀಯ ರಾಜಕಾರಣ ದೇಶಗಳ ಅದೃಷ್ಟದೊಂದಿಗೆ ಸದಾ ಚೆಲ್ಲಾಟವಾಡುತ್ತಿರುತ್ತದೆ. ಅದರಂತೆ, ಅದೃಷ್ಟ ತನ್ನ ಕಡೆಗಿರುವಾಗ ಸಿಕ್ಕಿದ ಅವಕಾಶಗಳನ್ನೆಲ್ಲ ಬಾಚಿಕೊಳ್ಳುತ್ತಲೇ ಗ್ರಹಗತಿ ಕೆಟ್ಟು ‘ದೊಡ್ಡವರು’ ಕೈಬಿಟ್ಟಾಗ ತಾನು ಕುಸಿದುಹೋಗದಂತೆ ಸ್ವಂತ ಸಾಮರ್ಥ್ಯವನ್ನೂ ಬೆಳೆಸಿಕೊಳ್ಳುವುದು ಶಕ್ತ ರಾಷ್ಟ್ರಗಳ ಬಂಟನ ಅಥವಾ ದಾಳದ ಪಾತ್ರ ವಹಿಸುವ ಯಾವುದೇ ಮಧ್ಯಮ ಹಾಗೂ ಸಣ್ಣ ದೇಶಗಳಿಗೆ ಅತ್ಯಗತ್ಯ. ಪಾಕಿಸ್ತಾನ ಎಡವಿದ್ದು ಇಲ್ಲಿ. ಶೀತಲಸಮರದ ದಿನಗಳಲ್ಲಿ ಅಮೆರಿಕಾದಿಂದ ಮದ್ದುಗುಂಡು, ದುಡ್ಡು, ಕಾಸು ಎಲ್ಲವೂ ಸಿಕ್ಕಿದ್ದು; ನಂತರ ಇಸ್ಲಾಮಿಕ್ ಮೂಲಭೂತವಾದದ ವಿರುದ್ಧದ ಸಮರದ ಮೊದಲ ಹದಿನಾರು ವರ್ಷಗಳಲ್ಲಿ ಅಮೆರಿಕಾವೊಂದರಿಂದಲೇ 33 ಬಿಲಿಯನ್ ಡಾಲರ್ ಹರಿದುಬಂದದ್ದು; ಅಮೆರಿಕಾದ ಮಾತಿಗೆ ಸಮ್ಮತಿಸಿ ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) 23 ಸಲ ತನ್ನನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ್ದು ಪಾಕಿಸ್ತಾನದ ಕಣ್ಣುಗಳನ್ನು ಮಬ್ಬಾಗಿಸಿತು. ಹೊರಗಿನವರು ಓಲೈಸುವುದು, ತನಗೆಲ್ಲವನ್ನೂ ಕೊಟ್ಟು ಮುದ್ದಿಸುವುದು ಅನುಗಾಲವೂ ನಡೆಯುತ್ತದೆ ಎಂದು ನಂಬಿದ ಆ ದೇಶ ತನ್ನ ಆರ್ಥಿಕ ಸಾಮರ್ಥ್ಯ ವೃದ್ಧಿಯತ್ತ ಗಮನವನ್ನೇ ಕೊಡಲಿಲ್ಲ.

ಹೊರಗಿನಿಂದ ಬಂದ ಹಣವನ್ನೆಲ್ಲಾ ರಾಜಕಾರಣಿಗಳು ಮತ್ತು ಸೇನಾಧಿಕಾರಿಗಳು ತಮ್ಮ ಐಷಾರಾಮಿ ಬದುಕಿಗೆ ಮತ್ತು ಭಾರತವನ್ನು ‘ಸಾವಿರ ಗಾಯಗಳಿಂದ ರಕ್ತಹರಿಸಿಕೊಂಡು ನರಳುವಂತೆ’ ಮಾಡುವ ಭಯೋತ್ಪಾದಕ ಸಂಘಟನೆಗಳನ್ನು ಸಾಕುವುದಕ್ಕೆ ಬಳಸಿದರು. ಅಧಿಕಾರಾವಧಿಯಲ್ಲಿ ಸೌದಿ ಅರೇಬಿಯಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದುಬೈಗಳಲ್ಲಿ ಬೃಹತ್ ಬಂಗಲೆಗಳನ್ನು ಖರೀದಿಸುವುದು, ನಿವೃತ್ತಿಯ ಬಳಿಕ ಅಲ್ಲಿಗೆ ಹೋಗಿ ನೆಲೆಸುವುದು ಪಾಕಿಸ್ತಾನದ ಉನ್ನತ ಸೇನಾಧಿಕಾರಿಗಳ ಜಾಯಮಾನವೇ ಆಗಿಹೋಗಿದೆ. ಕಳೆದ ಮೂರೂವರೆ ದಶಕಗಳಿಂದಲೂ ಪ್ರತಿಯೊಂದು ಪಾಕ್ ಮಂತ್ರಿಮಂಡಲದ ಅರ್ಧಕ್ಕಿಂತಲೂ ಹೆಚು ಜನ ದ್ವಿಪೌರತ್ವ ಹೊಂದಿದವರೇ ಆಗಿದ್ದು ಎರಡು ಪಾಸ್​ಪೋರ್ಟ್ ಇಟ್ಟುಕೊಂಡವರೇ ಆಗಿದ್ದಾರೆ. ಯಾವುದೇ ಕಾರಣದಿಂದ ದೇಶದಲ್ಲಿ ಅದೃಷ್ಟ ಕೆಟ್ಟರೆ ತಕ್ಷಣ ಓಡಿಹೋಗಲು ಮಾಡಿಕೊಂಡಿರುವ ವ್ಯವಸ್ಥೆ ಇದು! ಇಂತಹವರು ದೇಶ ಕಟ್ಟಬಲ್ಲರೇ? ಇವರು ಕಟ್ಟಿದ್ದು ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ. ಇಲ್ಲಿ ಪಾಕ್ ನೇತಾರರು ಅರಿಯಲು ಸೋತ ಸತ್ಯವೆಂದರೆ ಭಯೋತ್ಪಾದಕ ಸಂಘಟನೆಗಳಿಗೆ ಹೂಡಿದ ಹಣ ಹಿಂತಿರುಗಿ ಬರುವುದಿಲ್ಲ, ಅದು ರಫ್ತುಸಾಮಗ್ರಿಗಳನ್ನು ಉತ್ಪಾದಿಸಿ ಬಿಲಿಯನ್​ಗಟ್ಟಲೆ ಡಾಲರ್​ಗಳನ್ನು ತಂದು ಸುರಿಯುವುದಿಲ್ಲ. ಬದಲಾಗಿ, ಅದು ವಿದೇಶಗಳು ಕೊಟ್ಟ ಬಿಲಿಯನ್​ಗಟ್ಟಲೆ ಡಾಲರ್​ಗಳನ್ನೇ ನುಂಗಿ ನೊಣೆಯುತ್ತವೆ! ಜತೆಗೆ, ಇನ್ನೂ ಒಂದು ರಾಷ್ಟ್ರಘಾತಕ ದುರಂತವೂ ಇದೆ.

‘ನೀವು ನಿಮ್ಮ ಹಿತ್ತಲಿನಲ್ಲಿ ಹಾವುಗಳನ್ನು ಸಾಕಿ, ಅವು ನೆರೆಯವರನ್ನು ಮಾತ್ರ ಕಚ್ಚುತ್ತವೆ ಎಂದು ತಿಳಿದರೆ ತಪ್ಪಾಗಿ ಆಲೋಚಿಸುತ್ತಿದ್ದೀರಿ’ ಎಂದು ಅಮೆರಿಕನ್ ರಾಜಕಾರಣಿ ಹಿಲರಿ ಕ್ಲಿಂಟನ್ 14 ವರ್ಷಗಳ ಹಿಂದೆಯೇ ಹೇಳಿದರು! ಆದರೆ ಈ ಕಿವಿಮಾತು ಪಾಕ್ ನೇತಾರರ ಕಿವಿಗೆ ಹೋಗಲೇ ಇಲ್ಲ. ಪರಿಣಾಮವಾಗಿ 2006-14ರ ಆವಧಿಯಲ್ಲಿ ಅತಿಹೆಚ್ಚು ಭಯೋತ್ಪಾದಕ ದಾಳಿಗಳನ್ನು ಅನುಭವಿಸುವ ದೇಶಗಳ ಪಟ್ಟಿಯಲ್ಲಿ ಇರಾಕ್ ಮತ್ತು ಭಾರತದ ನಂತರ ಪಾಕಿಸ್ತಾನದ್ದು ಮೂರನೆಯ ಸ್ಥಾನವಾಗಿತ್ತು. 2014ರ ನಂತರ ಪಟ್ಟಿಯಲ್ಲಿ ಭಾರತ ಮತ್ತು ಇರಾಕ್​ಗಳ ಸ್ಥಾನ ಕೆಳಗಿಳಿದಿದೆ, ಪಾಕಿಸ್ತಾನ ಮೊದಲ ಸ್ಥಾನಕ್ಕೇರಿ ಕುಳಿತಿದೆ! ಇಂದು ತನ್ನದೇ ಭಯೋತ್ಪಾದಕ ಸಂಘಟನೆಗಳಿಂದಾಗಿ ಜಾಗತಿಕವಾಗಿ ಅತಿ ಹೆಚ್ಚು ಸೈನಿಕರನ್ನು ಕಳೆದುಕೊಳ್ಳುತ್ತಿರುವ ದೇಶ ಪಾಕಿಸ್ತಾನ!

ಭ್ರಷ್ಟಾಚಾರ ಮತ್ತು ಸ್ವಾರ್ಥಸಾಧನೆಯಲ್ಲೇ ಮುಳುಗಿಹೋದ ಪಾಕ್ ರಾಜಕಾರಣಿಗಳು ಮತ್ತು ಸೇನಾಧಿಕಾರಿಗಳು ದೇಶದ ಅಭಿವೃದ್ಧಿಗೆ ಅಗತ್ಯವಾದ ಉನ್ನತ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನಾಲಯಗಳನ್ನಾಗಲೀ, ಭಾರಿ ಕೈಗಾರಿಕೆಗಳನ್ನಾಗಲೀ ಸ್ಥಾಪಿಸಲಿಲ್ಲ. ದೇಶದ ಶೇ.80ರಷ್ಟು ಜನಸಂಖ್ಯೆಯನ್ನು ಕೃಷಿಯಲ್ಲೇ ಉಳಿಸಿರುವುದಲ್ಲದೇ ಕೃಷಿಗಾಗಿ ಅಗತ್ಯ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಮಂಗಲಾ, ತಾರ್ಬೆಲಾ, ಸಕ್ಕೂರ್ ಜಲಾಶಯಗಳಲ್ಲಿ ದಶಕಗಳಿಂದಲೂ ಹೂಳು ತೆಗೆದಿಲ್ಲದ ಕಾರಣ ಅವುಗಳಲ್ಲಿ ನೀರಿನ ಸಂಗ್ರಹ ಕುಗ್ಗುತ್ತ ಬಂದು 30 ದಿನಗಳಿಗಾಗುವಸ್ಟು ಮಾತ್ರದ ನೀರು ದೇಶದಲ್ಲಿರುವ ಸ್ಥಿತಿ ಏಳೆಂಟು ವರ್ಷಗಳ ಹಿಂದೆಯೇ ನಿರ್ವಣವಾಯಿತು. ಜತೆಗೆ ಪಾರಿಸಾರಿಕ ಕಾರಣಗಳಿಂದಾಗಿ ಮಳೆಯ ಪ್ರಮಾಣದಲ್ಲೂ ಏರುಪೇರಾಗತೊಡಗಿದ್ದು ಕೃಷಿಯ ಮೇಲೆ ಮಾರಕ ಪರಿಣಾಮವಾಗುವುದೂ ಆರಂಭವಾಯಿತು. ಇದೆಲ್ಲದರಿಂದಾಗಿ ಪಾಕಿಸ್ತಾನದ ರಫ್ತುಗಳು ಕಡಿಮೆಯಾಗಿ ಆಮದು ಏರುತ್ತಾ ಹೋಗಿ ಡಾಲರ್ ಗಳಿಕೆ ಕುಗ್ಗುತ್ತ ಹೋಯಿತು. ಭಯೋತ್ಪಾದನೆಯ ವಿರುದ್ಧದ ಸಮರಕ್ಕಾಗಿ ಅಮೆರಿಕಾ ಮತ್ತು ಯೂರೋಪಿಯನ್ ದೇಶಗಳು ವರ್ಷವರ್ಷವೂ ನೀಡುತ್ತಿದ್ದ ಹಾಗೂ ಸೌದಿ ಅರೇಬಿಯಾ, ಯುಎಇ ಮತ್ತಿತರ ಶ್ರೀಮಂತ ಮುಸ್ಲಿಂ ದೇಶಗಳು ನೀಡುತ್ತಿದ್ದ ಸಹಾಯಧನದಿಂದ ದಿನಗಳು ಹೇಗೋ ಸಾಗುತ್ತಿದ್ದವು. ಇದೆಲ್ಲವೂ ಒಂದು ದಿನ ನಿಂತುಹೋಗುತ್ತದೆಂದು ಪಾಕ್ ನೇತಾರರು ಗುರುತಿಸಲೇ ಇಲ್ಲ. ಆದರೆ ಚೀನೀ ಕಮ್ಯೂನಿಸ್ಟರು ಗುರುತಿಸಿದರು.

ಭಾರತದ ಶಕ್ತಿ ದಕ್ಷಿಣ ಏಷಿಯಾದಲ್ಲೇ ವ್ಯಯವಾಗುವಂತೆ ಮಾಡಿ, ಏಷಿಯಾದ ಇತರೆಡೆ ತನಗೆ ಪ್ರತಿಸ್ಪರ್ಧಿಯಾಗಿ ಬೆಳೆಯದಂತೆ ತಡೆಯಲು ಚೀನಾ ಹುಡುಕಿದ ದಾಳ ಪಾಕಿಸ್ತಾನ. ಈ ಚೀನೀ ಉದ್ದೇಶ ಮತ್ತಷ್ಟು ಆಯಾಮಗಳನ್ನು ಪಡೆದುಕೊಂಡದ್ದು 15 ವರ್ಷಗಳ ಹಿಂದೆ. 1978ರಲ್ಲಿ ಆರ್ಥಿಕ ಉದಾರೀಕರಣವನ್ನು ಆರಂಭಿಸಿ ‘ಜಗತ್ತಿನ ಕಾರ್ಖಾನೆ’ಯಾಗಿ ಬೆಳೆಯತೊಡಗಿದ ಚೀನಾ ಹೊಸ ಶತಮಾನದ ಆರಂಭದ ಹೊತ್ತಿಗೆ ಪ್ರಪಂಚದ ಮೂರನೆಯ ಬೃಹತ್ ಅರ್ಥವ್ಯವಸ್ಥೆಯಾಗಿ ಬೆಳೆಯಿತಷ್ಟೇ. 2010ರ ಹೊತ್ತಿಗೆ ಎರಡನೆಯ ಹಾಗೂ 2030ರ ಹೊತ್ತಿಗೆ ಮೊದಲ ಸ್ಥಾನಕ್ಕೇರಲು ಹವಣಿಸಿದ ಚೀನೀ ಬಕಾಸುರ ಅದಕ್ಕಾಗಿ ಹುಡುಕಿದ್ದು ಸುಲಲಿತ ಹಾಗೂ ಶೀಘ್ರ ಇಂಧನ ಪೂರೈಕೆಯನ್ನು ಮತ್ತು ವಿವಿಧ ಖನಿಜಗಳಿಗಾಗಿ ದೂರದೂರದವರೆಗೆ ಕೈಚಾಚುವ ಅವಕಾಶವನ್ನು. ಈ ಎಲ್ಲಾ ಉದ್ದೇಶಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಿದ್ದುದು ಪಾಕಿಸ್ತಾನ.

ಇಂಧನ ಮೂಲವಾದ ಪಶ್ಚಿಮ ಏಷಿಯಾದಿಂದ ತೈಲ ತುಂಬಿಕೊಂಡ ಜಹಜುಗಳು ಅರಬ್ಬೀ ಸಮುದ್ರ, ಹಿಂದೂ ಮಹಾಸಾಗರ, ಮಲಕ್ಕಾ ಜಲಸಂಧಿ, ದಕ್ಷಿಣ ಚೀನಾ ಸಮುದ್ರ ಮತ್ತು ಪಶ್ಚಿಮ ಪೆಸಿಫಿಕ್ ಸಾಗರದ ಮೂಲಕ ಹಾದು ಚೀನಾದ ಪೂರ್ವತೀರದ ಬಂದರುಗಳಿಗೆ ತಲುಪಲು ಕನಿಷ್ಟ 21 ದಿನಗಳು ಹಿಡಿಯುತ್ತವೆ. ಆದರೆ ಅದೇ ತೈಲವನ್ನು ಜಹಜುಗಳಲ್ಲಿ ಪಾಕಿಸ್ತಾನದ ಗ್ವಾದಾರ್ ಬಂದರಿಗೆ ತಂದು ಅಲ್ಲಿಂದ ರೈಲುಮಾರ್ಗದ ಮೂಲಕ ಪಶ್ಚಿಮ ಚೀನಾದ ಕಾಶ್​ಗರ್​ಗೆ ತಲುಪಿಸಲು ತಗಲುವ ಸಮಯ ಕೇವಲ ಎರಡು ದಿನಗಳು! ಜತೆಗೆ, ಖನಿಜಗಳ ಆಗರ ಆಫ್ರಿಕಾದಿಂದ ಅದಿರುಗಳನ್ನೂ ಇದೇ ಮಾರ್ಗದಲ್ಲಿ ಸಾಗಿಸಬಹುದು. ಅಲ್ಲಿಗೆ ಚೀನೀ ಅರ್ಥವ್ಯವಸ್ಥೆಗೆ ಅಗತ್ಯವಾದ ತೈಲ ಮತು ಕಚ್ಚಾವಸ್ತುಗಳು ಕ್ಷಿಪ್ರ ಕಾಲದಲ್ಲಿ ತಲುಪುತ್ತವೆ. ಅಷ್ಟೇ ಅಲ್ಲ, ಪ್ರತಿಕೂಲ ಸನ್ನಿವೇಶಗಳಲ್ಲಿ ಚೀನೀ ಜಹಜುಗಳನ್ನು ಭಾರತೀಯ ನೌಕಾಪಡೆ ಮಲಕ್ಕಾ ಜಲಸಂಧಿಯಲ್ಲಿ ಮತ್ತು ಅಮೆರಿಕನ್ ನೌಕಾಪಡೆ ಪಶ್ಚಿಮ ಪೆಸಿಫಿಕ್​ನಲ್ಲಿ ಅಡ್ಡಗಟ್ಟುವ ಸಾಧ್ಯತೆಯೇ ಇಲ್ಲ! ಕಾಶ್​ಗರ್​ನಿಂದ ಗ್ವಾದಾರ್​ಗೆ ರೈಲುಮಾರ್ಗ ನಿರ್ವಿುಸಲು ಚೀನಾ 2007ರಲ್ಲಿ ಆರಂಭಿಸಿದ್ದು ಹೀಗೆ.

2012ರಲ್ಲಿ ಅಧಿಕಾರಕ್ಕೆ ಬಂದ ಷಿ ಜಿನ್​ಪಿಂಗ್ ಇನ್ನೊಂದು ಮಜಲಿಗೊಯ್ದರು. ಕುಖ್ಯಾತ ಆಛ್ಝಿಠಿ ಚ್ಞಛ ್ಕಚಛ ಐಜಿಠಿಜಿಚಠಿಜಿಡಛಿ (ಆಐ) ಯೋಜನೆಯ ಅಂಗವಾಗಿ 2014ರಲ್ಲಿ ಅವರು ಚೈನಾ ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್ ಅಥವಾ ಸಿ-ಪೆಕ್ ಯೋಜನೆಯನ್ನು ಪಾಕ್ ನಾಯಕರ ಮುಂದಿಟ್ಟರು. ಪಶ್ಚಿಮ ಚೀನಾದ ಕಾಶ್​ಗರ್​ನಿಂದ ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನ್, ಪಾಕಿಸ್ತಾನದ ಖೈಬರ್-ಪಖ್ತೂನ್​ಖ್ವಾ, ಪಂಜಾಬ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಹಾದು ಅರಬ್ಬೀ ಸಮುದ್ರ ತೀರದ ಗ್ವಾದಾರ್ ಬಂದರಿನವರೆಗೆ ಈಗಾಗಲೇ ಯೋಜಿತವಾಗಿರುವ ರಸ್ತೆ-ರೈಲು ಮಾರ್ಗಗಳ ನಿರ್ವಣದ ಜತೆಗೆ ಅಟೋಕ್, ಇಸ್ಲಾಮಾಬಾದ್, ರಾವಲ್​ಪಿಂಡಿ, ಲಾಹೋರ್, ಮುಲ್ತಾನ್, ಹೈದರಾಬಾದ್, ಕರಾಚಿ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳನ್ನು ಜೋಡಿಸುವ ಸುವ್ಯವಸ್ಥಿತ ರಸ್ತೆಮಾರ್ಗಗಳು, ಆ ಎಲ್ಲಾ ಮಾರ್ಗಗಳ ಉದ್ದಕ್ಕೂ ಸಿಂಧೂ ಮತ್ತದರ ಉಪನದಿಗಳಿಗೆ ಹಲವಾರು ಅಣೆಕಟ್ಟೆಗಳು, ಜಲವಿದ್ಯುತ್ ಉತ್ಪಾದನಾ ಸಂಯಂತ್ರಗಳು ಹಾಗೂ ಕೈಗಾರಿಕಾ ಸಮುಚ್ಚಯಗಳ ನಿರ್ವಣಗಳನ್ನೊಳಗೊಂಡ ಸಿ-ಪೆಕ್ ಯೋಜನೆ ಇಡೀ ಪಾಕಿಸ್ತಾನದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಅಭೂತಪೂರ್ವ ಮಟ್ಟಕ್ಕೇರಿಸುವ, ಕೋಟ್ಯಂತರ ಪಾಕಿಸ್ತಾನೀಯರಿಗೆ ಪ್ರತ್ಯಕ್ಷ-ಪರೋಕ್ಷ ಉದ್ಯೋಗ ನೀಡುವ, ಆ ಮೂಲಕ ಪಾಕಿಸ್ತಾನದ ಭಾಗ್ಯದ ಬಾಗಿಲನ್ನೇ ತೆರೆದು, ಭಾರತಕ್ಕೆ ಸೆಡ್ಡುಹೊಡೆದು ನಿಲ್ಲುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಚೀನೀ ಅಧ್ಯಕ್ಷ ಪಾಕಿಗಳನ್ನು ಚೆನ್ನಾಗಿ ಉಬ್ಬಿಸಿದರು, ಪ್ರಧಾನಿ ನವಾಜ್ ಶರೀಫ್, ಅವರ ಹೆಣ್ಣುಮಕ್ಕಳಾದ ಮರಿಯಂ ಮತ್ತು ಆಸ್ಮಾರನ್ನು ಬೀಜಿಂಗ್​ಗೆ ಕರೆದು ಸತ್ಕರಿಸಿ, ಕೈಗೆ ಸಾಕಷ್ಟು ಲಂಚವನ್ನೂ ಹಾಕಿದರು. ಏಪ್ರಿಲ್ 2015ರಲ್ಲಿ ಪಾಕಿಸ್ತಾನಕ್ಕೆ ಅಧಿಕೃತ ಭೇಟಿಗೆ ಹೊರಡುವಾಗ ಜಿನ್​ಪಿಂಗ್ ಘೊಷಿಸಿದ್ದು ಹೀಗೆ- ‘ಸ್ವಂತ ಸಹೋದರನ ಮನೆಗೆ ಹೋಗುತ್ತಿರುವಂತೆ ನನಗನಿಸುತ್ತಿದೆ.’ ಭೇಟಿ ಮುಕ್ತಾಯವಾಗುತ್ತಿದ್ದಂತೇ ಉಭಯ ದೇಶಗಳ ನಡುವಿನ ‘ಸರ್ವಋತು ಸಾಮರಿಕ ಸಹಕಾರೀ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಯಿತು’ ಎಂದವರು ಇಸ್ಲಾಮಾಬಾದ್​ನಲ್ಲಿ ಘೊಷಿಸಿದರು. ಚೀನೀ ಹಣಕ್ಕೆ ತಮ್ಮನ್ನು ಮಾರಿಕೊಂಡು ಸಂತೃಪ್ತಿಯಿಂದ ಬೀಗುತ್ತಿದ್ದ ನವಾಜ್ ಶರೀಫ್ ‘ಚೀನಾ ಜತೆಗಿನ ಸ್ನೇಹ ಪಾಕಿಸ್ತಾನದ ವಿದೇಶನೀತಿಯ ಅಸ್ತಿಭಾರ ಶಿಲೆ... ಚೀನಾ ಮತ್ತು ಪಾಕಿಸ್ತಾನದ ಸ್ನೇಹ ಹಿಮಾಲಯಕ್ಕಿಂತಲೂ ಎತ್ತರ, ಸಾಗರಕ್ಕಿಂತಲೂ ಆಳ’ ಎಂದು ಬಣ್ಣಿಸಿದರು. ಇದೆಲ್ಲವೂ ಶ್ರೀಲಂಕಾದಲ್ಲಿ ನಡೆದ ನಾಟಕದ ಪಕ್ಕಾ ಪಾಕ್ ಆವೃತ್ತಿ.

ಸಿ-ಪೆಕ್ ಯೋಜನೆಯ ಅಂದಾಜು ವೆಚ್ಚ 46 ಬಿಲಿಯನ್ ಡಾಲರ್​ಗಳೆಂದು ಪ್ರಾರಂಭದಲ್ಲಿ ಲೆಕ್ಕಹಾಕಲಾಗಿತ್ತು. ಮೂರು ವರ್ಷಗಳ ನಂತರ ಅದು 62 ಬಿಲಿಯನ್ ಡಾಲರ್​ಗಳಾಯಿತು. ಮತ್ತೆ ಕೋವಿಡ್-19 ಅಮರಿಕೊಳ್ಳುವ ಹೊತ್ತಿಗೆ ಅದು 89 ಬಿಲಿಯನ್ ಡಾಲರ್​ಗಳಿಗೇರಿತು! ಈ ಇಡೀ ಮೊತ್ತ ಬಂದದ್ದು ಚೀನಾದಿಂದ, 90% ಸಾಲದ ರೂಪದಲ್ಲಿ, 10% ನೆರವಿನ ರೂಪದಲ್ಲಿ. ಸಾಲದ ಬಡ್ಡಿದರ 6.5%, ವೈಶ್ಚಿಕ ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿದರದ ಐದು ಪಟ್ಟಿಗಿಂತಲೂ ಹೆಚ್ಚು! ಅಂದರೆ ಸಿ-ಪೆಕ್ ಒಂದಕ್ಕಾಗಿಯೇ ಚೀನಾ ಪಾಕಿಸ್ತಾನಕ್ಕೆ ಕೊಟ್ಟ ಸಾಲ 80 ಬಿಲಿಯನ್ ಡಾಲರ್​ಗಳು! ಅದಕ್ಕೆ ವಾರ್ಷಿಕ ಬಡ್ಡಿಯೇ 5.2 ಬಿಲಿಯನ್ ಡಾಲರ್​ಗಳು! ಇದಲ್ಲವೇ ಸಾಲಸಂಕೋಲೆ ಅಂದರೆ! ಸರಿ, ಮುಂದೇನಾಯಿತು? ಆಗಬಾರದ್ದೇ ಆಯಿತು! ಅದನ್ನು ಮುಂದಿನವಾರ ನೋಡೋಣ.

ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net