ಅದಮ್ಯ ಶಕ್ತಿಯ ಪ್ರಾರ್ಥನೆಯೇ ನಂಬಿಕೆಗೆ ಮೂಲಾಧಾರ

ವಿಜಯವಾಣಿ (10)
Published on
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ಪ್ರಾರ್ಥನೆ ಎಂಬುದು ಅತ್ಯದ್ಭುತ ಶಕ್ತಿ. ಅಸಾಧ್ಯವಾದುದನ್ನೂ ಸಾಧ್ಯವಾಗಿಸುವ ಸಾಮರ್ಥ್ಯ ಪ್ರಾರ್ಥನೆಗೆ ಇದೆ. ಇದು ನಮ್ಮೊಳಗಿನ ಆಂತರಿಕ ಶಕ್ತಿಯನ್ನು ಉದ್ದೀಪನಗೊಳಿಸಿ, ನಂಬಿಕೆ, ವಿಶ್ವಾಸ ಹಾಗೂ ಶಾಂತಿಯಿಂದ ಮುನ್ನಡೆಸುವ ದಿವ್ಯ ಮಾರ್ಗ. ನಾವು ದುಃಖದಲ್ಲಿದ್ದಾಗ, ನಿರಾಸೆಯಲ್ಲಿದ್ದಾಗ ಅಥವಾ ಯಾವುದೇ ಸಂಕಷ್ಟ ಎದುರಾದಾಗ, ಪ್ರಾರ್ಥನೆಯಿಂದ ನಮಗೆ ಆಧಾರ ಹಾಗೂ ಶಕ್ತಿ ಸಿಗುತ್ತದೆ. ಅದು ಕೇವಲ ಧಾರ್ವಿುಕ ಆಚರಣೆಯಷ್ಟೇ ಅಲ್ಲ, ಹೃದಯದಿಂದ ಬಂದ ಶ್ರದ್ಧಾ-ಭಕ್ತಿಯ ಅಭಿವ್ಯಕ್ತಿ. ಪ್ರಾರ್ಥನೆಯ ಮೂಲಕ ನಾವೆಲ್ಲ ಪರಮಾತ್ಮನನ್ನು ತಲುಪುವುದಾಗಿದೆ. ಹೃದಯದಿಂದ ಮಾಡಿದ ಪ್ರಾರ್ಥನೆ, ಸತ್ಯ ನಂಬಿಕೆ, ಧೈರ್ಯ ಮತ್ತು ಶಕ್ತಿಯನ್ನು ಒದಗಿಸುತ್ತದೆ.

ಪ್ರಾರ್ಥನೆಯು ನಮ್ಮ ಸನಾತನ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಧರ್ಮ, ಭಾಷೆ, ದೇಶಗಳ ವ್ಯಾಪ್ತಿಯನ್ನು ಮೀರಿರುವಂಥದ್ದು. ಕ್ರೖೆಸ್ತರು, ಯಹೂದಿಯರು, ಮುಸ್ಲಿಮರು, ಬೌದ್ಧರು, ಹೀಗೆ ಎಲ್ಲ ಧರ್ವಿುಯರೂ ತಮ್ಮ ತಮ್ಮ ಧರ್ಮ, ಆಚಾರ- ವಿಚಾರಗಳಿಗೆ ಅನುಗುಣವಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಇನ್ನೂ ಹೆಚ್ಚು ಹೇಳಬೇಕೆಂದರೆ ಆಧುನಿಕ ಜಗತ್ತಿನೊಡನೆ ಸಂಪರ್ಕವಿರದೇ ಇರುವ ಅನೇಕ ಬುಡಕಟ್ಟು ಸಮುದಾಯಗಳೂ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರಾರ್ಥನೆ ನಡೆಸುತ್ತಾರೆ ಎಂಬುದನ್ನು ಟಿ.ವಿ. ಕಾರ್ಯಕ್ರಮ ಅಥವಾ ಮುದ್ರಣ ಮಾಧ್ಯಮಗಳ ಮೂಲಕ ತಿಳಿದಿದ್ದೇವೆ.

ಗಾಂಧೀಜಿಯವರು ಪ್ರಾರ್ಥನೆಯ ಬಗ್ಗೆ ಮಾತನಾಡುತ್ತಾ, ಚರ್ಮವು ಹೊದಿಕೆಯಾಗಿ ದೇಹಕ್ಕೆ ಹೇಗೆ ರಕ್ಷಣೆ ನೀಡುತ್ತದೆಯೋ ಅದೇ ರೀತಿ ಪ್ರಾರ್ಥನೆಯು ನಮ್ಮ ಬದುಕಿಗೆ ಮುಖ್ಯ ಎನ್ನುತ್ತಾರೆ. ಸ್ನಾನ-ಶೌಚಗಳ ಮೂಲಕ ದೇಹದ ಮಲಿನಗಳನ್ನು ತೊಳೆಯುವಂತೆ ಪ್ರಾರ್ಥನೆಯ ಮೂಲಕ ಮನಸ್ಸಿನ ಕೊಳೆಯನ್ನು ಸುಲಭವಾಗಿ ಕಳೆಯಲು ಸಾಧ್ಯ ಎಂದಿದ್ದಾರೆ. ಮಾನವರನ್ನು ದಾನವರನ್ನಾಗಿ ಮಾಡುವ, ವಿಕಾರ ಮಾಡುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ದೂರ ಮಾಡಲು, ನಿಯಂತ್ರಣದಲ್ಲಿ ಇಡಲು ಪ್ರಾರ್ಥನೆ, ಭಜನೆಗಳು ಬಹು ಸಹಕಾರಿಯಾಗಿವೆ.

ಪ್ರಾರ್ಥನೆ ದೇವರ ಜೊತೆಗೆ ಸಂವಾದ ಮಾತ್ರವಲ್ಲ. ಅದು ಶಕ್ತಿ, ಧೈರ್ಯ ವೃದ್ಧಿಗೊಳಿಸುವ ಅದಮ್ಯ ಚೇತನವಾಗಿದೆ. ಆತಂಕ, ಭಯ ಇತ್ಯಾದಿಗಳನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ. ಮನೆಯಲ್ಲಿ ಮಕ್ಕಳಿಗೆ ಭಯವಾದಾಗ ರಾಮನಾಮವನ್ನೋ ಅಥವಾ ಗಾಯತ್ರಿ ಮಂತ್ರವನ್ನೋ ಜಪಿಸಲು ಹೇಳುತ್ತಾರೆ. ಮಲಗುವ ಮೊದಲು ಕೆಲವು ಶ್ಲೋಕಗಳನ್ನು ಹೇಳುವುದರಿಂದ ಕೆಟ್ಟ ಕನಸು ಬೀಳುವುದಿಲ್ಲ ಎಂದು ಹೇಳುತ್ತಾರೆ. ಯಾಕೆಂದರೆ ಶ್ಲೋಕಗಳು ನಮ್ಮೊಳಗಿನ ಆಂತರಿಕ ಭಯವನ್ನು ದೂರ ಮಾಡಿ ಸುಖ ನಿದ್ರೆಗೆ ದಾರಿ ಮಾಡಿಕೊಡುತ್ತವೆ ಎಂಬುದು ಹಿರಿಯರ ಅನುಭವದ ಮಾತುಗಳಾಗಿವೆ.

ಕೆಲವು ದಶಕಗಳ ಹಿಂದೆ ಈಗಿನಂತೆ ವಾಹನದಲ್ಲಿ ಪ್ರಯಾಣ ಮಾಡುತ್ತಿರಲಿಲ್ಲ. ಎಲ್ಲರೂ ನಡೆದೇ ತಾವು ತಲುಪಬೇಕಾದ ಸ್ಥಳವನ್ನು ತಲುಪುತ್ತಿದ್ದರು. ಕೆಲವು ಅನು ಕೂಲಸ್ಥರು ಎತ್ತಿನಗಾಡಿಗಳನ್ನು ಬಳಸುತ್ತಿದ್ದರು. ತೀರ್ಥಯಾತ್ರೆ, ವ್ಯಾಪಾರಗಳಿಗೆ ಹೋಗುವವರೆಲ್ಲ ಎತ್ತಿನ ಗಾಡಿಗಳಲ್ಲಿ ಸರಕು-ಸರಂಜಾಮುಗಳನ್ನು ಹೇರಿಕೊಂಡು ಗುಂಪು ಗುಂಪಾಗಿ ಸಂಚರಿಸುತ್ತಿದ್ದರು. ಕಾಡು ಪ್ರದೇಶ, ಗಿರಿ-ಕಂದರಗಳಲ್ಲಿ ಹಾದು ಹೋಗಬೇಕಾಗುತ್ತಿದ್ದರಿಂದ ತಮ್ಮ ಭಯವನ್ನು ದೂರ ಮಾಡಲು ದೇವರ ನಾಮಸ್ಮರಣೆ ಮಾಡುತ್ತಾ, ಭಜನೆ ಮಾಡುತ್ತಾ ಸಂಚರಿಸುತ್ತಿದ್ದರು. ಅಂದರೆ ನಮ್ಮನ್ನು ಕಾಪಾಡಲು, ಗುರಿ ಮುಟ್ಟಿಸಲು ದೇವರಿದ್ದಾನೆ ಎಂಬ ನಂಬಿಕೆಯೇ ಅವರಿಗೆ ಶಕ್ತಿ, ಧೈರ್ಯ, ಸ್ಥೈರ್ಯ ಎಲ್ಲವೂ. ಅದನ್ನೇ ಪುರಂದರ ದಾಸರು ಅಂಬಿಗ ನಾ ನಿನ್ನ ನಂಬಿದೆ ಜಗದಂಬರಮಣನ ನಂಬಿದೆ ಎಂದು ಬಹು ಸೊಗಸಾದ ಪದವನ್ನು ಹಾಡಿದ್ದಾರೆ.

ಜಗತ್ತನ್ನು ಕಾಪಾಡುವ ಈಶ್ವರನೇ ಸಂಪೂರ್ಣ ನಂಬಿಕೆಯೊಂದಿಗೆ ನಿನಗೆ ಶರಣಾಗಿರುವೆ. ಜೀವನವೇ ಒಂದು ಹರಿಗೋಲು ಮತ್ತು ಅದರೊಳಗೆ ಅನೇಕ ಸಂಕಷ್ಟಗಳು ಛಿದ್ರಗಳಂತೆ ಇವೆ. ಅದೇನೇ ಸಂಕಷ್ಟಗಳಿದ್ದರೂ ನಾನು ನಿನ್ನನ್ನೇ ನಂಬಿರುವೆ, ನೀನೇ ಕಾಪಾಡು ಎಂದು ಶರಣಾಗತಿಯನ್ನು ಸೂಚಿಸುವ ದಾಸರು ಪದ್ಯದ ಮೂಲಕ ದೇವರು ಮತ್ತು ಭಗವಂತನ ನಡುವಿನ ಬಾಂಧವ್ಯವನ್ನು ತಿಳಿಸಿದ್ದಾರೆ. ದೇವರಿದ್ದಾನೆ ಎಂಬ ನಂಬಿಕೆಯೇ ನಮ್ಮ ಬದುಕಿಗೆ ಚೈತನ್ಯ ನೀಡುವುದು. ನಮ್ಮ ಎಲ್ಲಾ ಒಳ್ಳೆಯ ಕೆಲಸ ಕಾರ್ಯಗಳಲ್ಲಿ ದೇವರು ಜೊತೆಗೆ ಇರುತ್ತಾನೆ. ಕಷ್ಟಗಳನ್ನು ಪರಿಹರಿಸಿ, ಮುನ್ನಡೆಸುತ್ತಾನೆ ಎಂಬ ಆತ್ಮವಿಶ್ವಾಸವು ಬದುಕಿಗೆ ಬಲ ನೀಡುತ್ತದೆ.

ಹಾಗೆಯೇ ನಿತ್ಯವೂ ಭಗವಂತನನ್ನು ಸ್ಮರಿಸು ವುದರಿಂದ ದೈನಂದಿನ ಚಟುವಟಿಕೆಗಳಲ್ಲಿ ಚೈತನ್ಯ ಹೆಚ್ಚುತ್ತದೆ. ಹೊಸ ಹುರುಪಿನಿಂದ ಕೆಲಸ ಕಾರ್ಯಗಳೆಲ್ಲವೂ ಸರಾಗವಾಗಿ ಸಾಗುತ್ತದೆ. ಭಗವಂತನ ಪ್ರಾರ್ಥನೆ, ಭಜನೆಗಳು ಆಂತರಿಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಚಿಂತೆಯನ್ನು ದೂರ ಮಾಡಿ ಚಿಂತನೆ, ಧ್ಯಾನಗಳಿಗೆ ದಾರಿ ದೀಪವಾಗುತ್ತದೆ. ಸನಾತನ ಧರ್ಮದಲ್ಲಿ ಪ್ರಾರ್ಥನೆ ಅಂದರೆ ದೇವರನ್ನು ಶುದ್ಧ ಮನಸ್ಸಿನಿಂದ ಸ್ಮರಣೆ ಮಾಡುವುದು. ಮಂತ್ರಗಳು, ವೇದ ಘೊಷಗಳು, ಸಹಸ್ರನಾಮಗಳು ಹೀಗೆ ಅನೇಕ ರೀತಿಯಲ್ಲಿ ಪ್ರಾರ್ಥನೆ ಕೈಗೊಳ್ಳುತ್ತಾರೆ. ಅದರ ಜೊತೆಗೆ ಕೀರ್ತನೆ, ಭಜನೆಗಳ ಮೂಲಕವೂ ಪ್ರಾರ್ಥಿಸುವುದನ್ನು ನಾವು ಕಾಣಬಹುದಾಗಿದೆ. ಬಹುಶಃ ಇದು ಸರಳ ಹಾಗೂ ಸುಲಭ ಮಾರ್ಗವಾಗಿದ್ದು, ಭಗವಂತನ ಸಾಮೀಪ್ಯವನ್ನು ಹೊಂದಬಹುದಾಗಿದೆ. ಯಾವುದೇ ಜಾತಿ, ವರ್ಗದ ಭೇದವಿಲ್ಲದೆ ಮನೆ-ಮನೆಗಳಲ್ಲಿ, ಅಥವಾ ದೇವಸ್ಥಾನ, ಭಜನಾ ಮಂದಿರ, ಗುಡಿಗಳಲ್ಲಿ ಮಕ್ಕಳು, ಹಿರಿಯರು, ಪುರುಷರು, ಸ್ತ್ರೀಯರೆಲ್ಲರೂ ಸೇರಿಕೊಂಡು ನಡೆಸುವ ಭಜನಾ ಸಂಕೀರ್ತನೆಗಳು ಕುಟುಂಬ, ಸಮಾಜವನ್ನು ಸತ್ಪಥದತ್ತ ಕೊಂಡೊಯ್ಯುತ್ತವೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 26 ವರ್ಷಗಳಿಂದ ಭಜನಾ ತರಬೇತಿ ಕಮ್ಮಟವನ್ನು ಪ್ರತಿವರ್ಷವೂ ನಡೆಸಿಕೊಂಡು ಬರಲಾಗುತ್ತಿದ್ದು, ಭಕ್ತಿಯ ಮೂಲಕ ಸಾಮಾಜಿಕ ಉತ್ಕರ್ಷ, ಪರಿವರ್ತನೆ, ಸಾಮರಸ್ಯದ ಜೀವನಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಭಜನಾ ಕಮ್ಮಟದ ಮೂಲ ಉದ್ದೇಶ ಜನರಲ್ಲಿನ ದುಶ್ಚಟಗಳನ್ನು ದೂರ ಮಾಡಿ ಮನಸ್ಸನ್ನು ಸನ್ಮಾರ್ಗದತ್ತ ಕೊಂಡೊಯ್ಯುವುದು. ಭಜನೆ ಮಾಡುವುದರಿಂದ ಮನೋಬಲ ದೃಢವಾಗುತ್ತದೆ. ಸಾತ್ವಿಕತೆ ಮೂಡುತ್ತದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಭಜನೆಯು ಸಾಮೂಹಿಕ ಸ್ವರೂಪವನ್ನು ಪಡೆದುಕೊಂಡಾಗ ಭಕ್ತಿ ಧನಾತ್ಮಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಭಜಕರ ಮೈಮನಗಳಲ್ಲಿ ಸಾತ್ವಿಕಭಾವ ಸ್ಪುರಿಸುತ್ತದೆ. ಎಲ್ಲರೂ ರಾಗ, ತಾಳದೊಂದಿಗೆ ಒಂದೇ ಲಯದಲ್ಲಿ ಹಾಡುತ್ತಾ, ಕುಣಿಯುತ್ತಾ, ನಲಿಯುತ್ತಾ ಇದ್ದರೆ ಅಲೌಕಿಕವಾದ ಅನುಭೂತಿ ಉಂಟಾಗುತ್ತದೆ.

ಧರ್ಮಸ್ಥಳ ಭಜನಾ ಪರಿಷತ್ತಿನ ನೇತೃತ್ವದಲ್ಲಿ ಒಂದು ವಾರ ನಡೆಯುವ ಭಜನಾ ತರಬೇತಿ ಕಮ್ಮಟದಲ್ಲಿ ಶಿಬಿರಾರ್ಥಿಗಳಿಗೆ ವಸತಿ, ಊಟ-ಉಪಾಹಾರಗಳೆಲ್ಲ ಉಚಿತವಾಗಿದ್ದು, ನಾಡಿನ ಖ್ಯಾತ ವಿದ್ವಾಂಸರಿಂದ ರಾಗ, ತಾಳ, ಲಯದೊಂದಿಗೆ ಭಜನೆ ಹಾಡು ಹೇಳುವ, ಶುಚಿತ್ವವನ್ನು ಕಾಪಾಡುವ, ಭಜನಾ ತಂಡ, ಮಂಡಳಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ, ಭಜನಾ ಮಂದಿರಗಳ ಮೂಲಕ ಸತ್ಯನಾರಾಯಣ ಪೂಜೆ, ಶನೈಶ್ಚರ ಪೂಜೆ, ಮುಂತಾದ ಧಾರ್ವಿುಕ ಕಾರ್ಯಕ್ರಮಗಳನ್ನು ನಡೆಸುವ, ಊರಿನ ಜಾತ್ರೆ, ಹಬ್ಬ ಹರಿದಿನಗಳಲ್ಲಿ ತಂಡದೊಂದಿಗೆ ಸ್ವಯಂಸೇವಕರಾಗಿ ಶ್ರಮಿಸುವ ಬಗ್ಗೆಯೂ ಅರಿವನ್ನು ಮೂಡಿಸಲಾಗುತ್ತದೆ. ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಹೋಗಿ ಅಲ್ಲಿ ತಮ್ಮ ಮಂಡಳಿಯ ಸದಸ್ಯರಿಗೆ ತಾವು ಕಲಿತಿರು ವಂಥದ್ದನ್ನು ಹೇಳಿಕೊಡುತ್ತಾರೆ. ಹೀಗೆ ಭಜನಾ ಸಂಸ್ಕೃತಿಯು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಾ ಭಕ್ತಿಯ ಮಾರ್ಗ ಇನ್ನಷ್ಟು ವ್ಯಾಪ್ತಿಯನ್ನು ಪಡೆದುಕೊಂಡು ಹೋಗಲು ಸಾಧ್ಯವಾಗುತ್ತದೆ.

ಹೆಚ್ಚು ಖುಷಿ ಕೊಡುವ ಸಂಗತಿಯೆಂದರೆ ಇಂದಿನ ದಿನಗಳಲ್ಲಿ ಗಣಪತಿ ವಿಸರ್ಜನೆ ಮತ್ತು ಇತರ ಶೋಭಾಯಾತ್ರೆಗಳಲ್ಲಿ ಅನೇಕ ಭಜನಾ ತಂಡಗಳು ಕುಣಿತ ಭಜನೆಯನ್ನು ಮಾಡುತ್ತಾ ಸಾಗುತ್ತವೆ. ಅಂತಹ ಒಳ್ಳೆಯ ಕಾರ್ಯವನ್ನು ಮಾಡುತ್ತಿರುವ ಎಲ್ಲರನ್ನೂ ಅಭಿನಂದಿಸಲೇಬೇಕು. ಯಾಕೆಂದರೆ ಭಜನಾ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧಾರ್ವಿುಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕಾರ್ಯ ಅವರೆಲ್ಲರಿಂದ ಆಗುತ್ತಿದೆ. ಇನ್ನು ಕೆಲವರು ತಮ್ಮ ಮನೆಯ ಗೃಹ ಪ್ರವೇಶ, ಸತ್ಯನಾರಾಯಣ ಪೂಜೆ ಮುಂತಾದ ಕಾರ್ಯಕ್ರಮಗಳಲ್ಲೂ ಭಜನಾ ತಂಡದಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದು ಕೂಡ ಉತ್ತಮ ಬೆಳವಣಿಗೆಯಾಗಿದೆ. ಮುಖ್ಯ ಸಂಗತಿಯೆಂದರೆ ಈಗ ಕಾರ್ಯನಿರ್ವಹಿಸುತ್ತಿರುವ ಭಜನಾ ಮಂಡಳಿಗಳು ಕೇವಲ ಭಜನಾ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಊರಿನ ದೇವಸ್ಥಾನ, ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನಗಳನ್ನು ಮಾಡುತ್ತವೆ.

ಅಶಕ್ತರಿಗೆ ಸಹಾಯ ಹಸ್ತ ಚಾಚುತ್ತಾರೆ. ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುತ್ತಾರೆ. ಹೀಗೆ ಸಾರ್ವಜನಿಕ ವಲಯದಲ್ಲಿಯೂ ತಮ್ಮ ಸೇವಾಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಭಜನಾ ಮಂಡಳಿಯ ಅನೇಕ ಕಾರ್ಯಕರ್ತರು ಮದ್ಯಪಾನ, ಧೂಮಪಾನ, ಗುಟ್ಕಾ ಮುಂತಾದ ದುರಭ್ಯಾಸಗಳನ್ನು ತ್ಯಜಿಸಿದ್ದಾರೆ. ಕಾರ್ಯಕ್ರಮಗಳಿಗೆ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಬರುತ್ತಾರೆ. ಮನೆಯನ್ನು ಒಪ್ಪ ಓರಣವಾಗಿಟ್ಟು, ಕುಟುಂಬದೊಂದಿಗೆ ಒಳ್ಳೆಯ ಬದುಕನ್ನು ನಡೆಸುತ್ತಾರೆ. ಯಾವುದೇ ಶುಭ ಕಾರ್ಯಕ್ರಮಗಳು ನಡೆಯುವುದು ಪ್ರಾರ್ಥನೆಯ ಮೂಲಕವೇ. ಶಾಲಾ-ಕಾಲೇಜುಗಳ ದಿನಚರಿ, ಕಾರ್ಯಕ್ರಮಗಳ ಮೊದಲಿಗೆ ರಾಷ್ಟ್ರಗೀತೆ, ನಾಡಗೀತೆ ಹಾಗೂ ಪ್ರಾರ್ಥನಾ ಗೀತೆಗಳನ್ನೂ ಹಾಡಲಾಗುತ್ತದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಪ್ರಾರ್ಥನಾ ಸಭೆಗಳಲ್ಲಿ ರಘುಪತಿ ರಾಘವ ರಾಜಾರಾಮ, ಪತಿತ ಪಾವನ ಸೀತಾರಾಮ ಎಂಬ ಭಜನಾ ಗೀತೆಯನ್ನು ಹಾಡುತ್ತಿದ್ದರು.

ಸಂತ ತುಳಸೀದಾಸರು ರಚಿಸಿದ ಈ ಗೀತೆಗೆ ಗಾಂಧೀಜಿಯವರು ತಮ್ಮ ಸಾಮಾಜಿಕ-ಆಧ್ಯಾತ್ಮಿಕ ಸಂದೇಶಕ್ಕಾಗಿ ಕೆಲವು ಸಾಲುಗಳನ್ನು ಸೇರಿಸಿದರು. ಸತ್ಯ, ಶಾಂತಿ, ಏಕತೆ ಮತ್ತು ಭಕ್ತಿ, ಏಕತೆ ಮತ್ತು ಸರ್ವಧರ್ಮ ಸಮಾನತೆಯ ಸಂದೇಶ ನೀಡಿದರು. ಈ ಭಜನಾ ಹಾಡು ಜನರಲ್ಲಿ ಅಹಿಂಸಾ, ಸತ್ಯ, ಸಮಾನತೆ ಮತ್ತು ಶಾಂತಿ ಭಾವನೆಗಳನ್ನು ಉತ್ತೇಜಿಸುತ್ತದೆ. ಇಂದಿಗೂ ದೇವಸ್ಥಾನಗಳಲ್ಲಿ ಸಭೆಗಳಲ್ಲಿ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಈ ಗೀತೆಯನ್ನು ಬಳಸಲಾಗುತ್ತದೆ. ಈ ಪದ್ಯವು ರಾಮನನ್ನು ಧರ್ಮ ಮತ್ತು ನೀತಿಯ ಪ್ರತಿರೂಪವಾಗಿ ವಿವರಿಸುತ್ತದೆ. ಗಾಂಧೀಜಿಯವರು ಈಶ್ವರ್, ಅಲ್ಲಾ ತೇರೆ ನಾಮ್ ಸಬ್ ಕೋ ಸಮ್ಮತಿ ದೇ ಭಗವಾನ್ ಎಂಬ ಸಾಲನ್ನು ಸೇರಿಸಿ, ಹಿಂದೂ-ಮುಸ್ಲಿಂ ಏಕತೆ ಮತ್ತು ಸರ್ವಧರ್ಮ ಸಮಾನತೆಯ ಸಂದೇಶ ನೀಡಿದರು.

ಬದಲಾವಣೆಗಳು ಕನಸು ಕಾಣುವುದರಿಂದ ಆಗುವುದಿಲ್ಲ. ಕನಸುಗಳೆಲ್ಲ ಸ್ಥಿರವಲ್ಲ. ಅದರಿಂದ ಏನೇನೂ ಪ್ರಯೋಜನವಾಗಲಾರದು. ಆದರೆ ದೃಢವಾದ ನಂಬಿಕೆಯಿಂದ ಬದಲಾವಣೆ ಸಾಧ್ಯವಾಗುವಂಥದ್ದು. ನಂಬಿಕೆಗೆ ಪ್ರಾರ್ಥನೆಯೇ ಮೂಲಾಧಾರ. ಜೀವನದ ದಿಕ್ಕನ್ನು ಬದಲಾಯಿಸುವ ಶಕ್ತಿ ನಂಬಿಕೆಗೆ ಇದೆ. ನಡೆ-ನುಡಿಗಳಲ್ಲಿ, ಜೀವನಶೈಲಿಯಲ್ಲಿ ಬದಲಾವಣೆ ತರುತ್ತದೆ. ಅಂತಹ ನಂಬಿಕೆಗಳು ನಮ್ಮದಾಗಬೇಕು. ಅದಕ್ಕಾಗಿ ಪ್ರಾರ್ಥನೆಗಳು ನಮ್ಮ ನಿತ್ಯ ಚಟುವಟಿಕೆಗಳಲ್ಲಿ ಮೊದಲಾಗಬೇಕು. ಅದಕ್ಕಾಗಿಯೇ ನಮ್ಮ ಹಿರಿಯರು ಬೆಳಗ್ಗೆ ನಿದ್ದೆಯಿಂದ ಎದ್ದೇಳುವಾಗ ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ | ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ || ಎಂದು ಹೇಳುತ್ತಾ ದೇವತೆಗಳ ಆಶೀರ್ವಾದವನ್ನು ಪಡೆಯುತ್ತಿದ್ದರು. ಉಲ್ಲಾಸದಿಂದ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರೊಂದಿಗೆ ಸಂತೋಷದಿಂದ ಇರುತ್ತಿದ್ದರು. ಅಂತಹ ಸಂತೋಷದ ಜೀವನ ನಮ್ಮದಾಗಲಿ ಎಂದು ಪ್ರಾರ್ಥಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net