

ಭಗವದ್ಗೀತೆಯ ಹದಿನೈದನೆಯ ಅಧ್ಯಾಯದ ಹದಿನೆಂಟನೆಯ ಶ್ಲೋಕದಲ್ಲಿ ‘ಅತೋಠಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ’ ಎಂದಿದ್ದಾನೆ ಶ್ರೀಕೃಷ್ಣ ಪರಮಾತ್ಮ. ನಾಶವಾಗುವ ಜಡವರ್ಗಕ್ಕೆ ಅತೀತನಾಗಿಯೂ, ಅವಿನಾಶಿ ಜೀವಾತ್ಮನಿಗಿಂತ ಉತ್ತಮನಾಗಿಯೂ ಇರುವ ತಾನು ಲೋಕದಲ್ಲಿ ಮತ್ತು ವೇದದಲ್ಲಿ ಪುರುಷೋತ್ತಮನೆಂದು ಪ್ರಸಿದ್ಧನಾಗಿದ್ದೇನೆ ಎಂದು ಆ ಶ್ಲೋಕದಲ್ಲಿ ಭಗವಂತನ ಮಾತಿನ ಇಂಗಿತ. ಇಲ್ಲಿ ಬಳಕೆಯಾಗಿರುವ ಪ್ರಥಿತ ಶಬ್ದವನ್ನು ಗಮನಿಸಬೇಕು. ಸ್ಥೂಲವಾಗಿ ಇದರ ಅರ್ಥ ಪ್ರಸಿದ್ಧ ಅಥವಾ ಪ್ರಖ್ಯಾತ ಎಂದೇ. ಆದರೆ ಸೂಕ್ಷ್ಮರಾಗಿ ನೋಡಿದರೆ Celebrity ಎಂಬ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಷ್ಟೇ ಅಲ್ಲ ಭಾರತೀಯ ಭಾಷೆಗಳಲ್ಲೆಲ್ಲ ಪರ್ಯಾಯ ಪದ ಆಗಬಲ್ಲ ಅರ್ಹತೆ ಇದಕ್ಕಿದೆ!
ಹೇಗೆ? ಸಂಸ್ಕೃತದಲ್ಲಿ ‘ಪ್ರಥಾ’ ಅಂದರೆ ಹರಡುವಿಕೆ, ವಿಸ್ತರಿಸುವಿಕೆ ಎಂದರ್ಥ. ಏನು ಹರಡುವುದು? ಕೀರ್ತಿ, ಖ್ಯಾತಿ, ಪ್ರಸಿದ್ಧಿ. ‘ಪ್ರಥಾ’ದಿಂದಲೇ ಬಂದಿರುವುದು ‘ಪ್ರಥಿತ’ ಗುಣವಾಚಕ ನಾಮಪದ. ಹರಡಿದ, ವಿಸ್ತರಿಸಿದ, ಬಹಿರಂಗವಾಗಿ ಘೊಷಣೆಯಾದ, ಬಹುಮಂದಿಗೆ ತಿಳಿದಿರುವ, ಹೆಸರುವಾಸಿಯಾದ, ಪ್ರಖ್ಯಾತವಾದ... ಮುಂತಾದ ಅರ್ಥಗಳು. ಸೆಲೆಬ್ರಿಟಿಗಳ ಲಕ್ಷಣಗಳೇ ತಾನೆ ಇವೆಲ್ಲವೂ? ‘ಪ್ರಥಿತ ಖ್ಯಾತ ವಿತ್ತ ವಿಜ್ಞಾತ ವಿಶ್ರುತ...’ ಎನ್ನುತ್ತದೆ ಅಮರಕೋಶ. ಸಂಸ್ಕೃತ ವಾಜ್ಱಯದಲ್ಲಿ ಪ್ರಥಿತ ಅಲ್ಲಲ್ಲಿ ಬಳಕೆಯಾಗಿದೆ: ‘ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ...’ ಎಂದು ವಿಷ್ಣುಸಹಸ್ರನಾಮ ಸ್ತೋತ್ರದಲ್ಲಿ. ಪ್ರಥಿತ ಎನ್ನುವುದು ವಿಷ್ಣುವಿನ ಸಾವಿರ ಹೆಸರುಗಳಲ್ಲೊಂದು. ‘ರಾಮೇತಿ ಪ್ರಥಿತೋ ಲೋಕೇ ಗುಣವಾನ್ ಸತ್ಯವಾನ್ ಶುಚಿಃ|’ ಎಂದು ವಾಲ್ಮೀಕೀ ರಾಮಾಯಣದ ಅರಣ್ಯಕಾಂಡದ ಶ್ಲೋಕವೊಂದರಲ್ಲಿ, ಸೀತೆಯು ರಾವಣನಲ್ಲಿ ಶ್ರೀರಾಮನ ಬಗ್ಗೆ ಹೇಳುವಾಗ. ಇನ್ನೊಂದು ಸುಭಾಷಿತದಲ್ಲಿ ‘ಸರ್ವತ್ರ ಗುಣವಾನ್ದೇಶೇ ಶೋಭತೇ ಪ್ರಥಿತೋ ನರಃ|
ಮಣಿಮೂಧಿರ್° ಗಲೇ ಬಾಹೌ ಪಾದಪೀಠೇಠಪಿ ಶೋಭತೇ’ ಎಂದು. ಸದ್ಗುಣಗಳುಳ್ಳವನು, ಪ್ರಥಿತನಾದವನು ಎಲ್ಲ ದೇಶಗಳಲ್ಲಿಯೂ ಶೋಭಿಸುತ್ತಾನೆ- ಅಮೂಲ್ಯವಾದ ಮಣಿಯು ತಲೆ, ಕುತ್ತಿಗೆ, ಭುಜ, ಕಾಲು- ಎಲ್ಲಿ ಧರಿಸಿದರೂ ಶೋಭಿಸುವಂತೆ. ಸಂಸ್ಕೃತದ ಇದೇ ಪ್ರಥಿತ ಶಬ್ದವನ್ನು ಕನ್ನಡ ಕವಿಗಳೂ ಇದೇ ಅರ್ಥದಲ್ಲಿ ಬಳಸಿರುವ ಉದಾಹರಣೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ಸಿಗುತ್ತವೆ. ‘ಆ ಪರಮೇಶ್ವರಂ ಪ್ರಥಿತಷೋಡಶತೀರ್ಥಕರಂ... ಇಂತೆಂದು ಬೆಸಸಿದಂ...’ (ಶಾಂತಿ ಪುರಾಣ), ‘ರಥಚೋದಕರೊಂದೆಸೆಯೊಳ್ ಪೃಥಾಸುತ ಪ್ರಥಿತಪೃಥುಗದಾಪ್ರಹರಣೆಯಿಂ...’ (ಗದಾಯುದ್ಧ), ‘ಭೂಭುವನಪ್ರಥಿತಶಯನಂ ಶ್ರೀಭೂತಿ ಸುಭೂತಿವೆಸರ ಸುತನಂ ಪಡೆದಂ...’ (ಪಂಪಭಾರತ), ‘ಹರಿ ನಿನ್ನ ಮಹತ್ತ್ವಂ ಪ್ರಥಿತಮಗಾಧಮುನ್ನತೋನ್ನತಮಲ್ತೇ...’ (ಜಗನ್ನಾಥ ವಿಜಯ), ‘ಪೃಥಿವಿ ನೆನದಪಕಾರ ಲೋಕ| ಪ್ರಥಿತವಾಯಿತು ಸಾಕು ಬದುಕಲಿ| ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ...’ (ಕುಮಾರವ್ಯಾಸ ಭಾರತ).
ಆದ್ದರಿಂದ ಪ್ರಥಿತ ಪದವನ್ನೇ Celebrity ಎಂಬರ್ಥದಲ್ಲಿ ಬಳಸಬಹುದು. ಹಾಗೆಯೇ ಓದುಗರು ಸೂಚಿಸಿರುವ ಕೆಲವು ಆಯ್ಕೆಗಳೂ ಚೆನ್ನಾಗಿವೆ. ‘ಜನಮಾನ್ಯ’ (ರತ್ನಾ ಹೆಗಡೆ, ಪ್ರಕಾಶ ಬಿ, ವಸುಪ್ರದಾ ಮಂಜುನಾಥ್, ಅನ್ನಪೂರ್ಣಾ ಹೇಮಚಂದ್ರ); ‘ಖ್ಯಾತನಾಮ’ (ಭ.ನಿಂ.ಗೋಪಿನಾಥ್, ಅನಂತರಾಮಯ್ಯ ಅಮೃತಹಳ್ಳಿ, ಅಂಬುಜ ಕುಲಕರ್ಣಿ, ಹೇಮಂತ ಸಂಪಗಾಂವಕರ, ಸವಿತಾ ಮೈಸೂರು, ವಿಲಾಸ ಹುದ್ದಾರ, ಕಡೂರು ದೇವೇಂದ್ರ, ಎಸ್.ಎನ್. ಮಂಜುಳಾ, ಶಂಕರನಾರಾಯಣ ಕಾರಂತ, ಪಂಪಣ್ಣ ಗೌಡ, ನರೇಂದ್ರನಾಥ ಎಚ್.ಎಂ ಮುಂತಾದವರು); ಅಚ್ಚಕನ್ನಡದ ಪ್ರಯತ್ನಗಳೆಂಬ ದೃಷ್ಟಿಯಿಂದ ‘ಮಿಂಚಾಳು’ (ಚಂದ್ರಶೇಖರ ಮೈಸೂರು), ‘ಮೆಚ್ಚೋಜ’ (ಲಕ್ಷ್ಮೀನಾರಾಯಣಯ್ಯ ಜಿ.ಕೆ) ಮತ್ತು ‘ಮೆರೆವಣಿಗ’ (ಪ್ರೇಮದಾಸ ಅಡ್ಯಂತಾಯ) ಸಹ ಅರ್ಥಪೂರ್ಣವಾಗಿವೆ. ಆಲಂಕಾರಿಕವಾಗಿ ‘ಉತ್ಸವಮೂರ್ತಿ’ (ಸೂಚಿಸಿದವರು: ಗುರನಗೌಡ ಪಾಟೀಲ, ಎಚ್.ಎಸ್ ಸಜ್ಜನ್, ಎ.ಬಿ ಪ್ರಕಾಶ್) ಸರಿ ಎನಿಸಬಹುದಾದರೂ ಸಾಮಾನ್ಯ ಬಳಕೆಗೆ ಸೂಕ್ತವೆನಿಸದೇನೋ.
ಅಷ್ಟಾಗಿ, ಇಂಗ್ಲಿಷ್ನಲ್ಲಿ Celebrity ಪದದ ಚರಿತ್ರೆಯೇನು? ಅದು ಸಂಭ್ರಮಾಚರಣೆ ಎಂಬರ್ಥದ ಹಳೆಯ ಫ್ರೆಂಚ್ celebrit‚ ಪದದಿಂದ ಬಂದದ್ದು. ಪ್ರಾಚೀನ ಗ್ರೀಕರು ಕ್ರೀಡಾಪಂದ್ಯಗಳಲ್ಲಿ ಜಯಶಾಲಿಯಾದವರನ್ನು ಹಾಡಿ ಹೊಗಳಿ ಗೌರವಿಸಿ ಸ್ವಾಗತಿಸುತ್ತಿದ್ದರು. ಪ್ರಾಚೀನ ರೋಮನ್ನರು ರಂಗಭೂಮಿ ನಟರನ್ನು, ಗೂಳಿಕಾಳಗವೇ ಮುಂತಾದ ಸಾಹಸಗಳಲ್ಲಿ ನಿಷ್ಣಾತರನ್ನೂ ಮೆರೆಯಿಸುತ್ತಿದ್ದರಂತೆ. ಹಾಗೆ ಸುಮಾರು 16ನೆಯ ಶತಮಾನದವರೆಗೂ ‘ಪ್ರಖ್ಯಾತಿ ಗಳಿಸಿರುವ ಸ್ಥಿತಿ, ಆ ಸಡಗರದ ಆಚರಣೆ’ ಎಂಬರ್ಥದಲ್ಲಷ್ಟೇ Celebrity ಪದ ಬಳಕೆಯಾಗುತ್ತಿದ್ದದ್ದು. ಪ್ರಖ್ಯಾತ ವ್ಯಕ್ತಿಗಳನ್ನು Celebrity ಎನ್ನಲಾರಂಭಿಸಿದ್ದು 19ನೆಯ ಶತಮಾನದಿಂದ ಈಚೆಗೆ. ಮುಖ್ಯವಾಗಿ ವೃತ್ತಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಇದಕ್ಕೆ ಕಾರಣ. ಕ್ರೀಡೆ ಮತ್ತು ಮನೋರಂಜನಾ ಕ್ಷೇತ್ರಗಳಲ್ಲಿ ಹೆಸರಾದವರೇ ಹೆಚ್ಚಾಗಿ ಸೆಲೆಬ್ರಿಟಿ ಎನಿಸಿಕೊಂಡರು. ಅವರ ಭೇಟಿಗಾಗಿ ಮುಗಿಬೀಳುವುದು, ಹಸ್ತಾಕ್ಷರ ಪಡೆಯುವುದು ಸಾಮಾನ್ಯ ಜನರ ಗೀಳಾಯಿತು.
ಈಗಂತೂ ಸಾಮಾಜಿಕ ಮಾಧ್ಯಮದಿಂದಾಗಿ ಎಂಥೆಂಥವರೂ- ಕೆಲವೊಮ್ಮೆ ಯೇನ ಕೇನ ಪ್ರಕಾರೇಣ ಪ್ರಸಿದ್ಧರಾಗಬಯಸುವವರೂ- ರಾತ್ರಿ ಕಳೆದು ಬೆಳಗಾಗುವುದರೊಳಗೆ ಎನ್ನುವಂತೆ ಸೆಲೆಬ್ರಿಟಿಗಳಾಗುತ್ತಾರೆ. ಇದು ಅಷ್ಟೇನೂ ಒಳ್ಳೆಯ ಬೆಳವಣಿಗೆಯಲ್ಲ. ಅರ್ಹತೆ, ಯೋಗ್ಯತೆ, ಉಪಯುಕ್ತತೆಗಳನ್ನೇ ಪ್ರಥಮ ಮಾನದಂಡವಾಗಿರಿಸಿ, ಶೋಕಿಗಿಂತ ಶ್ರಮಜೀವನಕ್ಕೆ ಪ್ರಾಮುಖ್ಯ ಕೊಟ್ಟು ಪ್ರಥಿತರನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿ. ದೇಶದ ಗಡಿಗಳನ್ನು ಕಾಯುವ ಸೈನಿಕರು, ಮನುಕುಲಕ್ಕೆ ಒಳ್ಳೆಯದನ್ನು ಸಂಶೋಧಿಸುವ ವಿಜ್ಞಾನಿಗಳು, ವೈದ್ಯರು, ಶಿಕ್ಷಕರು, ಸಮಾಜಸೇವಕರು ನಿಜವಾದ ಸೆಲೆಬ್ರಿಟಿಗಳಾಗಬೇಕು. ಏನಂತೀರಿ?
ಕಳೆದಸಲ ಕೇಳಿದ್ದ ಎರಡನೆಯ ಪದ Hats off ಇದು ಪಾಶ್ಚಾತ್ಯ ದೇಶಗಳಲ್ಲಿ ಶಿಷ್ಟಾಚಾರದ ಒಂದು ಕ್ರಮ. ಯಾರಿಗಾದರೂ ಗೌರವ ಸೂಚಿಸುವಾಗ, ನಾವು ಧರಿಸಿರುವ ಹ್ಯಾಟ್ (ಟೋಪಿ)ಅನ್ನು ಕ್ಷಣಕಾಲ ತಲೆಮೇಲಿಂದ ತೆಗೆಯುವುದು. ಅಕ್ಷರಶಃ ತೆಗೆಯಬೇಕಂತನೂ ಇಲ್ಲ, ಹ್ಯಾಟ್ನ ತುದಿಯನ್ನು ಮುಟ್ಟಿಕೊಂಡರೂ ಸಾಕು, ಆದ್ದರಿಂದಲೇ I tip my hat to someone ಎಂಬ ಸಮಾನಾರ್ಥಕ ನುಡಿಗಟ್ಟು ಸಹ ಇರುವುದು. ಹ್ಯಾಟ್ ಧರಿಸದಿದ್ದವರೂ ಬಾಯಿಮಾತಿನಲ್ಲಿ ಹೇಳಿ ಗೌರವ ತೋರಬಹುದು. ಈಗ ಗೌರವ ಸೂಚಿಸುವುದಕ್ಕಿಂತ ಮೆಚ್ಚುಗೆ ವ್ಯಕ್ತಪಡಿಸುವ ಸಂದರ್ಭದಲ್ಲೇ ಹೆಚ್ಚು ಬಳಕೆ. ಗೌರವ ಅಥವಾ ಮೆಚ್ಚುಗೆ ಸೂಚಿಸುವುದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ರೀತಿಗಳಿವೆ. ಅದಕ್ಕೆ ತಕ್ಕಂತೆ ಭಾರತೀಯ ಭಾಷೆಗಳಲ್ಲಿ ಬೇಕಾದಷ್ಟು ಪದ/ಪದಪುಂಜಗಳೂ ಇವೆ. Hats off ಅನ್ನು ಪದಶಃ ತರ್ಜುಮೆ ಮಾಡಬೇಕಾಗಿಲ್ಲ. ಇಂಗ್ಲಿಷ್ಗೇ ಅಂಟಿಕೊಳ್ಳಬೇಕಾಗಿಯೂ ಇಲ್ಲ. ಈ ದೃಷ್ಟಿಯಿಂದ ‘ತಲೆಬಾಗು’ (ಶೈಲಾ ಬಾಲಕೃಷ್ಣ , ಜಯಲಕ್ಷ್ಮಿ ಭಟ್, ಸಿ.ಎ ರುದ್ರಗೌಡರ, ಪಿ.ಜೆ ರಾಘವೇಂದ್ರ, ಲಕ್ಷ್ಮಣ ರೆಡ್ಡಿ, ಎಚ್.ಎಸ್ ಸಜ್ಜನ್, ವಿ. ವಿಜಯೇಂದ್ರ ರಾವ್, ಸತ್ಯ ಹರಿಹಳ್ಳಿ, ಸಂಜೀವ ಜೋಶಿ, ಕೆ.ಸಿ ಭಾಗ್ಯಶ್ರೀ, ಗಿರಿಜಾ ಲಕ್ಷ್ಮಿಕಾಂತ್, ರಮೇಶ ಬಾಟಿ, ಜಿ. ನಾರಾಯಣ ರಾವ್, ಶಾಮ ಪಾರೆ, ಸಿದ್ದನಗೌಡ ಮುದಿಗೌಡ್ರ ಮುಂತಾದವರು) ಒಳ್ಳೆಯ ಆಯ್ಕೆ. ಸಂಸ್ಕೃತದ ‘ನತಮಸ್ತಕ’ (ಮನೋಹರ ರಾಯಚೂರು, ಕೇಶವಚಂದ್ರ ಕೊಂಬ್ರಾಜೆ, ಡಾ.ದಯಾನಂದ ಭಟ್ಟ) ಸಹ ಅದೇ ಅರ್ಥ.
ಮೆಚ್ಚುಗೆ ವ್ಯಕ್ತಪಡಿಸುವುದರಲ್ಲೇ ಸಂಭ್ರಮವನ್ನೂ ತೋರಬೇಕಿದ್ದರೆ- ಭಲೇ, ಭಳಿರೇ, ಭೇಷ್, ಶಹಬ್ಬಾಸ್ ರೀತಿಯ ಉದ್ಗಾರಗಳನ್ನೂ ಮಾತಿನಲ್ಲಷ್ಟೇ ಅಲ್ಲ ಶಿಷ್ಟ ಬರವಣಿಗೆಯಲ್ಲೂ ಬಳಸಬಹುದು. ಇವುಗಳನ್ನೇ Hats off ಅಭಿವ್ಯಕ್ತಿಗೆ ಒಳ್ಳೆಯ ಪರ್ಯಾಯವೆಂದು ಸೂಚಿಸಿದ್ದಾರೆ ಜಗದಂಬಾ ಬೆಂಗಳೂರು, ಯಮನಪ್ಪ ಕೊಟ್ನಿಕಲ್, ಕೆ.ಎಲ್ ಕಾರಂತ, ಸಿಹಿಮೊಗೆ ರಮೇಶ್, ಅಕ್ಷತ್ ಕುಮಾರ್, ಸುರೇಂದ್ರ ಪೈ, ಜಿ.ಎಚ್ ಸಂಕಪ್ಪ, ವಸಂತಲಕ್ಷ್ಮಿ ರಾಮಚಂದ್ರ, ಶಶಿಕಲಾ ನರೇಂದ್ರನಾಥ್, ಎ.ಪಿ ಉಡುಪ ಮುಂತಾದವರು. ಅಂದಹಾಗೆ ಭಲೇ-ಭಳಿರೇಗಳನ್ನು ಕನ್ನಡ ಕವಿಗಳೂ ಧಾರಾಳವಾಗಿ ಬಳಸಿದ್ದಾರೆ. ‘ಭಲೇಭಲೇ ಗಾರುಡಿ... ಬರುತಿಹ ನೋಡಿ...’, ‘ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿಭಳಿರೇ ಹನುಮಂತ...’ ಹಾಡುಗಳನ್ನು ನೆನಪಿಸಿಕೊಳ್ಳಿ. ಗೌರವ ಅಥವಾ ಮೆಚ್ಚುಗೆಯನ್ನು ‘ಶರಣು’ ಎನ್ನುವುದರ ಮೂಲಕವೂ ತಿಳಿಸಬಹುದೆಂದು ದೇವರಾಜ ಗಾಂವ್ಕರ್, ಮಂಜುನಾಥ ಡಿ.ಎಸ್, ಕೃಷ್ಣ ಬರ್ವೆ ಇವರ ಅಭಿಪ್ರಾಯ. ‘ಅಡ್ಡಬಿದ್ದೆ!’ ಎಂದು ಕೂಡ ಹೇಳಬಹುದೆನ್ನುತ್ತಾರೆ ಜಿ.ಸುಬ್ರಹ್ಮಣ್ಯ. ಅದೂ ನಿಜವೇ. ಕನ್ನಡದಲ್ಲಿ ಮಾತನಾಡುವಾಗ, ಬರೆಯುವಾಗ Hats off ರೀತಿಯ ಇಂಗ್ಲಿಷ್ ಒಲವಿಗಿಂತ ಕನ್ನಡ ಮಣ್ಣಿನ ಘಮವನ್ನು ಸೂಸುವ ಪದಗಳ ಬಳಕೆಯೇ ಒಳ್ಳೆಯದಲ್ಲವೇ? ಇಂಗ್ಲಿಷ್ಗೆ
ಬದಲಾಗಿ ಹೆಚ್ಚುಹೆಚ್ಚು ಕನ್ನಡ ಅಥವಾ ಇತರ ಭಾರತೀಯ ಭಾಷಾಮೂಲದ ಪದಗಳನ್ನೇ ಬಳಸುವಂತೆ ಉತ್ತೇಜನ, ಸ್ಪೂರ್ತಿ ಸಿಗಬೇಕು ಎಂಬುದು ಈ ಅಂಕಣದ ಆಶಯ. ಕೊನೆಯದಾಗಿ Thesis. ತುಂಬ ಹಿಂದೆ ಇಂಗ್ಲಿಷ್ನಲ್ಲಿ ಇದು ಸಂಗೀತ/ಗಾಯನ ಕ್ಷೇತ್ರದಲ್ಲಷ್ಟೇ ಬಳಕೆಯಾಗುತ್ತಿದ್ದ, ‘ಸ್ವರಶೈಲಿ ಬಳಸದ ಸರಳ ಉಚ್ಚಾರ’ ಎಂಬ ಅರ್ಥವಿದ್ದ ಪದವಂತೆ. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ಬಂದ Thesis ಇಂಗ್ಲಿಷ್ನಲ್ಲೂ ಅದೇ ರೂಪವನ್ನು ಉಳಿಸಿಕೊಂಡಿತ್ತು. ಕ್ರಮೇಣ ತರ್ಕಶಾಸ್ತ್ರದಲ್ಲಿ ಯಾವುದೇ ಸಿದ್ಧಾಂತವನ್ನು ಮಂಡಿಸುವುದಕ್ಕೆ Thesis ಎನ್ನಲಾಯಿತು. ವಿಶ್ವವಿದ್ಯಾಲಯದಿಂದ ಪದವಿ ಪ್ರಮಾಣಪತ್ರಕ್ಕೋಸ್ಕರ ಮಂಡಿಸಲಾಗುವ ಪ್ರೌಢ ಪ್ರಬಂಧ ಎಂಬ ಅರ್ಥ ಬಂದಿದ್ದು 1650ರಿಂದೀಚೆಗೆ. ಈಗ ಹೆಚ್ಚಾಗಿ ಅದೇ ಅರ್ಥದಲ್ಲಿ ಬಳಕೆಯಾಗುತ್ತದೆ. ಅಂತಹ ಪ್ರಬಂಧದ ಹಿಂದೆ ಸಾಕಷ್ಟು ಸಂಶೋಧನೆಯೂ ಇರುತ್ತದೆ, ಮತ್ತು ಬರೀ ಪ್ರಬಂಧವೆಂದರೆ ಸಾಮಾನ್ಯವಾದ Essay ಎಂದಾಗುತ್ತದೆ. ಆದ್ದರಿಂದ Thesis ಅಂದರೆ ‘ಸಂಶೋಧನಾ ಪ್ರಬಂಧ’ (ಸೀತಾ ವ್ಯಾಸಮುದ್ರಿ, ರೇವತಿ ಜೋಶಿ, ವಿಲಾಸಿನಿ ಭಟ್, ಎಸ್.ಕೆ ಶಿವಪ್ಪ ಮುಂತಾದವರ ಆಯ್ಕೆ). ಅದನ್ನೇ ಚಿಕ್ಕದಾಗಿ-ಚೊಕ್ಕವಾಗಿ ‘ಶೋಧಪ್ರಬಂಧ’ ಎನ್ನಬಹುದೆಂದು ಸೂಚಿಸಿದವರು.
ಪ್ರಭುಪ್ರಸಾದ್ ನಡುತೋಟ, ಸಾಕಲಚಂದ್ ಬಾಫನಾ, ಲತಾ ಸಂತೋಷಕುಮಾರ್, ಆನಂದ ಗೋಡಸೆ, ಪದ್ಮಾ ಬದರಿನಾಥ್, ನಿತ್ಯಾನಂದ ಬ್ರಹ್ಮಾವರ, ನಾಗಮಣಿ ಎನ್ ಶಾಂಪುರ್ ಮುಂತಾದವರು. ಮತ್ತೂ ಮೊಟಕುಗೊಳಿಸಿ ‘ಸಂಪ್ರಬಂಧ’ ಆಗಬಹುದು ಎಂದವರು: ಡಾ.ಜಿ.ಎಸ್. ವೇಣುಗೋಪಾಲ್, ಚಂದ್ರಿಕಾ ಹೆಗಡೆ, ಮತ್ತು ಯಶೋದಾ ಎಂ ಗೋಪಿ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ‘ನಿಬಂಧ’ ಎಂಬ ಪದಕ್ಕೆ ಕೊಟ್ಟಿರುವ ಆರೇಳು ಅರ್ಥಗಳ ಪೈಕಿ ‘ಒಂದು ನಿರ್ದಿಷ್ಟ ವಿಷಯದ ಮೇಲೆ ಬರೆಯುವ ಗ್ರಂಥ; ಪದವಿಗಾಗಿ ಬರೆಯುವ ಸಂಶೋಧನಾತ್ಮಕ ಬರೆವಣಿಗೆ ಸಹ ಇದೆ’, ಆದ್ದರಿಂದ ಥೀಸಿಸ್ಗೆ ಪರ್ಯಾಯವಾಗಿ ‘ನಿಬಂಧ’ ಬಳಸಬಹುದೆಂದು ಸೂಚಿಸಿದವರು: ಕೆ.ವಿ ಶ್ರೀನಿವಾಸ ಮೂರ್ತಿ, ಎಂ.ಕೆ ಬದರಿನಾಥ್, ವೈಭವ ಬಾಡಕರ, ಹೆಮ್ಮಿಗೆ ಗೋಪಾಲಕೃಷ್ಣ ಮುಂತಾದವರು. ಎಲ್ಲರಿಗೂ ಅಭಿನಂದನೆಗಳು.
1. CCTV: ಕ್ಲೋಸ್ಡ್ ಸರ್ಕ್ಯುಟ್ ಟೆಲಿವಿಷನ್ ಎಂದು ಪೂರ್ಣರೂಪ. ಅಪರಾಧ ತನಿಖೆಯಲ್ಲಿ ಅತ್ಯುಪಯುಕ್ತ. ಈ ಸಲಕರಣೆಯನ್ನು ಕನ್ನಡದಲ್ಲಿ ಏನನ್ನೋಣ?
2. Flash cards: ಕಲಿಕೆಗೆ, ಕಂಠಪಾಠ ಮಾಡುವುದಕ್ಕೆ ನೆರವಾಗುವ ಕಾಗದದ/ರಟ್ಟಿನ ತುಂಡುಗಳು. ಇವುಗಳಿಗೊಂದು ಚಂದದ ಕನ್ನಡ ಪದ ಬೇಕು.
3. Seat Belt: ವಾಹನ ಚಲಾಯಿಸುವಾಗ ಹಾಕಿಕೊಳ್ಳುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು; ಕನ್ನಡ ಪದ ಕಂಡುಕೊಳ್ಳುವುದು ಸ್ವಾಭಿಮಾನ ದೃಷ್ಟಿಯಿಂದ ಒಳ್ಳೆಯದು!
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945