

ಮೊನ್ನೆ ಸಂಜಿ ಮುಂದ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ- ‘ರ್ರಿ...ಅನ್ನಂಗ ನಿಂಬದ H-index ಎಷ್ಟ ಅದ?’ ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ, ಒಂದು ನಾ ಈ ಎಚ್-ಇಂಡೆಕ್ಸ್ ಬಗ್ಗೆ ಕೇಳಿದ್ದಿಲ್ಲಾ, ಮ್ಯಾಲೆ ನಂಗ ಹಿಂಗ ಗಂಡಂದರ ಪರಫಾರ್ಮನ್ಸ್ ಮೇಜರ್ ಮಾಡಲಿಕ್ಕೆ ಇಂಡೆಕ್ಸ್ ಅದ ಅಂತನೂ ಗೊತ್ತಿರಲಿಲ್ಲ. ಅಲ್ಲಾ ಎಚ್-ಇಂಡೆಕ್ಸ್ ಅಂದಕೂಡ್ಲೆ ನಂಗ ಇದ related to husband, ಗಂಡಾ ಅನ್ನೋ ಪ್ರಾಣಿ ಸಂಸಾರದ ಸುಳಿ ಒಳಗ ಸಿಕ್ಕ ಎಷ್ಟ ಹುಚ್ಚ ಆಗ್ಯಾನ ಅಂತ ಮೇಜರ್ ಮಾಡಲಿಕ್ಕೆ ಇರೋ ಇಂಡೆಕ್ಸ್ ಇರಬೇಕ ಅಂತ ಸಹಜವಾಗಿ ಅನಸ್ತ. ಇನ್ನ ನಂಗ ಗೊತ್ತಿಲ್ಲಾ ಅಂತ ಹೇಳಿ ಅಕಿ ಕಡೆ ಯಾಕ ಅಸಂಯ್ಯ ಮಾಡಿಸ್ಗೊಳೊದ ಅಂತ ದೊಡ್ದಿಸ್ತನಾ ಮಾಡಿ ನಾ, ‘ನನ್ನ ಎಚ್-ಇಂಡೆಕ್ಸ್ ತೊಗೊಂಡ ನೀ ಏನ್ ಮಾಡ್ತಿ, ಇರಬೇಕ ಒಂದ ಎಪ್ಪತ್ತ ಎಂಭತ್ತ’ ಅಂತ ಅಂದ ಬಿಟ್ಟೆ.
‘ರ್ರಿ... ಏನೇನರ ಹುಚ್ಚುಚಾಕಾರ ಮಾತಾಡ್ತೀರಲಾ, ಐನಸ್ಟೀನಂದ 44 ಇತ್ತಂತ, ನೀವೇನ ಅವನಕಿಂತಾ ಶಾಣ್ಯಾರಿನ...’ ಅಂತ ಅಂದ್ಲು. ನಂಗ ಇಕಿ ಏನ ಇವತ್ತ ಐನಸ್ಟೀನ್ ಲೇವೆಲ್ ಮಾತಾಡ್ಲಿಕತ್ತಳಲಾ ಎಲ್ಲರ ಇಕಿ ಮೈಯಾಗ ಯಾವದರ ವಿಜ್ಞಾನಿ ಬಂದಾನೇನ ಅಂತ ಅನಸಲಿಕತ್ತ. ಅಲ್ಲಾ ಹಂಗ ಇಕಿಗೆ pH valueನ ಟಫ್ ಆಗ್ತದ ಅಂತ ಕಲಿಬೇಕಾರ ಕಾಮರ್ಸ್ ತೊಗೊಂಡೊಕಿ ಇವತ್ತ ಹಿಂಗ್ಯಾಕ ಸೈಂಟಿಫಿಕ್ ಆಗಿ ಮಾತಾಡ್ಲಿಕತ್ತಾಳ ಅಂತ ತಲಿ ಕೆಟ್ಟ, ‘ಏ...ಎಲ್ಲಿ ಎಚ್-ಇಂಡೆಕ್ಸ್ ತಂದ ತಲಿ ತಿಂತಿಲೇ... ನಿಂಗ್ಯಾರ ಹಿಂತಾವೇಲ್ಲಾ ಹೇಳಿ ಕೊಟ್ಟರು’ ಅಂತ ಬೈದ ಮ್ಯಾಲೆ ಹೇಳಿದ್ಲು. ಅಕಿ ಕಜೀನ್ ಅಮೆರಿಕದಿಂದ ಫೋನ್ ಮಾಡಿ ತನ್ನ ಗಂಡನ ಬಗ್ಗೆ ಬಕೇಟಗಟ್ಲೆ ಹೊಗಳಿ ಲಾಸ್ಟಿಗೆ "you know my husband's h index is 27...its highest in his company' ಅಂತ ಹೇಳಿದ್ಲಂತ. ಇನ್ನ ಅಕಿ ಮಾತ ಕೇಳಿ ಇಕಿ ಎಲ್ಲಾ ಗಂಡಂದರಿಗೂ ಎಚ್-ಇಂಡೆಕ್ಸ್ ಇರ್ತದ ಅಂತ ತಿಳ್ಕೊಂಡ ನನ್ನ ಕೇಳಿದ್ಲು. ಅಲ್ಲಾ ಹಿಂತಾ ಹೆಂಡಂದರ ಇದ್ದರ ಎಲ್ಲಾ ಗಂಡಂದರಿಗೂ ಹುಚ್ಚ ಹಿಡದ ಅದಕ್ಕೊಂದ ಇಂಡೆಕ್ಸ್ ಬರೋದ ಅಂತೂ ಗ್ಯಾರಂಟಿ ಬಿಡ್ರಿ.
ನಾ ಆಮ್ಯಾಲೆ ತಲಿಕೆಡಸಿಕೊಂಡ ಈ ಸುಡಗಾಡ ಎಚ್-ಇಂಡೆಕ್ಸ್ ಅಂದರೇನೂ ಅಂತ ಗೂಗಲ್ ಸರ್ಚ್ ಮಾಡಿದ ಮ್ಯಾಲೆ ಗೊತ್ತಾತ ಇದ ರಿಸರ್ಚ್ ಮಾಡೋ ಸೈಂಟಿಸ್ಟ್ ಕಮ್ ಗಂಡಂದರಿಗಿಷ್ಟ ಸಂಬಂಧಪಟ್ಟಿದ್ದ ಅಂತ. ಒಬ್ಬ ಸೈಂಟಿಸ್ಟ್ ರಿಸರ್ಚ್ ಮಾಡಿ ಎಷ್ಟ ಪೇಪರ್ ಪ್ರೆಸೆಂಟ್ ಮಾಡ್ಯಾನ ಮತ್ತ ಅದರಾಗ ಅವನ ಆ ರಿಸರ್ಚ್ ಪೇಪರ್ ಎಷ್ಟ ಮಂದಿ ಮುಂದ ತಮ್ಮ ರಿಸರ್ಚ್ ಒಳಗ ಎಷ್ಟ ಸಲಾ ರೆಫರ್ ಮಾಡ್ಯಾರ ಅನ್ನೊದರ ಮ್ಯಾಲೆ ಆ ವಿಜ್ಞಾನಿದ ಎಚ್-ಇಂಡೆಕ್ಸ್ ಲೆಕ್ಕ ಮಾಡ್ತಾರ. ಆಡಭಾಷಾದಾಗ ಹೇಳ್ಬೇಕಂದರ ರಿಸರ್ಚ್ ಮಾಡೋರ ಶಾಣ್ಯಾತನಾ, ಅವರ ಬರದ ರಿಸರ್ಚ್ ಜರ್ನಲ್ ಎಷ್ಟ ಫೇಮಸ್ ಆಗೇದ ಅನ್ನೋದ ಗೊತ್ತ ಆಗೋದ ಈ ಎಚ್-ಇಂಡೆಕ್ಸನಿಂದ ಅನ್ನರಿ. ಈ ಇಂಡೆಕ್ಸ್ ಕಂಡ ಹಿಡದ ವಿಜ್ಞಾನಿ J.E.Hirsch. ಹಿಂಗಾಗಿ ಇದಕ್ಕ Hirsch index or Hirsch number ಅಂತನೂ ಕರಿತಾರ. ನಾ ನೋಡಿದರ ಎಚ್ ಫಾರ್ husband ಇಲ್ಲಾ ಎಚ್ ಫಾರ್ ಹುಚ್ಚಾ ಇರಬೇಕ ಅಂತ ತಿಳ್ಕೊಂಡಿದ್ದೆ.
ಇನ್ನ ಇಕಿ ಕಸೀನ್ ಏನ ಅಮೆರಿಕದಿಂದ ಫೋನ್ ಮಾಡಿದ್ಲಲಾ ಅಕಿ ಗಂಡ ಒಂದ ಕಂಪನಿ ಒಳಗ ಸೀನಿಯರ್ ಸೈಂಟಿಸ್ಟ್ ಇದ್ದಾನ. ಅಂವಾ ರಿಸರ್ಚ್ ಪೇಪರ್ಸ್ ಪಬ್ಲಿಶ್ ಮಾಡ್ಯಾನ. ಹಿಂಗಾಗಿ ಅವಂದ ಎಚ್-ಇಂಡೆಕ್ಸ್ ಅದ. ಆ ಮಗಾ ಏನೋ ದೊಡ್ಡ ಸಾಧನೆ ಮಾಡೇನಿ ಅಂತ ದೊಡ್ಡಿಸ್ತನಾ ಮಾಡ್ಲಿಕ್ಕೆ ತನ್ನ ಹೆಂಡ್ತಿ ಮುಂದ ಹೇಳ್ಯಾನ. ಇನ್ನ ಅಕಿ ಎಷ್ಟ ಅಂದರು ಟಿಪಿಕಲ್ ಇಂಡಿಯನ್ ಹೆಂಡ್ತಿ, ಹಿಂಗಾಗಿ ತನ್ನ ಗಂಡನ ಎಚ್-ಇಂಡೆಕ್ಸ್ ಇಷ್ಟ ಅಂತ ಅಖಂಡ ಭಾರತಕ್ಕೆಲ್ಲ ಫೋನ್ ಮಾಡಿ ಹೇಳ್ಯಾಳ. ಅಕಿ ಮಾತ ಕೇಳಿ ನಮ್ಮ ಮನಿ ಸೈಂಟಿಸ್ಟ್ ಇದ ಜಗತ್ತಿನಾಗ ಎಲ್ಲಾ ಗಂಡಂದರಿಗೂ ಇರ್ತದ ಅಂತ ತಿಳ್ಕೊಂಡ ನನ್ನ ಎಚ್-ಇಂಡೆಕ್ಸ್ ಎಷ್ಟು ಅಂತ ಕೇಳಿದ್ಲು ಇಷ್ಟ.
ನಂಗ ಅನಸ್ತ ಆ ನನ್ನ ಹೆಂಡ್ತಿ ಕಜೀನನ ಗಂಡಂದ ರಿಸರ್ಚ್ ಎಚ್-ಇಂಡೆಕ್ಸಕಿಂತಾ ಅವನ ಹೆಂಡ್ತಿ ಏನ ಇಡಿ ಇಂಡಿಯಾದಾಗಿನ ಮಂದಿಗೆ ಫೋನ್ ಮಾಡಿ ಹೇಳಿದ್ಲಲಾ ಅದರ ಎಚ್-ಇಂಡೆಕ್ಸ್ ಜಾಸ್ತಿ ಆಗಿರ್ತದ ಅಂತ. ಅಲ್ಲಾ ಹೆಂಡಂದರ ಬಾಯಾಗ ಮಾತ ಎಲ್ಲೆ ನಿಲ್ತಾವ...ಇನ್ನ ನೋಡ್ರಿ, ನಮ್ಮ ಬಳಗದವರೆಲ್ಲ ಅಕಿ ಗಂಡಂದ ಇಷ್ಟ ಎಚ್-ಇಂಡೆಕ್ಸ್ ಅಂತ ಒಬ್ಬೊರಿಗೊಬ್ಬರ ಹೇಳಿ ಹೇಳಿ ಅಕಿದ citation (ಉಲ್ಲೇಖ) ಜಾಸ್ತಿ ಆಗಲಿಲ್ಲಾಂದರ ಹೇಳ್ರಿ ನನಗ.
ನಾ ಆಮ್ಯಾಲೆ ಸಮಾಧಾನಲೇ ನನ್ನ ಹೆಂಡ್ತಿಗೆ ಎಚ್-ಇಂಡೆಕ್ಸ್ ಅಂದರ ನಾರ್ಮಲಿ ನಾರ್ಮಲ್ ಗಂಡಂದರಿಗೆ ಇರಂಗಿಲ್ಲ. ಹಿಂಗಾಗಿ ನ್ಯಾಚುರಲಿ ನಂಗ ಇಲ್ಲಾ ಅಂತ ತಲಿ ಒಡ್ಕೊಂಡ ಹೇಳಿದರೂ ಅಕಿಗೇನ ತಿಳಿಲಿಲ್ಲಾ. ನಾ ಹೇಳಿದ್ದಿಲ್ಲಾ ಹಿಂತಾವೇಲ್ಲಾ ಅಕಿಗೆ ಹೇಳಿದರ ಉಣಕಲ್ ಕೇರಿ ಒಳಗ ಹುಣಸಿ ಹಣ್ಣ ತೊಳದಂಗ ಅಂತ. ಏನಿಲ್ಲದ ಅಕಿದ ಟಏ valueನ ಭಾಳ ಕಡಮಿ ಹಂತಾದರಾಗ ಇದೇಲ್ಲ ತಿಳಿಬೇಕ.
ಇನ್ನ ಅಕಿಗೆ ತಿಳಿಯೊ ಹಂಗ ಹೇಳಲಿಲ್ಲಾಂದರ ಅಕಿ ನನ್ನ ತಲಿ ತಿಂದ ಖರೇನ ಹುಚ್ಚ ಹಿಡಸ್ತಾಳಂತ ನಾ ಅಕಿಗೆ ಬಾಜುಕ ಕೂಡಿಸ್ಗೊಂಡ- ‘ನೋಡ ಈಗ ನೀ ವಾಟ್ಸ್ಆಪ್ ಒಳಗ ಒಂದ ಏನರ ಹೊಸಾ ಸುದ್ದಿ ಬರದ ಊರ ಮಂದಿಗೆ ಮೆಸೇಜ್ ಕಳಸ್ತಿ. ಅದನ್ನ ಊರ ಮಂದಿ ಮತ್ತ ನೂರ ಮಂದಿಗೆ ಫಾರ್ವರ್ಡ್ ಮಾಡ್ತಾರ. ಹಿಂಗ ಅದ ಒಂದ ಮೊಬೈಲ್ನಿಂದ ಮತ್ತೊಂದ ಮೊಬೈಲಗೆ ವೈರಲ್ ಆಗಕೋತ ಹೋಗ್ತದ. ಇನ್ನ ನೀ ಬರದ ಮೆಸೇಜ್ ಕೆಳಗ ನೀ ಅಂತೂ ಅಗದಿ ನೀನ ಕಂಡ ಹಿಡದವರಗತೆ ‘ಪ್ರೇರಣಾ ಪ್ರಶಾಂತ ಆಡೂರ’ ಅಂತ ಬರದ ಕಳಿಸಿರ್ತಿ. ಸೋ ಅದ ಎಲ್ಲಾ ಕಡೆ ವೈರಲ್ ಆಗಿ ನಿನ್ನ ಹೆಸರ ವೈರಲ್ ಆಗ್ತದಲಾ. ಹಂಗ ಯಾರರ ರಿಸರ್ಚ್ ಮಾಡಿದ್ದ ಪೇಪರ್ ಮತ್ತೊಬ್ಬರ ರೆಫರ್ ಮಾಡಿ ತಮ್ಮ ರಿಸರ್ಚ್ ಪೇಪರ್ ಒಳಗ ಅವರ ಹೆಸರ ಉಲ್ಲೇಖ ಮಾಡಿದರ ಅವರ ಎಚ್-ಇಂಡೆಕ್ಸ್ ಜಾಸ್ತಿ ಆಗಕೋತ ಹೋಗ್ತದ’ ಅಂತ ಗುದ್ದಾಡಿ ಆಡಭಾಷೆ ಒಳಗ ನಮ್ಮಕಿಗೆ ವಿಜ್ಞಾನದ ಎಚ್-ಇಂಡೆಕ್ಸ್ ತಿಳಿಸಿ ಹೇಳಿದೆ.
ಅಕಿ ನಾ ಹೇಳಿದ್ದಕ್ಕೆಲ್ಲಾ ಎಲ್ಲ ತಿಳದವರಗತೆ ಗೋಣ ಹಾಕಿ ಕಡಿಕೆ- ‘ಅಲ್ಲರಿ ನಾ ವಾಟ್ಸ್ಆಪ್ ಒಳಗ ಎಷ್ಟ ರಿಸರ್ಚ್ ಮಾಡಿ ಮಾಡಿ ವಿಷಯ ಬರದ ಕಳಸ್ತೇನಿ. ಹಂಗ ಅದಕ್ಕೂ ಏನರ ಎಚ್-ಇಂಡೆಕ್ಸ್ ಕೊಡ್ತಿದ್ದರ ನನ್ನ ಇಂಡೆಕ್ಸ್ ಐನಸ್ಟಿನ್ ಏನ ನ್ಯೂಟನ್ಕಿಂತಾ ಜಾಸ್ತಿ ಇರ್ತಿತ್ತ’ ಅಂತ ಅಂದ ಬಿಟ್ಟಳು. ಹಂಗ ನಂಗ ಅಕಿ ಹೇಳಿದ್ದ ಖರೇನ ಅನಸ್ತ. ಅಲ್ಲಾ ಅಕಿ ಹೆಂತಿಂತಾ ಅವಿಷ್ಕಾರ ಮಾಡಿ ವಾಟ್ಸ್ ಆಪ್ ಮಾಡ್ತಾಳ ಅಂತ ತಿಳ್ಕೊಂಡಿರಿ ನೀವು. ಓದಿದರ ಗಾಬರಿ ಆಗ್ತೀರಿ, ಆದರೂ ಒಂದ ಸಲಾ ಓದಿ ಬಿಡ್ರಿ, ನಿಮಗೂ ಖರೆ ಅನಿಸಿ ನೀವು ಮುಂದ ಮಂದಿಗೆ ಫಾರ್ವರ್ಡ್ ಮಾಡಬಹುದು. ‘ಎರಡ-ಮೂರ ಸರತೆ ಚಹಾ ಮಳ್ಳಿಸಿದ್ದ ಚಹಾಪುಡಿ ಕರಿಬೇವ ಗಿಡಕ್ಕ ಹಾಕಿದರ ಅದು ಛಲೋ ಚಿಗಿತದ’. ‘ಡೇಟ್ ಬಾರ್ ಆಗಿದ್ದ ಮೆಡಿಸಿನ್ಸ್ ಹೊರಗ ಚಲ್ಲಲಾರದ ಗುಲಾಬಿ ಗಿಡಕ್ಕ ಹಾಕಿದರ ಹೂ ಜಾಸ್ತಿ ಬಿಡ್ತಾವ. ‘ಹಂಗ ಡೇಟ್ ಬಾರ್ ಆಗಿದ್ದ ಗುಡ್ನೈಟ್ ರಿಫಿಲ್ ಉಪಯೋಗ ಮಾಡಿದರ ಗುಂಗಾಡ ಜಾಸ್ತಿ ಆಗ್ತಾವ’. ‘ಕಾರ್ನ್ ಹಾಕಿ ದೋಸಿ ಮಾಡಿದರ ದೋಸಿ ಹೊತ್ತಂಗಿಲ್ಲಾ’. ಹಿಂತಾ ನೂರಾ ಎಂಟ ರಿಸರ್ಚ್ ಮಾಡಿ ವಾಟ್ಸ್ಆಪ್ನಾಗ ಕಳಸ್ತಿರ್ತಾಳ. ಅಲ್ಲಾ ಮತ್ತ ನೀವೆಲ್ಲರ ‘ಇವೆಲ್ಲ ನಿನ್ನ ಹೆಂಡತಿ ಕಂಡ ಹಿಡದದ್ದಲ್ಲಾ, ನಮಗ ಮೊದ್ಲ ಗೊತ್ತಿತ್ತ’ ಅಂತ ನನ್ನ ಹೆಂಡತಿ ಮ್ಯಾಲೆ plagiarism ಕೃತಿಚೌರ್ಯದ ಕೇಸ ಹಾಕಿಗಿಕಿರಿ ಮತ್ತ... ನಾ ಹಂಗ ಸುಮ್ಮನ ಹೇಳಿದೆ.
ಇವತ್ತ ಹಿಂಗ ವಾಟ್ಸ್ಆಪ್ ಒಳಗ ಜನಾ ಯಾರೋ ಬರದದ್ದನ್ನ ಹುಚ್ಚುಚಾಕಾರ ಫಾರ್ವರ್ಡ್ ಮಾಡ್ತಿರ್ತಾರಲಾ ಹಂಗ ಅದಕ್ಕೂ ಏನರ ಒಂದ ಇಂಡೆಕ್ಸ್ ಇದ್ದರ ಹೆಂಗ ಅಂತ ಒಂದ ಸಲಾ ವಿಚಾರ ಮಾಡ್ರಿ. ನೋಡ್ರಿ ಹಂಗೇನರ ನಿಮಗ ಇವತ್ತಿನ ಪ್ರಹಸನ ಲೈಕ್ ಆದರ ನಾಲ್ಕ ಮಂದಿಗೆ ಉಲ್ಲೇಖ (citation) ಮಾಡಿ ನಂದೊಂದ ಚೂರ ಎಚ್-ಇಂಡೆಕ್ಸ್ ಜಾಸ್ತಿ ಮಾಡಿ ಪುಣ್ಯಾ ಕಟಗೋರಿ.
(ಲೇಖಕರು ಹಾಸ್ಯ ಬರಹಗಾರರು)