

‘ಇಲ್ಲ ನಮ್ಮವ್ವಾ ಖರೇನ... ನೋಡೇರ ನೋಡ ಬಾ... ನಿಂಗ ಏಪ್ರಿಲ್ ಫೂಲ್ ಮಾಡೊ ಜರೂರತ್ ಏನ ಅದ’ ಅಂತ ಅಂದ ಬಿಟ್ಲು.
ತೊಗೊ ಮುಂಜ-ಮುಂಜಾನೆ ಅತ್ತಿ ಸೊಸಿದ ಶುರು ಆತ. ‘ಹೌದ, ನಾ ಫೂಲ್ ಇದ್ದೇನಿ, ನಂಗ್ಯಾಕ ಏಪ್ರಿಲ್ ಫೂಲ್ ಮಾಡೋ ಜರೂರತ್ ಅದ ಅಂತ ಅನ್ನಲಿಕತ್ತೀರಿ ತೊಗೊರಿ. ಯಾವಾಗ ನಿಮ್ಮ ಬಣ್ಣ-ಬಣ್ಣದ ಮಾತ ಕೇಳಿ ನಿಮ್ಮ ಮೊನೋಕ್ರೋಮ್ ಮಗನ ಲಗ್ನಾ ಮಾಡ್ಕೊಂಡೇ ಅವತ್ತ ನಾ ಫೂಲ್ ಆಗೇನಿ’ ಅಂತ ಶುರು ಹಚಗೊಂಡ್ಲು. ಕಡಿಕೆ ನಮ್ಮವ್ವನ ಹೋಗ್ಲಿ ಬಿಡ ಮುಂಜಾನೆ ಎದ್ದ ಎಲ್ಲೆ ಇಕಿ ಬಾಯಿ ಹತ್ತೋದ, ಅಕಿ ಗಂಡನ್ನ ಆರ್ಟಿಕಲ್ ಬೇಕಾರ ಓದ್ಲಿ, ಬ್ಯಾಡಾರ ಬಿಡ್ಲಿ ಅಂತ ಸುಮ್ಮನಾದ್ಲು.
ಹಂಗ ಇತ್ತೀಚೆಗೆ ಏಪ್ರಿಲ್ ಫೂಲ್ ಮಾಡೋದ ಕಡಮಿ ಆಗೇದ. ಆದರ ನಮ್ಮ ಕಾಲದಾಗ ಇದರ ಹಾವಳಿ ಭಾಳ ಇತ್ತ. ದೊಡ್ದೊರಿಂದ ಹಿಡದ ಸಣ್ಣೋರ ತನಕಾ ಎಲ್ಲಾರೂ ಇಡಿ ದಿವಸ ಏಪ್ರಿಲ್ ಫೂಲ್ ಮಾಡೋರ. ಎಲ್ಲ ಮಷ್ಕೀರಿಗೆ ಮತ್ತ, ಸಿರಿಯಸ್ ಆಗಿ ಏನ ಅಲ್ಲ ಖರೆ ಆದರೂ ಯಾರರ ಫೂಲ್ ಆದರ, ‘ಏಪ್ರಿಲ್ ಫೂಲ್ ಹೆಂಗ ಮಾಡಿದೆ...’ ಅಂತ ಕಾಡಸೋರ. ಹಂಗ ಮದ್ವಿ ಆಗಿ ಹೊಸ್ತಾಗಿ ಬಂದಾಗ ನನ್ನ ಹೆಂಡ್ತಿನೂ ಭಾರಿ ಖುಷಿಲೇ ಒಂದೆರಡ ವರ್ಷ ಸಣ್ಣ-ಸಣ್ಣ ವಿಷಯಕ್ಕ ಏಪ್ರಿಲ್ ಫೂಲ್ ಮಾಡ್ತಿದ್ಲು, ಆಮ್ಯಾಲೆ ನಾ ತಲಿಕೆಟ್ಟ, ‘ನಾ ಒಮ್ಮೆ ನಿನ್ನ ಲಗ್ನ ಆಗೇನಿ ಅಂದರ ವರ್ಷಾನಗಟ್ಟಲೇ, ಜೀವನಪರ್ಯಂತ ಫೂಲ್ ಇದ್ದಂಗ. ನೀ ಸುಮ್ಮನ ಮತ್ತ ಸಪರೇಟ್ ಏಪ್ರಿಲ್ ಒಂದಕ್ಕ ಫೂಲ್ ಮಾಡ್ಲಿಕ್ಕೆ ಹೋಗಬ್ಯಾಡ’ ಅಂತ ಗಪ್ ಕೂಡಿಸಿದೆ.
ಒಂದ ಸರತೆ ನಮ್ಮ ತಂಗಿ ನನ್ನ ಹೆಂಡ್ತಿಗೆ ಏಪ್ರಿಲ್ ಫೂಲ್ ಮಾಡ್ಲಿಕ್ಕೆ, ಏಪ್ರಿಲ್ ಒಂದಕ್ಕ ವಧು-ವರರ ಕೇಂದ್ರದಾಗ ‘ಕನ್ಯಾ ಕೊಡುವುದಿದೆ’ ಲಿಸ್ಟ್ ಒಳಗ ಅಕಿ ಕಂಟ್ಯಾಕ್ಟ್ ನಂಬರ್ ಬರದ ಹೆಸರ ಹಚ್ಚಿ ಬಿಟ್ಲು. ಹಂಗ ನಮ್ಮ ತಂಗಿ ಅಲ್ಲೇ ಕೆಲಸಾ ಮಾಡ್ತಿದ್ಲು. ಅವತ್ತ ಕನ್ಯಾ ಬೇಕ ಅಂತ ಬಂದೋರಿಗೆಲ್ಲ ‘ಇವರ ಮನ್ಯಾಗ ಕನ್ಯಾ ಛಲೋ ಅದ ನೋಡ್ರಿ’ ಅಂತ ನನ್ನ ಹೆಂಡ್ತಿ ಕುಂಡ್ಲಿ, ಫೋಟೋ ತೋರಿಸಿ ನಂಬರ ಕೊಟ್ಲು. ತೊಗೋ ಕೇಳ್ತಿರೇನ, ಏನಿಲ್ಲದ ಜನಾ ಕನ್ಯಾ ಕಂಡೇನಿಲ್ಲೋ ಅನ್ನೊರಂಗ ಮಾಡ್ತಿದ್ದರು. ಅವರೆಲ್ಲ ನನ್ನ ಹೆಂಡ್ತಿಗೆ ಫೋನ್ ಹೊಡದಿದ್ದ ಹೊಡದಿದ್ದ. ನನ್ನ ಹೆಂಡ್ತಿಗೆ ‘ನಮ್ಮ ಮನ್ಯಾಗ ಯಾವದು ಕನ್ಯಾ ಇಲ್ಲಾ’ ಅಂತ ಹೇಳಿಹೇಳಿ ಸಾಕಾತ. ಕಡಿಕೆ ತಲಿಕೆಟ್ಟ,
‘ಹೌದ ನಮ್ಮ ಮನ್ಯಾಗ ನಾನ ಕನ್ಯಾ, ಆದರ ನಂಗ ಮೂರ ವರ್ಷದ ಮಗಳ ಇದ್ದಾಳ, ಮ್ಯಾಲೆ ನಂದ ಲಗ್ನ ಆಗೇದ’ ಅಂತ ಹೇಳಿ ಫೋನ್ ಕಟ್ ಮಾಡ್ಲಿಕತ್ಲು. ಯಾವಾಗ ರಾತ್ರಿ ನಮ್ಮ ತಂಗಿ ಫೋನ್ ಮಾಡಿ ‘ಏಪ್ರಿಲ್ ಫೂಲ್ ಹೆಂಗ ಮಾಡಿದೆ’ ಅಂತ ಅಂದ್ಲು ಆವಾಗ ಇಕಿಗೆ ಪಿತ್ತ ನೆತ್ತಿಗೇರತ. ಹಂಗ ಮರದಿವಸ ಅಕಿ ನನ್ನ ಹೆಂಡ್ತಿ ಹೆಸರ ಕನ್ಯಾದ ಲಿಸ್ಟನಾಗಿಂದ ಡಿಲೀಟ್ ಮಾಡಿದ್ಲ ಖರೆ ಆದರ ನನ್ನ ಹೆಂಡ್ತಿ ಮುಂದ ಅಕಿ ಜೊತಿ ಜಗಳಾಡಿ ಒಂದ ತಿಂಗಳ ಚಾಳಿ ಟು ಬಿಟ್ಲು. ಖರೇ ಹೇಳ್ಬೇಕಂದರ ಇದರಾಗ ಫೂಲ್ ಆದೋರ ನನ್ನ ಹೆಂಡ್ತಿ ಕನ್ಯಾ ಅಂತ ತಿಳ್ಕೊಂಡ ನಮ್ಮನಿಗೆ ಫೋನ್ ಮಾಡಿದವರ ಆ ಮಾತ ಬ್ಯಾರೆ.
ಇನ್ನ ಕಲಿಬೇಕಾರ ದೋಸ್ತರೊಳಗ ಏಪ್ರಿಲ್ ಫೂಲ್ ಮಾಡೋದ, ಆಜುಬಾಜುದವರ ಮಾಡೋದ ಅಗದಿ ಕಾಮನ್ ಇತ್ತ. ಕಾಲೇಜನಾಗ ದೋಸ್ತರ ‘ಏ... ನಾಳೆ ಫಸ್ಟ್ ಡೇ ಫಸ್ಟ್ ಶೋ... ಅಮೃತ ಟಾಕೀಜ್, ನಾ ಟಿಕೇಟ್ ತಗಿಸಿರ್ತೆನಿ ನೀ ಬಂದ ಬಿಡ’ ಅಂತ ಕರಿತಿದ್ದರ, ನಾ ಹುಚ್ಚರಂಗ ಇಂಗ್ಲಿಷ್ ಪಿಕ್ಚರ್ ಆಶಾಕ್ಕ ಇಆಖ ಇಂದ ಬಸ್ ಹತ್ತಿ ವಿದ್ಯಾನಗರಕ್ಕ ಹೋಗ್ತಿದ್ದೆ, ಅಲ್ಲೇ ನೋಡಿದರ ಯಾ ಮಕ್ಕಳು ಇರ್ತಿದ್ದಿಲ್ಲಾ. ಆಮ್ಯಾಲೆ ಸಂಜಿಗೆ ಸಿಕ್ಕಾಗ ‘ಹೆಂಗ ಏಪ್ರಿಲ್ ಫೂಲ್ ಮಾಡಿದ್ವಿ...’ ಅಂತಿದ್ದರು.
ಇನ್ನ ಸಣ್ಣಂವ ಇದ್ದಾಗ ಓಣ್ಯಾಗಿನ ದೋಸ್ತರ- ‘ಲೇ ರೇಶನ್ ಅಂಗಡಿ ಒಳಗ ಚಿಮಣಿ ಎಣ್ಣಿ ಕೊಡ್ಲಿಕತ್ತಾರ’ ಅಂತ ಹೇಳೋರ. ನಾ ಐದ ಲೀಟರ್ ಪ್ಲಾ್ಯಸ್ಟಿಕ್ ಕ್ಯಾನ ಹಿಡ್ಕೊಂಡ ಹಲಗಿ ಬಾರಿಸಿದಂಗ ಬಾರಿಸ್ಗೋತ ಬೆಂಡಿಗೇರಿ ಓಣಿ ತನಕ ಓಡಿ ಹೋಗಿ ನೋಡಿದರ ಅಲ್ಲೆ ಚಿಮಣಿ ಎಣ್ಣಿ ಗಾಡಿನ ಬಂದಿರ್ತಿದ್ದಿಲ್ಲಾ. ವಾಪಸ್ ಬಂದ ಮ್ಯಾಲೆ ‘ಏಪ್ರಿಲ್ ಫೂಲ್’ ಅಂತಿದ್ದರು. ನಮ್ಮ ದೋಸ್ತರ ಹೋಗ್ಲಿ ನಮ್ಮಪ್ಪ ಸಹಿತ ಏಪ್ರಿಲ್ ಫೂಲ್ ಎಂಜಾಯ್ ಮಾಡ್ತಿದ್ದಾ. ನಮ್ಮವ್ವಗ ಸುಮ್ಮ-ಸುಮ್ಮನ ‘ಏ, ನಳಾ ಬಂತ’ ಅಂತ ಮನಿಗೆ ಬಂದ ಹೇಳೋಂವಾ. ಆವಾಗ ಸರ್ಕಾರಿ ನಳದ್ದ ನೀರ ತುಂಬತಿದ್ವಿ, ನಮ್ಮವ್ವ ಹೊರಗ ಹೋಗಿ ನೋಡಲಾರದ ಗಂಡನ ಮಾತ ನಂಬಿ ಇದ್ದ ಎರಡ ಕೊಡಾ ಕುಡಿಯೋ ನೀರ ಭಡಾ ಭಡಾ ಬಚ್ಚಲಕ್ಕ ಸುರುವಿ, ಗಲಬರಸಿ ಕೊಡಾ ತಿಕ್ಕೊಂಡ ಸರ್ಕಾರಿ ನಳಕ್ಕ ಹೋಗೊಕಿ, ಅಲ್ಲೇ ನೋಡಿದರ ನಳಾನ ಬಂದಿರ್ತಿದ್ದಿಲ್ಲಾ.
ಕಡಿಕೆ ನಮ್ಮಪ್ಪಗ ಬೈದ ಬಾಜು ಮನಿಯವರ ಕಡೆ ಕುಡಿಯೊ ನೀರ ಕಡಾ ಇಸ್ಗೊಂಡ ಬರತಿದ್ಲು.
ಒಂದ ಸರತೆ ನಮ್ಮವ್ವಗ ‘ನಿಮ್ಮ ಕೆರಳ್ಳಿ ಅಬಚಿ ಹೋದ್ಲಂತ ನೋಡ’ ಅಂತ ಹೇಳಿದಾ. ಪಾಪ ನಮ್ಮವ್ವ ಒಂದ ಹತ್ತ ಸರತೆ ಮರಗಿ ಬಾಜು ಮನಿ ಗಿರಜಕ್ಕನ ಕರದ ನಮಗ ಬರೇ ನೀರ ಇಷ್ಟ ತೊಗೊ ಅಂತ ನೀರ ಹಾಕಿಸಿಕೊಂಡಿದ್ಲು. ಅಕಿದ ನೀರ ಆದ ಮ್ಯಾಲೆ ‘ಏಪ್ರಿಲ್ ಫೂಲ್’ ಅಂತ ಹೇಳಿ ಬೈಸ್ಗೊಂಡಾ ಆ ಮಾತ ಬ್ಯಾರೆ. ಒಂದ ಮಜಾ ಅಂದರ ಆ ನಮ್ಮವ್ವನ ಅಬಚಿ ಕರೆಕ್ಟ್ ಹತ್ತ ವರ್ಷ ಬಿಟ್ಟ ಏಪ್ರಿಲ್ ಒಂದಕ್ಕ ಸತ್ತಳು. ಅಲ್ಲಾ ನಮ್ಮಪ್ಪಾ ಅಕಿಗೆ ಇದ್ದಾಗ ಕೊಂದದ್ದಕ್ಕ ಅಕಿ ಆಯುಷ್ಯ ಮತ್ತ ಹತ್ತ ವರ್ಷ ಜಾಸ್ತಿ ಆಗಿತ್ತ ಅನ್ನರಿ.
ಇನ್ನ ನನಗ ಭಾಳ ಮಂದಿ ಮಾರವಾಡಿ ದೋಸ್ತರ, ಅವರದೇಲ್ಲಾ ಬಾರಾದಾನ ಸಾಲ್, ಬಟರ್ ಮಾರ್ಕೆಟನಾಗ ಅಂಗಡಿ ಇರ್ತಿದ್ದವು. ಹಂಗ ಅವರದ ಚೀಟಿ ವ್ಯವಹಾರ. ಪಕ್ಕಾ ಬಿಲ್ ಗಿರಾಕಿ ಅಲ್ಲ. ಹಂತಾದರಾಗ ಒಮ್ಮೆ ದೋಸ್ತರೆಲ್ಲ ಸೇರಿ ಏಪ್ರಿಲ್ ಒಂದಕ್ಕ ನಮ್ಮ ಮಾರವಾಡಿ ದೋಸ್ತನ ಅಂಗಡಿಗೆ ಹೋಗಿ, ‘ಲೇ, ಕಂಚಗಾರ ಗಲ್ಲಿ ಒಳಗ ಸೇಲ್ಸ್ ಟ್ಯಾಕ್ಸ್ ಗಾಡಿ ಬಂದೈತಿ, ಮೂರ ಅಂಗಡಿಗೆ ಹೋಗ್ಯಾರ, ನಿಮ್ಮ ಅಂಗಡಿಗೂ ಬಂದರ ಬರಬಹುದು’ ಅಂತ ಹೇಳಿದ್ವಿ. ಅದನ್ನ ಕೇಳಿ ನಮ್ಮ ದೋಸ್ತ್ ಮತ್ತ ಅವರಪ್ಪಾ ಟೇನ್ಶನ್ ತೊಗೊಂಡರ, ಅದರಾಗ ನಾ ಒಂದ ದಿವಸ ಮೊದ್ಲ ನಮ್ಮ ದೋಸ್ತನ ಮೊಬೈಲ್ ತೊಗೊಂಡ ಅವನ ಕಂಟ್ಯಾಕ್ಟ್ ಒಳಗ ನನ್ನ ಹೆಸರ ಎಡಿಟ್ ಮಾಡಿ ಖಅಔಉಖ ಖಅಗಿ ಅಂತ ಸೇವ್ ಮಾಡಿದ್ದೆ. ಹಿಂಗ ನಾ ಅವರ ಟೆನ್ಶನ್ ತೊಗೊಳೊದಕ್ಕ ಸೈಡಿಗೆ ಹೋಗಿ ನಮ್ಮ ದೋಸ್ತಗ ಫೋನ್ ಹೊಡದೆ. ಅದ ರಿಂಗ್ ಆತ, ಸ್ಕ್ರೀನ್ ಮ್ಯಾಲೆ ಖಅಔಉಖ ಖಅಗಿ ಅಂತ ತೋರಸ್ತ. ಅಂವಾ ಫುಲ್ ಗಾಬರಿ ಆದಾ. ಅಂವಾ ಬರೇ ಸೇಲ್ಸ್ಟ್ಯಾಕ್ಸ್ ಓದಿದ್ದಾ, ನಂಬರ ನೋಡಿದ್ದಿಲ್ಲ. ಅಲ್ಲಾ ಹಂಗ ನಂಬರ ಯಾರ ನೋಡ್ತಾರ, ಹೆಸರ ನೋಡಿ ಹೆದರಿ ಬಿಟ್ಟಾ. ತೊಗೊ ಅಪ್ಪಾ-ಮಗಾ ಕೂಡಿ ಇದ್ದಬಿದ್ದ ಚೀಟಿ ಬುಕ್, ಕ್ಯಾಶಬುಕ್, ಲೆಡ್ಜರ್ ಎಲ್ಲ ತೊಗೊಂಡ ಅಂಗಡಿ ಶಟರ್ ಎಳದ ಬಿಟ್ಟರ.
ಆಮ್ಯಾಲೆ ನಾವ ನಮ್ಮ ದೋಸ್ತನ ಕರಕೊಂಡ ‘ಭಾಳ ಟೆನ್ಶನ್ ತೊಗೊಬ್ಯಾಡಾ ಪಿಕ್ಚರ್ ಹೋಗೋಣ ನಡಿ’ ಅಂತ ಗಣೇಶ ಟಾಕೀಜಗೆ ಪಿಕ್ಚರಗೆ ಕರಕೊಂಡ ಹೋಗಿ ರಾತ್ರಿ ಬರಬೇಕಾರ, ‘ಲೇ..ಮಗನ ನಿನ್ನ ಮೊಬೈಲನಾಗ ನೀ ಸೇಲ್ಸ್ಟ್ಯಾಕ್ಸ್ ನಂಬರ ಸೇವ್ ಮಾಡಿದ್ದರ ಇಷ್ಟ ಕಾಲ್ ಬಂದಾಗ ಹೆಸರ ತೋರಸೆôತಿ, ನಿಂಗಷ್ಟು ತಲಿ ಇಲ್ಲಲೇ... ಅದ ಆಡ್ಯಾನ ನಂಬರ್, ನಿಂಗ ಏಪ್ರಿಲ್ ಫೂಲ್ ಮಾಡಾಕ ಹೆಸರ ಎಡಿಟ್ ಮಾಡಿದ್ವಿ’ ಅಂತ ಹೇಳಿ ಮುಂದ ಅವನ ಕಡೆ ಬೈಸ್ಗೊಂಡ್ವಿ ಆ ಮಾತ ಬ್ಯಾರೆ. ಹಿಂಗ ಏಪ್ರಿಲ್ ಫೂಲ್ ದಿವಸ ಮಸ್ಕೀರಿ ಮಾಡೋರ ಮಾಡ್ತಿರ್ತಾರ. ಹಂಗ ಮತ್ತ ನಾಳೆ ನನ್ನ ಆರ್ಟಿಕಲ್ ಬರ್ತದ ಅಂತ ಕಾಯ್ಕೋತ ಕೂತೋರಿಗೆ ಏಪ್ರಿಲ್ ಫೂಲ್ ಮಾಡ್ಲಿಕ್ಕೆ ಇವತ್ತ ನಾ ಬರದಿಲ್ಲ. ಇವತ್ತ ಏಪ್ರಿಲ್ ಫೂಲ್ ಅಂತ ಹೇಳಿ ಮುದ್ದಾಮ ಬರದಿದ್ದ.