ಮಹಾಯೋಜನೆಗಳ ಪರ್ವ ಪ್ರಧಾನಿ ಗತಿಶಕ್ತಿ

Anisike
Published on

ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ನಿರ್ಮಾಣ ಯಾವುದೇ ದೇಶದ ಆರ್ಥಿಕ ಬೆಳವಣಿಗೆಯ ಬುನಾದಿ ಎಂಬುದು ನಿರ್ವಿವಾದ. ಅಮೆರಿಕಾ ಅಧ್ಯಕ್ಷ ರೂಸ್​ವೆಲ್ಟ್ ಅವರು ಸುಪ್ರಸಿದ್ಧ ‘ನ್ಯೂ ಡೀಲ್’ ಆರ್ಥಿಕ ನೀತಿಯಿಂದ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಮೇಲಕ್ಕೆತ್ತಿದ್ದು, ಜಪಾನ್ ಮಹಾಯುದ್ಧಾ ನಂತರದ ಆರ್ಥಿಕ ಸುಧಾರಣೆಗಳಿಂದ ದೇಶವನ್ನು ಬೆಳವಣಿಗೆಯ ಮುಖ್ಯ ವಾಹಿನಿಗೆ ತಂದದ್ದು ಹಾಗೂ ಮುಖ್ಯವಾಗಿ ಕೊರಿಯಾ 60 ರಿಂದ 90ರ ದಶಕಗಳಲ್ಲಿ ಪ್ರತಿ ವರ್ಷ ಶೇ. 10ರಷ್ಟು ಅಭೂತಪೂರ್ವ ಆರ್ಥಿಕ ಬೆಳವಣಿಗೆ ಕಂಡ ಉದಾಹರಣೆಗಳು ನಮ್ಮ ಮುಂದಿವೆ. ಇದೆಲ್ಲ ಸಾಧ್ಯವಾದದ್ದು ಸಾರಿಗೆ ವ್ಯವಸ್ಥೆಗಳ ಜಾಲ, ಹೆದ್ದಾರಿ ನಿರ್ವಣಗಳು ಹಾಗೂ ಒಟ್ಟಾರೆ ಆರ್ಥಿಕ ಬೆಳವಣಿಗೆಯ ಗತಿಗೆ ಅವಶ್ಯವಾಗಿರುವ ಮೂಲಭೂತ ಸಂಪನ್ಮೂಲಗಳ ನಿರ್ವಣದಿಂದಲೇ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.

ಚರಿತ್ರೆ ಆಯಾ ಕಾಲದ ಸಾಮ್ರಾಜ್ಯಗಳ ಬೆಳವಣಿಗೆಗೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ ಕುಶಲ ಆಡಳಿತಗಾರ ಚಕ್ರವರ್ತಿಗಳ ಚತುರತೆಗಳಿಗೂ ಕನ್ನಡಿ ಹಿಡಿಯುತ್ತದೆ. ಕ್ರಿಪೂ 300 ರಲ್ಲಿನ ಚಂದ್ರಗುಪ್ತ ಮೌರ್ಯ, ಅಶೋಕ, ನಂತರ ಕ್ರಿ.ಶ 350 ರಿಂದ 500 ರವರೆಗೆ ಬೃಹತ್ ವಿಸ್ತಾರದ ಸಾಮ್ರಾಜ್ಯ ಕಟ್ಟಿ ಇತಿಹಾಸದ ಸುವರ್ಣ ಕಾಲವೆಂದು ಹೆಗ್ಗಳಿಕೆ ಪಡೆದಿದ್ದ ಗುಪ್ತರ ಆಳ್ವಿಕೆ ಹಾಗೂ ವಿಶೇಷವಾಗಿ ಸಮುದ್ರಗುಪ್ತನ ಕಾಲದಲ್ಲಿ ರಾಜ್ಯದ ಅರ್ಥವ್ಯವಸ್ಥೆಗೆ ಮೂಲಭೂತ ಸೌಲಭ್ಯಗಳಿಗೆ ಭದ್ರಬುನಾದಿ ಹಾಕಿದ್ದರು. ಚಂದ್ರಗುಪ್ತ ಮೌರ್ಯ ಹಾಗೂ ಅಶೋಕ ಚಕ್ರವರ್ತಿ ಪಾಟಲಿಪುತ್ರದಿಂದ ಈಗಿನ ಪಾಕಿಸ್ತಾನದಲ್ಲಿರುವ ತಕ್ಷಶಿಲಾವರೆಗೂ ಸುಮಾರು 2,400 ಕಿ.ಮೀ. ಹೆದ್ದಾರಿ ನಿರ್ವಿುಸಿದ್ದರೆಂಬುದು ತಿಳಿದು ಬರುತ್ತದೆ.

200 ವರ್ಷಗಳ ಬ್ರಿಟಿಷ್ ಭಾರತದ ಅವಧಿಯಲ್ಲಿ ಇಂಗ್ಲೀಷರು ರೈಲು ಮಾರ್ಗಗಳು, ಹಲವಾರು ಬಂದರುಗಳನ್ನು, ಸೇತುವೆಗಳನ್ನು ಹಾಗೂ ಮಹತ್ವದ ರಸ್ತೆ ನಿರ್ವಣಗಳನ್ನು ಮಾಡಿದ್ದರು. ಆದರೆ ಇದು ಭಾರತದ ಸಂಪತ್ತನ್ನು ಇಂಗ್ಲೆಂಡಿಗೆ ಸಾಗಿಸಲು ಮತ್ತು ಇಲ್ಲಿ ಬೆಳೆಯುತ್ತಿದ್ದ ಗುಣಮಟ್ಟದ ಹತ್ತಿಯನ್ನು ಲ್ಯಾಂಕ್​ಶಾಯರ್ ಹಾಗೂ ಮ್ಯಾಂಚೆಸ್ಟರ್ ಜವಳಿ ಕಾರ್ಖಾನೆಗಳಿಗೆ ರಫ್ತು ಮಾಡಲು ಹಾಗೂ ಅಲ್ಲಿ ತಯಾರಾದ ಬಟ್ಟೆಗಳನ್ನು ಮರಳಿ ಆಮದು ಮಾಡುವ ಅನುಕೂಲಕ್ಕಾಗಿ ಎಂಬ ಕಾರಣಕ್ಕೆ ಅಷ್ಟೇ. ಕಾಂಗ್ರೆಸ್ ಸರ್ಕಾರದ ಅವಧಿ ಕೂಡಾ ಒಡ ಒಡಕಾದ ನೀತಿ ಧೋರಣೆಗಳು ಹಾಗೂ ತನ್ಮೂಲಕ ಯೋಜನೆಗಳ ಅನುಷ್ಠಾನ ದೇಶದ ಆರ್ಥಿಕ ವಿಕಾಸ ಪ್ರತಿಗಾಮಿಯಾಯಿತಲ್ಲದೇ ಇದು ದೇಶದ ಸಂಪತ್ತಿನ ಹಾಗೂ ಅವಕಾಶಗಳ ಹಂಚಿಕೆಯ ಸಮಾನವಲ್ಲದ ಪಾಲುದಾರಿಕೆಗೂ ಕಾರಣವಾಯಿತು. ಸಮಗ್ರತೆ ಇಲ್ಲದ ಕಾರಣ ಹೊಸ ಮೂಲಭೂತ ಸಂಪನ್ಮೂಲಗಳ ನಿರ್ಮಾಣ ಕೂಡಾ ಗೊಂದಲದ ಗೂಡಾಯಿತು. ಹೀಗಾಗಿ ನಾವು ಯೋಜನೆಗಳ ಅನುಷ್ಠಾನಗಳಲ್ಲಿ ‘ಕಾಮಗಾರಿ ಪ್ರಗತಿಯಲ್ಲಿದೆ ಸಾವಧಾನವಾಗಿ ಸಾಗಿ’ ಮುಂತಾದ ಸೂಚನಾ ಫಲಕಗಳಿಗೆ ಒಗ್ಗಿಹೋದೆವು. ಈ ‘ನಿಧಾನವಾಗಿ ಸಾಗಿ’ ಸಂದೇಶವನ್ನು ‘ಬೇಗನೆ ಸಾಗಿ’ ಯನ್ನಾಗಿಸಲು ಹಾಗೂ ಗತಿರಹಿತತೆಯನ್ನು ಗತಿಶೀಲತೆಯನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ‘ಪ್ರಧಾನಿ ಗತಿಶಕ್ತಿ’ ಮಹಾಯೋಜನೆಯ ಐತಿಹಾಸಿಕ ಘೊಷಣೆ ಮಹತ್ವವಾದುದು. ಕಳೆದ 7 ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ದೇಶದ ಸಮಗ್ರ ಅರ್ಥವ್ಯವಸ್ಥೆ ಬಲಪಡಿಸುವ ಬುನಾದಿ ಹಾಕಿದೆ. ಜಿಎಸ್​ಟಿ ವ್ಯವಸ್ಥೆಯು ಕರಾಕರಣೆಯನ್ನು ಸುರಳೀತಗೊಳಿಸಿದರೆ, ಜನ್​ಧನ್, ಆಧಾರ ಹಾಗೂ ಮುದ್ರಾದಂತಹ ಯೋಜನೆಗಳಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುವಂತಾಗಿದೆ. ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ, ಉಡಾನ್, ಭಾರತಮಾಲಾ ಹಾಗೂ ಸಾಗರಮಾಲಾಗಳಂತಹ ಯೋಜನೆಗಳ ಅನುಷ್ಠಾನ ದೇಶದ ಮೂಲಭೂತ ಸೌಕರ್ಯಗಳ ಅಭೂತಪೂರ್ವ ನಿರ್ಮಾಣ ಹಾಗೂ ಔದ್ಯಮಿಕ ಶಕ್ತಿಗೆ ಹೊಸ ಚೌತನ್ಯ ನೀಡಿವೆ.

ಕೋವಿಡ್-19 ರಂತಹ ವಿಷಮ ಪರಿಸ್ಥಿತಿಯಲ್ಲಿಯೂ ‘ಒನ್ ನೇಶನ್ ಒನ್ ರೇಶನ್ ಕಾರ್ಡ್’, ಆಯುಷ್ಮಾನ್ ಭಾರತ, ಡಿಜಿಟಲ್ ಮಿಷನ್ ಹಾಗೂ 23 ಲಕ್ಷ ಕೋಟಿ ರೂ. ಮೊತ್ತದ ‘ಆತ್ಮನಿರ್ಭರ ಭಾರತ’ದಂತಹ ದಿಕ್ಸೂಚಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು. 200 ಬಿಲಿಯನ್ ಡಾಲರ್ ಮಾರುಕಟ್ಟೆಯ ದೇಶದ ಸಾರಿಗೆ ಕ್ಷೇತ್ರ ಮುಂಬರುವ 5 ವರ್ಷಗಳಲ್ಲಿ ಒಟ್ಟು ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) ಶೇಕಡಾ 10% ರಷ್ಟು ಬೆಳವಣಿಗೆ ಕಾಣಲಿದ್ದು 330 ಬಿಲಿಯನ್ ಡಾಲರ್ ಏರಿಕೆಯಾಗಿ ದೇಶದ 5 ಟ್ರಿಲಿಯನ್ ಡಾಲರ್​ಗಳ ಜಿಡಿಪಿ ಸಾಧನೆಗೆ ಪೂರಕವಾಗಲಿದೆ.

ಆದರೂ ಭಾರತದ ಸಾರಿಗೆ ಮಾಧ್ಯಮದ ವೆಚ್ಚ ಜಗತ್ತಿನ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಶೇಕಡಾ 8-10ಕ್ಕೆ ಹೋಲಿಸಿದಲ್ಲಿ ಜಿಡಿಪಿಯ ಶೇಕಡಾ 13-14 ರಷ್ಟು ಇದೆ. ಇದಕ್ಕೆ ಕಾರಣವಿಲ್ಲದಿಲ್ಲ. ದೇಶದ ಸರಕು ಸಾಗಾಣಿಕೆ ಸುಮಾರು 60%-65% ರಷ್ಟು ರಸ್ತೆ ಸಾರಿಗೆ ಅವಲಂಬಿಸಿದ್ದು ಅಭಿವೃದ್ಧಿಪರ ರಾಷ್ಟ್ರಗಳಲ್ಲಿ ಇದು ಶೇ.25-30 ಮಾತ್ರ ಇದೆ. ಇದರಿಂದ ಸಾರಿಗೆ ವೆಚ್ಚ ಸಹಜವಾಗಿ ಹೆಚ್ಚಾಗುವುದು. ಅಲ್ಲದೇ ರೈಲ್ವೆ ಸಾಗಾಣಿಕೆಯ ವ್ಯವಸ್ಥೆ ಬಹಳಷ್ಟು ಕಲ್ಲಿದ್ದಲು ಸಾಗಾಟವನ್ನೇ ಅವಲಂಬಿಸಿದ್ದು ದೇಶದ ಆಂತರಿಕ ಜಲ ಸಾರಿಗೆ ಸಂಪರ್ಕ ವ್ಯವಸ್ಥೆಯ ವೆಚ್ಚ ಹೆಚ್ಚುತ್ತಲೇ ಇದೆ.

ಪ್ರಧಾನಿ ಗತಿಶಕ್ತಿ ಮಹಾಯೋಜನೆ ಮೂಲಭೂತ ಸೌಲಭ್ಯ ಅಭಿವೃದ್ಧಿ ಹಾಗೂ ಬಹುವಿಧಗಳ ಸಾರಿಗೆ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪರ್ವ ಆರಂಭಿಸಲಿದೆ. ಮೂಲಭೂತ ಸೌಲಭ್ಯ ನಿರ್ಮಾಣ ಯೋಜನೆಗಳ ಅನುಷ್ಠಾನವನ್ನು ವಿವಿಧ ಮಂತ್ರಾಲಯಗಳ ಕ್ರೋಡೀಕೃತ ಕಾರ್ಯ ನಿರ್ವಹಣೆಗೆ ಒಳಪಡಿಸಿ ಒಂದೇ ಮಹಾಯೋಜನೆಗೆ ತರಲಾಗುವುದು. ಇದರಿಂದ ವಿವಿಧ ಸಾರಿಗೆ ಸಂಚಲನಗಳ (ಲಾಜಿಸ್ಟಿಕ್ಸ್) ಗರಿಷ್ಠ ಉಪಯುಕ್ತತೆ ಪಡೆದು ಸಾಗಾಣಿಕೆ ವೆಚ್ಚ ಕಡಿಮೆಗೊಳಿಸಲಾಗುವುದಲ್ಲದೇ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಿ ತನ್ಮೂಲಕ ಈ ಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆ ಹೆಚ್ಚಳವಾಗಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುವುದು. ಅಲ್ಲದೇ ಆನ್​ಲೈನ್ ಡ್ಯಾಶ್​ಬೋರ್ಡ್​ಗಳ ಸಹಾಯದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅನುಷ್ಠಾನ ಘಟಕಗಳು, ಇಲಾಖೆಗಳು, ಅರೆಸರ್ಕಾರಿ ಸಂಸ್ಥೆಗಳಿಗೆ ಯೋಜನೆಗಳ ವಿವಿಧ ಹಂತಗಳ ವಿವರವಾದ ಪಕ್ಷಿನೋಟ ನೀಡುವ ದೂರಗಾಮಿ ಕಲ್ಪನೆ ಇದೆ.ಕಳೆದ 7 ವರ್ಷಗಳಲ್ಲಿ ಹೆದ್ದಾರಿ ನಿಮಾಣದ ಪ್ರತಿದಿನದ ಸರಾಸರಿ 300% ರಷ್ಟು ಹೆಚ್ಚಾಗಿ 2014-15 ರಲ್ಲಿದ್ದ ಪ್ರತಿದಿನ ಸರಾಸರಿ 12 ಕಿ.ಮೀ. ದಿಂದ 2020-21 ರಲ್ಲಿ 33.7 ಕಿ.ಮೀ ಏರಿಕೆಯಾಗಿದೆ. ಪ್ರಧಾನಿ ಗತಿಶಕ್ತಿ ಮಹಾಯೋಜನೆಯಿಂದ ನಾವು ದೇಶದ ಹೆದ್ದಾರಿ ಜಾಲವನ್ನು 2 ಲಕ್ಷ ಕಿ.ಮೀ ಗೆ ಹೆಚ್ಚಿಸಿ ಈ ಉದ್ದಗಲಕ್ಕೂ ವಿದ್ಯುತ್, ಆಫ್ಟಿಕಲ್ ಫೈಬರ್ ಕೇಬಲ್​ಗಳನ್ನು ಅಳವಡಿಸಿ ಪ್ರಾಕೃತಿಕ ವಿಕೋಪಗಳಿಂದ ಜರೂರು ಪರಿಸ್ಥಿತಿಗಳಲ್ಲಿ ಜೀವರಕ್ಷಣಾ ಸಾಧನೆಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗುವುದು.

ಎನ್.ಡಿ.ಎ. ಸರ್ಕಾರದ ಈ 7 ವರ್ಷಗಳ ಅವಧಿಯಲ್ಲಿ ದೇಶ ಅಭೂತಪೂರ್ವ ಸಾಧನ ಸೌಕರ್ಯಗಳ ನಿರ್ವಣದತ್ತ ದಾಪುಗಾಲು ಹಾಕಿದ್ದು ಯುಪಿಎ ಸರ್ಕಾರ 10 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಮಾಡಿದ 1.5 ಲಕ್ಷ ಕೋಟಿ ರೂ.ಗೆ ಎದುರಾಗಿ 11.5 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಮೆಟ್ರೊ ರೈಲು ಜಾಲ ನಿರ್ಮಾಣ 2014 ರವರೆಗೆ ಕೇವಲ 250 ಕಿ.ಮೀ ಸಾಧ್ಯವಾದರೆ ಅಲ್ಲಿಂದೀಚೆಗೆ 7 ವರ್ಷಗಳಲ್ಲಿ 18 ನಗರಗಳಲ್ಲಿ 721 ಕಿ.ಮೀ. ಸಾಧನೆಯಾಗಿದ್ದು 27 ನಗರಗಳಲ್ಲಿ ಒಟ್ಟು 1058 ಕಿ.ಮೀ. ಅಂತರದ ಮೆಟ್ರೊ ಜಾಲ ನಿರ್ಮಾಣ ಪ್ರಗತಿಯಲ್ಲಿದೆ. ದೇಶದ ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಈಗಿನ ಶೇಕಡಾ 7-15ಕ್ಕೆ ಹೆಚ್ಚಿಸುವ ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತಿದೆ. 2014 ರಿಂದ ದೇಶದಲ್ಲಿದ್ದ 14,700 ಕಿ.ಮೀ. ಅಂತರದ ಗ್ಯಾಸ್ ಪೈಪ್​ಲೈನ್​ಗಳನ್ನು 18,500 ಕಿ.ಮೀ. ಹೆಚ್ಚಿಸಲಾಗಿದ್ದು ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಹಾಗೂ ಗೊಬ್ಬರ ಉತ್ಪಾದನಾ ಘಟಕಗಳಿಗೆ ಕ್ರಮವಾಗಿ 29 ಹಾಗೂ 44 ದಿನಕ್ಕೆ ಮಿಲಿಯನ್ ಮ್ಯಾಟ್ರಿಕ್ ಸ್ಟಾŒಂಡರ್ಡ ಕ್ಯೂಬಿಕ್ ಮೀಟರ್ (ಎಂ.ಎಂ.ಎಸ್.ಸಿ.ಎಂ.ಡಿ.) ಗ್ಯಾಸ್ ಪೂರೈಸಲಾಗುತ್ತಿದೆ. ಇದರೊಂದಿಗೆ ಪ್ರಧಾನಿ ಗತಿಶಕ್ತಿ ಯೋಜನೆಯಿಂದ ಹೆಚ್ಚುವರಿ 15,000 ಕಿ.ಮೀ. ಅಂತರದ ಗ್ಯಾಸ್ ಪೈಪ್​ಲೈನ್ ಹಾಕಲಾಗುವ ಗುರಿ ಹೊಂದಿದೆ. ಮೂಲಭೂತ ಸೌಕರ್ಯ ನಿರ್ವಣದ ಯೋಜನೆಗಳು ಎಲ್ಲಾ ಸಾರಿಗೆ ಮಾಧ್ಯಮಗಳ ಸೂಕ್ತ ಸಮನ್ವಯದೊಂದಿಗೆ ದೇಶದ ಜನರು ಹಾಗೂ ಸರಕುಗಳನ್ನು ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಸಾಗಿಸುವ ಸಮಾನಾಂತರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿರಬೇಕು. ಉದಾಹರಣೆಗೆ ರಸ್ತೆ ಸಾರಿಗೆ ಸಂಚಲನ ರೈಲುಗಳಿಗೆ, ರೈಲುಗಳು ಅಲ್ಲಿಂದೀಚೆಗೆ ಸರಕುಗಳನ್ನು ಬಂದರುಗಳವರೆಗೆ ಸಾಗಿಸಿ ಕಡಲ ತೀರದಿಂದ ಬಯಲುಸೀಮೆಗಳಿಗೆ ನೇರ ಸಂಪರ್ಕ ಕಲ್ಪಿಸುವಂತಾಗಬೇಕು. ಅದರೊಂದಿಗೆ ಅಯಾಭಾಗಗಳ ಉದ್ದಿಮೆ, ವ್ಯಾಪಾರ ವಹಿವಾಟುಗಳು ಕೂಡಾ ಅಭಿವೃದ್ಧಿ ಹೊಂದಿ ದೇಶದ ಎಲ್ಲಾ ಭಾಗಗಳ ಸಮತೋಲಿತ ಹಾಗೂ ಸಮಗ್ರ ಅಭಿವೃದ್ಧಿಯಾಗುತ್ತದೆ.

ಒಟ್ಟಾರೆ ಹೇಳುವುದಾದರೆ ಪ್ರಧಾನಮಂತ್ರಿ ಗತಿಶಕ್ತಿ ಮಹಾಯೋಜನೆ ರಚನಾತ್ಮಕ ಆಯಾಮಗಳೊಂದಿಗೆ ಎಂದೂ ಕಾಣದ ದೂರದೃಷ್ಟಿ ಹಾಗೂ ರಾಜಕೀಯ ಇಚ್ಛಾಶಕ್ತಿಯ ಹೊಸ ದಿಶೆಯನ್ನು ದರ್ಶಿಸುವ ವಿಶೇಷ ಯೋಜನೆಯಾಗಿದ್ದು ದೇಶ ನಿರ್ವಣದ ಗತಿಯನ್ನು ಬದಲಾಯಿಸುವ ಪರ್ವದ ಆರಂಭವೇ ಆಗಿದೆ.

(ಲೇಖಕರು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಇಲಾಖೆ ಸಚಿವರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net