

ಜೀವ-ಜೀವದ ಬೆಸುಗೆಯಲ್ಲಿಯೂ ದೈವತ್ವವನ್ನೇ ಗುರುತಿಸಿದವರು ಹಿಂದುಧರ್ಮದವರು. ಬೆಸುಗೆಯ ಕಾರಣವನ್ನು ಹುಡುಕುತ್ತ ಹೋದರೆ ಹೃದಯಾನುಬಂಧ, ಕರ್ಮದ ಬೆಸುಗೆ, ಜನ್ಮಾನುಬಂಧದ ಬೆಸುಗೆ, ಋಣದ ಬೆಸುಗೆ, ಯಾರ ವಿವೇಚನೆಗೂ ನಿಲುಕದ ಬೆಸುಗೆ, ಭಾವನೆಯ ಬೆಸುಗೆ, ಪುನರ್ಜನ್ಮದ ಬೆಸುಗೆ - ಹೀಗೆ ನಾನಾ ಕಾರಣಗಳಿವೆ.
ಸುಂದರ ಹೆಣ್ಣಿಗೆ ಗಂಡನಾಗಿ ವಿಕಾರದ ಗಂಡು ಸಿಗುವನು. ಸುಂದರವಾದ ಗಂಡಸಿಗೆ ಹೆಂಡತಿಯಾಗಿ ವಿಕಾರದ ಹೆಣ್ಣು ಸಿಗುವಳು. ದೇಹದ ಸೌಂದರ್ಯಕ್ಕಿಂತಲೂ ಹೃದಯಸೌಂದರ್ಯ ಪ್ರಮುಖವಾದುದು. ಆದರೆ ಹೃದಯವೇ ಇಲ್ಲವೇನೋ ಎಂದೆನಿಸುವ ಗಂಡು-ಹೆಣ್ಣು ಎರಡೂ ಕಂಡುಬರುವುದು ಜೀವನದ ಅಚ್ಚರಿ. ಏಕೆ ಹೀಗೆ ಎಂದು ಆಲೋಚಿಸಿದಾಗ ಕೊನೆಗೆ ತಲುಪುವುದು ‘ಸಂಸ್ಕಾರ’ದ ಕಡೆಗೆ. ಸಂಸ್ಕಾರಗಳ ವಿಚಾರವನ್ನು ಋಗ್ವೇದದಿಂದ ತೆಗೆದುಕೊಳ್ಳಲಾಗಿದೆ. ಸಂಸ್ಕಾರ ದೇಹಕ್ಕೂ ಬೇಕು. ದೇಹದೊಳಗಿನ ಚೈತನ್ಯಕ್ಕೂ ಬೇಕು. ಬಾಹ್ಯಶುದ್ಧಿಯೊಂದೇ ಸಾಲದು, ಅಂತರಂಗದ ಶುದ್ಧಿಯೂ ಬೇಕು. ದೇಹದ ಸಂಸ್ಕಾರವನ್ನು ಹೀಗೆ ವಿಭಾಗಿಸಬಹುದು: ಗರ್ಭಾಧಾನ-ಋತುಶಾಂತಿ: ಬೀಜ ಹಾಗೂ ಕ್ಷೇತ್ರದ ದೋಷನಿವಾರಣೆಗಾಗಿ ಗರ್ಭಾಧಾನ ಸಂಸ್ಕಾರದಲ್ಲಿ ಸುಪ್ರಜೆಯ ಜನನಕ್ಕಾಗಿ ಮಂತ್ರಗಳಿವೆ. ಕಾಮಶಕ್ತಿಯನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸಬಾರದು. ಸಮಾಗಮವೂ ಒಂದು ಪೂಜೆ. ಅದಕ್ಕೆ ದೈವಿಕ ಸ್ವರೂಪವನ್ನು ನೀಡಿದ್ದಾರೆ. ವಂಶಾವಳಿಯ ಮೂಲತ್ವ ಸಂತಾನಭಾಗ್ಯದಲ್ಲಿ ಅಡಗಿದೆ. ಒಳ್ಳೆಯ ಬೀಜಶಕ್ತಿಯಿಂದಲೇ ಒಳ್ಳೆಯ ಸಂತತಿಯ ಉದ್ಭವ ಎನ್ನುವುದನ್ನು ಮರೆಯಕೂಡದು. ಸಂಸ್ಕಾರಗಳ ಮಹತ್ವವನ್ನು ನೋಡಿ.
ಪುಂಸವನ: ಪುತ್ರಪ್ರಾಪ್ತಿಗಾಗಿ ಎರಡು ಉದ್ದು ಮತ್ತು ಒಂದು ಗೋಧಿ ಪ್ರಾಶನ. ಅನವಲೋಭನ: ಗರ್ಭವು ನಾಶವಾಗದಂತೆ ಚಿರಂಜೀವಿಯಾಗಲು. ಸೀಮಂತೋನ್ನಯನ: ಗರ್ಭಸ್ಥ ಶಿಶುವಿನ ಬೆಳವಣಿಗೆ, ತಾಯಿಯಾಗುವವಳ ಸಂತೃಪ್ತಿ. ಜಾತಕಕರ್ಮ: ಶಿಶುವಿನ ಭವಿಷ್ಯದ ಬರಹ. ನಾಮಕರಣ: ಆಯುವೃದ್ಧಿ. ಉದ್ದೇಶ ಸಿದ್ಧಿ. ಪ್ರಸಿದ್ಧಿ, ನಿಷ್ಕೃುಣ: ಶಿಶುವನ್ನು ಮನೆಯಿಂದ ತರುವುದು. ಸೂರ್ಯದರ್ಶನ. ಹಿರಿಯರ ಆಶೀರ್ವಾದ, ಅನ್ನಪ್ರಾಶನ: ಸುವರ್ಣದಿಂದ ಮೊಸರು, ತುಪ್ಪ, ಜೇನುಮಿಶ್ರಿತ ಅನ್ನಪ್ರಾಶನ. ಶಾರೀರಿಕ ಬಲವರ್ಧನೆ. ಚೌಲ: ಕೇಶಸಂಸ್ಕಾರ. ಉಪನಯನ: ಯಜ್ಞೋಪವೀತ, ಕೌಪೀನ, ಗಾಯತ್ರಿ ಉಪದೇಶ, ಸಂಧ್ಯಾ ಅಗ್ನಿಕಾರ್ಯಾರಂಭ. ಎರಡನೆಯ ಕಣ್ಣು ಕೊಡುವಿಕೆ. ವೇದಗ್ರಹಣ, ಬುದ್ಧಿಪ್ರಚೋದನೆ. ಮಹಾನಾಮ್ನೀವ್ರತ: ಎಂಟನೆಯ ವರ್ಷದಲ್ಲಿ ಉಪನಯನವಾದ ಮೇಲೆ, ಮುಂದಿನ ಐದು ವರ್ಷ ಗುರುಕುಲದಲ್ಲಿ ಅಧ್ಯಯನ ಮಾಡಿದ ಮೇಲೆ, ಆರಣ್ಯಕಗಳನ್ನು ಹೇಳುವ ಅಧಿಕಾರವು ಪ್ರಾಪ್ತವಾಗಲು, ಅಧಿಕಾರ ನೀಡುವ ವಿಧಿ. ಮಹಾವ್ರತ: ಆರಣ್ಯಕಗಳನ್ನು ಕಲಿಯುವಾಗ ಈ ಸಂಸ್ಕಾರವನ್ನು ಮಾಡುತ್ತಾರೆ. ಉಪನಿಷದ್ ವ್ರತ: ಗುರುಕುಲದಲ್ಲಿ ಉಪನಿಷತ್ತು ಮತ್ತು ವೇದ ಮುಂತಾದ ಆಧ್ಯಾತ್ಮಿಕ ಗ್ರಂಥಗಳ ಪಠಣ ಮತ್ತು ಮನನವನ್ನು ಮಾಡಿಸಲಾಗುತ್ತದೆ. ವ್ಯಾಕರಣ, ಶಬ್ದದ-ಉತ್ಪತ್ತಿ ಮತ್ತು ಉಚ್ಚಾರಗಳ ವಿಚಾರವನ್ನು ತಿಳಿಸಲಾಗುತ್ತದೆ.
ಗೋದಾನವ್ರತ (ಕೇಶಾಂತ ಸಂಸ್ಕಾರ): ಗುರುಗಳಿಗೆ ಶಿಷ್ಯನು ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾದಕ್ಷಿಣೆಯೆಂದು ಒಂದು ಹಸು ಮತ್ತು ಒಂದು ಎತ್ತನ್ನು ನೀಡುವನು. ಈ ವಿಧಿಗೆ ಗೋದಾನವ್ರತ ಎನ್ನುತ್ತಾರೆ. ಈ ಸಂಸ್ಕಾರದಲ್ಲಿ ಬ್ರಹ್ಮಚಾರಿಯ ಗಡ್ಡಮೀಸೆಗಳನ್ನು ಮೊದಲ ಬಾರಿಗೆ ಕ್ಷೌರ ಮಾಡಲಾಗುತ್ತದೆ. ಬ್ರಹ್ಮರಂಧ್ರವಿರುವ ಜಾಗದಲ್ಲಿ ಹಸುವಿನ ಗೊರಸಿನ ಆಕಾರದಷ್ಟು ಕೂದಲನ್ನಿಡುವರು. ಹದಿನಾರನೆಯ ವಯಸ್ಸಿನಲ್ಲಿ ಮಾಡುವ ಈ ವಿಧಿಯು ಶಿಷ್ಯನು ಬ್ರಹ್ಮಚಾರಿತ್ವವನ್ನು ಮುಗಿಸಿ ಯೌವನಕ್ಕೆ ಪಾದಾರ್ಪಣೆ ಮಾಡಿರುವುದರ ಸಂಕೇತ. ಪುನಃ ಒಂದು ವರ್ಷದವರೆಗೆ ಸಂಯಮದಿಂದ ಕಠೋರ ಬ್ರಹ್ಮಚಾರಿ ಆಗಿರಬೇಕೆಂದು ಗುರು-ಹಿರಿಯರು ಬಯಸುತ್ತಿದ್ದರು. ಅವನ ಯೌವನವು ಅಪವಿತ್ರವಾಗಬಾರದೆಂದು ಮುನ್ನೆಚ್ಚರಿಕೆಗಾಗಿ ಈ ಸಂಸ್ಕಾರವನ್ನು ಮಾಡಲಾಗುತ್ತಿತ್ತು. ಈ ಸಂಸ್ಕಾರದ ನಿಮಿತ್ತದಿಂದ ಬ್ರಹ್ಮಚಾರಿಗೆ ಮತ್ತೊಮ್ಮೆ ಬ್ರಹ್ಮಚಾರಿವ್ರತದ ಸ್ಮರಣೆಯನ್ನು ಮಾಡಿಕೊಡಲಾಗುತ್ತಿತ್ತು. ಒಂದು ವರ್ಷ ಹೀಗೆ ಸಂಯಮದಿಂದ ವರ್ತಿಸಿದರೆ ಮುಂದಿನ ಯೌವನದ ಕಾಲದಲ್ಲಿ ಅವನಿಂದ ಯಾವುದೇ ಪ್ರಮಾದವಾಗುವುದಿಲ್ಲ ಎಂಬ ನಂಬಿಕೆಯಿತ್ತು. ಸಮಾವರ್ತನೆ: ಬ್ರಹ್ಮವ್ರತಲೋಪ ಪ್ರಾಯಶ್ಚಿತ್ತ, ಗೃಹಸ್ಥಾದಿ ಆಶ್ರಮಾಂತರದ ಪ್ರಾಪ್ತಿಗಾಗಿ ಈ ಸಂಸ್ಕಾರವನ್ನು ಮಾಡುವರು. ಉಪನಯನದಲ್ಲಿ ನೀಡಲಾದ ದಂಡಾದಿಗಳನ್ನು ತ್ಯಾಗ ಮಾಡಿ ಬೇರೆ ಆಶ್ರಮಗಳನ್ನು ಸ್ವೀಕರಿಸಲು ಆತ ಸಮರ್ಥನಾಗುವನು. ವಿವಾಹಸಂಸ್ಕಾರ: ಸ್ನಾತವೃತನಾದ ಯುವಕನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೊರಡುತ್ತಾನೆ. ಆಗ ಕನ್ಯೆಯ ಸೋದರ ವರನನ್ನು ತಡೆದು ತನ್ನ ಸೋದರಿ ವಿವಾಹಯೋಗ್ಯಳಿದ್ದಾಳೆ. ಅವಳನ್ನು ವಿವಾಹ ಮಾಡಿಕೊಂದು ಮುಂದಿನ ವಿದ್ಯಾಬ್ಯಾಸಕ್ಕೆ ತೆರಳಬಹುದೆಂದು ಹೇಳುತ್ತಾನೆ. ಅದನ್ನು ಒಪ್ಪಿ ಕಾಶೀಯಾತ್ರೆಯನ್ನು ನಿಲ್ಲಿಸಿ ವಿವಾಹಕ್ಕೆ ಸಿದ್ಧನಾಗುತ್ತಾನೆ. ಕನ್ಯಾದಾನವನ್ನು ಸ್ವೀಕರಿಸುವಾಗ ಕನ್ಯಾಪಿತೃವಿಗೆ ವರನು ಪ್ರತಿಜ್ಞಾಪೂರ್ವಕ ವಚನ ನೀಡುವನು. ಸಪ್ತಪದಿಯು ಸಖತ್ವದ ಸಂಕೇತ. ಅನ್ನ ಸಮೃದ್ಧಿ, ಬಲಸಮೃದ್ಧಿ, ಸಂಪತ್ಸಮೃದ್ಧಿ, ಸರ್ವಸುಖ ಸಮೃದ್ಧಿ, ಸಂತಾನ ಸಮೃದ್ಧಿ, ಸುಖಮಯಜೀವನ, ಮಿತೃತ್ವ. ಸಪ್ತಪದಿಯ ಅರ್ಥತಿಳಿದರೆ ಯಾರೂ ವಿವಾಹವಿಚ್ಛೇದನವನ್ನು ಕೊಡಲಾರರು. ಸಂಸ್ಕಾರವನ್ನು ಸರಿಯಾಗಿ ತಿಳಿದರೆ ಷಡ್ರಿಪುಗಳಿಂದ ಆಗುವ ಅನಾಹುತಗಳು ನಿಂತಾವು.
(ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)