ಗ್ರಾಮ ಪಂಚಾಯತಿ ಸಹಕಾರ, ಶಾಲೆಗಳಿಗೆ ಬಲ..

Putani F
Published on
ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಬೇಕೆಂದು ಎಲ್ಲರೂ ಅಪೇಕ್ಷಿಸುತ್ತಾರೆ. ಉತ್ತಮ ಶಾಲೆ ನಿರ್ಮಾಣದಲ್ಲಿ ಸಹಭಾಗಿತ್ವವೂ ಪಾತ್ರವಹಿಸುತ್ತದೆ. ಶಾಲಾಶಿಕ್ಷಣ ವ್ಯವಸ್ಥೆಯಲ್ಲಿ ಸಮುದಾಯದ ಬಾಂಧವ್ಯ ವೃದ್ಧಿಗೆ ಗ್ರಾಮ ಪಂಚಾಯಿತಿಗಳು ಹೇಗೆ ಸಹಕರಿಸ ಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

| ಭಾರತಿ ಎ. ಕೊಪ್ಪ

ಶಿಕ್ಷಣವು ಮಕ್ಕಳನ್ನು ರೂಪಿಸುವ ಅಡಿಗಲ್ಲು ಇದ್ದಂತೆ. ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಶೈಕ್ಷಣಿಕ ವ್ಯವಸ್ಥೆಗೆ ಸಮಾಜದ ವಿವಿಧ ಸಂಘ ಸಂಸ್ಥೆಗಳು, ಹಾಗೂ ಶಿಕ್ಷಣ ಇಲಾಖೆಯ ಜತೆಯಲ್ಲಿ ಇತರ ಇಲಾಖೆಗಳೂ ಸಹಭಾಗಿಯಾಗುತ್ತವೆ. ಶೈಕ್ಷಣಿಕ ರಂಗವನ್ನು ತಳಮಟ್ಟದಿಂದಲೇ ಬಲಪಡಿಸಲು ಶಾಲೆಗಳಿಗೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಹಕಾರ ನೀಡುವಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಪ್ರಮುಖವಾದುದು.

ಮಕ್ಕಳ ಹಕ್ಕುಗಳ ಗ್ರಾಮಸಭೆ: ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಭಾಗವಹಿಸುವಿಕೆ ಹಕ್ಕು ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಂದ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತದೆ. ಆಯಾ ಪಂಚಾಯಿತಿ ವ್ಯಾಪ್ತಿಯ ಮಕ್ಕಳಿಗೆ ಅಧಿಕಾರಿಗಳು ಮತ್ತು ಪಂಚಾಯಿತಿಯ ಅಧ್ಯಕ್ಷ, ಸದಸ್ಯರ ಸಮ್ಮುಖದಲ್ಲಿ ಈ ಸಭೆ ನಡೆಸಲಾಗುತ್ತದೆ. ಇಲ್ಲಿ ಮಕ್ಕಳ ಸಮಸ್ಯೆಗಳನ್ನು ಆಲಿಸುವುದು, ಅದರ ಪರಿಹಾರದ ಮಾರ್ಗ ಹುಡುಕುವುದು, ಸಮಸ್ಯೆಗೆ ಸಂಬಂಧಿಸಿದ ಕೋರಿಕೆ ಪತ್ರವನ್ನು ಸ್ವೀಕರಿಸುವುದು ಮತ್ತು ಆ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಗುವುದು.

ಓದುವ ಬೆಳಕು ಕಾರ್ಯಕ್ರಮ: ಮಕ್ಕಳ ಓದುವ ಆಸಕ್ತಿಗೆ ನೀರೆರೆಯಲು ಮತ್ತು ಜ್ಞಾನದಾಹ ತಣಿಸಲು ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ಜ್ಞಾನಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿನ 6 ರಿಂದ 18 ವರ್ಷದ ಎಲ್ಲಾ ಮಕ್ಕಳನ್ನು ಪಟ್ಟಿಮಾಡಿ, ಗ್ರಾಪಂ ಗ್ರಂಥಾಲಯದಲ್ಲಿ ಉಚಿತ ನೋಂದಣಿ ಮಾಡಲಾಗುತ್ತದೆ. ನೋಂದಾಯಿತ ಮಕ್ಕಳು ಗ್ರಂಥಾಲಯಕ್ಕೆ ಬಂದು ಓದಬಹುದಾಗಿದೆ.

ಶಾಲೆಗೆ ಭೇಟಿ: ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷರು, ಉಪಾಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು, ಇತರ ಸದಸ್ಯರನ್ನೊಳಗೊಂಡ ತಂಡವು ಕಾಲಕಾಲಕ್ಕೆ ಅಥವಾ ಕನಿಷ್ಠ ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು, ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ. ಹಾಗೂ ಮಕ್ಕಳೊಡನೆ ಸಮಾಲೋಚಿಸಿ ಶಾಲೆಗಳ ಸ್ಥಿತಿಗಳ ಅಧ್ಯಯನ ಮಾಡುತ್ತಾರೆ. ನಂತರ ಪೂರಕ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

ಅಂಗವಿಕಲರ ಶಿಕ್ಷಣಕ್ಕೂ ಪ್ರೋತ್ಸಾಹ: ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲೆಗಳಲ್ಲಿ ವಿಶೇಷ ಶೌಚಗೃಹ, ರ‍್ಯಾಂಪ್ (ಚಞಟ) ವ್ಯವಸ್ಥೆ ಮಾಡುವುದರ ಮೂಲಕ ಅವರಿಗೂ ಸುಗಮವಾಗಿ ಶಿಕ್ಷಣ ಪಡೆಯುವಂತೆ ಪ್ರೇರಣೆ ನೀಡಲಾಗುತ್ತದೆ.

ಭೌತಿಕ ಸಂಪನ್ಮೂಲಗಳು: ಶಾಲೆಗಳಿಗೆ ಬೇಕಾಗುವ ಮೂಲಸೌಕರ್ಯಗಳಾದ ನಿವೇಶನ, ಕಟ್ಟಡ, ಕಟ್ಟಡ ದುರಸ್ತಿ, ಕಾಂಪೌಂಡ್ ನಿರ್ವಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಗೃಹ ನಿರ್ವಣ, ಕೈತೋಟ, ಆಟದ ಸಲಕರಣೆ, ಪೀಠೋಪಕರಣಗಳು, ಗೋಡೆಬರಹ ಮುಂತಾದ ನೆರವುಗಳನ್ನು ಶಾಲೆಗಳ ಅಗತ್ಯ ಪರಿಗಣಿಸಿ, ಆದ್ಯತೆಯ ಮೇರೆಗೆ ವಿವಿಧ ಯೋಜನೆಗಳ ಅನುದಾನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡಬಹುದಾಗಿದೆ.

ಸಾರ್ವತ್ರಿಕ ದಾಖಲಾತಿಗೆ ಕ್ರಮ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆಗೆ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪಂಚಾಯತಿಯು ಪ್ರಮುಖ ಪಾತ್ರ ವಹಿಸುತ್ತದೆ. ಮನೆ ಮನೆ ಸಮೀಕ್ಷೆ ಮೂಲಕ ಗುರುತಿಸಲಾದ ದಾಖಲಾತಿ ಹೊಂದದ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸಲು ಪಾಲಕರ ಮನವೊಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳ ಶಿಕ್ಷಣದ ಹಕ್ಕನ್ನು ಜಾರಿಗೊಳಿಸಲು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಹೊಂದುವ ಮೂಲಕ ಸಾರ್ವತ್ರಿಕ ದಾಖಲಾತಿ ಮತ್ತು ಹಾಜರಾತಿ ಕಾಯ್ದುಕೊಳ್ಳುವತ್ತ ಕಾರ್ಯಪ್ರವೃತ್ತರಾಗುತ್ತಾರೆ.

ವಸತಿ ಶಾಲೆ ಬಲಪಡಿಸುವಿಕೆ: ಗ್ರಾಮಾಂತರ ಪ್ರದೇಶಗಳಲ್ಲಿರುವ ಆಶ್ರಮ ಶಾಲೆಗಳು, ವಸತಿ ಶಾಲೆಗಳು ಮತ್ತು ವಸತಿ ನಿಲಯಗಳಿಗೆ ಮೂಲ ಸೌಕರ್ಯ ಹಾಗೂ ಇನ್ನಿತರ ಸೌಲಭ್ಯಗಳಿಗೆ ಗ್ರಾಮ ಪಂಚಾಯಿತಿಗಳಿಂದ ವಿಶೇಷ ಮುತುವರ್ಜಿ ವಹಿಸಲಾಗುತ್ತದೆ. ಕಾಲಕಾಲಕ್ಕೆ ಅಥವಾ ಕನಿಷ್ಠ 3 ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ವಸತಿ ಶಾಲೆಗಳಿಗೆ ಭೇಟಿ ನೀಡಿ ಮೇಲ್ವಿಚಾರಕರು ಹಾಗೂ ಮಕ್ಕಳೊಡನೆ ಸಮಾ ಲೋಚಿಸಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಮಕ್ಕಳ ಧ್ವನಿಪೆಟ್ಟಿಗೆ: ಮಕ್ಕಳು ಮತ್ತು ಮಕ್ಕಳ ಪರವಾಗಿ ಕಾಳಜಿ ಹೊಂದಿರುವವರು ಮಕ್ಕಳ ಸಮಸ್ಯೆಗಳು, ಬೇಡಿಕೆಗಳು, ಪ್ರಶ್ನೆಗಳನ್ನು ಬರೆದು ಮಕ್ಕಳ ಧ್ವನಿಪೆಟ್ಟಿಗೆಯಲ್ಲಿ ಹಾಕಬಹುದು. ಈ ಪೆಟ್ಟಿಗೆಯನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚಿನ ಜನರು ಓಡಾಡುವ ಸ್ಥಳ/ವಸತಿ ನಿಲಯ/ಶಾಲೆ ಸಮೀಪದಲ್ಲಿ ಇಟ್ಟಿರುತ್ತಾರೆ. ಪೆಟ್ಟಿಗೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬರೆದಿರುತ್ತಾರೆ. ಈ ಧ್ವನಿಪೆಟ್ಟಿಗೆಯಲ್ಲಿ ಬಂದಂತಹ ಲಿಖಿತ ಕೋರಿಕೆಗಳನ್ನು ಶಾಲಾ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಸ್ಥಳೀಯ ಪೊಲೀಸ್ ಪ್ರತಿನಿಧಿ, ಆಶಾ ಕಾರ್ಯಕರ್ತೆ ಮತ್ತು ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಸಮ್ಮುಖದಲ್ಲಿ ತೆಗೆದು ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಂಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net