

ಒಂದು ಹಳ್ಳಿಯಲ್ಲಿ ಒಬ್ಬ ವೃದ್ಧ ತನ್ನ ಕುಟುಂಬದೊಂದಿಗೆ 75 ವರ್ಷಗಳ ಕಾಲ ಸುಂದರವಾಗಿ ಬದುಕಿದ್ದ. ಆತನ ಮಕ್ಕಳು ಉನ್ನತ ವೃತ್ತಿಗಾಗಿ ಬೇರೆ ಬೇರೆ ಊರುಗಳಿಗೆ ವಲಸೆ ಹೋದರು. ಮೃತಪತ್ನಿಯ ನೆನಪುಗಳನ್ನು ಹೊತ್ತ ಆ ಹಿರಿಜೀವ ತನ್ನ ಹಳ್ಳಿಯಲ್ಲೇ ವಾಸವಾಗಿತ್ತು.
ರಜಾದಿನಗಳಲ್ಲಿ ಮೊಮ್ಮಕ್ಕಳು ಅಜ್ಜನ ಜೊತೆ ಕಾಲ ಕಳೆಯಲು ಬರುತ್ತಿದ್ದರು. ವೃದ್ಧ ತನ್ನ ಮೊಮ್ಮಕ್ಕಳ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದ. ಅವರಿಗಾಗಿ ಹೊಸ ಬಟ್ಟೆ, ಸಿಹಿ ತಿನಿಸು ಖರೀದಿಸಿದ. ಆಳುಗಳನ್ನು ಕರೆದು ಮನೆ ಸ್ವಚ್ಛ ಮಾಡಿಸಿದ. ಹೀಗೆ ಸಂಭ್ರಮಿಸುತ್ತ, ಬಿಡುವಿಲ್ಲದೆ ಕೆಲಸಗಳಲ್ಲಿ ನಿರತನಾಗಿದ್ದಾಗ ತನ್ನ ಕೈ ಗಡಿಯಾರ ಕಳೆದುಕೊಂಡ. ಮೊದಲ ಮಗು ಜನಿಸಿದಾಗ, ಆತನ ಪತ್ನಿ ಈ ಗಡಿಯಾರವನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ್ದಳು. ಹೆಂಡತಿ ಮರಣದ ನಂತರ ಗಡಿಯಾರ ಆತನ ಏಕೈಕ ಸಂಗಾತಿಯಾಗಿತ್ತು ಮತ್ತು ಅದನ್ನು ನಿಧಿ ಥರ ಕಾಪಾಡಿಕೊಂಡು ಬಂದಿದ್ದ. ಮನಸ್ಸು ಖೇದವಾಗಿತ್ತು. ಗಡಿಯಾರ ಕಳೆದಿದ್ದನ್ನು ಮರೆತು ಮೊಮ್ಮಕ್ಕಳನ್ನು ಬರಮಾಡಿಕೊಂಡು ಖುಷಿಯಿಂದ ಇರಲು ಪ್ರಯತ್ನಿಸಿದ, ಆದರೆ ಸಾಧ್ಯವಾಗಲಿಲ್ಲ. ಯಾವಾಗಲೂ ಸಂತೋಷವಾಗಿರುವ ಅಜ್ಜನನ್ನು ನೋಡಿದ್ದ ಮೊಮ್ಮಕ್ಕಳು ಆತ ಸಪ್ಪೆಯಾಗಿರುವುದನ್ನು ಗ್ರಹಿಸಿ, ಕಾರಣ ಕೇಳಿದರು. ‘ನನ್ನ ಕೈ ಗಡಿಯಾರ ಕಳೆದುಕೊಂಡಿದ್ದೇನೆ. ಅದು ನಿಮ್ಮ ಅಜ್ಜಿ ನನಗೆ ಕೊಟ್ಟ ಮೊದಲ ಉಡುಗೊರೆ’ ಎಂದು ಮರುಗಿದ. ಮೊಮ್ಮಕ್ಕಳು, ಅಜ್ಜನಿಗೆ ಗಡಿಯಾರ ಹುಡುಕಿ ಕೊಡುವುದಾಗಿ ಭರವಸೆ ನೀಡಿ, ತೋಟದ ಮನೆಯತ್ತ ಹೆಜ್ಜೆಹಾಕಿದರು.
ತೋಟದ ಮನೆ ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿತ್ತು. ಅಜ್ಜ ಮತ್ತು ಆ ಹುಡುಗರು ಒಬ್ಬ ಸೇವಕನ ಸಹಾಯದಿಂದ ಎರಡು ಗಂಟೆಗೂ ಹೆಚ್ಚು ಕಾಲ ಹುಡುಕಿದರೂ ಗಡಿಯಾರ ಸಿಗಲಿಲ್ಲ. ಮೊಮ್ಮಕ್ಕಳು ಸಪ್ಪೆ ಮೋರೆ ಹಾಕಿಕೊಂಡು ಹೊರಬಂದರು. ಒಬ್ಬ ಹುಡುಗ ಮಾತ್ರ ಏನೋ ಉಪಾಯ ಮಾಡಿ ಮತ್ತೆ ತೋಟದ ಮನೆ ಕಡೆ ಸರಸರನೆ ನಡೆದು ಹೋದ. ಉಳಿದ ಹುಡುಗರು ಅವನನ್ನು ಹಿಂಬಾಲಿಸಿದರು. ಸ್ವಲ್ಪ ಹೊತ್ತಿನ ನಂತರ ಕೈ ಗಡಿಯಾರದೊಂದಿಗೆ ಮರಳಿ ಬಂದು ಅಜ್ಜನ ಕೈಗಿತ್ತರು.
ಆತನ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅದಕ್ಕೂ ಮಿಗಿಲಾಗಿ ಆಶ್ಚರ್ಯ ಮತ್ತು ಕುತೂಹಲದೊಂದಿಗೆ ಕೇಳಿದರು- ‘ಹೇಗೆ ಸಿಕ್ಕಿತು!’ ಅಂತ. ಹುಡುಗರು ವಿವರಿಸಿದರು, ‘ನಾವು ನಾಲ್ಕು ಜನ ಮನೆಯ ನಾಲ್ಕು ಮೂಲೆಗಳಲ್ಲಿ 10 ನಿಮಿಷ ನಿಶ್ಶಬ್ದವಾಗಿ, ಧ್ಯಾನಕ್ಕೆ ಕುಳಿತೆವು. ಆಗ ಮನೆ ತುಂಬ ಮೌನ ಆವರಿಸಿತು. ಕೆಲವು ನಿಮಿಷಗಳ ನಂತರ ಟಿಕ್, ಟಿಕ್ ಎಂಬ ಶಬ್ದ ಕೇಳತೊಡಗಿತು. ಶಬ್ದ ಬಂದ ಕಡೆ ಹುಡುಕಿದೆವು, ಗಡಿಯಾರ ಸಿಕ್ಕಿತು’. ಹೌದು, ಆ ಹುಡುಗರ ರೀತಿ, ನಾವು ಶಾಂತವಾಗಿದ್ದು ಆಲೋಚಿಸಿದರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಆದರೆ ಜೀವನದಲ್ಲಿ ಬರುವ ಸಮಸ್ಯೆಗಳಿಗೆ, ಬೇಗನೆ ಪ್ರತಿಕ್ರಿಯಿಸಿ ಅದನ್ನು ಇನ್ನಷ್ಟು ಕ್ಲಿಷ್ಟಗೊಳಿಸುತ್ತೇವೆ. ತಾಳ್ಮೆಯಿಂದಿದ್ದು, ಮನಸ್ಸಿನ ಶಾಂತತೆ ಕಾಪಾಡಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದರೆ, ನಮ್ಮ ಆಂತರಿಕ ಶಕ್ತಿ, ಆತ್ಮವಿಶ್ವಾಸ ವೃದ್ಧಿಯಾಗಿ, ಯಶಸ್ವಿಯಾಗುತ್ತೇವೆ.
(ಲೇಖಕರು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ)