

ಅದೊಂದು ಕುಟುಂಬ. ಅದರಲ್ಲಿ ಗಂಡ-ಹೆಂಡತಿ ಜತೆಗಿಬ್ಬರು ಗಂಡು ಮಕ್ಕಳು. ತಂದೆ ನಿತ್ಯವೂ ಕುಡಿದು ಬರುತ್ತಿದ್ದ. ಮಾತ್ರವಲ್ಲ ಹೆಂಡತಿ, ಮಕ್ಕಳಿಗೆ ಮನಸ್ಸೋ ಇಚ್ಛೆ ಹೊಡೆದು ಬಡಿದು ರಂಪಾಟ ಮಾಡುತ್ತಿದ್ದ. ಮನೆಯಲ್ಲಿ ಶಾಂತಿ ನೆಮ್ಮದಿ ಇರದ ನಿತ್ಯದ ಗೋಳಾಟದ ಬದುಕು ಅವರದಾಗಿತ್ತು. ಗಂಡು ಮಕ್ಕಳಿಬ್ಬರೂ ಪ್ರತಿಭಾವಂತರಾಗಿದ್ದು ಓದಿನಲ್ಲಿ ಮುಂದಿದ್ದರು. ಆದರೆ, ಮನೆಯೊಳಗಿನ ವಾತಾವರಣ ಅವರೊಳಗಿನ ನೆಮ್ಮದಿಯನ್ನು ಹಾಳುಮಾಡಿತ್ತು. ವರ್ಷಗಳು ಕಳೆದವು. ಇಬ್ಬರು ಮಕ್ಕಳಲ್ಲಿ ಒಬ್ಬ ವಿದ್ಯಾಭ್ಯಾಸದಲ್ಲಿ ಆಸಕ್ತಿ ವಹಿಸಿ ವಿದ್ಯಾವಂತನಾಗಿ ಒಳ್ಳೆಯ ಸಂಬಳದ ಉನ್ನತ ಹುದ್ದೆಯ ನೌಕರಿ ಹಿಡಿದ. ಮತ್ತೊಬ್ಬ ಪ್ರತಿಭಾವಂತನಾಗಿದ್ದರೂ ಓದಿನಲ್ಲಿ ಆಸಕ್ತಿ ಕಳೆದು ಸೋಮಾರಿಯಾಗಿ ದಾರಿ ತಪ್ಪಿ ದುಶ್ಚಟ ಕಲಿತು ಕಳ್ಳತನ ಮಾಡಿ ಜೈಲು ಸೇರಿದ.
ಈ ಇಬ್ಬರು ತರುಣರ ಬದುಕನ್ನು ಗಮನಿಸಿದ ಪತ್ರಕರ್ತರೊಬ್ಬರು ಜೈಲು ಸೇರಿದ ಯುವಕನನ್ನು ಮಾತನಾಡಿಸಿದಾಗ ಆತ ಹೀಗೆಂದ, ‘ನಾವು ಹುಟ್ಟಿದಾಗಿಂದಲೂ ನಮ್ಮ ಮನೆಯ ವಾತಾವರಣ ಕಲುಷಿತವಾಗಿತ್ತು. ಅಪ್ಪ ದಿನವೂ ಕುಡಿದು ಬಂದು ತಾಯಿ, ಮಕ್ಕಳಿಗೆ ಬೈದು, ಹೊಡೆದು ಮಾಡುತ್ತಿದ್ದ. ಮನೆಯಲ್ಲಿ ಶಾಂತಿ-ನೆಮ್ಮದಿ ಇರಲಿಲ್ಲ. ಹಾಗಾಗಿ ನಾನು ಓದಿನಲ್ಲಿ ಆಸಕ್ತಿ ಕಳೆದುಕೊಂಡೆ. ಕೆಟ್ಟ ಸಹವಾಸ ನನ್ನನ್ನು ದುಶ್ಚಟಗಳ ದಾಸನನ್ನಾಗಿಸಿತು. ಹಣ ಸಿಗದಿದ್ದಾಗ ಕಳ್ಳತನ ಮಾಡಿದೆ. ಅದೀಗ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಇದಕ್ಕೆಲ್ಲ ಕಾರಣ ನನ್ನ ತಂದೆ’ ಎಂದ.
ಚೆನ್ನಾಗಿ ಓದಿ ಉನ್ನತ ಹುದ್ದೆ ಪಡೆದ ಇನ್ನೊಬ್ಬ ಸೋದರನ ಅಭಿಪ್ರಾಯ ಏನಾಗಿರಬಹುದೆಂಬ ಕುತೂಹಲದಿಂದ ಆ ಪತ್ರಕರ್ತ ವಿಚಾರಿಸಿದಾಗ, ಆ ಸಹೋದರ ‘ನಾನು ಈ ಸ್ಥಾನಕ್ಕೆ ಬರಲು ಕಾರಣ ನನ್ನ ತಂದೆ. ಅವರು ನಿತ್ಯವೂ ಕುಡಿದು ಬಂದು ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದರು. ನಮ್ಮ ಮನೆ ಶಾಂತಿ- ನೆಮ್ಮದಿ ಇಲ್ಲದ ನರಕವಾಗಿತ್ತು. ತಂದೆಯ ವರ್ತನೆ ನನ್ನನ್ನು ಹೊಸ ಆಲೋಚನೆಗೆ ಹಚ್ಚಿತ್ತು. ನಾನು ಚೆನ್ನಾಗಿ ಓದಬೇಕು, ಒಳ್ಳೆಯ ನೌಕರಿ ಹಿಡಿದು ಶಾಂತಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು. ತಂದೆಯಂತೆ ನಾನಾಗಬಾರದು. ಈ ಆಲೋಚನೆ ಬಂದೊಡನೆ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಹಿಡಿದೆ’ ಎಂದ.
ಈ ಸಹೋದರರ ಹಿಂದಿರುವ ಪ್ರೇರಣಾದಾಯಿ ವ್ಯಕ್ತಿ ಅವರ ಜನ್ಮದಾತನೇ. ಆದರೆ, ಆ ಸಹೋದರರು ಸ್ವೀಕರಿಸಿದ ರೀತಿ ಬೇರೆ. ಅನೇಕ ಬಾರಿ ನಮ್ಮದೆರು ಬರುವ ನಕಾರಾತ್ಮಕ ಘಟನೆಗಳು ನಮ್ಮೊಳಗೆ ಸಕಾರಾತ್ಮಕ ಆಲೋಚನೆಗಳು ಮೊಳೆಯಲು ಪ್ರೇರಣೆಯಾಗಬಹುದು. ಹಾಗಾಗಿ, ಹೊರ ಜಗತ್ತಿನಲ್ಲಿ ಕಾಣುವ ನಕಾರಾತ್ಮಕ ಘಟನೆಗಳು ನಮಗೆ ಎಚ್ಚರಿಕೆಯ ಗಂಟೆಯಾದರೆ ಕೆಟ್ಟ ಘಟನೆಗಳೂ ಜೀವನಕ್ಕೆ ಪಾಠವಾಗುತ್ತವೆ. ಕೆಟ್ಟ ವ್ಯವಸ್ಥೆಯನ್ನು ದೂರುತ್ತಾ ಕೂರುವುದರಿಂದ ನಮ್ಮ ಬದುಕು ನರಕವಾಗುತ್ತದೆ. ಯಾವುದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎನ್ನುವ ಅರಿವೇ ನಮ್ಮೊಳಗೆ ಸಕಾರಾತ್ಮಕ ದೃಷ್ಟಿಕೋನ ಮೊಳೆಯಲು ಕಾರಣವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)