

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆಯಲಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ಪ್ರಬಂಧ, ಜೀವನಚಿತ್ರ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರು. ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನಾಡಿನ ನಾನಾ ಕ್ಷೇತ್ರಗಳ ಸಾಧಕರು ಇಲ್ಲಿ ಮೆಲುಕು ಹಾಕಿದ್ದಾರೆ.
ಎಚ್ಚೆಸ್ವಿ ಅತ್ಯಂತ ಸಜ್ಜನ ಸಾಹಿತಿ. ಐದಾರು ದಶಕಗಳಿಂದ ಕಾವ್ಯವನ್ನು ಗಂಭೀರವಾಗಿ ತಪಸ್ಸಿನಂತೆ ಬರೆದವರು. ಷಟ್ಪದಿ ಸೇರಿ ವಿವಿಧ ಛಂದೋಪ್ರಕಾರಗಳಲ್ಲಿ ಅವರು ಕಾವ್ಯಕೃಷಿ ಮಾಡಿದ್ದಾರೆ. ಪುರಾಣದಿಂದ ವಸ್ತುವನ್ನು ಆಯ್ದುಕೊಂಡು ವರ್ತಮಾನದ ಕಣ್ಣಿನಿಂದ ನೋಡುವ ಪ್ರಯತ್ನ ಮಾಡಿದ್ದಾರೆ. ಅವರ ಬರವಣಿಗೆಯಲ್ಲಿ ಮಾನವೀಯ ತುಡಿತ ಸದಾ ಜಾಗೃತವಾಗಿರುತ್ತದೆ.
ಹೀಗಾಗಿ ಅವರೆಂದರೆ ಈ ತಲೆಮಾರಿನವರಿಗೆ ಇಷ್ಟ. ಅವರು ಅನೇಕ ವಿದ್ಯಾರ್ಥಿಗಳನ್ನು, ಬರಹಗಾರರನ್ನು ಬೆಳೆಸಿದ್ದಾರೆ. ಅವರ ನಾಟಕಗಳು ಆಸಕ್ತಿದಾಯಕ. ಪ್ರದರ್ಶನವಾಗಿಯೂ ಯಶ ಕಂಡಿವೆ, ಓದುಗರಿಗೂ ಇಷ್ಟವಾಗಿವೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಎಚ್ಚೆಸ್ವಿ ಕಾವ್ಯದ ಬಗ್ಗೆ ಅಭಿಮಾನವಿತ್ತು. ಎರಡು ದಶಕಕ್ಕೂ ಹೆಚ್ಚುಕಾಲ ಜಿಎಸ್ಸೆಸ್ ಅವರ ಪ್ರೀತಿ, ವಾತ್ಸಲ್ಯ ಪಡೆದವರು ಎಚ್ಎಸ್ವಿ. ಅವರಲ್ಲಿ ಸ್ಥಿತಪ್ರಜ್ಞತೆ ಇದೆ. ಜತೆಗೆ ಜೀವನ ಕುತೂಹಲವೂ ಇದೆ.
ಅದರಿಂದ ಅವರು ಚಿತ್ರ ನಿರ್ದೇಶಕರೂ ಆದರು. ಅವರಿಗೆ ಹಾಸ್ಯಪ್ರಜ್ಞೆಯೂ ಚೆನ್ನಾಗಿದೆ. ಆಪ್ತವಲಯದಲ್ಲಿ ಅವರು ಹಾಸ್ಯ ಮಾಡುವುದುಂಟು. ಅವರು ಮಾಡುವ ಸ್ವಾರಸ್ಯಕರ ಹಾಸ್ಯದ ಅಪರೂಪದ ಕ್ಷಣಗಳನ್ನು ನಾನು ಕಂಡಿದ್ದೇನೆ. ಅವರೀಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಕನ್ನಡದ ಕಷ್ಟ ಕಾಲದಲ್ಲಿ ಪರಿಹಾರ ಸೂಚಿಸುವ ಸಾಧ್ಯತೆಗಳಿರುವ ಅವರ ಭಾಷಣ ಕೇಳಲು ಕಾತರನಾಗಿದ್ದೇನೆ.
| ಡಾ. ಸಿದ್ಧಲಿಂಗಯ್ಯ ಪ್ರಸಿದ್ಧ ಕವಿ