

ಕನ್ನಡದ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಕೆಚ್ಚು ತುಂಬಿದ ಅವರ ಕಾವ್ಯ ಒಂದು ಕಾಲಘಟ್ಟದಲ್ಲಿ ದಲಿತ ಚಳವಳಿಗೆ ಹೊಸ ಶಕ್ತಿ ತಂದುಕೊಟ್ಟಿತು.
ಹೆಮ್ಮೆಯ ಕವಿ ಸಿದ್ದಲಿಂಗಯ್ಯ ಅವರನ್ನು ನಾನು ಮೊದಲ ಬಾರಿ ಭೇಟಿಯಾಗಿದ್ದು ದಲಿತ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ. ಆಗ ಚಳವಳಿಯಲ್ಲಿ ಭಾಗವಹಿಸುವುದೇ ದೇಹಕ್ಕೆ ಕರೆಂಟ್ ಚಾರ್ಜ್ ಮಾಡಿಸಿದಂತಾಗುತ್ತಿತ್ತು.
ನದಿ ಉಕ್ಕಿ ಹರಿದಂತೆ ವಿದ್ಯಾರ್ಥಿ ಸಮುದಾಯ. ‘ಆಕಾಶವ ಎತ್ತಿ ನಿಲ್ಲಿಸಿ, ನೀಲಿಯಾಗಿ ನಿಂತವರೆ, ಕಪ್ಪು ನೆಲವ ಕೆಂಪು ಮಾಡಿ, ಬಾಳೆಯಾಗಿ ಅರಳಿದವರೆ...’ ಎಂಬ ಸಿದ್ದಲಿಂಗಯ್ಯನವರ ಸಾಲುಗಳು ಕಿವಿ-ಮನಸ್ಸು ತುಂಬುತ್ತಿದ್ದವು. ಅಷ್ಟೊತ್ತಿಗೆ ಸಿದ್ದಲಿಂಗಯ್ಯ ಬಂದರು; ಅರ್ಧ ಮುಕ್ಕಾಲು ಗಂಟೆ ಭಾಷಣ ಮಾಡಿದರು. ದೂರದಲ್ಲಿ ನಿಂತಿದ್ದ ನನಗೆ ಅವರ ಸಮೀಪ ದರ್ಶನಭಾಗ್ಯ ಸಿಗಲಿಲ್ಲ. ಹತ್ತಿರಕ್ಕೆ ಹೋಗಲು ಆ ಸಂದಣಿಯಲ್ಲಿ ಸಾಧ್ಯವಾಗಲಿಲ್ಲ. ಏಕೆಂದರೆ ಎಲ್ಲರಿಗೂ ಅವರನ್ನು ನೋಡುವ, ಕೈಕುಲುಕುವ ಆಸೆ. ಆ ಗದ್ದಲದಲ್ಲಿ ನನ್ನ ಚಪ್ಪಲಿಗಳೂ ಕಳೆದುಹೋದವು. ಅವತ್ತು ನಾನು ಊರಿಗೇ ಹೋಗಲಿಲ್ಲ. ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡು, ಮಾರನೇ ದಿನ ಬೆಳಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿದ್ದ ಅವರ ಕೊಠಡಿಗೆ ಹೋದೆ. ಕುರ್ಚಿಯಲ್ಲಿ ಅವರಿರಲಿಲ್ಲ. ಅದಕ್ಕೊಂದು ಬ್ಯಾಗ್ ನೇತಾಡುತ್ತಿತ್ತು. ಅಲ್ಲೇ ಇದ್ದ ಇನ್ನೊಬ್ಬರಿಗೆ ‘‘ಸಿದ್ದಲಿಂಗಯ್ಯನವರನ್ನು ನೋಡಬೇಕಿತ್ತು’’ ಅಂತ ಹೇಳಿದೆ. ‘‘ಅವರು ಕ್ಲಾಸ್ಗೆ ಹೋಗಿದ್ದಾರೆ. ಇಲ್ಲೇ ಕಾಯಿರಿ’’ ಎಂದರು. ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ್ದರಿಂದ ‘‘ತಾವು ಸರ್?’’ ಅಂದೆ. ‘‘ನಾನು ಬರಗೂರು ರಾಮಚಂದ್ರಪ್ಪ’’ ಅಂದರು. ಒಬ್ಬ ಕವಿಯನ್ನು ನೋಡಲು ಹೋದವನಿಗೆ ಅಲ್ಲೇ ಇನ್ನೊಬ್ಬ ದೊಡ್ಡ ಸಾಹಿತಿಯನ್ನು ನೋಡಿ ತುಂಬಾ ಖುಷಿಯಾಯಿತು. ನನ್ನ ಪರಿಚಯ ಕೇಳಿದರು. ಊಟ ಆಯ್ತಾ ಎಂದರು. ಆಗದಿದ್ದರೂ ಹ್ಞೂ ಅಂದೆ. ‘‘ಇಲ್ಲೇ ಇರಿ ಬರ್ತಾರೆ’’ ಎಂದು ಹೇಳಿ ಅವರೂ ಪಾಠ ಮಾಡಲು ಹೋದರು.
ಸ್ವಲ್ಪ ಹೊತ್ತಿಗೆ ಸಿದ್ದಲಿಂಗಯ್ಯ ಬಂದರು. ಬ್ಯಾಗು ನೇತು ಹಾಕಿದ್ದ ಕುರ್ಚಿಯಲ್ಲಿ ಕುಳಿತರು. ಇವರೇ ಸಿದ್ದಲಿಂಗಯ್ಯ ಅಂತ ನನಗೆ ಅನ್ನಿಸಿತು. ಇವರ ಕವಿತೆಗಳಿಗೂ ಇವರಿಗೂ ಎಷ್ಟು ವ್ಯತ್ಯಾಸವಿದೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಕೈಕುಲುಕಿದೆ. ಅವರ ಹಸ್ತ ಮೊಲದ ಪಾದದಷ್ಟು ಮೃದುವಾಗಿತ್ತು. ಬಹುಶಃ ಇವರು ದಾರಿಯಲ್ಲಿ ಹೋಗುವ ಇರುವೆಯನ್ನೂ ನೋಡಿ ದಾಟಿಕೊಂಡು ಹೋಗುವ ಮಾನವೀಯ ಜೀವಿ ಅನ್ನಿಸಿತು. ಆದರೆ ಅವರ ಕವನದ ಸಾಲುಗಳು ಮಾತ್ರ ಇವರೇ ಬರೆದಿದ್ದಾ ಎನ್ನಿಸುವಂತಿದ್ದವು. ಹಿಂದಿನ ದಿನ ಕಾರ್ಯಕ್ರಮಕ್ಕೆ ಬಂದಿದ್ದನ್ನೆಲ್ಲ ಹೇಳಿದೆ. ಅವರು ನನ್ನ ಕಾಲುಗಳಲ್ಲಿ ಚಪ್ಪಲಿ ಇಲ್ಲದ್ದನ್ನು ಗಮನಿಸಿದರು. ಕೆಲವು ಮಾತುಗಳ ನಂತರ ಊಟ ಮಾಡಿದಿರಾ ಎಂದು ಕೇಳಿದರು. ಹ್ಞೂ ಅಂದೆ. ‘‘ಇಲ್ಲ, ನಿಮಗೆ ಹಸಿವಾಗಿರಬಹುದು, ನನಗೂ ಹಸಿವಾಗಿದೆ. ಇಬ್ಬರೂ ಊಟ ಮಾಡೋಣ ಬನ್ನಿ’’ ಎಂದು ಕರೆದೊಯ್ದರು. ವಿವಿ ಕ್ಯಾಂಪಸ್ನ ಹೊರಗೆ ಅನ್ನ ಸಾಂಬಾರ್ ಸವಿದೆವು. ನಂತರ ಅವರಿಂದ ಬೀಳ್ಕೊಂಡೆ. ನಂತರ ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದೇನೆ. ಒಡನಾಡಿದ್ದೇನೆ. ಆದರೆ ಮೊದಲ ಭೇಟಿಯಲ್ಲಿ ಕಂಡ ಅವರ ಮಾತು-ಮನಸ್ಸಿನ ಮೃದುತ್ವ, ಅಪರಿಚಿತನನ್ನೂ ಪ್ರೀತಿಯಿಂದ ಕಂಡ ಕ್ಷಣಗಳನ್ನು ಈವರೆಗೂ ಮರೆಯಲು ಸಾಧ್ಯವಾಗಿಲ್ಲ.
| ಸುಬ್ಬು ಹೊಲೆಯಾರ್ (ಲೇಖಕರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು)