

ಕನ್ನಡದ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಕೆಚ್ಚು ತುಂಬಿದ ಅವರ ಕಾವ್ಯ ಒಂದು ಕಾಲಘಟ್ಟದಲ್ಲಿ ದಲಿತ ಚಳವಳಿಗೆ ಹೊಸ ಶಕ್ತಿ ತಂದುಕೊಟ್ಟಿತು.
(‘‘ಇದರಿಂದ ಪುಳಕಗೊಂಡ ನನ್ನ ತಾಯಿ ಕೈಲಿದ್ದ ಪೊರಕೆಯನ್ನು ಮೇಲಕ್ಕೆತ್ತಿ ಅತ್ತಿತ್ತ ಬೀಸಿ ಸಂತೋಷ ವ್ಯಕ್ತಪಡಿಸಿದಳು. ಅವಳ ಮುಖ ಅರಳಿತ್ತು. ಒಂದು ರೀತಿಯ ಸಾರ್ಥಕ ಭಾವನೆ ಎದ್ದುಕಾಣುತ್ತಿತ್ತು. ಸಭಿಕರು ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು’’ ಎಂದು ಬರೆಯುತ್ತಾರೆ ಸಿದ್ದಲಿಂಗಯ್ಯ. ಅವರು ಒಂದು ಜನಾಂಗಕ್ಕೆ ದಾರಿ ತೋರಿದ ಕವಿ. ಕನ್ನಡ ಕಾವ್ಯ ಹೊಸ ಚಿಂತನೆಯತ್ತ ಹೊರಳುತ್ತಿದ್ದ ಕಾಲದಲ್ಲಿ ಅವರ ದಲಿತಧ್ವನಿ ಕನ್ನಡ ಕಾವ್ಯ ಪರಂಪರೆಯ ಹೊಟ್ಟೆಯೊಗಳಗಿನಿಂದಲೇ ಹುಟ್ಟಿಬಂತು. ಅವರ ಅಮ್ಮ ಆಕಾಶಕ್ಕೆತ್ತಿ ಬೀಸಿದ ಕಸಬರಕೆ ಅದರ ಹೆಮ್ಮೆಯ ಪತಾಕೆ. ಅದೇ ಅವರ ಕಾವ್ಯ ಸಾಧಿಸಿದ ಸ್ವಂತಿಕೆಯ ದಲಿತರ ಹೆಮ್ಮೆಯ ವಿಜಯಪತಾಕೆಯಾಗಿದೆ. ಸಿದ್ದಲಿಂಗಯ್ಯನವರ ಕವನಗಳು ಕನ್ನಡ ಕಾವ್ಯಪರಂಪರೆಯ ಹಿಂದಿನ
ವೈಚಾರಿಕ ನೆಲೆಗಳನ್ನು ನೆನಪಿಸುವುದರ ಮೂಲಕ ಅದರ ಜತೆಗಿನ ಸಂಬಂಧವನ್ನು ಮತ್ತು ಅವುಗಳಿಂದ ಭಿನ್ನವಾಗುವ ಮೂಲಕ ತನ್ನ ಸ್ವಂತಿಕೆ-ಪ್ರತ್ಯೇಕತೆಯನ್ನು ಏಕಕಾಲಕ್ಕೆ ಸಾಧಿಸಿಕೊಳ್ಳುತ್ತವೆ. ಹಾಗಾಗಿ ಅವರು ಕನ್ನಡ ಕಾವ್ಯಕ್ಕೆ ಹೊಸ ದಿಕ್ಕನ್ನು ತೋರಿಸಿದ ನಮ್ಮ ಕಾಲದ ಪ್ರಮುಖ ಕವಿಯಾಗಿದ್ದಾರೆ.
ಆ ಕವನ ಹುಟ್ಟಿದ್ದು ಹೀಗೆ...
‘‘ಒಮ್ಮೆ ರಂಗಕರ್ವಿು ಸಿ.ಜಿ.ಕೃಷ್ಣಸ್ವಾಮಿ ಅವರು ನನ್ನ ಬಳಿ ಬಂದು ಹೋಟೆಲ್ ಕಾರ್ವಿುಕರ ಸಮಸ್ಯೆಗಳ ಕುರಿತು ನಾಟಕ ಮಾಡುತ್ತಿದ್ದೇವೆ. ಇದಕ್ಕೆ ನೀವು ಕವಿತೆ ರಚಿಸಬೇಕು ಅಂತ ಬೇಡಿಕೆ ಇಟ್ಟರು. ಚಹಾ ಕೊಡಿಸಿದರೆ ಮಾತ್ರ ಕವಿತೆ ರಚಿಸುವುದಾಗಿ ಷರತ್ತು ಹಾಕಿದೆ. ಚಹಾ ಕುಡಿದ ನಂತರ ಮೊದಲ ನಾಲ್ಕು ಸಾಲುಗಳು ಹೊಳೆದವು. ಅಂತಿಮವಾಗಿ ಕವನ ಪೂರ್ಣಗೊಂಡಾಗ ಐದಾರು ಬಾರಿ ಚಹಾ ಸೇವಿಸಿದ್ದೆ. ಕವಿತೆ ಜನಿಸಲು ಸ್ಪೂರ್ತಿಯಾದ ಚಹಾಕ್ಕೆ ಎಂದಿಗೂ ಋಣಿ...’’ ಇದು ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಕವಿತೆ ರೂಪುಗೊಂಡಿದ್ದರ ಹಿನ್ನೆಲೆ. ಇದನ್ನು ಡಾ. ಸಿದ್ದಲಿಂಗಯ್ಯ ಅವರೇ ಒಮ್ಮೆ ಹೇಳಿಕೊಂಡಿದ್ದರು.
ಕಷ್ಟಕಾರ್ಪಣ್ಯ ತುಂಬಿದ್ದ ಬಾಲ್ಯ
ಇಬ್ಬರು ಮನುಷ್ಯರಿಗೆ ನೊಗ ಹೂಡಿ ಹೊಲ ಉಳುಮೆ ಮಾಡುವುದನ್ನು ಕಣ್ಣಳತೆಯ ದೂರದಲ್ಲಿ ನೋಡಲು ಚೆನ್ನಾಗಿಯೇ ಇತ್ತು. ಕೈಯಲ್ಲಿ ಬಾರುಕೋಲು ಹಿಡಿದು ಬೀಸುತ್ತಿದ್ದ ವ್ಯಕ್ತಿಯೊಬ್ಬ ದನಗಳಿಗೆ ಹೊಡೆದಂತೆಯೇ ಹೊಡೆಯುತ್ತಿದ್ದ. ಆ ನೊಗ ಹೊತ್ತವರಲ್ಲಿ ಒಬ್ಬ ವ್ಯಕ್ತಿ ಅಪ್ಪನೆಂದು ತಿಳಿದಾಗ ಅರಗಿಸಿಕೊಳ್ಳುವುದು ಕಷ್ಟವಾಯಿತು. ಕಣ್ತುಂಬ ನೀರು ತುಂಬಿಕೊಂಡಿತು. ಇಂಥ ಹಲವಾರು ಕಷ್ಟಗಳನ್ನು ಬಾಲ್ಯದಲ್ಲಿಯೇ ಕಂಡು ಉಂಡು ಅರಗಿಸಿಕೊಂಡವರು ಸಿದ್ದಲಿಂಗಯ್ಯ. ಕೊಳೆಗೇರಿಯಲ್ಲಿ ಬೆಳೆದ ಅದೇ ಹುಡುಗ ಮುಂದೊಂದು ದಿನ ‘‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’’ ಎಂದು ಪ್ರಶ್ನಿಸಿದಾಗ ರೋಮಾಂಚನಗೊಂಡವರು ಲಕ್ಷಾಂತರ ಮಂದಿ. ‘‘ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು ನನ್ನ ಜನಗಳು’’ ಎಂದು ಎದೆಯ ನೋವು ತೋಡಿಕೊಂಡಾಗ ಇಡೀ ಕನ್ನಡ ಸಾರಸ್ವತ ಲೋಕವೇ ಅವರತ್ತ ನೋಡಿತು.
| ಎಸ್.ಆರ್. ವಿಜಯಶಂಕರ (ಲೇಖಕರು ಕನ್ನಡದ ಪ್ರಸಿದ್ಧ ವಿಮರ್ಶಕರು)