ಪ್ರಧಾನಿ ಮೋದಿ ಜಾಗತಿಕ ಮುತ್ಸದ್ದಿ

edit 3
Published on

ತಮ್ಮ ದೇಶ ಮತ್ತು ಸಮಾಜವನ್ನು ಗಂಭೀರ ಬಿಕ್ಕಟ್ಟಿನಿಂದ ಪಾರು ಮಾಡಿ, ಹೊಸ ಚಿಂತನೆಗಳ ಮೂಲಕ ದೇಶವನ್ನು ವಿಶ್ವಗುರುವಿನ ಮಟ್ಟಕ್ಕೆ ಒಯ್ಯುವಂಥ ಮುತ್ಸದ್ದಿ ರಾಜಕಾರಣಿಗಳು ಬಹು ಅಪರೂಪಕ್ಕೆ ಜನ್ಮ ತಾಳುತ್ತಾರೆ. ಬಡ ಕುಟುಂಬದಲ್ಲಿ ಹುಟ್ಟಿಯೂ ಪ್ರಧಾನಮಂತ್ರಿ ಹುದ್ದೆಗೇರುವ ಒಬ್ಬ ವ್ಯಕ್ತಿ ವಿಪತ್ತಿನ ವಿರುದ್ಧ ಒಬ್ಬ ಯೋಧನಂತೆ ಹೋರಾಡಿ ದೇಶವನ್ನು ರಕ್ಷಿಸುತ್ತಾನೆ; ದೇಶವನ್ನು ಜಗತ್ತಿನ ಮುಂಚೂಣಿಯಲ್ಲಿ ನಿಲ್ಲಿಸುತ್ತಾನೆ. ಈ ಎಲ್ಲ ಗುಣ ಹೊಂದಿರುವ ವ್ಯಕ್ತಿಯೇ ಪ್ರಧಾನಿ ನರೇಂದ್ರ ಮೋದಿ.

ಕರೊನಾ ವಿರುದ್ಧದ ಹೋರಾಟದ ಹಾದಿಯಲ್ಲಿ ಹೇಗೆ ಯಶಸ್ವಿಯಾಗಿ ಸಾಗಬಹುದು ಎನ್ನುವುದನ್ನು ಇಡೀ ಜಗತ್ತಿಗೆ ಭಾರತ ತೋರಿಸಿದ್ದರೆ ಅದರ ಪೂರ್ಣ ಶ್ರೇಯಸ್ಸು ಮೋದಿ ನಾಯಕತ್ವಕ್ಕೆ ಸಲ್ಲುತ್ತದೆ. ಸಕಾಲದಲ್ಲಿ ಲಾಕ್​ಡೌನ್ ಘೊಷಣೆ ಮಾಡಿದ್ದಲ್ಲದೆ ನಂತರ ‘ಸಾಮಾಜಿಕ ಅಂತರ’ ಮತ್ತು ‘ಕರೊನಾ ಸೇನಾನಿಗಳು’ ಎಂಬ ಪರಿಕಲ್ಪನೆ ಪ್ರತಿಯೊಬ್ಬರ ಮಂತ್ರವಾಗುವುದನ್ನು ಅವರು ಖಾತರಿಪಡಿಸಿದರು. ಪ್ರಧಾನಿಯ ದೂರದೃಷ್ಟಿ, ಕಠಿಣ ಹಾಗೂ ಸಕಾಲಿಕ ನಿರ್ಧಾರಗಳು ಮತ್ತು ಪರಿಹಾರ ಕ್ರಮಗಳಿಗೆ ಸಂಬಂಧಿಸಿದ ದೃಷ್ಟಿಕೋನ- ಇವೆಲ್ಲವುಗಳು 130 ಕೋಟಿ ಭಾರತೀಯರು ಕರೊನಾ ವೈರಸ್​ನಿಂದ ತೀವ್ರವಾಗಿ ಬಾಧಿತವಾಗದಿರಲು ಕಾರಣವಾಗಿವೆ. ಕರೊನಾ ಹೋರಾಟದಲ್ಲಿ ಭಾರತದ ನಾಯಕತ್ವ ಮತ್ತು ತಂತ್ರವನ್ನು ಶ್ಲಾಘಿಸಿರುವ ಜಾಗತಿಕ ಸಮುದಾಯ, ಅದನ್ನು ಮಾದರಿಯಾಗಿ ಪರಿಗಣಿಸುತ್ತಿದೆ.

ಪ್ರಧಾನಿ ಕೈಗೊಂಡ ಕ್ಷಿಪ್ರ ಕ್ರಮಗಳು ಸವಾಲನ್ನು ನೇರಾ-ನೇರವಾಗಿ ಎದುರಿಸಿದಂಥವು. ವೈಯಕ್ತಿಕ ಸುರಕ್ಷತಾ ಉಪಕರಣ (ಪಿಪಿಇ) ಕಿಟ್ ಮತ್ತು ಎನ್-95 ಮಾಸ್ಕ್​ಗಳಿಗೆ ಭಾರತ ಏಪ್ರಿಲ್ ವೇಳೆಗೆ ಆಮದನ್ನೇ ನೆಚ್ಚಿಕೊಂಡಿತ್ತು. ಭಾರತ ಇದೀಗ ಪ್ರತಿದಿನ 2.5 ಲಕ್ಷಕ್ಕೂ ಹೆಚ್ಚು ಕಿಟ್ ಮತ್ತು ಎರಡು ಲಕ್ಷಕ್ಕೂ ಅಧಿಕ ಮಾಸ್ಕ್ ಗಳನ್ನು ತಯಾರಿಸುತ್ತಿದೆ. ನಮಗೆ ವೆಂಟಿಲೇಟರ್​ಗಳ ಕೊರತೆಯಿಲ್ಲ. ಐದು ಲಕ್ಷಕ್ಕೂ ಹೆಚ್ಚು ಐಸೊಲೇಷನ್ ಬೆಡ್ ಹಾಗೂ ಸಾಕಷ್ಟು ಐಸಿಯು ಬೆಡ್​ಗಳಿಂದ ಸಜ್ಜಿತರಾಗಿದ್ದೇವೆ. ದೇಶದಾದ್ಯಂತ ಕೊವಿಡ್ ಆರೈಕೆ ಕೇಂದ್ರಗಳಾಗಿ (ಸಿಸಿಸಿ) ಬಳಸಲು ಭಾರತೀಯ ರೈಲ್ವೆ 5231 ಬೋಗಿಗಳನ್ನು ಸನ್ನದ್ಧವಾಗಿರಿಸಿದೆ. ಇಷ್ಟು ಅಲ್ಪ ಅವಧಿಯಲ್ಲಿ ಇಷ್ಟೊಂದು ಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಮಾಡಿದ್ದು, ಬಿಕ್ಕಟ್ಟು ಎದುರಿಸಲು ಭಾರತದ ಆರೋಗ್ಯ ಮೂಲಸೌಕರ್ಯವನ್ನು ಉನ್ನತೀಕರಿಸುವ ಪ್ರಧಾನಿಯವರ ಬದ್ಧತೆಗೆ ಸಾಕ್ಷಿಯಾಗಿದೆ.

ಮಾರ್ಚ್ ಕೊನೆಯ ಹೊತ್ತಿಗೆ ಸಾಕಷ್ಟು ಪರೀಕ್ಷಾ ವ್ಯವಸ್ಥೆ ಲಭ್ಯತೆ ಬಗ್ಗೆ ದೇಶದಲ್ಲಿ ಕಳವಳ ವ್ಯಕ್ತವಾಗಿತ್ತು. ಆದರೆ, ದೇಶದಲ್ಲಿ ಒಟ್ಟು 15 ಲಕ್ಷಕ್ಕೂ ಹೆಚ್ಚು ಜನರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಕರೊನಾ ಸಾವಿನ ದರ ನಿಯಂತ್ರಿಸುವಲ್ಲಿಯೂ ಭಾರತ ಪರಿಣಾಮಕಾರಿಯಾಗಿ ಸಮರ್ಥವಾಗಿದೆ. ಈ ವಿಚಾರದಲ್ಲಿ ದಕ್ಷಿಣ ಕೊರಿಯಾ, ಚೀನಾ, ರಷ್ಯಾ ಮತ್ತು ಅಮೆರಿಕ ಮುಂತಾದ ದೇಶಗಳಿಗಿಂತ ಭಾರತ ಯಶಸ್ವಿಯಾಗಿರುವುದನ್ನು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಸಂಖ್ಯೆಗಳು ದೃಢಪಡಿಸಿವೆ. ಈಶಾನ್ಯ ಭಾರತದ ಎಂಟು ರಾಜ್ಯಗಳ ಪೈಕಿ ಆರು ರಾಜ್ಯಗಳು ಹಾಗೂ ಗೋವಾ ಕೊವಿಡ್-19 ಮುಕ್ತವಾಗಿವೆ. ಹಲವು ರಾಜ್ಯಗಳಲ್ಲಿ ಒಂದೇ ಒಂದು ಕರೊನಾ ಪಾಸಿಟಿವ್ ಪ್ರಕರಣವಿಲ್ಲ. ಕರೊನಾ ವೈರಸ್ ರೋಗಿಗಳು ವಾಸಿಯಾಗುವ ದರ ಶೇಕಡ 31 ಆಗಿದ್ದು ದೇಶ ಸರಿಯಾದ ಹಾದಿಯಲ್ಲಿ ಸಾಗುತ್ತಿರುವ ಸೂಚನೆಯಾಗಿದೆ.

ಅಧ್ಯಯನಗಳ ಸ್ಪಷ್ಟನೆ: ಒಂದು ವೇಳೆ ಪ್ರಧಾನಮಂತ್ರಿ ತಕ್ಷಣವೇ ಲಾಕ್​ಡೌನ್ ಘೊಷಿಸದಿದ್ದರೆ ಕರೊನಾ ಸೋಂಕಿತರ ಪ್ರಮಾಣ ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿತ್ತು ಎಂದು ಹಲವು ಅಧ್ಯಯನಗಳು ಅಭಿಪ್ರಾಯಪಟ್ಟಿವೆ. ಲಾಕ್​ಡೌನ್ ಕರೆಗೆ ಭಾರತದ ಜನರು ಹೃತ್ಪೂರ್ವಕವಾಗಿ ಸ್ಪಂದಿಸಿದರು; ನಿಯಮಗಳನ್ನು ಇತರ ದೇಶಗಳ ಜನರಿಗಿಂತ ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸಿದರು. ಭಾರತದ ಸ್ಥಿತಿ ಅಮೆರಿಕ, ಸ್ಪೇನ್ ಅಥವಾ ಇಟಲಿಗಿಂತಲೂ ಹೆಚ್ಚು ಉತ್ತಮವಾಗಿದೆ. ಲಾಕ್​ಡೌನ್ ನಿಯಮಗಳ ಕಟ್ಟುನಿಟ್ಟು ಆಚರಣೆ ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಪಾತ್ರವಹಿಸಿತು. ಇಲ್ಲಿ ಲಾಕ್​ಡೌನ್ ಯಶಸ್ವಿಯಾಗಲು ಜನರು ಪ್ರಧಾನಿ ಮೋದಿ ಹಾಗೂ ಅವರ ನಾಯಕತ್ವದಲ್ಲಿ ಇಟ್ಟ ವಿಶ್ವಾಸವೇ ಕಾರಣವಾಗಿದೆ.

ಭಯಾನಕ ವೈರಸ್ ನಿರ್ವಹಣೆಗಾಗಿ ಪ್ರಧಾನಿ ಮೋದಿ ಪ್ರತಿದಿನ 17ರಿಂದ 18 ತಾಸು ಕೆಲಸ ಮಾಡುತ್ತಿದ್ದಾರೆ. ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ತಜ್ಞರ 11 ತಂಡಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದಿಸುತ್ತಾರೆ. ಕರೊನಾ-ವಿರೋಧಿ ಹೋರಾಟದಲ್ಲಿ ಪಿಎಂ ಕೇರ್ಸ್ ಫಂಡ್ ಒಂದು ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ. ಅಗತ್ಯವಿರುವವರಿಗೆ ಆಹಾರ ಹಾಗೂ ಆಶ್ರಯ ನೀಡಬೇಕೆಂಬ ಮೋದಿ ಕರೆಗೆ ಸರ್ಕಾರಿ, ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳು ಉತ್ತಮವಾಗಿ ಸ್ಪಂದಿಸಿವೆ.

ಬಡ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 1.70 ಲಕ್ಷ ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಪ್ರಕಟಿಸಿದೆ. ಇದುವರೆಗೆ 34,800 ಕೋಟಿ ರೂಪಾಯಿಗಳನ್ನು 39 ಕೋಟಿ ಫಲಾನುಭವಿಗಳಿಗೆ ಡಿಜಿಟಲ್ ಮಾರ್ಗದ ಮೂಲಕ ವಿತರಿಸಲಾಗಿದೆ. ಬಡವರಿಗೆ ಪಡಿತರ ಹಾಗೂ ಅಡುಗೆ ಅನಿಲವನ್ನು ಉಚಿತವಾಗಿ ಪೂರೈಸಲಾಗಿದೆ. ವಲಸೆ ಕಾರ್ವಿುಕರು ಹಾಗೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರು ಅವರವರ ಊರುಗಳಿಗೆ ಮರಳಲು ವ್ಯವಸ್ಥೆ ಮಾಡಲಾಗಿದೆ. ಬಡವರು, ರೈತರು, ಕಾರ್ವಿುಕರು ಹಾಗೂ ಗ್ರಾಮೀಣ ಜನರ ಅಗತ್ಯಗಳಿಗೆ ಪ್ರಧಾನಿ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಈ ಕ್ರಮಗಳು ದೃಷ್ಟಾಂತವಾಗಿವೆ.

ಪ್ರಧಾನಿ ಮೋದಿಯವರಿಂದ ಸ್ಪೂರ್ತಿ ಪಡೆದ ಭಾರತೀಯ ಜನತಾ ಪಕ್ಷ ಜನತೆಯ ಸೇವಾ ಕಾರ್ಯಕ್ಕೆ ಧುಮುಕಿದೆ. ಏಪ್ರಿಲ್ 6ರಂದು ಪಕ್ಷದ 40ನೇ ಸಂಸ್ಥಾಪನಾ ದಿನವನ್ನು ಕರೊನಾ ವಿರೋಧಿ ಹೋರಾಟಕ್ಕೆ ಸಮರ್ಪಿಸಿತು. ಪಕ್ಷದ ಕಾರ್ಯಕರ್ತರು ಇದುವರೆಗೆ 80 ಮಿಲಿಯ ಜನರಿಗೆ ಆಹಾರ ಹಾಗೂ ಪಡಿತರವನ್ನು ತಲುಪಿಸಿದ್ದಾರೆ. ಮಿಲಿಯಾಂತರ ಮಾಸ್ಕ್​ಗಳನ್ನು ವಿತರಿಸಿದ್ದಾರೆ. ವೈದ್ಯರು, ದಾದಿಯರ ಸಹಿತ ಕರೊನಾ ಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಅನುಕೂಲವಾಗುವಂತೆ ಬಿಜೆಪಿ ಒಂದು ಪೋರ್ಟಲ್ ಕೂಡ ಆರಂಭಿಸಿದೆ. ನರೇಂದ್ರ ಮೋದಿ ಭಾರತದ ಪ್ರಧಾನಿ ಮಾತ್ರವಲ್ಲ. ಅವರು ‘ನವ ಭಾರತ’ದ ಚಾಂಪಿಯನ್ ಹಾಗೂ ಸಾಮಾಜಿಕ ಪ್ರಜ್ಞೆಯ ದೂತನಾಗಿ ಹೊರಹೊಮ್ಮಿದ್ದಾರೆ. ಅವರ ಮನವಿ ಮೇರೆಗೆ ಸ್ವಚ್ಛ ಭಾರತ್ ಯೋಜನೆ ಒಂದು ರಾಷ್ಟ್ರೀಯ ಯೋಜನೆಯಾಯಿತು. ‘ಬೇಟಿ ಬಚಾವೋ ಬೇಟಿ ಪಢಾವೋ’ ಘೊಷಣೆ ಒಂದು ರಾಷ್ಟ್ರೀಯ ಗುರಿಯಾಗಿ ಪರಿಣಮಿಸಿದೆ.

ಕರೊನಾ ವಿರುದ್ಧ ಹೋರಾಡುವಲ್ಲಿಯೂ ಮೋದಿ ನೂತನ ವಿಧಾನ ಅನುಸರಿಸಿದರು. ಜನತಾ ಕರ್ಫ್ಯೂ, ದೀಪ ಬೆಳಗುವ ಮೂಲಕ ಆರೋಗ್ಯ ಕಾರ್ಯಕರ್ತರಿಗೆ ಗೌರವ ಮೊದಲಾದವು ಸೇರಿವೆ. ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲೂ ವಿವಿಧ ದೇಶಗಳಿಗೆ ಭಾರತವು ಔಷಧಿಗಳನ್ನು ನೀಡಿದ್ದು, ವೈದ್ಯರು ಹಾಗೂ ಇತರ ಆರೋಗ್ಯ ಕಾರ್ಯಕರ್ತರನ್ನು ಮಿತ್ರದೇಶಗಳಿಗೆ ಕಳಿಸಿದ್ದು ಅಭೂತಪೂರ್ವ ಕ್ರಮವಾಗಿದೆ. ಕರೊನಾ-ವಿರೋಧಿ ಜಾಗತಿಕ ಸಮರದಲ್ಲಿ ಭಾರತ ಒಂದು ನಾಯಕ ದೇಶವಾಗಿ ಮಾರ್ಪಟ್ಟಿದೆ. ಬಿಕ್ಕಟ್ಟಿನ ಸಮಯದಲ್ಲಿ ಮನುಕುಲವನ್ನು ಉಳಿಸಲು ಸಮರ್ಪಣಾ ಭಾವ, ನಿಸ್ವಾರ್ಥ ಸೇವೆ ಹಾಗೂ ಪ್ರಯತ್ನಗಳ ಮೂಲಕ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿರುವ ಒಬ್ಬ ವ್ಯಕ್ತಿ ನಮ್ಮ ದೇಶದ ಪ್ರಧಾನಮಂತ್ರಿ ಮಾತ್ರವಲ್ಲ ಅವರೊಬ್ಬ ಪ್ರಶ್ನಾತೀತ ಮುತ್ಸದ್ದಿ ರಾಜಕಾರಣಿಯೂ ಹೌದು.

(ಲೇಖಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net