ಲಾಕ್​ಡೌನ್ ಹೊತ್ತಲ್ಲಿ ಪ್ರೇರಣೆ ನೀಡುವ ರಾಮಾಯಣದ ಸ್ಥಳಗಳು

Ramayana
Published on

ಮಹಾಮಾರಿ ಕರೊನಾ ಸೋಂಕಿನ ಹಾವಳಿಯಿಂದಾಗಿ ದಿಗ್ಬಂಧನ ಜಾರಿಯಲ್ಲಿದ್ದು, ಜನರು ಮನೆಯಲ್ಲಿ ಇದ್ದಾರೆ. ಈ ಹೊತ್ತಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿ ಹಳೆಯದನ್ನೆಲ್ಲ ಮೆಲುಕು ಹಾಕುವಂತೆ ಮಾಡಿದೆ. ಮರುಪ್ರಸಾರದ ಈ ಧಾರಾವಾಹಿಯಲ್ಲಿ, ಈಗ ರಾವಣನು ಸೀತೆಯ ಅಪರಹಣ ಮಾಡಿ ಲಂಕೆಗೆ ಕರೆದೊಯ್ದಿದ್ದಾನೆ.

ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಶಬರಿಯ ದರ್ಶನ ಮಾಡುತ್ತಾರೆ. ಪಂಪಾ ಸರೋವರ ಹಾಗೂ ಋಷಿಮುಖ, ಅಂಜನಾದ್ರಿ ತಲುಪುತ್ತಾರೆ. ಈ ಪ್ರದೇಶಗಳು ಗಂಗಾವತಿ ನಗರದಿಂದ 8ರಿಂದ 10 ಕಿಲೋಮೀಟರ್ ಅಂತರದಲ್ಲಿವೆ. ಋಷಿಮುಖ ಪರ್ವತದ ಕುರಿತು ಪೌರಾಣಿಕ ವಿಷಯವೇನೆಂದರೆ, ಬೇಟೆಗಾರನ ಮಗಳಾದ ಶಬರಿ ಎಂಬ ಕನ್ಯೆಗೆ ಅವಳ ತಂದೆ ಮದುವೆ ಗೊತ್ತು ಮಾಡಿದ್ದ. ಮದುವೆಯ ಹಿಂದಿನ ರಾತ್ರಿ ಅವಳ ತಂದೆ ಬಹಳಷ್ಟು ಕುರಿಗಳನ್ನು ಮದುವೆಯ ಮನೆಯಲ್ಲಿ ಅಡುಗೆ ಔತಣಕ್ಕಾಗಿ ತೆಗೆದುಕೊಂಡು ಬಂದಾಗ, ಅದು ಅವಳಿಗೆ ಇಷ್ಟವಾಗಲಿಲ್ಲ. ಪ್ರಾಣಿಗಳ ಮೇಲಿನ ಅನುಕಂಪದಿಂದ ಅವಳು ನಸುಕಿನಲ್ಲಿಯೇ ಮನೆ ಬಿಟ್ಟು ಗುರುವಿನ ದರ್ಶನಕ್ಕಾಗಿ ನಡೆದಳು. ಎಷೊ್ಟೕ ದಿನಗಳ ಪ್ರಯಾಣದ ನಂತರ ಅವಳಿಗೆ ಋಷಿಮುಖ ಬೆಟ್ಟದಲ್ಲಿ ಋಷಿ ಮಾತಂಗ ಗುರುಗಳು ದೊರೆತರು. ತನ್ನ ಆಯಸ್ಸನ್ನು ಅವರ ಸೇವೆಯಲ್ಲಿಯೇ ಕಳೆಯತೊಡಗಿದಳು. ಮಾತಂಗ ಋಷಿಗಳ ಅಂತಿಮ ಕಾಲದ ಹೊತ್ತಿಗೆ ಶಬರಿಗೂ ವಯಸ್ಸಾಗಿತ್ತು. ಆಗ ಮಾತಂಗರು-‘ಶ್ರೀರಾಮನ ದರ್ಶನ ನಿನಗಾಗುವುದು, ಅದಾದ ನಂತರ ನಿನಗೆ ಶಾಂತಿನೆಲೆ ದೊರಕುವುದು. ಶ್ರೀರಾಮನಿಗಾಗಿ ನೀನು ಕಾಯಬೇಕು’ ಎಂದು ಹೇಳಿ ಕೊನೆಯುಸಿರೆಳೆದರು. ಅದರಂತೆ ಶಬರಿ ಶ್ರೀರಾಮನಿಗಾಗಿ ಕಾದದು, ರಾಮನ ದರ್ಶನದ ನಂತರ ಜೀವ ತ್ಯಜಿಸಿದ ಕಥೆ ಎಲ್ಲರಿಗೂ ತಿಳಿದಿದೆ.

ಅಲ್ಲದೆ, ರಾವಣ ಸೀತೆಯನ್ನು ಬಲಾತ್ಕಾರವಾಗಿ ಅಪಹರಿಸಿಕೊಂಡು ಪುಷ್ಪಕವಿಮಾನದ ಮೂಲಕ ನಾಸಿಕ್ (ಈಗಿನ ಮಹಾರಾಷ್ಟ್ರ), ಲೇಪಾಕ್ಷಿ(ಈಗಿನ ಆಂಧ್ರಪ್ರದೇಶ), ಋಷಿಮುಖ(ಈಗಿನ ಕರ್ನಾಟಕ) ಮಾರ್ಗದ ಮೂಲಕ ತನ್ನ ರಾಜಧಾನಿ ‘ಲಂಕೆ’ಯನ್ನು ತಲುಪಿದ. ಋಷಿಮುಖ ಪರ್ವತ ಪ್ರದೇಶ(ಹಂಪಿ)ದಲ್ಲಿ ಹನುಮಂತ ಮತ್ತು ವಾನರ ದಂಡನ್ನು ನೋಡಿದ ಸೀತೆ ತನ್ನ ಒಡವೆಗಳನ್ನು ಒಂದು ವಸ್ತ್ರದಲ್ಲಿ ಕಟ್ಟಿ ಕೆಳಗಡೆ ಎಸೆದಳು. ಇದರಿಂದ ಸೀತೆಯ ಅಪಹರಣವಾಗಿದೆಯೆಂದು ತಿಳಿಯಿತು. ಹೀಗೆ ಈಗಿನ ಉತ್ತರ ಪ್ರದೇಶದ ಅಯೋಧ್ಯಾ, ಮಹಾರಾಷ್ಟ್ರದ ನಾಸಿಕ್, ಕರ್ನಾಟಕದ ಹಂಪಿಯ ಋಷಿಮುಖ ಪರ್ವತ, ಆಂಧ್ರಪ್ರದೇಶದ ಲೇಪಾಕ್ಷಿ ಹಾಗೂ ಶ್ರೀಲಂಕಾ ಈ ಎಲ್ಲ ಪ್ರದೇಶಗಳು ಆ ಕಾಲಘಟ್ಟದ ಸತ್ಯ ಸಂಗತಿಗಳನ್ನು ಅನಾವರಣಗೊಳಿಸುತ್ತವೆ. ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಕಲ್ಪನೆಯ ಮಹಾಕಾವ್ಯವಾಗಿರದೆ, ನಡೆದ ಘಟನಾವಳಿಗಳನ್ನು ಅಧ್ಯಯನ ಮಾಡಿ ರಚಿಸಿದ ಮಹಾನ್ ಕೃತಿಯಾಗಿದೆ ಎಂಬುದನ್ನು ಈ ಪ್ರದೇಶಗಳು, ಅಲ್ಲಿ ನಡೆದ ಘಟನಾವಳಿಗಳು ಸ್ಪಷ್ಟಪಡಿಸುತ್ತವೆ.

| ಜೆ.ಸಿ.ಜಾಧವ್ ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net