ಪರೋಪಕಾರವೇ ಶ್ರೇಷ್ಠ ಗುಣ: ಮನೋಲ್ಲಾಸ

Manollasa F
Published on
| ರಾಮಸುಬ್ರಾಯ ಶೇಟ್

ಒಮ್ಮೆ ದೈತ್ಯರೆಲ್ಲರೂ ಬ್ರಹ್ಮನ ಬಳಿಗೆ ಹೊಗಿ ಆಕ್ಷೇಪವೆತ್ತಿದರು. ‘ದೇವತೆಗಳಿಗೆ ಸ್ವರ್ಗಸಂಪತ್ತು, ಮೇಲಿನ ಸ್ಥಾನ, ಪ್ರಮುಖಸಂಪತ್ತು ನೀಡಿದ್ದೀರಿ. ನಮಗೆ ಮಾತ್ರ ಪಾತಾಳ, ಕೆಳಗಿನಸ್ಥಾನ ಏಕೆ? ಇದು ಸರಿಯೇ? ಸಹೋದರರಲ್ಲಿಯೇ ಭೇದ ಮಾಡುತ್ತಿದ್ದೀರಿ. ನಾವು ದೇವತೆಗಳಿಗಿಂತ ತುಂಬ ಸಮರ್ಥರು, ತಪಸ್ಸಿನಿಂದ ಎಂತೆಂಥ ವರಗಳನ್ನು ಪಡೆದುಕೊಂಡಿದ್ದೇವೆ ಎಂಬುದು ನಿಮಗೇ ತಿಳಿದಿದೆ. ಆದ್ದರಿಂದ ನಮಗೆ ಮೇಲಿನ ಸ್ಥಾನ ಬೇಕು, ತಾರತಮ್ಯ ನಿವಾರಿಸಬೇಕು’ ಎಂದಾಗ ಬ್ರಹ್ಮನು ಮರುದಿನ ದೇವತೆ ಮತ್ತು ದೈತ್ಯರ ನಡುವೆ ಪರೀಕ್ಷೆಯನ್ನು ಅಣಿಗೊಳಿಸಿದ. ದೇವತೆಗಳನ್ನೂ ರಾಕ್ಷಸರನ್ನೂ ಸಾಲಾಗಿ ಕೂರಿಸಿ ಬಾಳೆಎಲೆಯಲ್ಲಿ ಒಂದೊಂದು ಉಂಡೆಯನ್ನು ಬಡಿಸಲಾಯಿತು. ‘ತಿನ್ನುವಾಗ ಕೈತೋಳನ್ನು ಮಡಿಚದೇ, ಸೊಂಟವನ್ನು ಬಗ್ಗಿಸದೇ ಉಂಡೆಯನ್ನು ತಿನ್ನಬೇಕು’ ಎಂಬ ಷರತ್ತು ಹಾಕಿದ ಬ್ರಹ್ಮ. ಈ ಷರತ್ತನ್ನು ಕೇಳಿ ಪೇಚಿಗೆ ಸಿಲುಕಿದ ರಕ್ಕಸರು ಹೇಗೇಗೋ ಬಾಯಿಗೆ ಎಸೆದುಕೊಂಡು, ಉಂಡೆಗಳನ್ನು ಮೈಮೇಲೆ ಬೀಳಿಸಿಕೊಂಡು ಸರಿಯಾಗಿ ತಿನ್ನಲಾಗದೆ ಪೆಚ್ಚುಮುಖ ಹಾಕಿದರು. ನಂತರ ದೇವತೆಗಳ ಸರದಿ, ಅವರು ಯೋಚನೆ ಮಾಡಿ ಅವಸರಿಸದೆ ತಮ್ಮ ಪಾಲಿನ ಉಂಡೆಯನ್ನು ಇನ್ನೊಬ್ಬರ ಬಾಯಿಗೆ ಹಾಕಿ ತಿನ್ನಿಸಿದರು. ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು. ಬ್ರಹ್ಮನ ಆದೇಶದಂತೆ ಎಲ್ಲರೂ ಒಂದೊಂದು ಉಂಡೆಯನ್ನು ತಿಂದರು ಮತ್ತು ದೇವತೆಗಳು ಪರೀಕ್ಷೆಯಲ್ಲಿ ಗೆದ್ದರು.

ಅಪಮಾನಿತರಾದ ದೈತ್ಯರನ್ನು ಕುರಿತು ಬ್ರಹ್ಮನು, ‘ನಾನೇ ಮೊದಲು ತಿನ್ನಬೇಕೆಂದು ಅವಸರಪಟ್ಟ ನಿಮ್ಮಂಥ ಸ್ವಾರ್ಥಿಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಪರಸ್ಪರ ಸಹಕಾರ, ಪರೋಪಕಾರದಿಂದ ಮಾತ್ರ ವಿಶ್ವವನ್ನೇ ಗೆಲ್ಲಬಹುದು. ದೈಹಿಕ ಸಾಮರ್ಥ್ಯದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ. ಆನೆಯ ರೂಪದಲ್ಲಿ ಕಬ್ಬು ಮುರಿದು ತಿನ್ನುವುದಕ್ಕಿಂತ ಇರುವೆಯ ರೂಪದಲ್ಲಿ ಬೆಲ್ಲವನ್ನು ಮೆಲ್ಲುವುದು ಒಳಿತು. ದೇವತೆಗಳನ್ನು ದ್ವೇಷಿಸುವುದೇ ನಿಮ್ಮ ನಿತ್ಯದ ಕಾಯಕವಾಗಿದೆ. ನೀವು ತಪಸ್ಸು ಮಾಡುತ್ತಿರುವುದು ಎಂದೆಂದಿಗೂ ಸಾವಿಲ್ಲದ ವರವನ್ನು ಪಡೆಯುವುದಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ. ನಿಮ್ಮಲ್ಲಿ ಪರಸ್ಪರ ಸಹಕಾರ ಮನೋಭಾವನೆ ಇದ್ದಿದ್ದರೆ ನೀವು ಗೆಲ್ಲಬಹುದಿತ್ತು. ಹಾಗಾಗಲಿಲ್ಲ. ಆದರೆ ದೇವತೆಗಳು ಲೋಕಕ್ಕೆ ಉಪಕಾರವನ್ನು ಮಾಡುತ್ತಿದ್ದಾರೆ. ಪ್ರಾಣವಾಯುವಿನ ಮೂಲಕ ಎಲ್ಲರಿಗೂ ಚೈತನ್ಯ ನೀಡುತ್ತಿದ್ದಾರೆ. ಅಗ್ನಿ ಕಾಯಿಸುವ ಕಾಯಕ ಮಾಡಿದರೆ, ಸೂರ್ಯನು ಲೋಕಕ್ಕೆ ಪ್ರಕಾಶವನ್ನೂ ಮತ್ತು ಶಾಖವನ್ನೂ ನೀಡುವ ಕೆಲಸ ಮಾಡುತ್ತಿದ್ದಾನೆ. ದೇವತೆಗಳು ಪರೋಪಕಾರಕ್ಕಾಗಿಯೇ ಯಾವತ್ತೂ ಶ್ರಮಿಸುತ್ತಿರುತ್ತಾರೆ. ಹಾಗಾಗಿ ಅವರು ಉನ್ನತ ಸ್ಥಾನದಲ್ಲಿದ್ದಾರೆ. ನೀವು ಕೆಳಮಟ್ಟದಲ್ಲಿದ್ದು ಭಯೋತ್ಪಾದಕರಾಗಿದ್ದೀರಿ, ಲೋಕಕಂಟಕರಾಗಿದ್ದೀರಿ. ಇದನ್ನು ತಿದ್ದಿಕೊಳ್ಳಿ’ ಎಂದು ವಿವೇಕ ಮತ್ತು ಅರಿವಿನ ಮಾತು ಹೇಳಿದ. ಇತರರೊಂದಿಗೆ ಹಂಚಿಕೊಳ್ಳುವ ಗುಣ ಪರಮಶ್ರೇಷ್ಠ. ಪರಸ್ಪರ ಸಹಕಾರದಿಂದ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಅಂತಹ ಸಹಾಯ, ಸಹಕಾರ ಮನೋಭಾವನೆಯಿಂದ ಬದುಕನ್ನು ಹಸನಾಗಿಸಿಕೊಳ್ಳೋಣ. ಬರೀ ಸ್ವಾರ್ಥದಿಂದ ನಮ್ಮ ಉದ್ಧಾರವೂ ಆಗುವುದಿಲ್ಲ, ಇತರರಿಗೆ ಪ್ರಯೋಜನವೂ ಆಗುವುದಿಲ್ಲ. ಹಾಗಾಗಿ, ಇರುವ ಆಯುಷ್ಯದಲ್ಲಿ ಇತರರಿಗೆ ನೆರವಾಗುವ, ಒಂದಿಷ್ಟು ಜನರಿಗಾದರೂ ಒಳಿತು ಮಾಡುವ ಸಾರ್ಥಕ ಜೀವನ ನಮ್ಮದಾಗಲಿ.

(ಲೇಖಕರು ಗಮಕ ವ್ಯಾಖ್ಯಾನಕಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net