

ಅವರು ಹಿರಿಯ ನಾಗರಿಕ. ಸುತ್ತಮುತ್ತ ಯಾರಿಗಾದರೂ ಸಮಸ್ಯೆಯಿದೆ ಎಂದು ಗೊತ್ತಾದರೆ ಸಾಕು, ಸಹಾಯಹಸ್ತ ನೀಡಲು ಸಿದ್ಧ. ಪರರಿಗೆ ತಮ್ಮಿಂದ ಏನಾದರೂ ಚಿಕ್ಕ ಸಹಾಯವಾದರೂ ಸಂಭ್ರಮಿಸುವ ವ್ಯಕ್ತಿ ಅವರು. ಸಹಾಯ ಪಡೆದವರು ಇವರನ್ನು ಪರೋಪಕಾರಿ ಎಂದು ಗುಣಗಾನ ಮಾಡುತ್ತಾರೆ. ಇದು ಎಷ್ಟರ ಮಟ್ಟಿಗೆ ಎಂದರೆ ಅವರ ಹೆಸರೇ ‘ಪರೋಪಕಾರಿ’ ಎಂದಾಗಿದೆ! ಇತ್ತೀಚೆಗೆ ಯಾರದೋ ಜೊತೆ ಫೋನಿನಲ್ಲಿ ಮಾತಾಡುವಾಗ, ‘ನಾನಪ್ಪ ಪರೋಪಕಾರಿ, ಗೊತ್ತಾಯ್ತಾ?!’ ಎನ್ನಬೇಕೆ? ಅಲ್ಲದೆ ಇತ್ತೀಚೆಗೆ ಅವರಿಗೆ ತಮ್ಮ ಹೊಗಳಿಕೆ ತುಂಬ ಪ್ರಿಯವಾಗುತ್ತಿದೆ. ಆತ್ಮೀಯರಿಗೆ, ಪರಿಚಯದವರಿಗೆ ಪರೋಪಕಾರದ ಮಹತ್ವ, ಅದರಿಂದ ಸಿಗುವ ಜನಪ್ರಿಯತೆ ಇತ್ಯಾದಿ ಬಗ್ಗೆ ಬೋಧಿಸುತ್ತಾರೆ.
ಪರೋಪಕಾರ ಮಾಡುವುದು ಮನುಷ್ಯ ಜೀವನದ ಪ್ರಮುಖ ಮೌಲ್ಯಗಳಲ್ಲೊಂದು. ಕೆಲವರಿಗೆ ಇದು ರಕ್ತಗತವಾಗಿಯೇ ಬಂದಿರುತ್ತದೆ. ಇನ್ನು ಅನೇಕರು ಕೆಲವು ಪ್ರಸಂಗಗಳಿಂದ, ಆಪತ್ಕಾಲದಲ್ಲಿ ಪಡೆದ ಸಹಾಯದಿಂದ ಪ್ರೇರಣೆಗೊಂಡು ಸ್ವಇಚ್ಛೆಯಿಂದಲೇ ಪರೋಪಕಾರಕ್ಕೆ ಮುಂದಾಗುತ್ತಾರೆ. ಆದರೆ ಸಹಾಯ ಸ್ವೀಕರಿಸಿದ ವ್ಯಕ್ತಿ ಅದನ್ನು ಸ್ಮರಿಸಬೇಕೇ ಹೊರತು ಸಹಾಯ ನೀಡಿದ ವ್ಯಕ್ತಿ ಅದನ್ನು ಸುತಾರಾಂ ನೆನಪಿಸಬಾರದು ಮತ್ತು ನೆನಪಿಡಬಾರದು! ಎಲೆಮರೆಯ ಕಾಯಿಯಂತೆ ಇರಬೇಕು ಪರೋಪಕಾರಿ ಎನಿಸಿಕೊಂಡವರು. ತಾನು ಮಾಡಿದ ಸಹಾಯವನ್ನು ಮರೆತವನೇ ನಿಜವಾದ ಪರೋಪಕಾರಿ. ಅಷ್ಟೇನೂ ಸ್ಥಿತಿವಂತರಲ್ಲದ ಪರಿಚಯದ ವ್ಯಕ್ತಿಯೊಬ್ಬರು ತಮ್ಮ ಅಲ್ಪಸ್ವಲ್ಪ ಉಳಿಕೆ ಹಣವನ್ನು ಕಠಿಣ ಪರಿಸ್ಥಿತಿಯಲ್ಲಿರುವ ಬಡಮಕ್ಕಳ ವಿದ್ಯಾಭ್ಯಾಸಕ್ಕೆ, ಅನಾಥ ವೃದ್ಧರ ಆರೋಗ್ಯಕ್ಕಾಗಿ ವ್ಯಯಿಸುತ್ತಾರೆ, ಎಲ್ಲಿಯೂ ಹೇಳಿಕೊಳ್ಳದೆ. ನಿಜವಾದ ಕಾಳಜಿಗೆ ಇದು ನಿದರ್ಶನ.
ಪರೋಪಕಾರ ಎಂಬುದು ಪ್ರವೃತ್ತಿಯಾಗಬೇಕೇ ಹೊರತು ಪ್ರತಿಷ್ಠೆ ಅಲ್ಲ! ಪ್ರತಿಷ್ಠೆಯ ನೆರಳು ಬಿದ್ದಾಗ ಶುದ್ಧಸಹಾಯ ಕಲುಷಿತವಾಗುತ್ತದೆ. ಕೆಲವೊಮ್ಮೆ ನೈಜೋದ್ದೇಶವೂ ದಾರಿ ತಪು್ಪತ್ತದೆ. ಪರೋಪಕಾರವೇ ಬೇರೆ, ವ್ಯವಹಾರ ಅಥವಾ ಪ್ರತಿಷ್ಠೆ, ತೋರಿಕೆಯ ಸಹಾಯವೇ ಬೇರೆ. ಇವುಗಳ ಮಧ್ಯೆ ಅಜಗಜಾಂತರವಿದೆ. ‘ಮನೆಗೆ ಮಾರಿ, ಊರಿಗೆ ಉಪಕಾರಿ’ ಎಂಬ ಮಾತು ಆಗಾಗ ಕೇಳುತ್ತಿರುತ್ತೇವೆ. ಆದರೆ, ಮನೆಯ ಜವಾಬ್ದಾರಿಯನ್ನೂ ನಿರ್ವಹಿಸಿ, ಉಳಿದ ಅವಕಾಶದಲ್ಲಿ ತನಗಾದ ಸಹಾಯ ಮಾಡಿದರೆ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ಬರುತ್ತದೆ. ತಾನು ‘ಪರೋಪಕಾರಿ’ ಎಂಬ ಅಂಶ ಮಿದುಳನ್ನು ಹೊಕ್ಕರೆ ಅಲ್ಲಿ ಸ್ವಾರ್ಥ, ಅಹಂಕಾರ ಮನೆಮಾಡುವುದರಲ್ಲಿ ಅನುಮಾನವಿಲ್ಲ.
ಕಲಿಯುಗದಲ್ಲಿ, ಅದರಲ್ಲೂ ಇಂದಿನ ಕಠಿಣ ದಿನಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ಮಾನವ ಧರ್ಮವಾಗಿದೆ. ಹಲವು ಗಣ್ಯರು, ಪ್ರತಿಷ್ಠಿತರು ಪರಿಸ್ಥಿತಿಗೆ ತಕ್ಕಂತೆ ಸಮಾಜಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡಿ ತಮ್ಮ ಸ್ಥಾನಕ್ಕೆ ಗೌರವ ತರುತ್ತಾರೆ. ಇನ್ನೂ ಕೆಲವು ಸಾಮಾನ್ಯರು ಉಪಕಾರ, ಸಹಾಯವನ್ನೇ ಪ್ರವೃತ್ತಿಯನ್ನಾಗಿ ಮಾಡಿಕೊಂಡು ಅಸಾಮಾನ್ಯರಾಗಿ ಇತರರಿಗೆ ಮಾದರಿಯಾಗುತ್ತಾರೆ. ಇಲ್ಲಿ ಬೇಕಾಗಿರುವುದು ವಿಶಾಲ ಮನಸ್ಸೇ ಹೊರತು ಸಿರಿವಂತಿಕೆಯಲ್ಲ. ಪರರ ಕಷ್ಟಗಳಿಗೆ ಸ್ಪಂದಿಸಿ, ಸಹಕರಿಸಿ ಅವ್ಯಕ್ತ ಆನಂದ ಪಡೆಯೋಣ. ಇದುವೇ ಭಗವಂತ ಮೆಚ್ಚುವ ನಿಜವಾದ ಸೇವೆಯಾಗಬಲ್ಲದು.
(ಲೇಖಕರು ಹವ್ಯಾಸಿ ಬರಹಗಾರರು)