

| ಡಾ.ರಕ್ಷಾ ಯು.ರಾವ್
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು, ಶಿವಮೊಗ್ಗ
ಮೇಘಾ, ಕಾಲೇಜಿಗೆ ಹೋಗುವ 16 ವರ್ಷದ ಹುಡುಗಿ, 12ನೇ ವರ್ಷದಲ್ಲಿ ಋತುಮತಿಯಾದ ಅವಳಿಗೆ 2 ವರ್ಷಗಳಿಂದ ಅತಿ ಮುಟ್ಟಿನ ಸಮಸ್ಯೆ. ಕೆಲವೊಂದು ತಿಂಗಳು ಕಡಿಮೆ ರಕ್ತಸ್ರಾವವಾದರೆ, ಇನ್ನೊಮ್ಮೆ 15-20 ದಿನಗಳವರೆಗೂ ಮುಂದುವರಿಯುತ್ತದೆ. ಮೊದಲ ಸಲ ವೈದ್ಯರೊಬ್ಬರನ್ನು ಭೇಟಿಯಾದಾಗ ಅವರು ರಕ್ತ ಕಡಿಮೆ ಎಂದು ಹೇಳಿ ಕೆಲ ಮಾತ್ರೆ ಕೊಟ್ಟರು. ಕ್ರಮೇಣ ಸಮಸ್ಯೆ ಅತಿರೇಕಕ್ಕೆ ಹೋದಾಗ ಮತ್ತೆ ವೈದ್ಯರ ಬಳಿ ಹೋದಾಗ, ಈ ಸಣ್ಣ ವಯಸ್ಸಿನ ಹುಡುಗಿ ಹತಾಶೆಯಲ್ಲಿ, ಡಾಕ್ಟ್ರೇ, ನಾನು ಈ ರಕ್ತಸ್ರಾವದಿಂದ ಬೇಸತ್ತು ಹೋಗಿದ್ದೇನೆ ಎಂದಳು. ಅವಳೊಂದಿಗೆ ಬಂದ ತಾಯಿಯೊಂದಿಗೆ ಡಾಕ್ಟರ್ ರ್ಚಚಿಸಿದಾಗ ಅವರು ಹೇಳಿದ್ದು ಓದುವ ಗಡಿಬಿಡಿಯಲ್ಲಿ ಆಕೆ ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡದೆ, ಹಸಿವಾದಾಗ ಪಾನಿಪುರಿ, ಗೋಬಿ ಮಂಚೂರಿ ತಿನ್ನುತ್ತಾಳೆ, ಮನೆ ಅಡುಗೆ, ಸೊಪ್ಪು-ತರಕಾರಿ ಎಂದರೆ ಅಸಡ್ಡೆ ಎಂದು ತಿಳಿಸಿದಾಗ ಅವಳ ಸಮಸ್ಯೆಯ ಕಾರಣ ಸ್ಪಷ್ಟವಾಯಿತು.
ಸೀಮಾ, 19ನೇ ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ, ಮೈನೆರೆದ ಸಮಯದಿಂದ ಸರಿಸುಮಾರು 2-3 ವರ್ಷ ಸರಿಯಾಗಿ ಋತುಸ್ರಾವವಾದರೂ, ಕಳೆದ 3-4 ವರ್ಷದಿಂದ 3-4 ತಿಂಗಳಿಗೊಮ್ಮೆ ಋತುಚಕ್ರವಾಗುತ್ತಿತ್ತು. ಪಿಯು ಓದುವಾಗ ಪಾಠ-ಪರೀಕ್ಷೆಯ ಅತಿ ಒತ್ತಡವಿದ್ದಾಗ, ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದೆ ಇರುವುದು, ಮನಸ್ಸು ಬಂದಾಗ ತಿನ್ನುವುದು, ಕರಿದ ಪದಾರ್ಥ ತಿನ್ನುವುದು, ಒಬ್ಬಳೇ ಮಗಳೆಂಬ ಪ್ರೀತಿಯಲ್ಲಿ ತಂದೆ-ತಾಯಿ ಯಾವ ಕೆಲಸವನ್ನೂ ಹಚ್ಚದೆ, ಅವಳ ಚಟುವಟಿಕೆಯನ್ನು ಕಾಲೇಜಿಗೆ ಹೋಗುವುದಕ್ಕಷ್ಟೇ ಸೀಮಿತಗೊಳಿಸಿದರು. ಇದರಿಂದ ದೈಹಿಕ ಪರಿಶ್ರಮ-ವ್ಯಾಯಾಮವಿಲ್ಲದೆ ತೂಕ ಹೆಚ್ಚಳ ಪ್ರಾರಂಭವಾಗಿ ಮುಖದ ಮೇಲೆ ಮೊಡವೆ ವಿಪರೀತವಾದವು. ಇದೆಲ್ಲ ಹೆಚ್ಚಾದಾಗ ಡಾಕ್ಟರ್ ಬಳಿ ಹೋದಾಗ ಪಿಸಿಒಡಿ ತೊಂದರೆ ವ್ಯಾಪಕವಾಗುತ್ತಿರುವುದು ಸ್ಪಷ್ಟವಾಯಿತು. ಇವು ಕೇವಲ ಉದಾಹರಣೆಯಷ್ಟೆ. ಹದಿಹರಯದ ಹುಡುಗಿಯರಲ್ಲಿನ ಇಂತಹ ಸಮಸ್ಯೆಗಳನ್ನು ಇಂದು ಅನೇಕ ಕಡೆ ನೋಡುತ್ತಿದ್ದೇವೆ. ಋತುಮತಿಯಾದಾಗಿನಿಂದ ಈಸ್ಟ್ರೋಜೆನ್ ಹಾಗೂ ಪೊ›ಜೆಸ್ಟ್ರೋಜೆನ್ ಎಂಬ ಹಾರ್ವೇನ್ ಪ್ರಭಾವದಿಂದ ಗರ್ಭಾಶಯ ಹಾಗು ಅಂಡಾಶಯಗಳ ತಾರತಮ್ಯದಿಂದ ಆಗುವ ಕ್ರಿಯೆಯೇ ತಿಂಗಳ ಮುಟ್ಟು. ಆದರೆ ಸಹಜವಾಗಿ ಆಗುವ ಈ ಕ್ರಿಯೆಯಲ್ಲಿ ಈಗ ಏರುಪೇರುಗಳಾಗಿ, ಶೇ.60 ಹೆಣ್ನುಮಕ್ಕಳು ಒಮ್ಮೆಯಾದರೂ ವೈದ್ಯರ ಸಲಹೆ ಬಯಸುವಂತಾಗಿದೆ.
ಪ್ರಾರಂಭದಲ್ಲಿ ಎಂದಾದರೊಮ್ಮೆ ಬಿಳಿ ಮುಟ್ಟು ಕಾಣಿಸಿಕೊಂಡರೆ ಹೆಣ್ಣು ಮಕ್ಕಳು ಭಯ ಪಡುತ್ತಾರೆ. ಆದರೆ ಹದಿವಯಸ್ಸಿನಲ್ಲಿ, ಅಂಡೋತ್ಪತ್ತಿಯ ದಿನಗಳಲ್ಲಿ, ಮುಟ್ಟಾಗುವ ಮುನ್ನ ಬಿಳುಪು ಹೋಗುವುದು ಸ್ವಾಭಾವಿಕ, ಇದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಮದುವೆ ವಯಸ್ಸಿನ ಮುನ್ನ ಹೆಣ್ಣುಮಕ್ಕಳಲ್ಲಿ ಯಾವ ಸೋಂಕಿನ ಪ್ರಭಾವವಿಲ್ಲದೆ ಇರುವುದರಿಂದ ಇಂತಹ ಬಿಳಿಮುಟ್ಟಿನೊಂದಿಗೆ ತುರಿಕೆ, ವಾಸನೆ, ಹೊಟ್ಟೆನೋವು, ಬೆನ್ನು ನೋವು ಇರುವುದಿಲ್ಲ. ಬಿಳಿ ಮುಟ್ಟು 20 ವರ್ಷಗಳೊಳಗೆ ಸ್ವಾಭಾವಿಕ, ಯಾವ ರೀತಿಯ ತಪಾಸಣೆ, ಚಿಕಿತ್ಸೆ, ಭಯ-ಆತಂಕದ ಅಗತ್ಯ ಇಲ್ಲ.
ಕಾಲೇಜು ಹುಡುಗಿಯರಲ್ಲಿ ಈ ತೊಂದರೆ ವಿಪರೀತವಾಗಿದೆ. ಶೇ. 25ರಷ್ಟು ಹುಡುಗಿಯರು ಇದರಿಂದ ನರಳುತ್ತಾರೆ. ಹೊರಳಾಡುವುದು, ಕಣ್ಣುಕತ್ತಲೆ ಬರುವುದು, ವಾಂತಿ, ನಿಶ್ಯಕ್ತತೆ ಆಗುವುದು ಸರ್ವೆ ಸಾಮಾನ್ಯ. ಇದನ್ನು ತುಂಬಾ ನಾಜೂಕಾದ, ಯಾವುದೇ ದೈಹಿಕ ಪರಿಶ್ರಮವಿಲ್ಲದ ಮಕ್ಕಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ನೋವಿನಿಂದ ಊಟ-ತಿಂಡಿ ಬಿಟ್ಟು ಮಲಗೇ ಇರುತ್ತಾರೆ ಎಂಬುದು ಈ ಹೆಣ್ಣುಮಕ್ಕಳ ತಾಯಂದಿರ ಗೋಳು. ಪ್ರಾಸ್ಟಾಗ್ಲಾಂಡಿನ್ ಎಂಬ ಕೆಲ ರಾಸಾಯನಿಕಗಳ ಪ್ರಭಾವದಿಂದ ಗರ್ಭಕೋಶ ಸಂಕುಚಿತಗೊಳ್ಳುವುದೇ ಇದಕ್ಕೆ ಕಾರಣ. ಸಾಮಾನ್ಯವಾಗಿ ಮದುವೆಯಾದ ಬಳಿಕ ಇಂತಹ ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಮಕ್ಕಳಾದ ಮೇಲೆ ನಾಪತ್ತೆಯಾಗಿಬಿಡುತ್ತದೆ.
ಕೆಲ ಯುವತಿಯರು 2-3 ತಿಂಗಳಿಗೊಮ್ಮೆ, ಇನ್ನೂ ತಡವಾಗಿ ಮುಟ್ಟಾಗುತ್ತಾರೆ. ಹಾರ್ವೇನ್ ತಾರತಮ್ಯ ಏರುಪೇರಾಗಿ ಸರಿಯಾದ ಮೊಟ್ಟೆ ಉತ್ಪತ್ತಿಯಾಗದೆ ಸ್ಕಾ್ಯನಿಂಗ್ ಮಾಡಿಸಿದಾಗ, ಪಾಲಿಸಿಸ್ಟಿಕ್ ಅಂಡಾಶಯ ಅಥವಾ ಮೊಟ್ಟೆ ಬಾರದೆ ಇರುವ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣ ಪುರುಷ ಸಂಬಂಧಿ ಹಾರ್ವೇನ್ಗಳ (ಟೆಸ್ಟೋಸ್ಟಿರೋನ್) ಹೆಚ್ಚಿನ ಪ್ರಭಾವ ಅಂಡಾಶಯದ ಮೇಲಾಗುವುದು. ಪಿಸಿಒಡಿ ತೊಂದರೆಗೆ ಔಷಧೋಪಚಾರ ಒಂದೇ ಶಾಶ್ವತ ಪರಿಹಾರ ಅಲ್ಲ. ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ, ದಿನನಿತ್ಯ 30 ನಿಮಿಷ ವ್ಯಾಯಾಮ, ಸಿಹಿ ಆಹಾರ ಕಡಿಮೆ ಮಾಡುತ್ತಾ ಬಂದರೆ ಸರಿಮಾಡಿಕೊಳ್ಳಬಹುದು.
ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com