

ಕೋವಿಡ್ ಅಲೆ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬ ಹಾನಿ ಮಾಡುತ್ತಿದೆ. ಕಳೆದ ವರ್ಷದಿಂದ ಮಕ್ಕಳಿಗೆ ಶಾಲೆಯ ಪ್ರವೇಶ ಸಾಧ್ಯವಾಗಿಲ್ಲ. ಸೋಂಕಿನ ಭಯದಲ್ಲಿ ಪಾಲಕರೂ ಮಕ್ಕಳಿಗೆ ಮನೆಯಿಂದ ಹೊರಗೆ ಬಿಡುತ್ತಿಲ್ಲ. ಈ ವೇಳೆ ಶಾಲೆಗಳ ಸೇರ್ಪಡೆ ಹಾಗೂ ಚಟುವಟಿಕೆಗಳಲ್ಲಿ ಜನರಿಗೆ ಗೊಂದಲವೂ ಆಗಿದೆ. ಖಾಸಗಿ ಶಾಲೆಗಳು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಪಾಲಕರಿಂದ ಕಳೆದ ಬಾರಿ ಅಧಿಕ ಶುಲ್ಕ ಪಡೆದಿದ್ದು, ಈ ಬಾರಿಯೂ ಅದು ಮುಂದುವರಿದಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿಯೇ ಸರ್ಕಾರಿ ಶಾಲೆಗಳತ್ತ ಮುಖಮಾಡಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿರುವ ವರದಿ ಇದಕ್ಕೆ ಪೂರಕವಾಗಿದೆ. ಇದು ಒಳ್ಳೆಯ ಬೆಳವಣಿಗೆ. ಸರ್ಕಾರಿ ಶಾಲೆಗಳೆಂದರೆ, ಆಯ್ದವರ್ಗದ ಕೊನೆಯ ಹಂತದ ಮಕ್ಕಳಿಗಷ್ಟೇ ಸೀಮಿತ ಎಂಬ ಆತಂಕದ ವಾತಾವರಣಕ್ಕೆ ಈ ಬೆಳವಣಿಗೆ ಕಡಿವಾಣ ಹಾಕಲಿದೆ. ಹಿಂದೆ ಇದ್ದಂತಹ ಸ್ಥಾನಮಾನ ಸರ್ಕಾರಿ ಶಾಲೆಗಳಿಗೆ ಮರಳಲು ಇದು ಸಹಾಯಕವಾಗಲಿದೆ.
ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಕಟ್ಟಡಗಳ ನವೀಕರಣಕ್ಕೂ ಸೂಕ್ತ ಅನುದಾನ ನೀಡಿ, ಅಭಿವೃದ್ದಿಗೊಳಿಸಿದೆ. ಜೊತೆಗೆ, ಆಂಗ್ಲ ಮಾಧ್ಯಮ ಸೇರಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವೆಲ್ಲವೂ ಸಮಾಜದ ಅಭಿವೃದ್ಧಿಗೆ ಪೂರಕ. ಸರ್ಕಾರಿ ಶಾಲೆಗಳ ಸಿದ್ಧಾಂತವು ಬಲಗೊಂಡರೆ, ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರ ಹಾಗೂ ಸರ್ಕಾರದ ಜವಾಬ್ದಾರಿಯೂ ಹೆಚ್ಚಾಗಲಿದೆ.
| ನ.ರಾ.ವೆಂಕಟೇಶ್ ಶಿವಮೊಗ್ಗ