ಕಾಶೀ ಪೀಠದ 87ನೇ ಜಗದ್ಗುರು ಪಟ್ಟಾಭಿಷೇಕ; ಏ. 3ರಿಂದ 41 ದಿನ ಕಾರ್ಯಕ್ರಮ, ಪಂಚಪೀಠಾಧೀಶ್ವರರ ಸಮಾಗಮ

Samskruthi
Published on

| ಪ್ರಶಾಂತ ರಿಪ್ಪನ್​ಪೇಟೆ

ಅಖಂಡ ಭಾರತದ ಸನಾತನ ಪಂಚಪೀಠಗಳಲ್ಲಿ ಕಾಶೀ ಜಗದ್ಗುರು ಜ್ಞಾನಸಿಂಹಾಸನ ಮಹಾಪೀಠವೂ ಒಂದು. ಕಲಿಯುಗದ ಆದಿಯಲ್ಲಿ ಜಗದ್ಗುರು ವಿಶ್ವಾರಾಧ್ಯ ಭಗವತ್ಪಾದರು ಕಾಶೀ ವಿಶ್ವನಾಥ ಲಿಂಗದಿಂದ ಆವಿರ್ಭವಿಸಿ ಗಂಗಾನದಿಯ ದಂಡೆಯ ಮೇಲೆ ಸಂಸ್ಥಾಪಿಸಿದ ಜ್ಞಾನಸಿಂಹಾಸನ ಮಹಾಪೀಠವು ಧಾರ್ವಿುಕವಾಗಿ, ಸಾಮಾಜಿಕವಾಗಿ, ಐತಿಹಾಸಿಕವಾಗಿ ತನ್ನದೇ ಆದ ಪರಂಪರೆಯನ್ನು ಹೊಂದಿದೆ. ಇಂತಹ ಜ್ಞಾನಪೀಠದ ಮೇಲೆ ಇಲ್ಲಿಯವರೆಗೆ 85 ಜಗದ್ಗುರುಗಳು ಆರೋಹಣ ಮಾಡಿದ್ದು, ಸದ್ಯ ಇರುವ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು 86ನೇ ಜಗದ್ಗುರುಗಳು. ಇವರ ಕರಕಮಲ ಸಂಜಾತ 87ನೇ ಜಗದ್ಗುರುಗಳಾಗಿ ಸೊಲ್ಲಾಪುರದ ಹೊಟಗಿ ಬೃಹನ್ಮಠದ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರ ಪಟ್ಟಾಭಿಷೇಕ ಮಹೋತ್ಸವವು ಕಾಶೀಪೀಠದಲ್ಲಿ ಇದೇ ಏ. 3ರಿಂದ ಆರಂಭವಾಗಲಿದೆ. ದಿವ್ಯಕಾಶಿ-ಭವ್ಯಕಾಶಿ ಪರಿಕಲ್ಪನೆಯಲ್ಲಿ ವಿಶ್ವನಾಥ ಧಾಮದ ಸರ್ವಾಂಗೀಣ ಅಭಿವೃದ್ಧಿಯಾದ ನಂತರ ಕಾಶಿಯು ಸಾಕ್ಷಾತ್ ಭೂಕೈಲಾಸದಂತೆ ಪರಿವರ್ತನೆಯಾಗಿದೆ. ಇಂತಹ ಕಾಶಿಯಲ್ಲಿ ಸಾವಿರಾರು ದೇವಾಲಯ, ನೂರಾರು ಮಠ-ಪೀಠಗಳಿವೆ. ಆ ಎಲ್ಲವುಗಳಲ್ಲಿ ಅತ್ಯಂತ ಪುರಾತನ ಹಾಗೂ ಪ್ರಥಮ ಮಠ ಎಂಬ ಹೆಗ್ಗಳಿಕೆ ಕಾಶೀ ಜಂಗಮವಾಡಿ ಮಠಕ್ಕಿದೆ. ಪೀಠದ ಆದಿಜಗದ್ಗುರು ವಿಶ್ವಾರಾಧ್ಯರ ಶಿಷ್ಯರಾಗಿದ್ದ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರು 311 ವರ್ಷಗಳ ಕಾಲ ಪೀಠವನ್ನು ಮುನ್ನಡೆಸಿ ನಂತರ ಸಂಜೀವಿನಿ ಸಮಾಧಿ ತೆಗೆದುಕೊಂಡಿದ್ದಾರೆ. ಕಾಕತಾಳೀಯವೆಂಬಂತೆ ನೂತನ ಉತ್ತರಾಧಿಕಾರಿಗಳ ಹೆಸರು ಕೂಡ ಮಲ್ಲಿಕಾರ್ಜುನ ಶಿವಾಚಾರ್ಯರೆಂದಿರುವುದು ಭಕ್ತರ ಭಕ್ತಿಯನ್ನು ಹೆಚ್ಚಿಸಿದೆ. ಯಾವುದೇ ಪೀಠದ ಜಗದ್ಗುರುಗಳ ಪಟ್ಟಾಭಿಷೇಕವೆಂದರೆ ಆ ಪೀಠದ ಇತಿಹಾಸದಲ್ಲಿ ದಾಖಲಾರ್ಹ ಕಾರ್ಯಕ್ರಮ. ಆ ಹಿನ್ನೆಲೆಯಲ್ಲಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಮ್ಮ ಉತ್ತರಾಧಿಕಾರಿಗಳ ಪಟ್ಟಾಭಿಷೇಕವನ್ನು ಅರ್ಥಪೂರ್ಣವಾಗಿ ಆಚರಿಸಲು ಕಾರ್ಯಯೋಜನೆ ರೂಪಿಸಿದ್ದಾರೆ.

ಜಗದ್ಗುರುಗಳ ಜನ್ಮ ಅಮೃತಮಹೋತ್ಸವ

ಮೇ 11ರಂದು ಕಾಶೀ ಪೀಠದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 105ನೇ ಜನ್ಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮೇ 12ರಂದು ಪ್ರಸ್ತುತ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ಅಮೃತಮಹೋತ್ಸವದ ಅಂಗವಾಗಿ ಅಖಿಲ ಭಾರತ ಶಿವಾಚಾರ್ಯ ಸಮ್ಮೇಳನ ಏರ್ಪಡಿಲಾಗಿದೆ. 1947ರ ಆಗಸ್ಟ್ 28ರಂದು ಜನಿಸಿದ ಜಗದ್ಗುರುಗಳ ಜನ್ಮ ಅಮೃತಮಹೋತ್ಸದ ಜತೆಗೆ ದೇಶದ ಸ್ವಾತಂತ್ರೊ್ಯೕತ್ಸವ ಅಮೃತ ಮಹೋತ್ಸವವನ್ನೂ ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ಮೂಲದವರೇ ಆದ ಕಾಶೀ ಜಗದ್ಗುರುಗಳು ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲೂಕಿನ ತೋಗುಣಿಸಿಯವರು. 1989ರಲ್ಲಿ ಕಾಶೀ ಪೀಠವನ್ನು ಆರೋಹಣ ಮಾಡಿ ಕಳೆದ 33 ವರ್ಷಗಳಿಂದ ದೇಶಾದ್ಯಂತ ವೀರಶೈವ ಧರ್ಮ ಸಿದ್ಧಾಂತವನ್ನು ಪ್ರಸಾರ ಮಾಡುತ್ತಿದ್ದಾರೆ. ಉತ್ತರ ಭಾರತದಾದ್ಯಂತ ವೀರಶೈವರನ್ನು ಸಂಘಟಿಸಿ, ಶ್ರೀ ಸಿದ್ಧಾಂತ ಶಿಖಾಮಣಿಯನ್ನು ವಿವಿಧ ಭಾಷೆಗಳಿಗೆ ಭಾಷಾಂತರಗೊಳಿಸಿ ವಿಶ್ವಮಾನ್ಯರಾಗಿದ್ದಾರೆ. ಪೂಜ್ಯರು ಸಾರ್ಥಕ 75 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಮೇ 12ರಂದು ಜನ್ಮ ಅಮೃತಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಜಗದ್ಗುರು ಪಂಚಪೀಠಾಧೀಶ್ವರರ ಸಮಾಗಮ

ಕಾಶಿ ಪೀಠದ ಇತಿಹಾಸದಲ್ಲಿ 1918ರಲ್ಲಿ ತತ್ಕಾಲೀನ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹೊಸ ಇತಿಹಾಸ ಬರೆದಿತ್ತು. ಇದೀಗ ಮೇ 13ರಂದು ನೂತನ ಜಗದ್ಗುರುಗಳ ಪಟ್ಟಾಭಿಷೇಕದ ಪರ್ವ ಕಾಲದಲ್ಲಿ ಜಗದ್ಗುರು ಪಂಚಪೀಠಾಧೀಶ್ವರರ ಸಮಾಗಮವಾಗುತ್ತಿದೆ. ಮೇ 13ರಂದು ಬ್ರಾಹ್ಮೀ ಮುಹೂರ್ತದಲ್ಲಿ 101 ಶಿವಾಚಾರ್ಯರಿಂದ ನೂತನ ಉತ್ತರಾಧಿಕಾರಿಗಳಿಗೆ ಕುಂಭಾಭಿಷೇಕ ನಡೆದ ನಂತರ ಪ್ರಾಚೀನ ಜ್ಞಾನಪೀಠದ ಮೇಲೆ ಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ಪಟ್ಟಾಭಿಷೇಕದ ವಿಧಿವಿಧಾನಗಳು ನಡೆಯಲಿವೆ. ನಂತರ ಪರಂಪರೆಯಂತೆ ನೂತನ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದ ಜತೆಗೆ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಶೋಭಾಯಾತ್ರೆ ಕಾಶೀ ಜಂಗಮವಾಡಿ ಮಠದಿಂದ ವಿಶ್ವನಾಥ ದೇವಾಲಯದ ರಾಜಮಾರ್ಗದಲ್ಲಿ ಗಂಗಾನದಿಯವರೆಗೆ ನಡೆಯಲಿದೆ. ಕಲಬುರಗಿ ಜಿಲ್ಲೆ ಶಾಕಾಪುರದ ಶ್ರೀ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಈ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದಾರೆ. ವಿವಿಧ ಕಲಾತಂಡಗಳು, ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ನಂತರ ಜಗದ್ಗುರು ಪಂಚಾಚಾರ್ಯ ಸಾನ್ನಿಧ್ಯದಲ್ಲಿ ನಡೆಯುವ ವಿಶ್ವ ವೀರಶೈವ ಮಹಾಸಮ್ಮೇಳನದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

41 ದಿನಗಳ ಸುದೀರ್ಘ ಕಾರ್ಯಕ್ರಮ

ಏ. 3ರಂದು ಪ್ರಾತಃಕಾಲ ಗಂಗಾನದಿಯಿಂದ ಅಗ್ರೋದಕವನ್ನು ತಂದು ಜಗದ್ಗುರು ವಿಶ್ವಾರಾಧ್ಯರ ಮಂಗಲಮೂರ್ತಿಗೆ ಹಾಗೂ ಜಗದ್ಗುರುಗಳ ಇಷ್ಟಲಿಂಗಕ್ಕೆ ಅಭಿಷೇಕ ಮಾಡಿ ಮಹಾಪೂಜೆ ನೆರವೇರಿಸುವ ಮೂಲಕ 41 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಅಂದಿನ ಸಮಾರಂಭವನ್ನು ಅಬ್ಬೆತುಮಕೂರು ಡಾ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಲಿದ್ದು, ಕೇಂದ್ರದ ಮಾಜಿ ಗೃಹ ಮಂತ್ರಿ ಶಿವರಾಜ್ ಪಾಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ಖ್ಯಾತ ಉದ್ಯಮಿಗಳಾದ ಪದ್ಮಭೂಷಣ ಡಾ. ಬಾಬಾ ನೀಲಕಂಠರಾವ್ ಕಲ್ಯಾಣಿ, ಭಾಷಾವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ ಮತ್ತಿತರರು ಆಗಮಿಸಲಿದ್ದಾರೆ. ಏ. 10ರಿಂದ ಶ್ರೀಸಿದ್ಧಾಂತ ಶಿಖಾಮಣಿಯ ಅಖಂಡ ಪಾರಾಯಣ ಸಪ್ತಾಹ ನಡೆಯಲಿದ್ದು, ಅದರ ಸಮಾರೋಪದಲ್ಲಿ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಏ. 11ರಂದು ಆಂಧ್ರ-ತೆಲಂಗಾಣ ವೀರಶೈವ ಮಹಾಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮೇ 10ರವರೆಗೆ ಪ್ರತಿದಿನ ಅತಿರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ಕುಂಕುಮಾರ್ಚನೆ, ದಾಸೋಹ, ಜಗದ್ಗುರುಗಳ ತುಲಾಭಾರ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಉತ್ತರಾಧಿಕಾರಿಗಳ ಪಂಚಭಾಷಾ ಪಾಂಡಿತ್ಯ

ಗುರುವಿನ ಮಾನದಂಡ ಜ್ಞಾನ. ಅದರಲ್ಲೂ ಕಾಶಿ ಜ್ಞಾನದ ತವರು. ಇಂತಹ ಜ್ಞಾನದ ತವರಿನಲ್ಲಿರುವ ಕಾಶೀ ಜ್ಞಾನಸಿಂಹಾಸನ ಪೀಠಕ್ಕೆ ಜಗದ್ಗುರುಗಳಾಗುವ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪಂಚಭಾಷಾ ಪಂಡಿತರು. ಮೂಲತಃ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ 1983ರಲ್ಲಿ ಜನಿಸಿದ ಪೂಜ್ಯರು ಫ್ರೌಢ ಶಿಕ್ಷಣದವರೆಗೆ ಹುಟ್ಟೂರಿನಲ್ಲಿ ಅಭ್ಯಾಸ ಮಾಡಿ ನಂತರ ಮಹಾರಾಷ್ಟ್ರದಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದಾರೆ. ಬಾಲ್ಯದಲ್ಲಿದ್ದಾಗಲೇ ಕಾಶೀ ಪೀಠದ ಶಾಖಾ ಜಾಲಹಳ್ಳಿ ಬೃಹನ್ಮಠದ ಶ್ರೀಜಯಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ದೀಕ್ಷೆ ಪಡೆದು ನಂತರ ಪ್ರತಿಷ್ಠಿತ ಹೊಟಗಿ ಬೃಹನ್ಮಠದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯರ ಕೃಪಾಕಾರುಣ್ಯಕ್ಕೆ ಒಳಗಾಗಿ 2009ರಲ್ಲಿ ಹೊಟಗಿ ಮಠದ ಪಟ್ಟಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ನಂತರ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನ ಮಾಡಿದ್ದು, ಕನ್ನಡ, ಮರಾಠಿ, ತೆಲುಗು, ಹಿಂದಿ ಮತ್ತು ಸಂಸ್ಕೃತ ಹೀಗೆ ಪಂಚಭಾಷಾ ಪ್ರಾವೀಣ್ಯ ಪಡೆದಿದ್ದಾರೆ. ಕಾಶೀ ಪೀಠದ ಪ್ರಸ್ತುತ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವೀರಶೈವ ದರ್ಶನ ಶಾಸ್ತ್ರದ ಮೇರುಕೃತಿ ಶ್ರೀ ಸಿದ್ಧಾಂತ ಶಿಖಾಮಣಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದು, ಅವರ ಮಾರ್ಗದರ್ಶನದಲ್ಲೇ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಅದ್ವೈತ-ವೇದಾಂತ ಎಂಬ ಸಂಶೋಧನೆಯನ್ನು ನಡೆಸಿ ಪಿಎಚ್​ಡಿ ಪದವಿ ಪಡೆದಿದ್ದಾರೆ. ಇಂತಹ ಪಂಡಿತೋತ್ತಮರು ಕಾಶೀ ಪೀಠದ ಜಗದ್ಗುರುಗಳಾಗುವ ಮೂಲಕ ಜ್ಞಾನಪೀಠದ ಘನತೆ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net