

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ|
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕುಹುದೆ?
ತಾಳುಮೆಯೆ ಪರಿಪಾಕ ಮಂಕುತಿಮ್ಮ||
ಬೆಳಗ್ಗೆ ಕಾಳನ್ನು ಬಿತ್ತಿದರೆ ಸಂಜೆಯಾಗುವಷ್ಟರಲ್ಲಿ ಪೈರಾಗಲು ಸಾಧ್ಯವೇ? ನಮ್ಮ ಕೃಷಿಗಳಲ್ಲಿ ಕಾಲಕ್ಕೂ ಪಾಲಿದೆ. ಅಡುಗೆ ಬೇಯುವುದಕ್ಕೆ ಮುನ್ನವೇ ಒಲೆ ಆರಿಸಿದರೆ ಹೇಗೆ ತಾನೇ ಅಡುಗೆ ಆಗುವುದು? ತಾಳ್ಮೆಯೇ ಜೀವನ ಸಾಧನೆಯಾಗಿದೆ.
ಕಾಲಾಯ ತಸ್ಮೈ ನಮಃ ಎಂಬ ವೇದೋಕ್ತಿಯಂತೆ ಯಾವ ಕಾಲಕ್ಕೆ ಏನು ಮಾಡಬೇಕು ಅದನ್ನೇ ಮಾಡಬೇಕು. ಹಾಗೆಯೇ ಏನು ಆಗುತ್ತದೋ ಅದೇ ಆಗುವುದು. ಕೃಷಿಕ ಭೂಮಿ ಉಳುತ್ತಾನೆ. ಕಾಳನ್ನು ಬಿತ್ತಿ ಗೊಬ್ಬರ, ನೀರು ಎಲ್ಲವನ್ನೂ ಕೊಡುತ್ತಾನೆ. ಕಳೆ, ಕ್ರಿಮಿ-ಕೀಟ ಬಾರದಂತೆ ನೋಡಿಕೊಳ್ಳುತ್ತಾನೆ. ಇಷ್ಟು ಮಾಡಿದರೆ ಸಾಕೆ? ತಾಳ್ಮೆಯಿಂದ ಕಾಯಬೇಕು. ಬೀಜ ಪೈರಾಗಬೇಕು, ಅದು ಬಲಿತು ತೆನೆಯಾಗಬೇಕು, ಕಾಳಾಗಬೇಕು- ಹೀಗೆ ಸಾಕಷ್ಟು ಸಮಯವನ್ನು ಬೇಡುತ್ತದೆ. ಉತ್ತಮ ಫಸಲು ಬೇಕೆಂದರೆ ನೆಟ್ಟಾಕ್ಷಣ ಗೊಬ್ಬರ, ನೀರು ಕೊಟ್ಟರೆ ಸಾಲದು. ಕಾಲಕಾಲಕ್ಕೆ ಅದರ ಆರೈಕೆ ಮಾಡಬೇಕು.
ಕೆಲವೊಂದು ಮಂದಿ ಹೆಚ್ಚು ಕಾಯುವ ತಾಳ್ಮೆ ಇಲ್ಲದೆ, ಆದಷ್ಟು ಬೇಗನೆ ಕೈ ತುಂಬ ಫಸಲು ಬೇಕೆಂದು ಅತಿಯಾದ ರಾಸಾಯನಿಕಗಳನ್ನು ಬಳಸುವುದುಂಟು. ಇದರಿಂದ ಕೆಲವು ಸಮಯ ಹೆಚ್ಚಿನ ಫಸಲೇನೋ ದೊರೆಯಬಹುದು. ಆದರೆ, ರಾಸಾಯನಿಕದ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಭೂಮಿ ಬಂಜೆಯಾಗಿ ಆಮೇಲೆ ಹುಲ್ಲು ಕೂಡ ಬೆಳೆಯದ ಸ್ಥಿತಿ ಏರ್ಪಡುತ್ತದೆ. ಕೃಷಿ ಮಾತ್ರವಲ್ಲದೆ ಜೀವನದ ಎಲ್ಲ ಸಂದರ್ಭಗಳಲ್ಲೂ ತಾಳ್ಮೆ ಬೇಕಾಗುತ್ತದೆ. ಜೀವನಲ್ಲಿ ಸಾಧನೆ ಮಾಡಬೇಕು; ಹಣ ಮಾಡಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು... ಹೀಗೆ ಅನೇಕ ಆಸೆ-ಆಕಾಂಕ್ಷೆಗಳನ್ನು ಹೊಂದಿರುವುದು ಸಹಜ. ಅದರಲ್ಲೂ ವಿದ್ಯಾರ್ಥಿಗಳು ಮತ್ತು ಯುವ ಜನರು ಹೆಚ್ಚಿನ ಗುರಿ, ಯೋಜನೆ ಹೊಂದಿರುತ್ತಾರೆ. ಅವರಿಗೆ ಸೂಕ್ತ ಪೋ›ತ್ಸಾಹ, ಮಾರ್ಗದರ್ಶನಗಳು ದೊರೆಯದೆ ಇದ್ದಾಗ ಉದ್ದೇಶಿತ ಗುರಿ ಮುಟ್ಟಲಾರರು. ಗುರಿಯನ್ನು ಆದಷ್ಟು ಬೇಗ ಮುಟ್ಟಬೇಕು, ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಬೇಕು. ಹೀಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಆಸೆ ಈಡೇರಿಸಿಕೊಳ್ಳಲು ಹಪಹಪಿಸುವುದು ಸಾಮಾನ್ಯ ಸಂಗತಿ. ಈ ಸಂದರ್ಭದಲ್ಲಿ ಹೆಚ್ಚಿನ ಶ್ರಮಪಡಲು ಇಚ್ಛಿಸದವರು ಶಾರ್ಟ್ಕಟ್ ದಾರಿಗಳನ್ನು ಅನುಸರಿಸುತ್ತಾರೆ. ಅದೃಷ್ಟ ಯಾವಾಗ ಬೇಕಾದರೂ ಕೈ ಕೊಡಬಹುದು. ಆದರೆ, ದುಡಿಮೆ ಮಾತ್ರ ಎಂದಿಗೂ ಕೈ ಕೊಡಲಾರದು. ಸಮಾಜದಲ್ಲಿ ಅತ್ಯುನ್ನತ ಸಾಧನೆ ಮಾಡಿದವರೆಲ್ಲ ಅದೃಷ್ಟಶಾಲಿಗಳಲ್ಲ. ಎಲ್ಲರೂ ತಮ್ಮ ತಮ್ಮ ದುಡಿಮೆಯನ್ನು ಪ್ರೀತಿಸಿದರು ಹಾಗೂ ಅದರಿಂದಲೇ ಸಾಧನೆಗಳನ್ನು ಮಾಡಿದರು. ಸರ್ ಎಂ. ವಿಶ್ವೇಶ್ವರಯ್ಯ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ರತನ್ ಟಾಟಾ, ಇನ್ಪೋಸಿಸ್ನ ನಾರಾಯಣ ಮೂರ್ತಿ, ಹೀಗೆ ಅನೇಕರು ಅದೃಷ್ಟದಿಂದ ಸಾಧಕರಾಗಿಲ್ಲ, ಸಾಧನೆಯ ಗುರಿ ಹಾಗೂ ಸತತ ಪರಿಶ್ರಮದಿಂದ ಯಶಸ್ಸು ಪಡೆದಿದ್ದಾರೆ.
ಅದೃಷ್ಟವನ್ನು ನಂಬಿ ಕುಳಿತವರು ಮಾತ್ರ ಇದ್ದಲ್ಲಿಯೇ ಇರುತ್ತಾರೆ ಎಂಬ ಮಾತು ಜನಜನಿತ. ಇಂದಲ್ಲ ನಾಳೆ ಲಾಟರಿ ಹೊಡಿದೇ ಹೊಡಿತದೆ ಎಂದೆನ್ನುತ್ತಾ ಲಾಟರಿ ಟಿಕೇಟು ಕೊಳ್ಳುವವನಿಗೆ ಎಂದಿಗೂ ಲಾಟರಿ ಹೊಡೆಯದೇ ಇರಬಹುದು. ನೂರಾರು ಜನರಲ್ಲಿ ಒಬ್ಬನಿಗೆ ಮಾತ್ರ ಲಾಟರಿ ಹೊಡೆಯುವುದು. ಆತ ಅದೃಷ್ಟವಂತ, ಉಳಿದವರು ದುರದೃಷ್ಟವಂತರು ಎಂದರೆ ತಪ್ಪಾಗಲಾರದು. ಯಾಕೆಂದರೆ ವರ್ಷಾನುಗಟ್ಟಲೆಗಳ ಕಾಲ ಲಾಟರಿ ಟಿಕೇಟು ಕೊಳ್ಳಲು ಅವರು ವ್ಯಯ ಮಾಡುವ ಹಣದಲ್ಲಿ ಮಕ್ಕಳನ್ನು ಚೆನ್ನಾಗಿ ಓದಿಸಬಹುದಾಗಿತ್ತು, ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ತರಬಹುದಿತ್ತು. ಅಥವಾ ಅಷ್ಟು ಹಣವನ್ನು ಹಾಕಿ ವ್ಯಾಪಾರವೋ, ವ್ಯವಹಾರವೋ ಆರಂಭಿಸಬಹುದಿತ್ತು. ಅದು ಮಾಡದೆ ಇದ್ದಬದ್ದ ಹಣ, ದುಡಿದ ಹಣವನ್ನೆಲ್ಲಾ ಕಳೆದುಕೊಂಡು ಬೀದಿಗೆ ಬೀಳುವವರನ್ನು ದುರದೃಷ್ಟವಂತರೆನ್ನದೆ ಮತ್ತೇನೆನ್ನಬಹುದು!
ಲಾಟರಿ ಮಾತ್ರವಲ್ಲ, ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟು, ಕೋಳಿ ಅಂಕ, ಇತ್ತೀಚಿನ ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ? ಎಷ್ಟು ಮತ ಗಳಿಸುತ್ತಾರೆ ಇತ್ಯಾದಿ ವಿಷಯಗಳಿಗೆಲ್ಲ ಬೆಟ್ಟಿಂಗ್ ಕಟ್ಟುವವರಿದ್ದಾರೆ. ಇದರಲ್ಲಿ ಬೆರಳೆಣಿಕೆಯಷ್ಟು ಮಂದಿ ಯಾವೊಂದು ಶ್ರಮವಿಲ್ಲದೆ ಲಾಭ ಪಡೆಯಬಹುದು. ಆದರೆ ಬಹುತೇಕ ಮಂದಿ ಹಣ ಕಳೆದುಕೊಳ್ಳುವವರೇ. ಕ್ರಿಕೆಟ್ ಮನೋರಂಜನಾ ಆಟ. ಇಲ್ಲಿ ಆಟ ಆಡುವವರು ಯಾರೋ ಬೆಟ್ಟಿಂಗ್ ನಡೆಸಿ ಹಣ ಗಳಿಸುವವರು/ಕಳೆದುಕೊಳ್ಳುವವರು ಯಾರೋ ಆಗಿರುತ್ತಾರೆ. ಆರಂಭದಲ್ಲಿ ಕುತೂಹಲ, ಆಸಕ್ತಿಯ ವಿಷಯವಾಗಿ ಆರಂಭಗೊಳ್ಳುವ ಬೆಟ್ಟಿಂಗ್ ಬಳಿಕ ದಂಧೆಯಾಗಿ ಮಾರ್ಪಟ್ಟು ಸಾಕಷ್ಟು ಜನ ತಮ್ಮ ಮನೆಮಠ, ಸಂಪತ್ತುಗಳನ್ನೆಲ್ಲ ಕಳೆದುಕೊಂಡಿದ್ದಾರೆ. ಎಷ್ಟೆಂದರೆ ಮಕ್ಕಳೂ ಕುತೂಹಲಕ್ಕೋ ಅಥವಾ ದುಪ್ಪಟ್ಟು ಹಣ ಒಮ್ಮೆಲೇ ಸಿಗುತ್ತದೆ ಎಂಬ ಭಾವನೆಯಿಂದಲೋ ಪಾಕೆಟ್ವುನಿಯನ್ನು ಬೆಟ್ಟಿಂಗ್ನಲ್ಲಿ ತೊಡಗಿಸಿ ಹಣ ಕಳೆದುಕೊಳ್ಳುತ್ತಾರೆ. ಆರಂಭದಲ್ಲಿ 5-10 ರೂ ಗಳಿಂದ ಆರಂಭಗೊಳ್ಳುವ ಬೆಟ್ಟಿಂಗ್ ಹುಚ್ಚು ಬಳಿಕ ನೂರು- ಸಾವಿರಾರು ರೂ.ವರೆಗೆ ಹಣ ಹಾಕುತ್ತಾರೆ. ಮನೆಯಲ್ಲಿ ಹಣ ಕೊಡದೇ ಇದ್ದಾಗ ಅಪ್ಪನ ಕಿಸೆಯಿಂದ ಹಣ ಎಗರಿಸುವುದು, ಸುಳ್ಳು ಹೇಳಿ ಹಣ ಪಡೆಯುವುದು ಇತ್ಯಾದಿಯಲ್ಲದೆ ಕಳ್ಳತನಕ್ಕೂ ಇಳಿಯುವವರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮ್ಳು ಜನರನ್ನು ಅದರಲ್ಲೂ ವಿಶೇಷವಾಗಿ ಯುವಜನತೆ ಮತ್ತು ಮಕ್ಕಳನ್ನು ಮರುಳು ಮಾಡುತ್ತಿವೆ. ಆನ್ಲೈನ್ನಲ್ಲಿ ಹಣ ತೊಡಗಿಸಿ ದುಪ್ಪಟ್ಟು ಪಡೆಯುವ ಬಗ್ಗೆ ಆಮಿಷ ತೋರಿಸಿ ಹಣ ದೋಚುವುದು ಹೆಚ್ಚಾಗಿದೆ. ವಿಶೇಷವೆಂದರೆ ಇಂತಹ ಮೋಸದ ಜಾಲಕ್ಕೆ ಸಿಲುಕುವ ಹೆಚ್ಚು ಮಂದಿ ವಿದ್ಯಾವಂತರೇ ಆಗಿರುತ್ತಾರೆ. ಅತಿಯಾದ ಆಸೆ, ಹೆಚ್ಚು ಹಾಗೂ ಬೇಗ ಹಣ ಮಾಡಬೇಕು ಎಂಬ ದುರಾಸೆಯು ಇರುವುದನ್ನೂ ಕಳೆದುಕೊಳ್ಳುವಂತೆ ಮಾಡುತ್ತದೆ. ಹಣತೆಯ ಬೆಳಕನ್ನು ಕಾಣುವ ಪತಂಗವು ಬೆಳಕನ್ನು ಮುಟ್ಟಲು ಹೋಗಿ ತನ್ನನ್ನು ತಾನು ಸುಟ್ಟುಕೊಳ್ಳುವಂತೆ ದುಶ್ಚಟಗಳಿಗೆ ಒಳಗಾಗಿ, ಕ್ಷಣಿಕ ಸುಖಕ್ಕೆ ಆಸೆಪಟ್ಟು ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ಧೂಮಪಾನ, ಮದ್ಯಪಾನ, ಗುಟ್ಕಾ, ಮಾತ್ರವಲ್ಲದೆ ಜೂಜಾಟ, ಬೆಟ್ಟಿಂಗ್, ಲಾಟರಿ, ಅತಿಯಾದ ಆನ್ಲೈನ್ ಗೇಮ್ ಗೀಳು ಇವನ್ನೂ ಒಂದು ರೀತಿಯಲ್ಲಿ ದುಶ್ಚಟವೆಂದೇ ಹೇಳಿದರೆ ತಪ್ಪಾಗಲಾರದು. ಅದೆಷ್ಟೋ ಆನ್ಲೈನ್ ಗೇಮ್ಳು ನೂರಾರು ಮಕ್ಕಳನ್ನು ಬಲಿ ಪಡೆದಿವೆ. ವಿದೇಶಗಳಲ್ಲಂತೂ ಆನ್ಲೈನ್ ಗೇಮ್ಳ ಹಾವಳಿ ತೀರಾ ಇದ್ದು, ಎಷ್ಟೋ ಮಕ್ಕಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ಕಾಣಬಹುದಾಗಿದೆ. ಹೀಗೆ ಮಾನಸಿಕವಾಗಿ ನಲುಗುವ ಮಕ್ಕಳಿಂದ ಮನೆಯಾಗಲಿ, ಸಮಾಜವಾಗಲಿ ಅಥವಾ ದೇಶವಾಗಲಿ ಹೇಗೆ ಅಭಿವೃದ್ಧಿ ಹೊಂದಲು ಸಾಧ್ಯ? ಇವುಗಳಿಗೆಲ್ಲ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಜರೂರತ್ತಿದೆ. ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆ ಮುಂತಾದ ದುಶ್ಚಟಗಳು ಮಾನವ ಜೀವನವನ್ನು ಬಲಿ ತೆಗೆದುಕೊಳ್ಳುತ್ತಿವೆ. ಅದೆಷ್ಟೋ ಜನರ ಬಾಳನ್ನು ನರಕವನ್ನಾಗಿಸಿದೆ. ಬದುಕನ್ನು ಬೀದಿಪಾಲು ಮಾಡುತ್ತಿದೆ. ಪರಿಣಾಮಗಳ ಅರಿವಿದ್ದರೂ ಮತ್ತೆ ಮತ್ತೆ ದುಶ್ಚಟಗಳಿಗೆ ಒಳಗಾಗುವುದು ಘೊರ ದುರಂತವೆನ್ನಬಹುದು. ಹಾಗೆಯೇ ಜೂಜು-ಬೆಟ್ಟಿಂಗ್ಗಳು ಕೂಡ ಜನರ ಬದುಕನ್ನು ನರಕ ಮಾಡುತ್ತಿವೆ. ಇವುಗಳ ನಿಯಂತ್ರಣಕ್ಕಾಗಿ ಸರ್ಕಾರಗಳು ಸಾಕಷ್ಟು ಪ್ರಯತ್ನಿಸುತ್ತವೆಯಾದರೂ ಅವುಗಳೂ ಅಷ್ಟೇ ನಾನಾ ಕಳ್ಳಮಾರ್ಗಗಳನ್ನು ಹುಡುಕುತ್ತಿವೆ.
ಈ ಹಿಂದೆ ಸಣ್ಣ ಪ್ರಮಾಣದಲ್ಲಿದ್ದ ಬೆಟ್ಟಿಂಗ್ ಇದೀಗ ಹೈಟೆಕ್ ಆಗಿ ಮಾರ್ಪಟ್ಟಿದೆ. ಅಂತರ್ಜಾಲದ ಸಹಾಯದಿಂದ ಎಲ್ಲಿ ಬೇಕೋ ಅಲ್ಲಿ ಕೂತು ಬೆಟ್ಟಿಂಗ್ ದಂಧೆಯಲ್ಲಿ ತೊಡಗುವವರಿದ್ದಾರೆ. ಇಂತಹ ದುಶ್ಚಟಗಳಿಗೆ ಹೆಚ್ಚು ಬಲಿಯಾಗುವುದು ಮಧ್ಯಮ ವರ್ಗದ ಜನರೇ ಆಗಿದ್ದಾರೆ. ಜೀವನದಲ್ಲಿ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು, ಮನೆ-ಸಂಸಾರದೊಂದಿಗೆ ಬಾಳಬೇಕು ಎಂದೆಲ್ಲ ಕನಸನ್ನು ಹೊತ್ತು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ತಂತ್ರಗಳಿಗೆ ಬಲಿಯಾಗುತ್ತಾರೆ. ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಇರುವ ಅತಿಯಾದ ಆನ್ಲೈನ್ ಆಟದ ಗೀಳು ಹೆತ್ತವರನ್ನು ಆತಂಕಕ್ಕೆ ದೂಡಿರುವುದಂತೂ ಸತ್ಯ. ಸದಾ ಕಾಲ ಮೊಬೈಲ್ ಅಥವಾ ಕಂಪ್ಯೂಟರ್ ಗೇಮ್ಳಲ್ಲಿ ಮುಳುಗಿರುವ ಮಕ್ಕಳು ಮೈದಾನದ ಆಟಗಳಿಂದ ವಂಚಿತರಾಗುತ್ತಿದ್ದಾರೆ. ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿ, ಶಿಕ್ಷಣ ಮುಗಿಸಿದ ಯುವ ಜನತೆ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಉದ್ಯೋಗದ ಹುಡುಕಾಟ, ಹೊಸ ಉದ್ಯಮಗಳ ಪ್ರಾರಂಭ ಹೀಗೆ ಹಲವು ರೀತಿಯಲ್ಲಿ ಚಟುವಟಿಕೆಯಿಂದಿರುವುದು ಸಾಮಾನ್ಯ ಸಂಗತಿ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಇರುವ ಸದವಕಾಶ ಇದಾಗಿದೆ. ಕೇವಲ ಪಠ್ಯ ಚಟುವಟಿಕೆ ಮಾಡಿ, ಹೆಚ್ಚಿನ ಅಂಕ ಗಳಿಸುವುದು ಮಾತ್ರ ಗುರಿಯಾಗಿರಬಾರದು. ಅದರೊಂದಿಗೆ ಪಠ್ಯೇತರ ಚಟುಟವಟಿಕೆ ಹಾಗೂ ಜೀವನ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಬದುಕು ಆರಂಭಿಸುವ ಯುವ ಜನತೆಯೂ ಅಷ್ಟೇ ಯಾವುದೇ ಮೋಹಗಳಿಗೆ ಒಳಗಾಗದೆ ಉದ್ದೇಶಿತ ಗುರಿಯತ್ತ ಮುನ್ನಡೆಯಬೇಕು. ಉತ್ತಮ ಉದ್ಯೋಗ ಹೊಂದಿ ಮನೆ, ಕುಟುಂಬವನ್ನು ನಿರ್ವಹಿಸುವ ಮೂಲಕ ಸಂತೋಷ, ನೆಮ್ಮದಿ ಹೊಂದಬಹುದಾಗಿದೆ. ಬದಲಾಗಿ ಅತಿಯಾಸೆಗೆ ಒಳಗಾಗಿ, ಮೋಹಗಳಿಗೆ ಬಲಿಯಾದರೆ ಮರುಭೂಮಿಯಲ್ಲಿ ಓಯಸಿಸ್ಗೆ ಅಲೆದಾಡಿದಂತಾಗಬಹುದು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)