

| ಪ್ರೊ. ಮಂಜುನಾಥ ಉಲವತ್ತಿ ಶೆಟ್ಟರ್
ದೇಶದ ರಾಜಧಾನಿ ಹಸ್ತಿನಾವತಿಯಲ್ಲಿರುವ (ದೆಹಲಿ) ಪ್ರತಿಷ್ಠಿತ ಕಟ್ಟಡಗಳಲ್ಲೊಂದಾಗಿರುವ ನಮ್ಮ ಸಂಸತ್ ಭವನ ದೇಶದ ಶಕ್ತಿ ಕೇಂದ್ರ. ದೇಶದ ಸಾಕ್ಷಿಪ್ರಜ್ಞೆಯಂತೆ ಸ್ಥಾಯಿಯಾಗಿ ನಿಂತಿರುವ ಈ ಕಟ್ಟಡವು ಎಲ್ಲರನ್ನೂ ಒಳಗೊಳ್ಳುವ ದೂರದೃಷ್ಟಿತ್ವದ ಪ್ರತೀಕವಾಗಿದೆ. ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸಿದ ಸಂಸದರು ಇದೇ ಭವನದಲ್ಲಿ ಕುಳಿತುಕೊಂಡು ಕಾನೂನಿನ ನೀತಿ ನಿಯಮಗಳನ್ನು ರೂಪಿಸಿದ್ದಾರೆ. ಅನೇಕ ಐತಿಹಾಸಿಕ, ನಿರ್ಧಾರಕ ಕುರುಹುಗಳಿಗೆ ಸಾಕ್ಷಿಯಾಗಿದ್ದಾರೆ, ಹಾಗೆಯೇ ಸಂಸತ್ತು ಕೂಡ. ನಮ್ಮ ಸಂಸತ್ತಿನ ವೃತ್ತಾಕಾರದ ಕಲ್ಲು ಕಟ್ಟಡದ ರಚನೆಯು ಎಲ್ಲರನ್ನೂ ಒಳಗೊಂಡು ಇಡೀ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಸಂಕೇತಿಸುತ್ತದೆ.
ನಮ್ಮ ಪಾರಂಪರಿಕ ಕಟ್ಟಡವಾಗಿರುವ ಸಂಸತ್ ಭವನಕ್ಕೆ ಇದೀಗ 92ರ ಹರೆಯ. ಈ ಕಟ್ಟಡವನ್ನು ಸದ್ಯದ ಅಗತ್ಯಕ್ಕೆ ತಕ್ಕಂತೆ ಪುನರ್ ನಿರ್ಮಾಣ ಮಾಡಲು ಅವಕಾಶವೂ ಇಲ್ಲ, ಸಾಧ್ಯತೆಯೂ ಇಲ್ಲ. ಹಾಗಾಗಿ ನೂತನ ಸಂಸತ್ ಭವನದ ಅವಶ್ಯಕತೆ ಕುರಿತಂತೆ ತುಂಬಾ ದಿನಗಳಿಂದ ಒತ್ತಾಯ ಕೇಳಿಬಂದಿತ್ತು. ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿಯೇ ಇದಕ್ಕೆ ಸಂಬಂಧಿಸಿದಂತೆ, 2012ರಲ್ಲಿ ಅಂದಿನ ಲೋಕಸಭೆ ಸ್ಪೀಕರ್ ಆಗಿದ್ದ ಮೀರಾಕುಮಾರ್ ಅವರು ಉನ್ನತಾಧಿಕಾರಿಗಳ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿ ಈಗಿರುವ ಭವನಕ್ಕೆ ಪರ್ಯಾಯವಾಗಿ ಮತ್ತೊಂದು ಭವನ ನಿರ್ಮಾಣ ಮಾಡುವುದು ಸೂಕ್ತ ಎಂದು ತಿಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಲವು ಸಕಾಲಿಕ ಕಾರಣಗಳನ್ನು ಸಹ ಕೊಟ್ಟಿತ್ತು. ಈ ಹಿಂದೆ ಸ್ಪೀಕರ್ ಆಗಿದ್ದ ಸುಮಿತ್ರಾ ಮಹಾಜನ್ ಅವರೂ ಈಗಿರುವ ಜಾಗ ಇಲ್ಲವೇ ರಾಜಪಥ್ಗೆ ಅಡ್ಡವಾಗಿ ಹೊಸ ಸಂಸತ್ ಭನವ ನಿರ್ವಿುಸಬೇಕು ಎಂದು ಶಿಫಾರಸು ಮಾಡಿದ್ದರು. ‘90 ವರ್ಷ ಹಳೆಯದಾದ ಈ ಕಟ್ಟಡ ಈಗಾಗಲೇ ಆಪಾಯದ ಮುನ್ಸೂಚನೆ ನೀಡುತ್ತಿದೆ. 2021ರ ಜನಗಣತಿ ಆಧಾರದ ಮೇಲೆ ಹಾಗೂ 2026ನೆಯ ಇಸ್ವಿಯಲ್ಲಿ ಕ್ಷೇತ್ರ ವಿಭಜನೆ ಮಾಡಿದರೆ ಹೆಚ್ಚುವರಿ ಸಂಸದರಿಗೆ ಸ್ಥಳಾವಕಾಶ ಮಾಡಲು ಆಗುವುದಿಲ್ಲ. ಸಂಸದೀಯ ಸಮಿತಿಗಳು, ವೀಕ್ಷಕರು, ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ಅಗತ್ಯತೆ ಇದೆ’- ಎಂಬ ಮೂರು ಕಾರಣಗಳನ್ನು ಅವರು ನೂತನ ಸಂಸತ್ ಭವನ ನಿರ್ವಣದ ಅಗತ್ಯ ಕುರಿತಂತೆ ನೀಡಿದ್ದರು. ‘ಹೊಸ ಭವನ ನಿರ್ವಣಕ್ಕೆ ತಗಲಬಹುದಾದ ಅಂದಾಜು ವೆಚ್ಚವನ್ನು ನಿಗದಿ ಮಾಡಬೇಕಿದೆ. ಈ ಕಟ್ಟಡ ನಿರ್ವಣಕ್ಕೆ ತೆರಿಗೆದಾರರ ಹಣ ನ್ಯಾಯಯುತವಾಗಿ ಖರ್ಚಾಗಬೇಕು. ನಮ್ಮ ಸಂಸದೀಯ ಪ್ರಜಾಪ್ರಭುತ್ವ ತುಂಬಾ ಐತಿಹಾಸಿಕ ಮತ್ತು ಅಮೂಲ್ಯವಾಗಿರುವುದರಿಂದ ಅದಕ್ಕೆ ಇಷ್ಟೇ ಎಂದು ಬೆಲೆ ಕಟ್ಟಲೂ ಸಾಧ್ಯವಿಲ್ಲ. ಈಗಿರುವ ಸಂಸತ್ ಭವನವು ಭಾರತದ ಚೈತನ್ಯ ಮತ್ತು ಆತ್ಮಆಗಿದ್ದು ಈ ಗುಣ ಹೊಸ ಭವನಕ್ಕೆ ಬರಲು ಸಾಧ್ಯವಿಲ್ಲ’ ಎಂದೂ ಅವರು ಹೇಳಿದ್ದರು. ದೇಶದಲ್ಲಿ 2026ರ ನಂತರ ಸಂಸದರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಜನಗಣತಿ ಆಧಾರದ ಮೆಲೆ ಜನಪ್ರತಿನಿಧಿಗಳ ಸಂಖ್ಯೆಯನ್ನು ನಿರ್ಧರಿಸಲು ಸಂವಿಧಾನದ 81ನೇ ವಿಧಿಯನ್ವಯ ಅವಕಾಶವಿದೆ. ಒಂದು ವೇಳೆ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ಏರಿಕೆ ಆಗಿದ್ದೇ ಆದರೆ ಈಗಿರುವ ಸಂಸತ್ ಭವನವು ಸಾಲುವುದಿಲ್ಲ. ಹೀಗಾಗಿಯೇ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಿ ನೂತನ ಸಂಸತ್ ಭವನ ನಿರ್ವಿುಸಲಾಗಿದೆ.
ಹೊಸ ಸಂಸತ್ ಭವನ ಬಳಸತೊಡಗಿದ ನಂತರ ಹಳೆಯದನ್ನು ಏನು ಮಾಡಲಾಗುತ್ತದೆ? ಹಳೆಯ ಭವನವನ್ನು ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸಲಾಗುತ್ತದೆ. ಪ್ರಜಾಪ್ರಭುತ್ವದ ವಸ್ತುಸಂಗ್ರಹಾಲಯವಾಗಿ ಇದನ್ನು ರೂಪಿಸಲಾಗುತ್ತದೆ. ಇದನ್ನು ರಿಪೇರಿ ಮಾಡಿ ಪರ್ಯಾಯ ಬಳಕೆಗೆ ಉಪಯೋಗಿಸಲಾಗುವುದು ಎಂದು 2021ರ ಮಾರ್ಚ್ನಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದಿಪ್ಸಿಂಗ್ ಪುರಿ ಹೇಳಿದ್ದರು.
ಹಳೆಯ ಸಂಸತ್ ಭವನದ ಕಟ್ಟಡ ನಿರ್ವಣದ ಇತಿಹಾಸ ಕುತೂಹಲಕಾರಿಯಾಗಿದೆ. ಪ್ರಸಿದ್ಧ ಬ್ರಿಟಿಷ್ ವಾಸ್ತುಶಿಲ್ಪಿಯಾದ ಸರ್ ಎಡ್ವಿನ್ ಲುಟೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರು ಈ ಭವನದ ವಿನ್ಯಾಸ ರೂಪಿಸಿದರಲ್ಲದೆ, ಭವನ ನಿರ್ವಣದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರು. ಈ ಸಂಕೀರ್ಣ ಕಟ್ಟಡವನ್ನು ಬರೋಬ್ಬರಿ 6 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಯಿತು. ಕಟ್ಟಡದ ಶಂಕುಸ್ಥಾಪನೆಯನ್ನು 1921ರ ಫೆಬ್ರವರಿ 12ರಂದು ಕನ್ನಾಟ್ನ ಯುವರಾಜ ಅರ್ಥರ್ ನೆರವೇರಿಸಿದ್ದರು. ಕಟ್ಟಡ ನಿರ್ವಣಕ್ಕೆ ತೆಗೆದುಕೊಂಡ ಕಾಲಾವಧಿ ಬರೋಬ್ಬರಿ 6 ವರ್ಷ. ಕಟ್ಟಡದ ಉದ್ಘಾಟನೆಯನ್ನು 1927ರ ಜನವರಿ 18ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಇರ್ವಿನ್ ನೆರವೇರಿಸಿದರು. ಆ ಭವ್ಯ ಕಟ್ಟಡ ನಿರ್ವಣಕ್ಕೆ ಆಗ ವ್ಯಯವಾದ ಒಟ್ಟು ಮೊತ್ತ 83 ಲಕ್ಷ ರೂಪಾಯಿ. ಆದರೆ, ನೂತನ ಸಂಸತ್ ಭವನಕ್ಕೆ ಈಗ ವ್ಯಯವಾಗಿರುವುದು ಅಂದಾಜು 1200 ಕೋಟಿ ರೂಪಾಯಿ. ಹಳೆಯ ಕಟ್ಟಡದ ಪ್ರಮುಖ ಆಕರ್ಷಣೆಯೆಂದರೆ, ಸೆಂಟ್ರಲ್ ಹಾಲ್, ಲೋಕಸಭೆ ಸ್ಪೀಕರ್, ರಾಜ್ಯಸಭೆ ಅಧ್ಯಕ್ಷರ ಕಚೇರಿ ಹಾಗೂ ಗ್ರಂಥಾಲಯ. ನೆಲ ಮಹಡಿಯ ಕಾರಿಡಾರ್ನ ಹೊರ ಭಾಗದ ಗೋಡೆಗಳ ಮೇಲೆ ಪ್ರಾಚೀನ ಭಾರತದ ಇತಿಹಾಸ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಸಾರುವ ಫಲಕಗಳನ್ನು ಹಾಕಲಾಗಿದೆ.
(ಲೇಖಕರು ಸಹಾಯಕ ಪ್ರಾಧ್ಯಾಪಕ)