ಹೆತ್ತವರಿಗೆ ಬೇಕು ಕರುಳಬಳ್ಳಿಯ ಆರೈಕೆ..

Hello Doctor
Published on

ಅವರು ನನ್ನ ಆತ್ಮೀಯ ಸ್ನೇಹಿತರು. ಹೆಸರು ಬೇಡ. ಸುಮಾರು 15 ದಿನಗಳ ಹಿಂದೆ ಕರೆ ಮಾಡಿ ‘ಏನ್ ಡಾಕ್ಟರ್ ಸಾಹೇಬ್ರೆ. ಹೀಗಾಗ್ಹೋಯ್ತು’ ಎಂದರು. ‘ಏನಾಯ್ತು?’ ಎಂದೆ. ‘ನನಗೂ ನನ್ನ ಹೆಂಡತಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದು ಹಣ್ಣುಹಣ್ಣು ಆಗಿ ಹೋದೆವು. ಬದುಕುವೆವೋ ಇಲ್ಲವೋ ಎನ್ನುವ ಸಂಕಟ ಅನುಭವಿಸಿದೆವು’ ಎಂದರು. ಅವರ ಮಾತಿನಲ್ಲಿ ದುಃಖವಿತ್ತು ಮತ್ತು ಈ ವೇಳೆ ತಮ್ಮ ಆರೈಕೆ ಮಾಡುವವರು ಯಾರೂ ಇಲ್ಲ ಎನ್ನುವ ವಿಷಾದವಿತ್ತು. ನೇರವಾಗಿ ಹೇಳಬೇಕೆಂದರೆ ಅವರಿಗೆ ಆದ ನೋವು, ಬೇಸರದ ಸಂಗತಿ ಎಂದರೆ ತಾವು ಹೆತ್ತ ಮಕ್ಕಳು ಈ ವೇಳೆ ತಮ್ಮ ಜತೆಗಿಲ್ಲ ಎಂಬುದೇ ಆಗಿತ್ತು.

ಇದು ಒಂದು ಉದಾಹರಣೆ ಮಾತ್ರ. ಇಂದು ಅನೇಕ ಮನೆಗಳಲ್ಲಿ ಇಂತಹ ಸ್ಥಿತಿಯಿದೆ. ಆಸ್ಪತ್ರೆಯಲ್ಲಿ ವೈದ್ಯರೇನೋ ಚಿಕಿತ್ಸೆ ನೀಡಿದರು. ಜೀವಗಳು ಬದುಕಿದವು. ಆದರೆ ಅವರಿಗೆ ಈ ವೇಳೆ ಬೇಕಾಗಿರುವುದು ಜೀವದ ಜತೆ ಒಡನಾಡಿಗಳ ಆರೈಕೆ, ಹಾರೈಕೆ ಮತ್ತು ಸಾಮೀಪ್ಯ. ಸಾಕಷ್ಟು ಓದಿಯೂ ಆಗಿದೆ. ಹಣವೂ ಗಳಿಸಿ ಆಗಿದೆ. ಆ ಹಣ ಬೆನ್ನತ್ತಿ ಇವರ ಮಕ್ಕಳು ಇಂದು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಫ್ಯಾಮಿಲಿ ಟ್ರಿಪ್ ಮಾದರಿ ಬರುತ್ತಾರೆ. ಒಂದು ತಿಂಗಳೋ ಎರಡು ತಿಂಗಳೋ ಇರುತ್ತಾರೆ. ಮತ್ತೆ ಟಾಟಾ ಹೇಳುತ್ತಾರೆೆ. ಮಾನವೀಯ ಸಂವೇದನೆ ಮರೆಯಾಗಿದೆ. ಸಂಬಂಧಗಳು ಯಾಂತ್ರಿಕ ಸ್ವರೂಪ ಪಡೆದಿವೆ. ವೀಡಿಯೊ ಕಾಲ್​ನಲ್ಲಿ ಯೋಗಕ್ಷೇಮ ವಿಚಾರಿಸುವ ಹಂತಕ್ಕೆ ಬಂದು ತಲುಪಿದ್ದೇವೆ.

ಅದೊಂದು ಕಾಲವಿತ್ತು, ನಮ್ಮ ಮಗ ಯುಎಸ್​ಗೆ ಹೋಗ್ಯಾನ. ಮಗ ಸೊಸೆ ಇಬ್ಬರೂ ಸಾಫ್ಟ್​ವೇರ್ ಎಂಜಿನಿಯರ್. 5 ವರ್ಷ ಆಯ್ತು, ಅಲ್ಲಿಯೇ ಸೆಟಲ್ ಆಗ್ಯಾರ. ದಿನವೂ ವಿಡಿಯೋ ಕಾಲ್ ಮಾಡಿ ಮಾತಾಡ್ತಾರ. ನಾವೂ ಒಂದು ಸಲ ಅವರ ಹತ್ತಿರ ಹೋಗಿ ಬಂದೆವು. ನಾವಿಬ್ಬರೂ ಇಲ್ಲಿ ಮನೆಯಲ್ಲಿ ಇದ್ದೇವೆ ಎಂದು ಹಿರಿಯ ಜೀವಿಗಳು ಹೇಳುತ್ತಿದ್ದುದು ಸಾಮಾನ್ಯವಾಗಿತ್ತು. ಮಗ ವಿದೇಶಕ್ಕೆ ಹೋಗಿ ತುಂಬಾ ದುಡ್ಡು ಗಳಿಸಿದ್ದಾನೆ ಎನ್ನುವ ಸಂತೋಷದ ಜತೆಗೆ ಎಲ್ಲೋ ಒಂದು ಕಡೆ ಅವರಿಗೆ ಆತ ನಮ್ಮಿಂದ ದೂರವಾದ ಎನ್ನುವ ಖೇದವೂ ಇತ್ತು. ಈಗ ಪರಿಸ್ಥಿತಿ ಹೇಗೆ ಬಂದಿದೆ ಎಂದರೆ ನಮ್ಮ ಮಗ ಇಂಥ ದೇಶದಲ್ಲಿ ಇರುತ್ತಾನೆ ಎಂದು ಹೇಳಿಕೊಳ್ಳಲು ಮುಜುಗರ ಪಡುವ ಸ್ಥಿತಿ ಎದುರಾಗಿದೆ. ಇಲ್ಲವೇ ಹಿರಿಯರು ಈಗಿನ ಯುವಕರನ್ನು ಉದ್ದೇಶಿಸಿ ‘ಮಕ್ಕಳನ್ನು ಫಾರಿನ್​ಗೆ ಕಳಿಸಬೇಡಪ್ಪಾ. ಕಣ್ಣೆದುರೇ ಇರಲಿ. ಕಾಲ ಹೀಗೆ ಎಂದು ಹೇಳಲಾಗದು. ಜೀವನದ ಸಂಧ್ಯಾ ಕಾಲದಲ್ಲಿ ಹತ್ತಿರವಿರಲಿ. ಅಬ್ಬೆಪಾರಿ ಆಗಬೇಡಿ’ ಎಂದು ತಿಳಿಹೇಳುವ ಸ್ಥಿತಿ ಬಂದಿದೆ.

ಈಗ ಬಂದಿರುವ ಕರೊನಾ ಸಂಕಷ್ಟವು ಮನೆಯಲ್ಲೇ ಪಾಲಕರ ಜತೆ ಇದ್ದವರಿಗೆ ಕೌಟುಂಬಿಕ ಮೌಲ್ಯಗಳ ಬೆಲೆ ತಿಳಿಸಿಕೊಟ್ಟಿದೆ. ಅದರ ಮಹತ್ವ ಸಾರಿದೆ. ಮಾನಸಿಕ ನೆಮ್ಮದಿ ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದೆ. ಹೆತ್ತವರು ಕಣ್ಣೆದುರಿಗೆ ಇದ್ದರೆ ಸಿಗುವ ಧೈರ್ಯ, ಸಂತಸ ಅಪರಿಮಿತ. ವೃದ್ಧರಾಗಿದ್ದರೆ, ಏನು ಬೇಕಾದರೂ ಆಗಲಿ. ನನ್ನ ಮಗ ಇದ್ದಾನೆ ಎನ್ನುವ ಧೈರ್ಯ ಪಾಲಕರದ್ದಾದರೆ ಜೀವ ಇದ್ದರೆ ಜೀವನ. ಹಣ ಗಳಿಕೆ ತಡವಾಗಬಹುದು ಅಥವಾ ಕಡಿಮೆ ಗಳಿಸಬಹುದು. ಅಪ್ಪ ಕಟ್ಟಿದ ಮನೆಯಲ್ಲಿ ಇದ್ದುಕೊಂಡು ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತ, ಹಂಚಿಕೊಳ್ಳುತ್ತ ಸಾಗಿದರೆ ಇನ್ನೇನು ಬೇಕು ಎನ್ನುವವರೂ ಇದ್ದಾರೆ. ಈ ಎರಡೂ ವರ್ಗದ ಜನರಲ್ಲಿ ಇರುವ ಧೈರ್ಯದ ಹಿಂದಿನ ಕಾರಣ ಅಥವಾ ಶಕ್ತಿ ಎಂದರೆ ಅದು ‘ನನ್ನವರು ನನ್ನ ಜತೆಗಿದ್ದಾರೆ’ ಎನ್ನುವುದು.

ಅವಿಭಕ್ತ ಕುಟುಂಬ ಎಂಬ ವ್ಯವಸ್ಥೆಯನ್ನು ಹಿಂದೆ ಮಾಡಿದ್ದು ಸುಖಾಸುಮ್ಮನೆಯಲ್ಲ. ಅದಕ್ಕೊಂದು ಅರ್ಥವಿದೆ. ಬದುಕಿನ ಸಾರವಿದೆ. ಇದರ ಶಕ್ತಿಯ ಅರಿವು ಕರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಇನ್ನೂ ಹೆಚ್ಚಿಗೆ ಆಗುತ್ತಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಇತ್ತು. ಆದರೆ ಸಾವು ನೋವಿನ ಪ್ರಮಾಣ ಕಡಿಮೆಯಿತ್ತು. ನನ್ನವರು ತಮ್ಮವರು ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಅದನ್ನು ಅರ್ಥವಿಸಿಕೊಂಡು ನಡೆದರೆ ಸಾಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net