ಮನೋಲ್ಲಾಸ: ಹೆತ್ತವರ ಪ್ರೀತಿಗೆ ಎಣೆಯುಂಟೆ?

Manollasa 28
Published on

| ಡಾ.ಗಣಪತಿ ಆರ್. ಭಟ್

ದಾಮೋದರನೆಂಬ ಪ್ರತಿಭಾಶಾಲಿಯಾದ ಕವಿ ಕಿರಿಯ ವಯಸ್ಸಿನಲ್ಲೇ ಜನಮೆಚ್ಚುಗೆ ಪಡೆದುಕೊಂಡ. ಪಂಡಿತರಿಂದ ಹಿಡಿದು ಸಾಮಾನ್ಯನವರೆಗೆ ಎಲ್ಲರೂ ಆತನ ಕವಿತ್ವವನ್ನು ಮೆಚ್ಚಿ ಅಭಿನಂದಿಸುತ್ತಿದ್ದರು. ಆದರೆ ಆತನ ತಂದೆ ಮಾತ್ರ ಮಗನ ಸಾಧನೆ ಬಗ್ಗೆ ಸ್ವಲ್ಪವೂ ಮಾತನಾಡಲಿಲ್ಲ. ಇದು ದಾಮೋದರನ ಬೇಸರಕ್ಕೆ ಕಾರಣವಾಯಿತು. ತಂದೆಯನ್ನು ಮೆಚ್ಚಿಸಲೆಂದೇ ಎಷ್ಟೋ ಕವಿತೆಗಳನ್ನು ಬರೆದದ್ದೂ ಆಯಿತು. ತಂದೆ ಮಾತ್ರ ಆತನ ಕುರಿತು ಏನನ್ನೂ ಹೇಳಲಿಲ್ಲ. ಕ್ರಮೇಣ ದಾಮೋದರನಿಗೆ ತಂದೆ ಕುರಿತು ನಕಾರಾತ್ಮಕ ಭಾವನೆ ಬೆಳೆಯಿತು. ಲೋಕವೇ ತನ್ನನ್ನು ಮೆಚ್ಚಿದರೂ ತಂದೆ ಮಾತ್ರ ಮೆಚ್ಚಿಲ್ಲವೆಂದರೆ ಬಹುಶಃ ಈತನಿಗೆ ಮಗನ ಕುರಿತಾಗಿ ಅಸೂಯೆ ಇರಬಹುದು. ಮಗನ ಏಳಿಗೆಯನ್ನು ಸಹಿಸದ ಅಪ್ಪ ಇದ್ದರೆಷ್ಟು ಬಿಟ್ಟರೆಷ್ಟು? ಎಂದುಕೊಳ್ಳುತ್ತಿದ್ದ. ಆದರೆ ಅಂದು ರಾತ್ರಿ ತನ್ನ ತಂದೆಯು ತಾಯಿ ಬಳಿ ಆಡುತ್ತಿದ್ದ ಮಾತು ಆತನ ಕಿವಿಗೆ ಬಿತ್ತು-‘ನಮ್ಮ ಮಗ ತನ್ನ ಪ್ರತಿಭೆಯಿಂದಲೇ ಸಾಕಷ್ಟು ಮನ್ನಣೆ ಗಳಿಸಿದ್ದಾನೆ. ಅದಕ್ಕೆ ಹೆಮ್ಮೆಯಿದೆ. ಆತನ ಕೌಶಲವನ್ನು ಚಿಕ್ಕವಯಸಿನಲ್ಲಿಯೇ ಗಮನಿಸಿದ್ದೇನೆ. ಆದರೆ ನಾನೇನಾದರೂ ಅಂದು ಹೊಗಳಿದ್ದರೆ ಆತ ಈ ಮಟ್ಟಿಗೆ ಬೆಳೆಯಲು ಆಗುತ್ತಿರಲಿಲ್ಲ. ಪ್ರಶಂಸೆಯು ಆತನ ಗರ್ವಕ್ಕೆ ಕಾರಣವಾಗಿ ಎಲ್ಲಿ ಆತನ ಏಳ್ಗೆಗೆ ತೊಡಕಾಗುವುದೋ ಎಂಬ ಅಂಜಿಕೆಯಿಂದ, ಹೊಗಳದೆ, ಮನಸೊಳಗೇ ಖುಷಿ ಪಡುತ್ತ, ಹೃದಯಪೂರ್ವಕ ವಾಗಿ ಅವನನ್ನು ಆಶೀರ್ವದಿಸುತ್ತ ಬಂದೆ’. ದಾಮೋದರನಿಗೆ ತಂದೆ ಬಗ್ಗೆ ಇದ್ದ ತಪು್ಪ ಅಭಿಪ್ರಾಯದ ಕುರಿತು ಒಮ್ಮೆಲೇ ನಾಚಿಕೆಯಾಯಿತು. ತಂದೆ ಬಳಿ ಹೋಗಿ ಕ್ಷಮೆ ಕೇಳಿದ. ಮುಂದೆ ಆತನೇ ಭಾರವಿ ಎಂಬ ಹೆಸರಿನಲ್ಲಿ ಖ್ಯಾತ ಕವಿ ಎನಿಸಿದ.

ಮಕ್ಕಳು ಎಷ್ಟೇ ದೊಡ್ಡವರಾಗಲಿ ಹೆತ್ತವರ ದೃಷ್ಟಿಯಲ್ಲಿ ಅವರು ಚಿಕ್ಕವರೇ. ಪ್ರತಿಯೊಬ್ಬರ ಸಾಧನೆ ಹಿಂದೆ ಹೆತ್ತವರ ಹರಕೆ, ಹಾರೈಕೆ ಇಲ್ಲದೇ ಇದ್ದೀತೆ? ಇದನ್ನು ಅರ್ಥೈಸಿಕೊಳ್ಳದ ಅನೇಕರು ಹೆತ್ತವರನ್ನು ದೂರ ಸರಿಸುವುದು ದುರಂತ. ಆದರೆ ಎಲ್ಲರೂ ಹಾಗೆಯೇ ಅಲ್ಲ. ಕಂಪನಿಯೊಂದರ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೋರ್ವ ತನಗಿರುವ ಕೆಲಸದ ಒತ್ತಡದಲ್ಲಿ ವಯೋವೃದ್ಧ ತಂದೆ-ತಾಯಿಯರ ಆರೋಗ್ಯದ ಕಡೆ ಗಮನ ಕೊಡಲಾಗುವುದಿಲ್ಲವೆಂದು ಕೆಲಸವನ್ನೇ ಬಿಟ್ಟ. ಸಂಬಂಧಿ ಗಳು ಆಡಿಕೊಂಡರು. ಆಡುವವರು ನಾಲ್ಕುದಿನ ಆಡಿಕೊಳ್ಳುತ್ತಾರೆ. ಹಾಗೆಂದು ತಂದೆ-ತಾಯಿಯರ ಬಿಡಲಾದೀತೆ? ಎಂದುಕೊಳ್ಳುತ್ತ ಶುಶ್ರೂಷೆ ಮುಂದುವರಿಸಿದ. ಆಡುವವರ ಬಾಯಿ ತಾನಾಗೇ ಮುಚ್ಚಿತು. ಮಾತಾಪಿತೃಗಳ ಭಕ್ತನಾಗಿದ್ದ ಶ್ರವಣಕುಮಾರನು ತನ್ನ ಅಂಧ ತಂದೆತಾಯಿಗಳ ತೀರ್ಥಯಾತ್ರೆಯ ಆಸೆ ಪೂರೈಸಲು ಹೆಗಲ ಮೇಲೆ ಹೊತ್ತು ಸಾಗಿದ. ಅವರು ಬಾಯಾರಿದರೆಂದು ನೀರು ತರಲು ಹೋದಾಗ ವಿಧಿವಶಾತ್ ದಶರಥನ ಬಾಣವು ತಾಕಿತು. ರಕ್ತದ ಮಡುವಿನಲ್ಲಿ ಬಿದ್ದಾಗಲೂ ಕೊನೆಯದಾಗಿ ಆತ ದಶರಥನ ಬಳಿ ಕೇಳಿಕೊಂಡಿದ್ದು ತನ್ನ ತಂದೆ-ತಾಯಿಗಳ ದಾಹವನ್ನು ತೀರಿಸಲು. ಮಗುವಾಗಿ ಹುಟ್ಟಿದಾಗಿನಿಂದ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳುವವರೆಗೆ ಹೆತ್ತವರು ಮಕ್ಕಳಿಗಾಗಿ ಪಡುವ ಕಷ್ಟವನ್ನು ಆ ಮಕ್ಕಳು ನೂರು ವರ್ಷ ತಮ್ಮ ಹೆತ್ತವರ ಸೇವೆಗೈದರೂ ಸರಿದೂಗಿಸಲಾಗುವುದಿಲ್ಲವಂತೆ.

ಜೀವನವೆಂದರೆ ನಾನಾ ಬಂಧಗಳ ಸರಮಾಲೆಯೇ ಸರಿ. ನಮಗೆ ಸಿಗುವ ಪ್ರೇಮಕ್ಕೆ ಲೆಕ್ಕವೇ ಇರುವುದಿಲ್ಲ. ಅಂಥಹದ್ದರಲ್ಲಿ ಹೆತ್ತವರು ತೋರುವ ಪ್ರೇಮಕ್ಕೆ ಸಾಟಿ ಯಾವುದಿದೆ? ಹೆತ್ತವರ ಆಶಯಗಳನ್ನು ಅರ್ಥೈಸಿಕೊಂಡು ಗೌರವಾದರದಿಂದ ಕಂಡಾಗ ಮಾತ್ರವೇ ಬದುಕಲ್ಲಿ ಮಿಕ್ಕ ಪ್ರೀತಿಗೂ ಅರ್ಥಬರುವುದು.

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net