ಪರಮಹಂಸ ನುಡಿದೀಪ | ತೇನವಿನಾ ತೃಣಮಪಿ ನ ಚಲತಿ - ನಿಜ ಅರ್ಥದ ಶರಣಾಗತಿ

Paramahamsa
Published on
ಈ ಜಗತ್ತಿನ ಮನುಜರಿಗೆ ಏನು ಬೇಕಾದರೂ ಹೇಳಬಹುದು, ಅದನ್ನು ಪಾಲಿಸುತ್ತಾರೆ. ಆದರೆ ಶರಣಾಗತಿ ಎಂಬ ಪದವನ್ನು ಮಾತ್ರ ಹೇಳಕೂಡದು. ಎಲ್ಲರಿಗೂ ಸಾಮಾನ್ಯವಾಗಿ ನಾನು ಎಂಬುದು ತನಗರಿವಿಲ್ಲದೇ ಆವರಿಸಿಕೊಂಡು ಬಿಟ್ಟಿರುತ್ತದೆ. ನಾವು ಈ ಅಂಶವನ್ನು ದಿನನಿತ್ಯ ಕಿವಿಗಳಲ್ಲಿ ಆಲಿಸಬಹುದು. ನಾನಿಲ್ಲದಿದ್ದರೆ ಏನೂ ಸಾಧ್ಯವಿಲ್ಲ! ನಾನಿದ್ದರೆ ಆ ರೀತಿ ಆಗುವುದಕ್ಕೆ ಬಿಡುತ್ತಿರಲಿಲ್ಲ, ನಾನು ಯಾರು ಗೊತ್ತೆ? ಈ ವಿಚಾರದಲ್ಲಿ ಕೆಲವರು ಮತ್ತೂ ಮುಂದುವರಿದು ನನ್ನ ಗಮನಕ್ಕೆ ತಂದರೆ ಸಾಕು ಅದನ್ನು ನಾನು ನೋಡಿಕೊಳ್ಳುತ್ತೇನೆ. ನಾನಿದ್ದರೆ ಮಾತ್ರ ಎಲ್ಲವೂ ಸಾಧ್ಯ! ಹೀಗೆ ಅಹರ್ನಿಶಿ ನಾನು, ನಾನು ಎಂದು ಜಪಿಸುತ್ತಿರುವವರಿಗೆ ನೀನು ನೀನು ಎಂಬುದನ್ನು ಹೇಗೆ ತಾನೇ ತಿಳಿಸಲು ಸಾಧ್ಯ!

ಈ ವಿಚಾರವನ್ನು ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನೆರೆದ ಭಕ್ತರಿಗೆ ಬೋಧಿಸುತ್ತಿದ್ದರು. ಶರಣಾಗತಿ ಎಂಬುದು ಅತ್ಯಂತ ದುಸ್ತರವಾದದ್ದು. ಜೀವನದಲ್ಲಿ ಸಾಕಷ್ಟು ನೋವು, ಏಟುಗಳನ್ನು ಎದುರಿಸಿ ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ ನಂತರವೇ ನಾನಲ್ಲ, ಎಲ್ಲವೂ ನಿನ್ನದು ಎಂಬ ವಿಚಾರದ ಅರಿವು ನಮಗಾಗುತ್ತದೆ. ರಾಮಕೃಷ್ಣರು ತಮ್ಮ ಪರಮಾದ್ಭುತ ಕಂಠದಿಂದ ಭವತಾರಿಣಿಯ ಈ ಹಾಡನ್ನು ಹಾಡುತ್ತಾ ನೆರೆದವರಿಗೆಲ್ಲಾ ಜಗನ್ಮಾತೆಯ ಇಚ್ಛೆಯಿಲ್ಲದೆ ಏನೂ ಸಾಧ್ಯವಿಲ್ಲ ಎಂಬ ಮಹಾನ್ ತತ್ತ್ವವನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದರು:

ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು ......

ಎನ್ನುವ ಅತ್ಯಂತ ಸುಂದರವಾದ ಹಾಗೂ ಅದ್ಭುತವಾದ ಭವತಾರಿಣಿಯ ಹಾಡನ್ನು ಹಾಡಿ ನಂತರ ಸಂಭಾಷಣೆಯನ್ನು ಮುಂದುವರಿಸಿದ್ದರು. ಅಲ್ಲಿ ನೆರೆದಿರುವ ಭಕ್ತರ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಕಾರಣ, ಪರಮಹಂಸರು ದೇವ ದೇವಿಯರ ನಾಮ ಸಂಕೀರ್ತನೆ ಮಾಡುತ್ತಿದ್ದಾರೆ, ಭಕ್ತರೆಲ್ಲರೂ ತಾವು ಕುಳಿತಲ್ಲಿಯೇ ಕುಳಿತು ಆ ಅಮೃತಧಾರೆಯಲ್ಲಿ ಮೀಯುತ್ತಿದ್ದಾರೆ. ಅವರು ಇಂತಹ ಮಧುರಮಯ ನಾಮ ಸಂಕೀರ್ತನೆಯನ್ನು ಎಂದೂ ಕೇಳಿರಲಿಲ್ಲ. ಅಮೃತದ ವರ್ಷಧಾರೆಯಾಗುತ್ತಿದೆಯೋ ಏನೋ ಎಂಬಂತಿತ್ತು. ಪರಮಹಂಸರು ನಾಮ ಸಂಕೀರ್ತನೆಯನ್ನು ಮುಗಿಸಿ ಪ್ರಾರ್ಥನೆ ಮಾಡಲಾರಂಭಿಸುತ್ತಾರೆ. ಸಾಕ್ಷಾತ್ ಭಗವಂತ ಪ್ರೇಮವನ್ನೇ ದೇಹ ಮಾಡಿಕೊಂಡು ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಪರಮಹಂಸರ ಮೂಲಕ ತೋರಿಸುತ್ತಿರುವನೋ ಏನೋ ಎಂಬಂತಿತ್ತು. ಪರಮಹಂಸರು ಪ್ರಾರ್ಥಿಸುತ್ತಿದ್ದಾರೆ, ‘ಹೇ ತಾಯೆ, ನಾನು ನಿನ್ನಲ್ಲಿ ಶರಣಾಗತನಾಗಿದ್ದೇನೆ, ನನಗೆ ಪ್ರಾಪಂಚಿಕ ಸುಖ ಬೇಡ ತಾಯೆ; ಲೋಕ ಮಾನ್ಯತೆ ಬೇಡ ತಾಯೆ; ಅಣಿಮಾದಿ ಅಷ್ಟಸಿದ್ಧಿಗಳು ಬೇಡ ತಾಯೆ; ಕೇವಲ ನಿನ್ನ ಪಾದ ಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿ ಉಂಟಾಗುವಂತೆ ಕೃಪೆ ಮಾಡು...

ಇದು ನಿಜವಾದ ಅರ್ಥದಲ್ಲಿ ಶರಣಾಗತಿಯ ನುಡಿಗಳು. ಇಂತಹ ದಿವ್ಯ ಮನಃಸ್ಥಿತಿ, ಪವಿತ್ರ ಭಾವನೆಗಳಿಂದ ಮಾತ್ರವೇ ಶರಣಾಗತಿಯ ನಿಜವಾದ ಅರ್ಥವನ್ನು ಅರಿಯಬಹುದು. ಕೇವಲ ವದನದಲ್ಲಿ ಶರಣಾಗತಿ ಎಂದು ಉಚ್ಛರಿಸುತ್ತಾ ಆಂತರ್ಯದ ತುಂಬೆಲ್ಲಾ ಅಹಂ ತುಂಬಿದಾಗ ಯಾವ ರೀತಿಯಲ್ಲಿ, ಎಷ್ಟೇ ಬಾರಿ ಶರಣಾಗತಿ ಎಂದು ಬೊಬ್ಬಿಟ್ಟರೂ ಆ ಪರಿಪಕ್ವ ಮನಸ್ಸು ಬರಲೊಲ್ಲದು. ಪರಮಹಂಸರು ಮತ್ತೊಂದು ಸಂದರ್ಭದಲ್ಲಿ ನಾನು ಎಂಬ ವಿಚಾರವಾಗಿ ಅತ್ಯಂತ ಮನೋಜ್ಞಕರವಾಗಿ ಈ ರೀತಿ ಉಲ್ಲೇಖಿಸುತ್ತಾರೆ.

ಈ ನಾನು ಎಂಬುವನು ಯಾರು ಎಂಬುದನ್ನು ಸ್ವಲ್ಪ ಹುಡುಕಿ ನೋಡು. ಈ ನಾನು ಎಂಬುವನಿಗಾಗಿ ಹುಡುಕುತ್ತಾ ಹುಡುಕುತ್ತಾ ಹೋದ ಹಾಗೆ ಅವನು ಎಂಬುವವನು ಹೊರಹೊಮ್ಮಿಬಿಡುತ್ತಾನೆ. ನಾನು ಯಂತ್ರ, ನೀನು ಯಂತ್ರೀ ಎಂಬ ಜ್ಞಾನೋದಯವಾಗಿ ಬಿಡುತ್ತದೆ. ಉಪಾದಿ ಇರುವವರೆಗೆ ಅಜ್ಞಾನ ಇದ್ದೇ ಇರುತ್ತದೆ. ನಾನೊಬ್ಬ ಪಂಡಿತ, ನಾನೊಬ್ಬ ಜ್ಞಾನಿ, ನಾನೊಬ್ಬ ದಾನಿ, ನಾನೊಬ್ಬ ದೊಡ್ಡವ, ನಾನೊಬ್ಬ ಕರ್ತ, ನಾನೊಬ್ಬ ಗುರು ಇವೆಲ್ಲಾ ಅಜ್ಞಾನ ಜನ್ಯ. ಭಗವದ್ದರ್ಶನ, ಬ್ರಹ್ಮ ಜ್ಞಾನ ದೊರೆತಾಗ ಎಲ್ಲಾ ಉಪಾದಿಗಳೂ ನಾಶವಾಗಿ ಬಿಡುತ್ತವೆ. ಸೌದೆ ಉರಿದು ಮುಗಿಯಿತು ಎಂದರೆ ಮತ್ತೆ ಶಬ್ದವಿರದು; ಕಾವೂ ಇರದು, ಎಲ್ಲವೂ ತಣ್ಣಗಾಗಿ ಬಿಡುತ್ತದೆ. ಓಂ ಶಾಂತಿಃ ! ಶಾಂತಿಃ ! ಶಾಂತಿಃ! ಎಂದು ವಿವರಿಸಿದಾಗ ನೆರೆದ ಭಕ್ತರಿಗೆ ನಾನು ಎಂಬ ಭಯಂಕರ ಅಹಂನ ನಿಜವಾದ ಮುಖ ಅರ್ಥವಾಗಿ ಅದನ್ನು ಹೇಗೆ ಮರ್ದಿಸಬೇಕು ಎಂಬುದರ ಬಗ್ಗೆ ಅರಿವು ಉಂಟಾಗುತ್ತದೆ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net