ಗಾಬರಿ ಎಂಬುದು ಸ್ವೆಟರಿನಿಂದ ಇಣುಕಿದ ಉಲ್ಲನ್ ಎಳೆೆ! ತುಂಬ ಗಾಬರಿಯಾಗುತ್ತದಾ? ಎಂದು ಪ್ರಶ್ನಿಸಿದ್ದಾರೆ ರವಿ ಬೆಳಗೆರೆ

edit 1
Published on

ಕಂಗಾಲಾಗಬೇಡಿ. ಗಾಬರಿ ಎಂಬುದು ತುಂಬು ಸ್ವೆಟರಿನಿಂದ ಇಷ್ಟೇ ಇಷ್ಟು ಹೊರಕ್ಕೆ ಇಣುಕಿದ ದಾರದ ಎಳೆಯಂತಹುದು. ಅಲ್ಲೇ ಹುಷಾರಾಗಿ ಕತ್ತರಿಸಿದರೆ ಕ್ಷೇಮ. ಇಣುಕಿದ ಎಳೆಯನ್ನು ಹಿಡಿದು ಅಡ್ಡಾದಿಡ್ಡಿ ಜಗ್ಗಿದಿರೋ? ಇಡೀ ಸ್ವೆಟರು ಕರಗಿ ಮನೆ ತುಂಬ ದಾರ ಹರಡಿಕೊಳ್ಳುತ್ತದೆ.

ಗಾಬರಿ, exactly ಅದೇ ತರಹದ್ದು. ಅನುಭವವಿಲ್ಲದ, ಬುದ್ಧಿ ಇಲ್ಲದ, strength ಇಲ್ಲದ, ಗೆಳೆಯರಿಲ್ಲದ ಮನುಷ್ಯ, ವಿವೇಕ ಮತ್ತು ಸಮಚಿತ್ತವಿಲ್ಲದ ಮನುಷ್ಯ ಒಂದು ಗಾಬರಿಯ ಪ್ರಸಂಗ ಇದಿರಾದಾಗ ಕಂಗಾಲಾಗುತ್ತಾನೆ. ಇದ್ದಕ್ಕಿದ್ದಂತೆ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾನೆ. ತೋಳೇರಿಸಿ ನಿಲ್ಲುತ್ತಾನೆ. ಮೈಮೇಲೆ ಬೀಳುತ್ತಿರುವವರು ಯಾರು ಎಂಬುದರ ಅಂದಾಜೂ ಹಾಕದೆ ಅವರೊಂದಿಗೆ ಕದನಕ್ಕಿಳಿಯುತ್ತಾನೆ. ಅದು ತಪ್ಪಿದರೆ ಕಂಗಾಲಾಗಿ ಓಡತೊಡಗುತ್ತಾನೆ. ಅವಶ್ಯಕತೆಗಿಂತ ಜಾಸ್ತಿ ಹೆದರುತ್ತಾನೆ. ಒಂದೇಟಿಗೆ ಧೈರ್ಯವುಡುಗಿ ಹೋದಂತಾಗಿ ನೆಲಕ್ಕೆ ಕುಸಿಯುತ್ತಾನೆ. ಆತ್ಮಹತ್ಯೆ ಕೂಡ ಮಾಡಿಕೊಂಡು ಬಿಡುತ್ತಾನೆ.

ಒಬ್ಬ ತೋರಿಸಿದ ಅನವಶ್ಯಕ ಶೌರ್ಯದ ರಿಯಾಕ್ಷನ್ ಮತ್ತು ಇನ್ನೊಬ್ಬ ತೋರಿಸಿದ ಅನವಶ್ಯಕ ಕುಸಿತ- ಎರಡೂ ಕೈಲಾಗದ ಮನುಷ್ಯ ಒಂದು ಗಾಬರಿಯ ಸಮ್ಮುಖದಲ್ಲಿ ತನಗೇ ಗೊತ್ತಿಲ್ಲದೆ ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು. ಅವರಿಬ್ಬರೂ ಸ್ವೆಟರಿನ ಉಲ್ಲನ್ ಎಳೆಯನ್ನು ಜಗ್ಗಬಾರದ ರೀತಿಯಲ್ಲಿ ಜಗ್ಗಿಬಿಟ್ಟಿದ್ದಾರೆ. ಆದರೆ ನಾವು ಹಾಗಾಗಕೂಡದು. ನಮಗೆ ಸಮಚಿತ್ತವಿದೆ. ಗಾಬರಿಯ ಸನ್ನಿವೇಶದಲ್ಲೂ ಅದನ್ನು ನಾವು ಕಳೆದುಕೊಳ್ಳುವುದಿಲ್ಲ. ನೆಮ್ಮದಿಯಾಗಿ ಇರಲು ನಮ್ಮಿಂದ ಸಾಧ್ಯವಾಗದೆ ಹೋಗಬಹುದು; ಆದರೆ ನಾವು ಸ್ವೆಟರಿನ ಉಲ್ಲನ್ ಎಳೆಯನ್ನು ಎರ್ರಾಬಿರ್ರಿ ಜಗ್ಗುವುದಿಲ್ಲ.

ಸಾಮಾನ್ಯವಾಗಿ ಯಾವ್ಯಾವುದಕ್ಕೆ ಗಾಬರಿಗಳಾಗುತ್ತವೋ ಗಮನಿಸಿ ನೋಡಿ. ಇದ್ದಕ್ಕಿದ್ದಂತೆ ಮೈಮೇಲೆ ಬಸ್ಸು ಹರಿದು ಬರುವುದಿದೆಯಲ್ಲ? ಅದು ಆ ಕ್ಷಣದ ಗಾಬರಿ. ಅದನ್ನು ನಮ್ಮ ದೇಹದ ರಿಫ್ಲೆಕ್ಸ್ ಆಕ್ಷನ್​ಗಳು ನಮ್ಮ ಅಪ್ಪಣೆಗೂ ಕಾಯದೆ ಪಕ್ಕಕ್ಕೆ ಹಾರುವಂತೆ ಮಾಡಿ ಕಾಪಾಡಿ ಬಿಡುತ್ತವೆ.

ನಾನು ಅಂಥ ಗಾಬರಿಗಳ ಬಗ್ಗೆ ಮಾತಾಡುತ್ತಿಲ್ಲ.

ಮರ್ಯಾದೆ ಹೋಗಿಬಿಡಬಹುದೆಂಬ ಗಾಬರಿ. ವಿಪರೀತ ಲಾಸ್ ಆಗುತ್ತದೆಂಬ ಗಾಬರಿ. ಫೇಲಾದೇನೆಂಬ ಗಾಬರಿ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದೇನೆಂಬ ಗಾಬರಿ. ಅಪ್ಪ-ಅಮ್ಮನ ಪ್ರೀತಿ ಕಳೆದುಕೊಂಡೇನೆಂಬ ಗಾಬರಿ. ಹೆಂಡತಿ ಮಕ್ಕಳ ಮುಂದೆ ಕ್ಷುಲ್ಲಕನಾಗಿ ಬಿಡುತ್ತೇನೆಂಬ ಗಾಬರಿ. ಇರುವ ನೌಕರಿ ಹೋಗೇಬಿಟ್ಟೀತು ಎಂಬ ಗಾಬರಿ. ಇಂಥವುಗಳಿಗೆ ಹೇಗೆ ರಿಯಾಕ್ಟ್ ಮಾಡಬೇಕು? ಗಟ್ಟಿ ಮನಸ್ಸು, ಪಕ್ವ ವ್ಯಕ್ತಿತ್ವ ಇಲ್ಲದವರ ಪಾಲಿಗೆ ಇದು ಬಹುದೊಡ್ಡ ಪ್ರಶ್ನೆ. ಅವರು ಚಿಕ್ಕದಕ್ಕೂ ಗಾಬರಿಯಾಗಿ ಬಿಡುತ್ತಾರೆ. Panic ಅಂತೀವಲ್ಲ ಅದು ಶುರುವಾಗಿ ಬಿಡುತ್ತದೆ.

ಅರೆ, ಇಷ್ಟಕ್ಕೂ ಮರ್ಯಾದೆ ಹೋಗುವುದು ಅಂದರೆ ಏನು? ನೀನು ಧೈರ್ಯಸ್ಥನಲ್ಲ ಅಂತ ಎಲ್ಲರಿಗೂ ಗೊತ್ತಾಗಿ ಬಿಡೋದು. ನಿಂಗೆ ಸಾಲವಿದೆ, ಅದನ್ನು ತೀರಿಸಲಾಗುತ್ತಿಲ್ಲ ಅಂತ ಬೀದಿಯವರಿಗೆಲ್ಲ ಗೊತ್ತಾಗಿ ಬಿಡೋದು. ನಾಳೆಯಿಂದ ಅವರು ಮೊದಲಿನಂತೆ ಗೌರವಿಸುವುದಿಲ್ಲ ಅಂತ ನಿನಗೆ ಅನ್ನಿಸುವುದು. ಇಷ್ಟೇ ತಾನೆ? ದಯವಿಟ್ಟು ನಿಧಾನವಾಗಿ ಒಂದೆಡೆ ಕುಳಿತು ಅರ್ಥ ಮಾಡಿಕೋ ಡಿಯರ್. ಇದು ಹೊರಜಗತ್ತಿನ ಜನ ನಿನಗೆ ಇಷ್ಟು ದಿನ ಕೊಡುತ್ತಿದ್ದ ಮರ್ಯಾದೆ. ಇದನ್ನು ನೀನು ಜನ್ಮತಃ ತಂದುಕೊಂಡದ್ದಲ್ಲ. ಹುಟ್ ಹುಟ್ತಲೇ ಜನ ನಿನ್ನನ್ನು ಗೌರವಿಸಲಿಲ್ಲ. ನೀನು ದುಡ್ಡು ದುಡೀತಾ ದುಡೀತಾ, ಶಕ್ತಿವಂತನಾಗ್ತಾ ಆಗ್ತಾ ಅವರು ನಿನಗೆ ಕೊಡತೊಡಗಿದ ಮರ್ಯಾದೆ. ಅದು ಈಗ ಅಪಾಯದಲ್ಲಿದೆ. ನಿನ್ನ ಹತ್ತಿರ ದುಡ್ಡಿಲ್ಲ, ಸಾಲಗಾರರು ಬಯ್ಯುತ್ತಿದ್ದಾರೆ, ನಿನ್ನೆಯ ತನಕ ಇದ್ದ power ಹೊರಟು ಹೋಗಿದೆ. ಆದ್ದರಿಂದ ನಾಳೆಯಿಂದ ನಿನಗೆ ಮರ್ಯಾದೆ ಸಿಗುವುದಿಲ್ಲ.

ಅಷ್ಟೇ ತಾನೆ? Hell with it. ಅದು ನೀನಾಗಿ ನೀನೇ ದುಡಿದುಕೊಂಡಿದ್ದ ಗೌರವ. ಇವತ್ತು ಯಾವುದೋ ಕಾರಣಕ್ಕೆ ಮುಕ್ಕಾಗುತ್ತಿದೆ. ನಾಳೆ ಅದೇ ದುಡ್ಡು, ಅಧಿಕಾರ, ಅದೇ ಶಕ್ತಿ ಮತ್ತೆ ಸಂಪಾದಿಸಿಕೊಳ್ಳುತ್ತೀಯ. ಇದೇ ಜನ ಮತ್ತೆ ನಿನಗೆ ಮೊದಲಿನಂತೆಯೇ ಮರ್ಯಾದೆ ಕೊಡುತ್ತಾರೆ.

ಅಂಥದೊಂದು ನಂಬಿಕೆಯನ್ನು ಮೊದಲು ನಿನ್ನಲ್ಲಿ ಇಟ್ಟುಕೋ. ನಿಧಾನವಾಗಿ ಜನ ಮತ್ತೆ ನಿನ್ನನ್ನು ನಂಬಿ ಗೌರವಿಸತೊಡಗುತ್ತಾರೆ. ಹಾಗಲ್ಲದೆ, ಈ ತನಕ ಯಾರೋ ತಂದಿತ್ತ false ಗೌರವದ, false ಮರ್ಯಾದೆಯ ಆಸರೆಯಲ್ಲಿ ನೀನು ಬದುಕುತ್ತಿದ್ದೆಯಾ? Forget it. ಅಂಥ ಮರ್ಯಾದೆ ಇದ್ದರೆಷ್ಟು, ಹೋದರೆಷ್ಟು?

ಆದರೆ ತೀರ ನಿನ್ನವರು ಅನ್ನಿಸಿಕೊಂಡವರೆದುರಿಗೆ, ಅಪ್ಪ-ಅಮ್ಮ, ಹೆಂಡತಿ, ಮಕ್ಕಳು, ಅಣ್ಣ ತಮ್ಮಂದಿರು, ಆತ್ಮೀಯ ಗೆಳೆಯರು-ಅಂಥವರ ಮುಂದೆ ಮರ್ಯಾದೆ ಹೋದೀತೆಂದು ಗಾಬರಿಯಾಗುತ್ತಿದ್ದೀಯಾ? ಪರೀಕ್ಷೆಯಲ್ಲಿ ಫೇಲಾದೆಯಾ? ನೌಕರಿ ಕಳೆದುಕೊಂಡೆಯಾ? ವ್ಯಾಪಾರ ಮಗುಚಿಬಿತ್ತಾ? ಪ್ರೀತಿಸಿದ ಹುಡುಗನಿಂದ ವಂಚನೆಯಾಗಿ ಮಡಿಲಲ್ಲೊಂದು ಒಲ್ಲದ ಜೀವ ಕದಲುತ್ತಿದೆಯಾ? ಮಾಡಬಾರದ ತಪ್ಪು ಮಾಡಿಬಿಟ್ಟೆ ಅನಿಸುತ್ತಿದೆಯಾ? Be bold. ಆಗಲೂ ಧೈರ್ಯವಾಗಿರು. ಸ್ವೆಟರಿನ ಎಳೆ ಜಗ್ಗಬೇಡ. ಆತ್ಮಹತ್ಯೆ ಮಾಡಿಕೊಳ್ಳಬೇಡ. ಓಡಿಹೋಗಬೇಡ. ಆಘಾತ ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡಬೇಡ. ಸುಳ್ಳು ಹೇಳಬೇಡ. ಅವರನ್ನು ಇನ್ನಷ್ಟು ವಂಚಿಸಬೇಡ. ನಂಗೊತ್ತು; ಅವರಿಗೆ ಸತ್ಯವನ್ನು ಕೇಳಿ ತುಂಬ ದುಃಖವಾಗುತ್ತದೆ. ಮಗಳು ಹೀಗೆ ಮಾಡಿಕೊಂಡುಬಿಟ್ಟಳಾ ಅಂತ ಎದೆಯೊಡೆಯುತ್ತಾರೆ. ಹಾಗಂತ ನೀನಂದುಕೊಳ್ತೀಯ. ಆದರೆ ನೆನಪಿರಲಿ, ಕೇಳಬಾರದ್ದನ್ನು ಕೇಳಿದ ನಂತರವೂ ಪೂರ್ತಿ ನೂರು ವರ್ಷ ಬದುಕುಳಿದ ಕೋಟ್ಯಂತರ ಜನರಿದ್ದಾರೆ ಈ ಪ್ರಪಂಚದಲ್ಲಿ. ನಿನ್ನ ಅಪ್ಪ-ಅಮ್ಮ, ಹೆಂಡತಿ, ಮಕ್ಕಳು, ಗೆಳೆಯರು ಅವರು ಕೂಡ ಈ ಆಘಾತವನ್ನು ಸಹಿಸಿಕೊಳ್ಳುತ್ತಾರೆ. ಅವರಿಗೆ ನೋವಾಗುತ್ತದೆ ನಿಜ. ಆದರೆ ಅವರಿಗೆ ನಿನ್ನ ಬಗ್ಗೆ ಇರುವುದು ಪ್ರಶ್ನಾತೀತವಾದ, ಷರತ್ತುಗಳಿಲ್ಲದ, Unconditional love. ಆದ್ದರಿಂದ ಅವರು ಆರಂಭದಲ್ಲಿ ಕೊಂಚ ನೊಂದುಕೊಂಡರೂ ನಿನ್ನನ್ನು ಮತ್ತೆ ಮೊದಲಿನಂತೆಯೇ ಪ್ರೀತಿಸುತ್ತಾರೆ. ಅದು ಬಿಟ್ಟು ನೀನು ಸತ್ತು ಹೋದರೆ, ಓಡಿ ಹೋದರೆ, ಮುಚ್ಚಿಟ್ಟರೆ- ಅವರಿಗೆ ದುಃಖವೂ ಆಗುತ್ತದೆ. ಅವರು ನಿನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ. ಬದಲಿಗೆ, ಕೊಂಚ ಕಷ್ಟವಾದರೂ ಸರಿಯೇ; ಖುಲ್ಲಂಖುಲ್ಲ ಹೇಳಿಕೊಂಡು ಬಿಟ್ಟರೆ ಅವರು ನಮ್ಮ ನೆರವಿಗೂ ಬರಬಹುದು. Try that.

ನನ್ನದೇ ಬದುಕಿನಲ್ಲಿ ಇಂಥ ಹತ್ತಾರು ಗಾಬರಿಗಳಾಗಿವೆ. ಇನ್ನೇನು, ನಾನು ಕಟ್ಟಿದ್ದೆಲ್ಲ ಕುಸಿದೇ ಹೋಯಿತು ಎಂಬ ಗಾಬರಿಗೆ ಈಡಾಗಿದ್ದೇನೆ. ಒಂದಿಡೀ ಸಮೂಹ ನನ್ನ ಮೇಲೆ ಮುರಕೊಂಡು ಬಿದ್ದಿದೆ. ಅಂಥ ಗಳಿಗೆಗಳಲ್ಲಿ ರಪ್ಪನೆ ರಿಯಾಕ್ಟ್ ಮಾಡಕೂಡದು ಎಂಬ ಪಾಠ ಚೆನ್ನಾಗಿ ಕಲಿತಿದ್ದೇನೆ.

ಕೂಲ್ ಆಗಿ ಕುಳಿತು ಎಲ್ಲವನ್ನೂ ಗಮನಿಸುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಇವರೆಲ್ಲ ಸೇರಿ ನನ್ನನ್ನು ಏನು ಮಹಾ ಮಾಡಬಹುದು? ನಾನು ಬೀದಿಬದಿಯಿಂದ ಎದ್ದು ಬಂದವನು. ಹೆಚ್ಚೆಂದರೆ ನನ್ನನ್ನು ಮತ್ತೆ ಅದೇ ಬೀದಿಯ ಬದಿಗೆ ತಳ್ಳಬಹುದು. ಅದರಾಚೆಗೆ ತಳ್ಳಲಾರರಲ್ಲವೇ? ಸರಿಬಿಡಿ; ಅದೇ ಪರಿಚಿತ ಬೀದಿ. ಅದೇ ಪರಿಚಿತ ಫುಟ್​ಪಾತು. ಅಲ್ಲಿಂದ ಮತ್ತೆ ಎದ್ದು ಈಗಿರುವ ಜಾಗಕ್ಕೇ ಹೇಗೆ ತೆವಳುತ್ತ, ತೇಕುತ್ತ, ಹಾರುತ್ತ, ಕುಪ್ಪಳಿಸುತ್ತ, ಅವರಿಗಿಂತ ವೇಗವಾಗಿ ಓಡಿ ಬಂದು ಕೂಡಬಹುದು ಎಂಬುದು ನನಗೆ ಗೊತ್ತು.

ಅವರು ನಗುತ್ತಿರಲಿ. ಅವಹೇಳನ ಮಾಡುತ್ತಿರಲಿ. ಕಲ್ಲೆಸೆಯುತ್ತಿರಲಿ. ನಾನು ನನ್ನ ಕುಸಿದ ಸೌಧದ ಸಡಿಲ ಕಲ್ಲುಗಳನ್ನು ಮತ್ತೆ ಎತ್ತಿಟ್ಟು ಭದ್ರಬುನಾದಿಯ ಸೌಧವನ್ನು ನಿಧಾನವಾಗಿ ಕಟ್ಟತೊಡಗುತ್ತೇನೆ. I know, I am going to win. ಅದು ಬೀಜಮಂತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net