ಜ. 14 ಮತ್ತು 15ರಂದು ಪಂಚಮಸಾಲಿ ಪೀಠದಲ್ಲಿ ಹರಜಾತ್ರೆ

panchama sali peta jan 08 2020
Published on

ಸದ್ಯ ಬೆಳ್ಳಿಬೆಡಗಿನ ಸಂಭ್ರಮದಲ್ಲಿರುವ ಪಂಚಮಸಾಲಿ ಸಮಾಜವು ಹನ್ನೆರಡು ವರ್ಷಗಳ ಹಿಂದೆ ಗುರುಪೀಠವನ್ನು ಸ್ಥಾಪಿಸಿತ್ತು. ಎರಡನೆಯ ಪೀಠಾಧಿಪತಿಯಾದವರು ಅಂತಾರಾಷ್ಟ್ರೀಯ ಖ್ಯಾತಿಯ ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಗಳು. ಅವರ ನೇತೃತ್ವದಲ್ಲಿ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಇದೇ ಜ. 14 ಮತ್ತು 15ರಂದು ವಿಶಿಷ್ಟವಾದ ಹರಜಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ತ ಲೇಖನ ಇಲ್ಲಿದೆ.

ರಾಜ್ಯದ ಮಟ್ಟಿಗೆ ಬಹುಸಂಖ್ಯಾತರಾಗಿರುವ ವೀರಶೈವ ಲಿಂಗಾಯತ ಸಮಾಜದಲ್ಲಿ ನೂರಕ್ಕೂ ಹೆಚ್ಚು ಉಪಜಾತಿಗಳಿದ್ದು, ಸಾಕಷ್ಟು ಸಮಾಜಗಳು ಪ್ರತ್ಯೇಕ ಪೀಠಗಳನ್ನು ಹೊಂದಿವೆ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಧರ್ಮದ ಪ್ರಮುಖ ಭಾಗವಾಗಿರುವ ಪಂಚಮಸಾಲಿ ಸಮಾಜವು ನಾಡಿನ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ವಿುಕ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಪ್ಪತ್ತೈದು  ವರ್ಷಗಳ ಹಿಂದೆ ಸ್ಥಾಪನೆಯಾದ ಪಂಚಮಸಾಲಿ ಸಮಾಜವು ಸದ್ಯ ಬೆಳ್ಳಿಬೆಡಗಿನ ಸಂಭ್ರಮದಲ್ಲಿದೆ.

ಜಗದ್ಗುರು ಪಂಚಾಚಾರ್ಯರು ಹಾಗೂ ವಿರಕ್ತ ಪರಂಪರೆಯ ಗುರುಗಳನ್ನು ಸಮಾನವಾಗಿ ಗೌರವಿಸಿಕೊಂಡು ಬಂದಿರುವ ಪಂಚಮಸಾಲಿ ಸಮಾಜವು ಹನ್ನೆರಡು ವರ್ಷಗಳ ಹಿಂದೆ ಗುರುಪೀಠವನ್ನು ಸ್ಥಾಪಿಸಿಕೊಂಡು ಮುನ್ನಡೆಯುತ್ತಿದೆ. ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು, ಸೊಂಡೂರು ನಾಗನಗೌಡ್ರು ಸೇರಿದಂತೆ ಹಲವು ಮುಖಂಡರು ಈ ಕಾರ್ಯಕ್ಕೆ ಶ್ರಮಿಸಿದ್ದು ಸದ್ಯ ಪೀಠದ ದ್ವಾದಶ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 2008ರಲ್ಲಿ ಸ್ಥಾಪನೆಯಾದ ಪಂಚಮಸಾಲಿ ಪೀಠದ ಪ್ರಥಮ ಗುರುಗಳಾದ ಶ್ರೀ ಷ.ಬ್ರ. ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿಯವರು ಪೀಠ ಮತ್ತು ಸಮಾಜವನ್ನು ಸೌಹಾರ್ದಯುತವಾಗಿ ಅಭಿವೃದ್ಧಿಗೊಳಿಸಿ; ಪಂಚಮಸಾಲಿ ಸಮಾಜಕ್ಕೆ ಹೆಚ್ಚಿನ ಗೌರವ ತಂದುಕೊಟ್ಟಿದ್ದಾರೆ. ಕಾಶಿಯಲ್ಲಿ ಅಧ್ಯಯನ ಮಾಡಿದ್ದ ಪೂಜ್ಯರು ದುರದೃಷ್ಟವಶಾತ್ ಹೃದಯಾಘಾತದಿಂದ ಲಿಂಗೈಕ್ಯರಾದ ನಂತರ ಅಂತಾರಾಷ್ಟ್ರೀಯ ಖ್ಯಾತಿಯ ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಗಳನ್ನು ನೂತನ ಪೀಠಾಧಿಪತಿಯನ್ನಾಗಿ ಆಯ್ಕೆ ಮಾಡಲಾಯಿತು. ಹೊಸಪೇಟೆ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳ ಸಾನ್ನಿಧ್ಯ ಮತ್ತು ಬಾಲೇಹೊಸೂರು ಶ್ರೀ ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ 2018ರಲ್ಲಿ ಪಟ್ಟಾಭಿಷೇಕ ನೆರವೇರಿದ್ದು, ಶ್ರೀಗಳ ದ್ವಿತೀಯ ಪೀಠಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಯೋಗ ಶಿವಯೋಗಗಳ ಸಂಗಮ: ಯಮ, ನಿಯಮಾದಿಗಳ ಮೂಲಕ ಚಿತ್ತವೃತ್ತಿಯನ್ನು ನಿರೋಧಿಸುವುದೇ ಯೋಗ. ಇಷ್ಟಲಿಂಗವನ್ನು ಕೇಂದ್ರೀಕರಿಸಿ ಮನಸ್ಸು ಮತ್ತು ದೇಹವನ್ನು ಸಮನ್ವಯಗೊಳಿಸುವುದು ಶಿವಯೋಗ. ಈ ಎರಡನ್ನೂ ಸಾಧಿಸಿಕೊಂಡಿರುವ ಶ್ರೀ ವಚನಾನಂದ ಮಹಾಸ್ವಾಮಿಗಳು ಪಂಚಮಸಾಲಿ ಜಗದ್ಗುರು ಪೀಠವನ್ನು ಏರಿರುವುದು ಇಡೀ ಸಮಾಜದ ಯೋಗಾಯೋಗವೆನಿಸಿದೆ.

1984ರಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಎಂಬ ಗ್ರಾಮದ ದುಂಡಪ್ಪ ಮತ್ತು ಶಿವಕ್ಕ ದಂಪತಿಗಳ ಪುಣ್ಯಗರ್ಭದಲ್ಲಿ ಜನಿಸಿದ ಶ್ರೀಗಳು ಬಾಲ್ಯದಲ್ಲೇ ಶಿವಾಚಾರ ಸಂಪನ್ನರು. ಪ್ರಸಿದ್ಧ ಗಚ್ಚಿನಮಠದ ಶ್ರೀ ಮರುಳಶಂಕರ ಶಿವಯೋಗಿಗಳಿಂದ ಗರ್ಭದೀಕ್ಷೆ ಪಡೆದಿದ್ದ ವಚನಾನಂದರು; ಎಂಟನೇ ವಯಸ್ಸಿನಲ್ಲೇ ಸಂನ್ಯಾಸತ್ವದತ್ತ ಮುಖ ಮಾಡಿದ್ದರು. ಹಿಮಾಲಯದ ಸಾಧಕರು ಮತ್ತು ಯೋಗವಿದ್ಯೆಯ ಕೆಲವು ಪುಸ್ತಕಗಳು ವಚನಾನಂದ ಶ್ರೀಗಳನ್ನು ಹಿಮಾಲಯದತ್ತ ಕರೆದೊಯ್ದವು. ಹೃಷಿಕೇಶದ ಶ್ರೀ ವೇದಭಾರತಿ ಸ್ವಾಮಿಗಳಿಂದ ತತ್ತ್ವಶಾಸ್ತ್ರ ಮತ್ತು ಯೋಗ ವಿಜ್ಞಾನವನ್ನು ಕಲಿತರು. ಸುದೀರ್ಘ ಕಾಲ ಹಿಮಾಲಯದ ಬಹು ಕಠಿಣ ಸ್ಥಳಗಳಲ್ಲಿ ಅನುಷ್ಠಾನ ಮಾಡಿ ತಾಯ್ನಾಡಿಗೆ ಮರಳಿದರು.

ತಾವು ಕಲಿತ ಯೋಗವಿದ್ಯೆಯಿಂದ ಅಸ್ವಸ್ಥರ ಬಾಳನ್ನು ಸ್ವಸ್ಥಗೊಳಿಸಬೇಕೆಂಬ ಸಂಕಲ್ಪದೊಂದಿಗೆ ಯೋಗ ತರಬೇತಿ ನೀಡಲು ಆರಂಭಿಸಿ ನಾಡಿನ ಲಕ್ಷಾಂತರ ಜನರಿಗೆ ಯೋಗವಿದ್ಯೆ ಹೇಳಿಕೊಟ್ಟಿದ್ದಾರೆ. ತಮ್ಮಲ್ಲಿರುವ ತತ್ತ್ವಶಾಸ್ತ್ರ, ಯೋಗ, ಆಧ್ಯಾತ್ಮಿಕ ಜ್ಞಾನಭಂಡಾರದೊಂದಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವನ್ನೇರಿರುವ ಶ್ರೀ ವಚನಾನಂದ ಮಹಾಸ್ವಾಮಿಗಳ ಸೇವೆಯ ಮತ್ತೊಂದು ಮುಖ ತೆರೆದಂತಾಗಿದೆ.

ಹರಿಹರದಲ್ಲಿ ಹರಜಾತ್ರೆ ಸಂಭ್ರಮ: ಹರ ಮುನಿದರೆ ಗುರು ಕಾಯ್ವನೆಂಬ ಕವಿವಾಣಿ ಅತ್ಯಂತ ಪ್ರಚಲಿತ. ಹರನಷ್ಟೇ ಶಕ್ತಿ ಗುರುವಿನಲ್ಲಿರುತ್ತದೆ ಎಂಬುದು ಇದರ ಅರ್ಥ. ಗುರು ಮತ್ತು ಹರನ ಒಲುಮೆಯನ್ನು ಒಟ್ಟಿಗೆ ಪಡೆಯಲು ಹೊಸದಾಗಿ ಆರಂಭವಾಗಿರುವ ವಿಶೇಷ ಉತ್ಸವ ಹರಜಾತ್ರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಇದೇ ಜ. 14 ಮತ್ತು 15ರಂದು ಹರಜಾತ್ರೆಯ ಅಂಗವಾಗಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 14ರಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಇಲಕಲ್ ಶ್ರೀ ಮಹಾಂತಸ್ವಾಮಿಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಅಂದು ಮಧ್ಯಾಹ್ನ ಹರಜಾತ್ರಾ ಮಹೋತ್ಸವ ಮತ್ತು ಯುವಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ಬೆಳ್ಳಿಬೆಡಗು ಸಮಾರಂಭ ನಡೆಯಲಿದೆ. 15ರಂದು ಬೆಳಗ್ಗೆ ಅಕ್ಕಮಹಾದೇವಿ ವಚನ ವಿಜಯೋತ್ಸವ, ಮಹಿಳಾ ಸಮಾವೇಶ ನಡೆಯಲಿದ್ದು, ನಂತರ ಪಂಚಮಸಾಲಿ ಪೀಠದ ದ್ವಾದಶ ವರ್ಧಂತಿ ಮತ್ತು ಶ್ರೀ ವಚನಾನಂದ ಸ್ವಾಮಿಗಳ ದ್ವಿತೀಯ ಪೀಠಾರೋಹಣ ಕಾರ್ಯಕ್ರಮ ಜರುಗಲಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿಯವರ ಮುಂದಾಳತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಮಂತ್ರಿಗಳು, ವಿವಿಧ ಪಕ್ಷಗಳ ಮುಖಂಡರು, ಹಲವು ಗಣ್ಯರು, ಪಂಚಮಸಾಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ.

ಪ್ರಶಾಂತ ರಿಪ್ಪನ್​ಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net