

ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು; ಈ ಎರಡು ರಾಷ್ಟ್ರಗಳು ಒಂದೇ ರಾಜಕೀಯವ್ಯವಸ್ಥೆಯಲ್ಲಿ ಬದುಕುವುದು ಅಸಾಧ್ಯ ಎಂಬ ‘ದ್ವಿರಾಷ್ಟ್ರ ಸಿದ್ಧಾಂತ’ವನ್ನು ಮುಂದೊಡ್ಡಿ ಭಾರತೀಯ ಮುಸ್ಲಿಮರಿಗಾಗಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿರ್ವಣಕ್ಕಾಗಿ ಕೂಗೆತ್ತಿ, ಅದು ಯಶಸ್ವಿಯಾಗಿ ಪಾಕಿಸ್ತಾನ ನಿರ್ವಣವಾದ ಮರುಗಳಿಗೆಯಲ್ಲೇ ಮಹಮದ್ ಆಲಿ ಜಿನ್ನಾ ರಾಗ ಬದಲಾಯಿಸಿದ್ದನ್ನು ಇತಿಹಾಸ ಸ್ಪಷ್ಟವಾಗಿ ದಾಖಲಿಸಿದೆ. 1947 ಆಗಸ್ಟ್ 12ರಂದು ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿನ ತಮ್ಮ ಮೊಟ್ಟಮೊದಲ ಅಧ್ಯಕ್ಷೀಯ ಭಾಷಣದಲ್ಲಿ ನವರಾಷ್ಟ್ರದ ರಾಜನೀತಿಯ ಬಗ್ಗೆ ಹೇಳುತ್ತ, ‘ಪಾಕಿಸ್ತಾನ ಒಂದು ಧರ್ಮನಿರಪೇಕ್ಷ ಹಾಗೂ ಆಧುನಿಕ ರಾಷ್ಟ್ರವಾಗಿ ಉಗಮಿಸಬೇಕು’ ಎಂದು ಹೇಳಿ ಎಲ್ಲರನ್ನೂ ಬೆಚ್ಚಿಸಿದರು. ಮುಂದುವರಿದು ಅವರು ಪಾಕಿಸ್ತಾನೀಯರಿಗೆ ಹೇಳಿದ್ದು ಹೀಗೆ: ‘ನೀವು ಯಾವುದೇ ಕೋಮಿಗೆ ಸೇರಿರಲಿ ನೀವೆಲ್ಲರೂ ಈ ರಾಷ್ಟ್ರದಲ್ಲಿ ಸಮಾನ ಹಕ್ಕುಗಳು, ಸವಲತ್ತುಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ ಪ್ರಜೆಗಳು, ನೀವು ಮಂದಿರಗಳಿಗೆ, ಮಸೀದಿಗಳಿಗೆ ಅಥವಾ ಇನ್ನಾವುದೇ ಪವಿತ್ರಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ... ಇದು ಸರ್ಕಾರದ ಕಾರ್ಯಕಲಾಪಗಳಿಗೆ ಯಾವುದೇ ವಿಧದಲ್ಲೂ ಸಂಬಂಧಿಸಿರುವುದಿಲ್ಲ. ನಾವೆಲ್ಲರೂ ಒಂದೇ ರಾಷ್ಟ್ರದ ಪ್ರಜೆಗಳು, ಸಮಾನ ಪ್ರಜೆಗಳು, ಎಂಬ ಮೂಲಭೂತ ತತ್ತ್ವದ ಆಧಾರದ ಮೇಲೆ ನಾನು ಮುಂದಡಿ ಇಡುತ್ತಿದ್ದೇನೆ...’
ಹಿಂದಿನ ಗಳಿಗೆಯವರೆಗೆ ಹಿಂದೂಗಳನ್ನೂ ಮುಸ್ಲಿಮರನ್ನೂ ಪ್ರತ್ಯೇಕ ‘ರಾಷ್ಟ್ರ’ಗಳು ಎಂದು ಉಲ್ಲೇಖಿಸುತ್ತಿದ್ದ ಜಿನ್ನಾ ಈಗ ಅವೆರಡನ್ನೂ ಕೇವಲ ಬೇರೆ ಬೇರೆ ‘ಕೋಮು’ಗಳು ಎಂದು ಕರೆದರು! ಆಗ ಏಳಬೇಕಾಗಿದ್ದ ಪ್ರಶ್ನೆಗಳು- ಜಿನ್ನಾ ಮತ್ತು ಮುಸ್ಲಿಂ ಲೀಗ್ ದೇಶವನ್ನು ಒಡೆದ ಉದ್ದೇಶವಾದರೂ ಏನು? ಹಿಂದೂಗಳೂ ಮುಸ್ಲಿಮರೂ ಸಮಾನ ಪ್ರಜೆಗಳಾಗಿಯೇ ಬದುಕುವುದಾದರೆ ಅದು ಅವಿಭಜಿತ ಭಾರತದಲ್ಲೇ ಆಗಬಹುದಿತ್ತಲ್ಲ? ಆದರೆ ಈ ಪ್ರಶ್ನೆಗಳನ್ನು ಅಂದೂ ಯಾರೂ ಕೇಳಲಿಲ್ಲ, ಇಂದೂ ಯಾರಾದರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಧರ್ಮನಿರಪೇಕ್ಷತೆ ಬಗ್ಗೆ ಪಾಕಿಸ್ತಾನದ ಮಧುಚಂದ್ರ ಹೆಚ್ಚುಕಾಲ ನಡೆಯಲಿಲ್ಲ. ಮೌಲಾನಾ ಅಬುಲ್ ಮೌದೂದಿಯವರಂತಹ ಧರ್ಮಗುರುಗಳು ಮುಸ್ಲಿಮರಿಗಾಗಿ ನಿರ್ವಣವಾದ ದೇಶವೊಂದು ಧರ್ಮನಿರಪೇಕ್ಷವಾಗಿರಕೂಡದು ಎಂದು ವಾದಿಸಿ ಪಾಕಿಸ್ತಾನವನ್ನು ಇಸ್ಲಾಮಿಕ್ ತತ್ತ್ವಗಳ ಆಧಾರದ ಮೇಲೆ ಕಟ್ಟಬೇಕೆಂದು ಆಗ್ರಹಿಸಿ, ಆ ಬಗ್ಗೆ 1950-51ರಲ್ಲಿ ರಾಷ್ಟ್ರವ್ಯಾಪಿ ಹಿಂಸಾತ್ಮಕ ಆಂದೋಲನವನ್ನೆಬ್ಬಿಸಿದರು. ಪರಿಣಾಮವಾಗಿ ರಾಷ್ಟ್ರದ ಆಂತರಿಕ ಹಾಗೂ ವಿದೇಶಾಂಗ ನೀತಿಗಳು ಮುಸ್ಲಿಂ ಧರ್ಮಗುರುಗಳ ಹಾಗೂ ಅವರನ್ನು ಓಲೈಸುವ ರಾಜಕೀಯ ನೇತಾರರ ಮತ್ತು ಸೇನಾಧಿಕಾರಿಗಳ ಕಪಿಮುಷ್ಟಿಗೆ ಸಿಲುಕಿ ಪಾಕಿಸ್ತಾನ ತನ್ನನ್ನು ತಾನು 1955ರಲ್ಲಿ ಸಾಂವಿಧಾನಿಕವಾಗಿ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್’ ಎಂದು ಅಧಿಕೃತವಾಗಿ ಘೊಷಿಸಿಕೊಂಡಿತು. ನಂತರ ಭಾನುವಾರದ ಬದಲು ಶುಕ್ರವಾರವನ್ನು ವಾರದ ರಜಾದಿನವನ್ನಾಗಿ ಘೊಷಿಸಿ ಹಾಗೂ ಅಹ್ಮದೀಯರನ್ನು ಇಸ್ಲಾಮಿನಿಂದ ಹೊರಗಿಟ್ಟು ಮುಸ್ಲಿಂ ಧರ್ಮಗುರುಗಳ ಬಹುಕಾಲದ ಬೇಡಿಕೆಗಳನ್ನು ಈಡೇರಿಸಿ, ಇಸ್ಲಾಮೀಕರಣವನ್ನು ಮತ್ತೊಂದು ಮಜಲಿಗೊಯ್ದದ್ದು ಚಾಲಾಕಿ ಸ್ವಾರ್ಥಿ ರಾಜಕಾರಣಿ ಝುುಲ್ಪಿಕರ್ ಆಲಿ ಭುಟ್ಟೋ.
ಪಾಕಿಸ್ತಾನದಲ್ಲಿ ಇಸ್ಲಾಮೀಕರಣದ ಪ್ರಕ್ರಿಯೆ ವೇಗವಾಗಿ ಹಾಗೂ ಕಟುವಾಗಿ ಸಾಗಿದ್ದು ಮಿಲಿಟರಿ ಸರ್ವಾಧಿಕಾರಿ ಜಿಯಾ-ಉಲ್-ಹಕ್ ಆಳ್ವಿಕೆಯಲ್ಲಿ. ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡಿದ್ದ ಪ್ರಧಾನಮಂತ್ರಿ ಭುಟ್ಟೋರನ್ನು 1977ರಲ್ಲಿ ಪದಚ್ಯುತಗೊಳಿಸಿ ಅಧಿಕಾರ ಲಪಟಾಯಿಸಿದ್ದನ್ನು ಹಾಗೂ ಪ್ರಭಾವಶಾಲಿಯಾಗಿದ್ದ ಅವರನ್ನು ಎರಡೇ ವರ್ಷಗಳಲ್ಲಿ ಗಲ್ಲಿಗೇರಿಸಿದ್ದನ್ನು ದೇಶದ ಜನತೆ ಒಪ್ಪಿಕೊಳ್ಳುತ್ತಿಲ್ಲ ಎಂದರಿವಾದ ಕೂಡಲೇ ಜಿಯಾ ತಮ್ಮ ಗದ್ದುಗೆಯನ್ನು ಭದ್ರಪಡಿಸಿಕೊಳ್ಳಲು ಇಸ್ಲಾಂನ ಮೊರೆಹೊಕ್ಕರು. ಸಂವಿಧಾನಕ್ಕೆ ಹಾಗೂ ನ್ಯಾಯಾಂಗಕ್ಕೆ ಇಸ್ಲಾಂ ತತ್ತ್ವಗಳನ್ನೂ, ಭಾಗಶಃ ಶರಿಯಾ ಕಾನೂನುಗಳನ್ನೂ ಅಳವಡಿಸಿದರು. ಸಾಮಾನ್ಯ ನಾಗರಿಕರು ವೈಯಕ್ತಿಕ ಬದುಕಿನಲ್ಲಿ ಇಸ್ಲಾಂ ತತ್ತ್ವಗಳನ್ನು ಕಡ್ಡಾಯವಾಗಿ ಆಳವಡಿಸಿಕೊಳ್ಳುವಂತೆ ಒತ್ತಾಯಿಸುವ ಹಲವಾರು ಸುಗ್ರೀವಾಜ್ಞೆಗಳನ್ನು ಹೊರಡಿಸಿದರು. ಅನಾದಿಕಾಲದಿಂದಲೂ ಉಪಖಂಡದ ಮಹಿಳೆಯರ ಪ್ರಿಯ ಉಡುಗೆಯಾಗಿರುವ ಸೀರೆ ಇಸ್ಲಾಮ್ೆ ವಿರುದ್ಧ ಎಂದು ಘೊಷಿಸಿ ಮಹಿಳೆಯರು ಸೀರೆ ಉಡುವುದನ್ನು ನಿಷೇಧಿಸಿದರು. ಇಷ್ಟಾಗಿಯೂ 1982ರಲ್ಲಿ ತಮ್ಮ ಸರ್ವಾಧಿಕಾರಿ ವರ್ತನೆಗೆ ವಿರುದ್ಧವಾಗಿ ಜನಾಂದೋಲನ ಭುಗಿಲೆದ್ದಾಗ ತನ್ನನ್ನು ರಕ್ಷಿಸುವ ಭದ್ರಕೋಟೆಯೆಂದರೆ ಇಸ್ಲಾಂ ಮಾತ್ರ ಎಂದು ಜಿಯಾ ಬಗೆದರು. ದೇಶದಾದ್ಯಂತ ಉಚಿತ ಶಿಕ್ಷಣ ನೀಡುವ ಇಪ್ಪತೆôದು ಸಾವಿರ ಮದ್ರಸಾಗಳು ತಲೆಯೆತ್ತಲು ಅನುವು ಮಾಡಿಕೊಟ್ಟು ತನ್ಮೂಲಕ ಭಾವೀ ಪ್ರಜೆಗಳ ಜ್ಞಾನ ಹಾಗೂ ಧಾರ್ವಿುಕ ಮನೋಭಾವನೆಗಳು ಸಂಕುಚಿತಗೊಳ್ಳವಂತಹ ದುರಂತಪ್ರಕ್ರಿಯೆಗೆ ನಾಂದಿ ಹಾಡಿದರು. ಅಂತಹ ಮದ್ರಸಾಗಳ ಸಂಖೈ ಇಂದು ನಲವತ್ತು ಸಾವಿರವನ್ನು ಸಮೀಪಿಸಿದೆ. ತಾಲಿಬಾನ್ ಜನ್ಮತಳೆದಿದ್ದು ಅಂತಹದೊಂದು ದೇವ್ಬಂದಿ ಮದ್ರಸಾದಲ್ಲಿ.
ಗಡಿನಾಡು ಪ್ರಾಂತ್ಯದಲ್ಲಿದ್ದ ಅಫ್ಘನ್ ಪಠಾಣ್ ನಿರಾಶ್ರಿತರನ್ನು ಒಟ್ಟುಗೂಡಿಸಿ, ಅವರ ತಲೆಗೆ ಮತಾಂಧತೆ ತುಂಬಿ, ಕೈಗೆ ಬಂದೂಕು ಕೊಟ್ಟು ತಾಲಿಬಾನ್ ಕಟ್ಟಿ ಬೆಳೆಸಿ, ಕೊಬ್ಬಿಸಿ ಅಫ್ಘಾನಿಸ್ತಾನಕ್ಕೆ ಕಳುಹಿಸಿದ್ದು ಕುಖ್ಯಾತ ಐಎಸ್ಐ, ಬೆನಜೀರ್ ಭುಟ್ಟೋ ಸರ್ಕಾರದ ಪೂರ್ಣ ಬೆಂಬಲ ಹಾಗೂ ಸಹಕಾರದೊಂದಿಗೆ. 2001ರಲ್ಲಿ ಅಮೆರಿಕನ್ ಸೇನಾ ಕಾರ್ಯಾಚರಣೆಯಿಂದಾಗಿ ಅಫ್ಘಾನಿಸ್ತಾನದಲ್ಲಿ ನೆಲೆ ಕಳೆದುಕೊಂಡು ಗಡಿನಾಡು ಪ್ರಾಂತ್ಯಕ್ಕೆ ಅಂದರೆ ತಮ್ಮ ಜನ್ಮಸ್ಥಾನಕ್ಕೇ ಹಿಂತಿರುಗಿದ ತಾಲಿಬಾನಿಗಳು ಅಲ್ಲಿಯ ಜನರ ಬದುಕನ್ನೂ ಪ್ರಭಾವಿಸತೊಡಗಿದರು. ‘ವಿಹಾರ’ಕ್ಕೆಂದು ಹೊರಹೋಗಿದ್ದ ಹಾವುಗಳು ಮೊಟ್ಟೆಯಿಡಲು ಬಿಲಕ್ಕೆ ಹಿಂತಿರುಗಿದ್ದವು.
ಇಸ್ಲಾಮೀಕರಣಕ್ಕೆ ಹಂತಹಂತವಾಗಿ ತನ್ನನ್ನು ಒಡ್ಡಿಕೊಂಡಿದ್ದ ಪಾಕಿಸ್ತಾನಕ್ಕೆ ತಾಲಿಬಾನ್ ವಿಚಾರಧಾರೆಗಳು ಹೊಸದೆನಿಸಲಿಲ್ಲ. ಹೀಗಾಗಿಯೇ ಮುಂದಿನ ಅರ್ಧ ದಶಕದಲ್ಲಿ ಪಾಕಿಸ್ತಾನದಲ್ಲೂ ತಾಲಿಬಾನ್ ಮಾದರಿಯ ಮೂಲಭೂತವಾದಿ ವ್ಯವಸ್ಥೆ ಯನ್ನು ಸ್ಥಾಪಿಸುವ ತಮ್ಮ ಗುರಿಯನ್ನು ಲಾಲ್ ಮಸ್ಜಿದ್ನ ಮೌಲಾನಾ ಅಬ್ದುಲ್ ಅಜೀಜ್ ಹಾಗೂ ಮೌಲಾನಾ ಅಬ್ದುರ್ ರಶೀದ್ ಘಾಜಿ ಬಹಿರಂಗವನಾಗಿ ಘೊಷಿಸುವಂತಹ ಸ್ಥಿತಿ ನಿರ್ವಣವಾದದ್ದು, ರಾಜಧಾನಿ ಇಸ್ಲಾಮಾಬಾದ್ನಲ್ಲೇ ಮದ್ರಸಾಗಳ ವಿದ್ಯಾರ್ಥಿಗಳು ದೊಣ್ಣೆಗಳನ್ನು ಹಿಡಿದು ತಿರುಗುತ್ತ ಕ್ಯಾಸೆಟ್, ಸಿಡಿ ಮತ್ತಿತರ ‘ಇಸ್ಲಾಮೇತರ’ ಸರಕುಗಳ ಅಂಗಡಿಗಳ ಮೇಲೆ ದಾಳಿಯೆಸಗತೊಡಗಿದ್ದು. 2007 ಮೇ 7ರಂದು ಗಡ್ಡಧಾರೀ ಯುವಕನೊಬ್ಬ ರಾಜಧಾನಿಯ ಪ್ರತಿಷ್ಠಿತ ಕಾಯದ್-ಎ-ಆಜಂ ಯೂನಿವರ್ಸಿಟಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದು, ಹಾಗೆ ಮಾಡಲು ತನಗೆ ಅಲ್ಲಾನಿಂದ ಆದೇಶ ಬಂದಿದೆ ಎಂದು ಅರಚಿದ್ದು!
ಇಲ್ಲಿ ನನಗೆ ಅಚ್ಚರಿಯ ಜತೆ ಗಾಬರಿಯನ್ನೂ ಉಂಟುಮಾಡಿದ್ದು ಲಾಲ್ ಮಸ್ಜಿದ್ಗೆ ಸೇರಿದ ಜಾಮಿಯಾ ಹಫ್ಸಾ ಎಂಬ ಮಹಿಳಾ ವಿಶ್ವವಿದ್ಯಾಲಯದ ಬುರ್ಖಾಧಾರೀ ವಿದ್ಯಾರ್ಥಿನಿಯರ ನಡವಳಿಕೆ. ಸಹವಿದ್ಯಾಭ್ಯಾಸವನ್ನು ರದ್ದುಪಡಿಸಬೇಕೆಂದು ಈ ಹೆಣ್ಣುಮಕ್ಕಳು ಕೂಗೆತ್ತಿದ್ದಲ್ಲದೆ ಕಾಯದ್-ಎ-ಆಜಮ್ ಯೂನಿವರ್ಸಿಟಿಯನ್ನು ತಮ್ಮ ಕೆಂಗಣ್ಣಿಗೆ ನೇರವಾಗಿ ಗುರಿಯಾಗಿಸಿಕೊಂಡರು. ಲಾಲ್ ಮಸ್ಜಿದ್ನ ಮೌಲ್ವಿಗಳು ಈ ವಿಶ್ವವಿದ್ಯಾಲಯವನ್ನು ವೇಶ್ಯಾವಾಟಿಕೆ ಎಂದು ಬಣ್ಣಿಸುತ್ತಿದ್ದಂತೆ ಜಾಮಿಯಾ ಹಫ್ಸಾ ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಅಧ್ಯಾಪಕಿಯರು ಹಾಗೂ ವಿದ್ಯಾರ್ಥಿನಿಯರಿಗೆ ಬುದ್ಧಿ ಕಲಿಸಲು ತಮ್ಮ ‘ಬುರ್ಖಾ ಬ್ರಿಗೇಡ್’ ಕಳುಹಿಸುವುದಾಗಿಯೂ, ಇಸ್ಲಾಮ್ ಸಮ್ಮತವಲ್ಲದ ಉಡುಪು ಧರಿಸುವ ಹಾಗೂ ಬುರ್ಖಾ ಧರಿಸದವರ ಮುಖಕ್ಕೆ ಆಸಿಡ್ ಎರಚುವುದಾಗಿಯೂ ಬೆದರಿಕೆಯೊಡ್ಡಿದರು! ಅವರ ‘ಬುರ್ಖಾ ಬ್ರಿಗೇಡ್’ನಲ್ಲಿ ಸಾವಿರಾರು ವಿದ್ಯಾರ್ಥಿನಿಯರ ಸಮೂಹ ಮತ್ತದು ಮೂಲಭೂತವಾದಿ ಮುಲ್ಲಾಗಳ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಹೊರಟಿತ್ತು! ತಾಲಿಬಾನ್ ಮಾದರಿಯ ಧಾರ್ವಿುಕ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ಜಾರಿಗೆ ಬಂದರೆ ಅದರ ಮೊಟ್ಟಮೊದಲ ಬಲಿಪಶುಗಳು ಮಹಿಳೆಯರು ಎಂಬುದನ್ನು ಮುಲ್ಲಾ ಒಮರ್ನ ಅಫ್ಘಾನಿಸ್ತಾನ 1996-2001ರ ಅವಧಿಯಲ್ಲೇ ಇಡೀ ಜಗತ್ತಿಗೇ ತೋರಿಸಿಕೊಟ್ಟಿದೆ. ಹೀಗಿರುವಾಗ ಅಂತಹ ವ್ಯವಸ್ಥೆಯ ನಿರ್ವಣಕ್ಕೇ ಸಾವಿರಾರು ಯುವತಿಯರು ಸಜ್ಜಾಗಿ ನಿಂತರೆಂದರೆ ಅವರು ಎಷ್ಟರ ಮಟ್ಟಿಗೆ ‘ಬ್ರೇನ್ವಾಶ್’ಗೆ ಒಳಗಾಗಿದ್ದಿರಬಹುದು! ತಮ್ಮನ್ನು ಸಂಕೋಲೆಗಳೊಳಗೆ ಬಂಧಿಸುವ ವ್ಯವಸ್ಥೆಯ ನಿರ್ವಣಕ್ಕೆ ಸಹಕರಿಸಲು ಮಹಿಳೆಯರೇ ಮುಂದಾಗಿ ನಿಂತಿರುವಾಗ, ತಾವು ಒಂದುಲಕ್ಷ ಸ್ಯೂಯಿಸೈಡ್ ಬಾಂಬರ್ಗಳನ್ನು ತಯಾರು ಮಾಡುವುದಾಗಿ ಲಾಲ್ ಮಸ್ಜಿದ್ನ ಮೌಲ್ವಿಗಳು ಹೇಳಿದ್ದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಅತಿಶಯೋಕ್ತಿ ಯೆನಿಸುವುದು 1996-2001ರ ನಡುವಿನ ಅಫ್ಘನ್ ತಾಲಿಬಾನ್ ಆಡಳಿತದ ಅತಿರೇಕಗಳ ಕುರಿತಾಗಿ ನಾಲಿಗೆಗೆ ಬಿಡುವು ಕೊಡದೇ ಮಾತಾಡಿದರವರೆಲ್ಲ ಪಾಕಿಸ್ತಾನ ತಾಲಿಬಾನೀಕರಣಗೊಳ್ಳತೊಡಗಿದ್ದರ ಬಗ್ಗೆ, ಜಾಮಿಯಾ ಹಫ್ಸಾದ ವಿದ್ಯಾರ್ಥಿನಿಯರೇ ಸಹವಿದ್ಯಾಭ್ಯಾಸದ ವಿರುದ್ಧ ನಿಂತದ್ದರ ಬಗ್ಗೆ, ದಿವ್ಯಮೌನ ತಳೆದ ಬಗ್ಗೆ.
ಲಾಲ್ ಮಸ್ಜಿದ್ನ ಮೂಲಭೂತವಾದಿಗಳ ವಿರುದ್ಧ ಪಾಕ್ ಸೇನೆ 2007 ಜುಲೈನಲ್ಲಿ ಕಾರ್ಯಾಚರಣೆ ನಡೆಸಿ ಅವರ ಆಟಾಟೋಪವನ್ನು ಅಡಗಿಸಿತೇನೋ ನಿಜ. ಆದರೆ ಮುಂದಿನ ಒಂದೇ ವರ್ಷದಲ್ಲಿ ದೇಶಾದ್ಯಂತ ಮೂಲಭೂತವಾದಿ ಭಯೋತ್ಪಾದನಾ ಕೃತ್ಯಗಳು ಮಿತಿಮೀರಿ, ಜಾಗತಿಕ ಭಯೋತ್ಪಾದನೆಯಲ್ಲಿ ಪಾಕಿಸ್ತಾನಕ್ಕೆ ಇರಾಕ್ ಮತ್ತು ಭಾರತದ ನಂತರ ಮೂರನೆಯ ಸ್ಥಾನವನ್ನು ನೀಡಿದವು. 2014ರಿಂದೀಚೆಗೆ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ, ಪಾಕಿಸ್ತಾನೀಯರು ಬಿತ್ತಿದ್ದನ್ನು ಬೆಳೆಯುತ್ತಿದ್ದಾರೆ.
ಪಾಕಿಸ್ತಾನದ ತಾಲಿಬಾಲೀಕರಣದ ಮುಂದಿನ ಹಂತವನ್ನು ಖೈಬರ್-ಪಖ್ತೂನ್ಖ್ವಾ ಅಂದರೆ ವಾಯವ್ಯ ಗಡಿನಾಡು ಪ್ರಾಂತ್ಯದಲ್ಲಿ ಕಾಣುತ್ತೇವೆ. ಪ್ರಾಂತ್ಯದ ಈಶಾನ್ಯದಂಚಿನ ಸ್ವಾತ್ ಕಣಿವೆ ಪ್ರದೇಶದಲ್ಲಿ ಇಸ್ಲಾಮಿಕ್ ಶರಿಯಾ ಕಾನೂನುಗಳ ಅನುಷ್ಠಾನದ ಬಗ್ಗೆ ಪಾಕಿಸ್ತಾನ ಸರ್ಕಾರ ಪಾಕ್ ತಾಲಿಬಾನ್ ಜತೆ 2009ರ ಮಾರ್ಚ್ನಲ್ಲಿ ಸಹಿ ಹಾಕಿದ್ದು ಅದೆಷ್ಟು ಜನಕ್ಕೆ ನೆನಪಿದೆಯೋ ಕಾಣೆ. ಆ ಒಪ್ಪಂದ ಪಾಕಿಸ್ತಾನದ ಚರಿತ್ರೆಯಲ್ಲಿ ಒಂದು ಗಮನಾರ್ಹ ಬೆಳವಣಿಗೆ. 2007ರ ಅಕ್ಟೋಬರ್ನಿಂದಲೂ ಪಾಕಿಸ್ತಾನೀ ಸೇನೆ ಮತ್ತು ಪಾಕ್ ತಾಲಿಬಾನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲುಗಡೆಗೆ ತರಲು ಹಾಗೂ ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತರಲು ತಾಲಿಬಾನ್ಗೆ ಅನುವು ಮಾಡಿಕೊಟ್ಟಿತು. ಒಪ್ಪಂದಕ್ಕೆ ಹಿಂದಿನ ಒಂದು ವಾರದಲ್ಲಿ ಮುಸ್ಲಿಂ ಖಾನ್ ಮತ್ತಿತರ ಪಾಕ್ ತಾಲಿಬಾನ್ ನೇತಾರರುಗಳ ಹೇಳಿಕೆಗಳ ಒಟ್ಟು ಸಾರಾಂಶವೆಂದರೆ ಸ್ವಾತ್ ಕಣಿವೆಯಲ್ಲಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಹಕ್ಕಿಲ್ಲ. ಜತೆಗೇ ಬುರ್ಖಾ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಯಾವುದೇ ಸ್ತ್ರೀಗೆ ಮರಣದಂಡನೆ ವಿಧಿಸಲಾಗುವುದು. ಈ ತೆರನಾದ ಮಾನವಹಕ್ಕುಗಳ ನಿರಾಕರಣೆಯ ಜತೆ ಟಿವಿ, ವಿಡಿಯೋ, ಚಲನಚಿತ್ರಗಳ ನಿಷೇಧ, ಮೊಬೈಲ್ ಫೋನ್ಗಳಲ್ಲಿ ಸಂಗೀತಮಯ ರಿಂಗ್ಟೋನ್ಗಳ ಕಟ್ಟಾ ನಿರ್ಬಂಧಗಳೂ ಇದ್ದವು.
ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಕಾನೂನುಗಳ ಅನುಷ್ಠಾನ ಸಣ್ಣಪ್ರಮಾಣದಲ್ಲಿ ಆರಂಭವಾದದ್ದು 1994ರಲ್ಲೇ, ಮಹಿಳೆಯೇ ಆಗಿದ್ದ ಪ್ರಧಾನಿ ಬೆನಝಿರ್ ಭುಟ್ಟೋರ ಅನುಮತಿಯಿಂದಲೇ. ಇದೆಂತಹ ವಿಪರ್ಯಾಸ! 2009ರಲ್ಲಿ ಆಕೆಯ ಪತಿ ಅಸಿಫ್ ಆಲಿ ಜರ್ದಾರಿಯವರ ಆಳ್ವಿಕೆಯಲ್ಲಿ ಪಾಕಿಸ್ತಾನದ ಪ್ರದೇಶವೊಂದರಲ್ಲೇ ತಾಲಿಬಾನ್ನ ಅಧಿಕೃತ ಆಡಳಿತ ಆರಂಭವಾಯಿತು. ದೇಶವೊಂದರಲ್ಲಿ ಏಕಕಾಲದಲ್ಲಿ ಎರಡು ಬೇರೆಬೇರೆ ಬಗೆಯ ಆಡಳಿತವ್ಯವಸ್ಥೆಗಳು ಇರುವಂತಹ, ಆಧುನಿಕ ಜಗತ್ತಿನಲ್ಲಿ ಕಂಡುಕೇಳರಿಯದ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಬಹಳಷ್ಟು ವಿಶ್ಲೇಷಕರು ತಿಪ್ಪೆಸಾರಿಸಲು ಹೋದದ್ದನ್ನು ನಾವಾಗ ಕಂಡೆವು. ಆ ಅತಿಬುದ್ಧಿವಂತರ ಪ್ರಕಾರ ಸರ್ಕಾರ ಸಹಿ ಹಾಕಿರುವುದು ತಾಲಿಬಾನ್ನ ಜತೆಗಲ್ಲ, ಬದಲಾಗಿ ತೆಹ್ರಿಕ್ ಎ-ನಿಜಾಫ್ ಎ-ಶರಿಯತ್-ಎ ಮೊಹಮ್ಮದಿ ಎಂಬ ನಿರ್ಬಂಧಿತ ಸಂಘಟನೆಯ ಮುಖ್ಯಸ್ಥ ಮೌಲಾನಾ ಸೂಫಿ ಮೊಹಮ್ಮದ್ ಜತೆಗೆ. ಈ ಸಂಘಟನೆ ವಾಸ್ತವವಾಗಿ ಪಾಕ್ ತಾಲಿಬಾನ್ ಅಂದರೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನಕ್ಕಿಂತಲೂ ಹಳೆಯದು. ಇದು 1992ರಿಂದಲೂ ಗಡಿನಾಡು ಪ್ರಾಂತ್ಯದಲ್ಲಿ ಸಕ್ರಿಯವಾಗಿದೆ. ಹೀಗೆ ಸರ್ಕಾರ ಮತ್ತು ತಾಲಿಬಾನ್ ಜತೆ ನೇರ ಒಪ್ಪಂದವಾಗಿಲ್ಲದ ಕಾರಣ ಈ ಪ್ರದೇಶ ತಾಲೀಬಾನೀಕರಣವಾಗುತ್ತಿದೆ ಎಂಬ ಆತಂಕ ಅನಗತ್ಯ. ಆದರೆ ಹಿಂದಿನ ಒಂದೂವರೆ ವರ್ಷದಿಂದಲೂ ಪಾಕಿಸ್ತಾನೀ ಸೇನೆಯೊಡನೆ ಉಗ್ರವಾಗಿ ಸೆಣಸುತ್ತಿದ್ದ ತಾಲಿಬಾನ್ನ ನಾಯಕ ಮೌಲಾನಾ ಫಜ್ಲುಲ್ಲಾ ಈ ಮೌಲಾನಾ ಸೂಫಿ ಮೊಹಮ್ಮದ್ನ ಅಳಿಯ ಎಂಬ ವಾಸ್ತವವನ್ನು ಗಣನೆಗೆ ತೆಗೆದುಕೊಂಡರೆ ಪರಿಸ್ಥಿತಿಯ ಗಂಭೀರತೆ ಅರಿವಾಗಬಹುದಾಗಿತ್ತು. ಆದರೆ ಅರಿಯುವ ಪ್ರಯತ್ನ ಆಗಬೇಕಾದಷ್ಟು ಪ್ರಮಾಣದಲ್ಲಿ ಆಗಲಿಲ್ಲ. ಪರಿಣಾಮವಾಗಿ ಮುಂದಿನ ಎರಡು ತಿಂಗಳಲ್ಲಿ ಪಾಕ್ ತಾಲಿಬಾನಿಗಳು ಸ್ವಾತ್ ಕಣಿವೆಯನ್ನು ದಾಟಿ ಬಂದು ರಾಜಧಾನಿ ಇಸ್ಲಾಮಾಬಾದ್ಗೆ ಕೇವಲ ನೂರು ಕಿಲೋಮೀಟರ್ ಹತ್ತಿರದ ಬುನೇರ್ ಪಟ್ಟಣವನ್ನು ಆಕ್ರಮಿಸಿಕೊಂಡರು. ಆಗ ಪಾಕ್ ಸೇನೆ ಎಚ್ಚೆತ್ತಿತು, ಜಗತ್ತೂ ಮೆಲ್ಲಗೆ ಕಣ್ತೆರೆಯಿತು.
(ಮುಂದುವರಿಯುವುದು)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)