

ವರ್ಷದ ಹಿಂದೆ ಬ್ರಿಟಿಷ್ ಪ್ರಧಾನಿಯಾಗಿದ್ದ ಖುಷಿ ಸುನಕ್ ಭಾರತೀಯ ಮೂಲದವರು, ಅವರಿಗೆ ಭಾರತದೊಂದಿಗೆ ಕೌಟುಂಬಿಕ ಸಂಬಂಧಗಳಿವೆ, ಜತೆಗೆ ಅವರು ಹಿಂದೂ ಎಂಬೆಲ್ಲ ಕಾರಣಗಳಿಂದಾಗಿ ಅವರ ಆಡಳಿತಾವಧಿಯಲ್ಲಿ ಭಾರತ-ಬ್ರಿಟನ್ ಸಂಬಂಧಗಳು ಗಮನಾರ್ಹ ಮಟ್ಟದಲ್ಲಿ ವೃದ್ಧಿಯಾಗುತ್ತವೆ ಎಂದೆಲ್ಲ ನಿರೀಕ್ಷೆಗಳಿದ್ದವು. ಆದರೆ ಹಾಗೇನೂ ಆಗಲಿಲ್ಲ. ಸುನಕ್ರ ಸಂಪ್ರದಾಯವಾದಿ ಕನ್ಸರ್ವೆಟಿವ್ ಪಕ್ಷ ಮತ್ತು ಭಾರತದ ಆಡಳಿತಾರೂಢ ಬಿಜೆಪಿಯ ನಡುವೆ ಮೌಲ್ಯಗಳು ಹಾಗೂ ನೀತಿನಿಲುವುಗಳ ವಿಚಾರದಲ್ಲಿ ತಾಳಮೇಳವಿದೆ ಎನ್ನುವ ಕಾರಣಕ್ಕಾಗಿಯೂ ಲಂಡನ್ ಮತ್ತು ನವದೆಹಲಿಗಳ ನಡುವೆ ಸಹಕಾರದ ಹೊಸ ಯುಗ ಆರಂಭವಾಗುತ್ತದೆ ಎಂದೂ ಅಂದುಕೊಳ್ಳಲಾಗಿತ್ತು. ಬರೀ ಅಂದುಕೊಂಡದ್ದೇ ಬಂತು. ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಲೇಬರ್ ಪಕ್ಷ ಎಡಪಂಥೀಯ ವಿಚಾರಧಾರೆಗೆ ಜೋತುಬಿದ್ದದ್ದು, ವೈಚಾರಿಕವಾಗಿ ಅದಕ್ಕೂ ಬಿಜೆಪಿಗೂ ಎಣ್ಣೆ ಸೀಗೆಕಾಯಿ, ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ.
ಹೀಗಾಗಿ ಇನ್ನು ಭಾರತ-ಬ್ರಿಟನ್ ಸಂಬಂಧಗಳ ಬಗ್ಗೆ ಸಹಜವಾಗಿಯೇ ನಿರಾಸೆಯುಂಟಾಗಿತ್ತು. ಆದರೆ ಆಗುತ್ತಿರುವುದೇ ಬೇರೆ. ಇತಿಹಾಸದ ಒಂದು ಅಚ್ಚರಿಯಂತೆ ಇಂದು ಉಭಯ ದೇಶಗಳ ನಡುವಿನ ಸಂಬಂಧಗಳು ಹಲವಾರು ವರ್ಷಗಳ ಜಡತ್ವವನ್ನು ಕೊಡವಿಕೊಂಡು ಏಕಾಏಕಿ ವೇಗ ಪಡೆದುಕೊಳ್ಳತೊಡಗಿವೆ, ನನೆಗುದಿಗೆ ಬಿದ್ದಿದ್ದ ‘ಮುಕ್ತ ವ್ಯಾಪರ ಒಪ್ಪಂದ’ಕ್ಕೆ ಸಹಿಯಾಗಿದೆ! ತನ್ನ ಒಂದುಕಾಲದ ವಸಾಹತುಶಾಹಿ ಆಡಳಿತಗಾರ ಬ್ರಿಟನ್ ಅನ್ನು ಆರ್ಥಿಕವಾಗಿ ಹಿಂದೆ ತಳ್ಳಿ ಭಾರತದ ಅರ್ಥವ್ಯವಸ್ಥೆ ನಾಗಾಲೋಟ ಸಾಧಿಸಿದ ಬಗ್ಗೆ ಲೇಬರ್ ಪಕ್ಷಕ್ಕೇನೂ ಇರಿಸುಮುರಿಸು, ಹೊಟ್ಟೆಕಿಚ್ಚು, ಕೀಳರಿಮೆ ಆದಂತೆ ಕಾಣುತ್ತಿಲ್ಲ. ಬದಲಿಗೆ ಭಾರತದೊಂದಿಗಿನ ಆರ್ಥಿಕ ಸಂಬಂಧಗಳನ್ನು ಇನ್ನಷ್ಟು ಘನಿಷ್ಟಗೊಳಿಸಿಕೊಳ್ಳುವುದರ ಜತೆಗೆ ರಕ್ಷಣೆ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಸಹಕಾರವನ್ನು ವೃದ್ಧಿಸುವತ್ತ ಲೇಬರ್ ಆಡಳಿತದ ಬ್ರಿಟನ್ ಉತ್ಸುಕತೆ ತೋರುತ್ತಿದೆ. ಅದು ವ್ಯಕ್ತವಾಗುವುದು ಇದೇ ಅಕ್ಟೋಬರ್ 8ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಪ್ರಧಾನಮಂತ್ರಿ ಕೀಯೆರ್ ಸ್ಟಾರ್ಮರ್ ತಮ್ಮ ಜತೆ ಬ್ರಿಟನ್ನ ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರಗಳ 125 ಆಧ್ವರ್ಯಗಳ ಬೃಹತ್ ನಿಯೋಗವೊಂದನ್ನು ಕರೆತಂದಿದ್ದರು!
ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್ ಸಹಕಾರಗಳು ಮತ್ತು ಸಂಬಂಧಗಳು ಯಾವ ಎತ್ತರಕ್ಕೆ ಏರಬಹುದೆಂಬ ಒಂದು ಸ್ಥೂಲ ಚಿತ್ರಣವನ್ನು ಇದು ನೀಡುತ್ತದೆ. ಜತೆಗೆ, ಈಗ ಬ್ರಿಟನ್ನ ವ್ಯಾಪಾರ ಸಂಬಂಧಗಳಲ್ಲಿ ಹನ್ನೊಂದನೆಯ ಸ್ಥಾನದಲ್ಲಿರುವ ಭಾರತ ಉಭಯ ದೇಶಗಳ ನಡುವೆ ಈಗ ಆಗಿರುವ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಮುಂದಿನ ಐದು ವರ್ಷಗಳಲ್ಲಿ ಐದು ಅಥವಾ ನಾಲ್ಕನೆಯ ಸ್ಥಾನಕ್ಕೇರುವ ಸಾಧ್ಯತೆಯೂ ಕಂಡುಬರುತ್ತಿದೆ. ಇವೆಲ್ಲವುಗಳ ನಡುವೆ ಹೆಚ್ಚಿನ ಜನರ ಗಮನಕ್ಕೆ ಬಾರದೇಹೋದ ಆದರೆ ಅತ್ಯಂತ ಮಹತ್ವದ್ದೆನಿಸುವ ಮತ್ತೊಂದು ಬೆಳವಣಿಗೆಯೂ ಘಟಿಸಿದೆ. ಮುಂದಿನ ದಿನಗಳಲ್ಲಿ ಭಾರತದ ವಾಯುದಳದ ವೈಮಾನಿಕರು ರಾಯಲ್ ಬ್ರಿಟಿಷ್ ಏರ್ಫೋರ್ಸ್ನ ವೈಮಾನಿಕರಿಗೆ ತರಬೇತಿ ನೀಡಲಿದ್ದಾರೆಂದು ಪ್ರಧಾನಮಂತ್ರಿ ಸ್ಟಾರ್ಮರ್ ಹೇಳಿದ್ದಾರೆ. ಒಂದು ಕಾಲದಲ್ಲಿ ದ್ವಿತೀಯ ಮಹಾಯುದ್ಧದ ದಿನಗಳಲ್ಲಿ ಬ್ರಿಟಿಷ್ ವಾಯುಸೇನೆ ಬಳಸಿ ಮೂಲೆಗೆಸೆದಿದ್ದ ನ್ಯಾಟ್ ಮತ್ತು ಸೆಸ್ನಾ ವಿಮಾನಗಳನ್ನೇರಿ ಪಾಕಿಸ್ತಾನದ ಆ ದಿನಗಳ ಅತ್ಯಾಧುನಿಕ ಯುದ್ಧವಿಮಾನವಾದ ಸೇಬರ್ ಜೆಟ್ಗಳನ್ನು ಎದುರಿಸಿದ್ದ ಭಾರತೀಯ ವೈಮಾನಿಕರು ಇಂದು ಬ್ರಿಟಿಷ್ ವಾಯುಸೇನೆಯ ವೈಮಾನಿಕರಿಗೆ ತರಬೇತಿ ನೀಡಲಿದ್ದಾರೆ, ಬ್ರಿಟನ್ನ ಬಯಕೆಯಂತೆ! ಇದರ ಮಹತ್ವ ಇನ್ನಷ್ಟು ಅರ್ಥವಾಗಬೇಕಾದರೆ 3 ವರ್ಷಗಳ ಹಿಂದಿನ ಮತ್ತೊಂದು ಬೆಳವಣಿಗೆಯನ್ನು ನೋಡಬೇಕು.
ತನ್ನ ವೈಮಾನಿಕರಿಗೆ ತರಬೇತಿ ನೀಡಲು ನಿವೃತ್ತ ಬ್ರಿಟಿಷ್ ವೈಮಾನಿಕ ರನ್ನು ಚೀನಾ 2022ರಲ್ಲಿ ಹೆಚ್ಚಿನ ವೇತನ ನೀಡಿ ನೇಮಿಸಿಕೊಂಡಿತ್ತು! ಇಂದು ಬ್ರಿಟಿಷ್ ವೈಮಾನಿಕರು ಭಾರತೀಯ ವೈಮಾನಿಕರಿಂದ ತರಬೇತಿ ಪಡೆಯಲಿದ್ದಾರೆ! ಬ್ರಿಟನ್ನ ಸದ್ಯದ ಅಥವಾ ಮುಂದಿನ ಯುದ್ಧಸನ್ನದ್ಧತೆ ಮತ್ತು ಅದು ಯಾರ ವಿರುದ್ಧ ಎಂದು ನಾವು ಈಗಲೇ ಸ್ಪಷ್ಟವಾಗಿ ಹೇಳುವ ಪ್ರಯತ್ನ ಮಾಡಬಾರದು. ಆದರೆ ಒಂದಂತೂ ಸ್ಪಷ್ಟ. ಯೂಕ್ರೇನ್ ಪರವಾಗಿ, ರಷ್ಯಾ ವಿರುದ್ಧ ಫ್ರಾನ್ಸ್ ಮತ್ತು ಬ್ರಿಟನ್ ಕಾಳಗಕ್ಕಿಳಿಯಬಹುದಾದ ಸೂಚನೆಗಳು ಕೆಲವು ತಿಂಗಳುಗಳ ಹಿಂದೆ ಕಂಡುಬಂದಿದ್ದವು. ಆ ಬಗ್ಗೆ ಖುದ್ದು ಪ್ರಧಾನಿ ಸ್ಟಾರ್ಮರ್ ಹೇಳಿಕೆಗಳನ್ನು ನೀಡಿದ್ದರು. ಅದನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದು, ‘ನೀವು ರಷ್ಯಾವನ್ನು ಏಕಾಂಗಿಯಾಗಿ ಎದುರಿಸಬಲ್ಲಿರೇನು?’ ಎಂದು ಮುಖಕ್ಕೆ ಹೊಡೆದಂತೆ ಸ್ಟಾರ್ಮರ್ ಅವರನ್ನು ಪ್ರಶ್ನಿಸುವುದರ ಮೂಲಕ. ಆಗ ಸ್ಟಾರ್ಮರ್ ನೀಡಿದ ಪೆಚ್ಚುನಗೆಯ ಉತ್ತರ ರಷ್ಯಾ ವಿರುದ್ಧ ಬ್ರಿಟನ್ ಎಷ್ಟು ಸಮರ್ಥ ಎನ್ನುವುದರ ಬಗ್ಗೆ ಅನುಮಾನಗಳನ್ನು ಢಾಳಾಗಿ ತೋರಿತ್ತು. ಆ ಹಿನ್ನೆಲೆಯಲ್ಲಿ ಇಂದಿನ ಬೆಳವಣಿಗೆಯನ್ನು ನೋಡುವುದಾದರೆ ತನ್ನ ವಾಯುದಳವನ್ನು ಸಶಕ್ತಗೊಳಿಸಲು ಬ್ರಿಟನ್ಗೆ ಭಾರತದ ಸಹಕಾರದ ಅಗತ್ಯ ಮನವರಿಕೆಯಾಗಿದೆಯೇ? ಭಾರತವೇ ಏಕೆ?
‘ಆಪರೇಷನ್ ಸಿಂಧೂರ’ ಸಮಯದಲ್ಲಿ ತಾನು ಭಾರತದ ಆರೇಳು ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಒಂದಕ್ಕೂ ಸಾಕ್ಷ್ಯ ಒದಗಿಸಿಲ್ಲ. ಆದರೂ ಪಾಕಿಸ್ತಾನದ ಬುರುಡೆ ನಿಂತಿಲ್ಲ. ಕಳೆದ ತಿಂಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಎಂಭತ್ತನೇ ವಾರ್ಷಿಕ ಸಮಾವೇಶದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಹೊಡೆದ ಬುರುಡೆಗೂ ಲಾಹೋರ್ನ ರಸ್ತೆಬದಿಯ ಚಹಾದಂಗಡಿಯಲ್ಲಿ ಗಮಾರರು ಹೇಳುವ ಕಥೆಗಳಿಗೂ ವ್ಯತ್ಯಾಸವೇ ಇರಲಿಲ್ಲ. ಅವೆಲ್ಲ ಕಟ್ಟುಕಥೆಗಳ ಹೊರತಾಗಿಯೂ ವಾಸ್ತವ ಏನೆಂದು ಜಗತ್ತಿಗೆ ಗೊತ್ತಾಗಿಹೋಗಿದೆ. ಭಾರತೀಯ ವೈಮಾನಿಕರು ಸುಕೋಯ್-30 ವಿಮಾನಗಳನ್ನು ಬಳಸಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಉಡಾಯಿಸಿ ಪಾಕಿಸ್ತಾನದ ಹನ್ನೊಂದು ವಾಯುನೆಲೆಗಳನ್ನು ಧ್ವಂಸ ಮಾಡಿದ್ದು ಇಂದು ಆ ದೇಶದ ಮುಚ್ಚಿಡಲಾಗದ ಸತ್ಯ. ಹಾಗೆಯೇ ಭಾರತದ ಕೂದಲೂ ಕೊಂಕಿಲ್ಲ ಎನ್ನುವುದೂ ಎಲ್ಲರಿಗೂ ತಿಳಿದದ್ದೇ. ಒಟ್ಟಿನಲ್ಲಿ ಭಾರತೀಯ ವಾಯುದಳದ ಯುದ್ಧಸಾಮರ್ಥ್ಯ ಹಾಗೂ ರಣಕೌಶಲ ಇಂದು ಜಗತ್ತನ್ನೇ ಬೆರಗಾಗಿಸಿದೆ. ಅದರ ಪರಿಣಾಮವೇ ಇಂದು ಬ್ರಿಟಿಷ್ ಪ್ರಧಾನಿ ತಮ್ಮ ವೈಮಾನಿಕರಿಗೆ ಭಾರತೀಯ ವೈಮಾನಿಕರಿಂದ ತರಬೇತಿ ಬಯಸಿದ್ದಾರೆ ಎಂದು ಹೇಳಬಹುದು.
ಅವರು ಪಾಕಿಸ್ತಾನಿ ವೈಮಾನಿಕರ ಕಡೆ ಕಣ್ಣೆತ್ತಿ ನೋಡಿಯೂ ಇಲ್ಲ ಎನ್ನವುದು ಮುಕ್ಕಾಲು ಶತಮಾನದ ಹಿಂದೆ ತಾನು ಬಿಟ್ಟುಹೋದ ಭಾರತ ಮತ್ತು ಪಾಕಿಸ್ತಾನಗಳನ್ನು ಇಂದು ಬ್ರಿಟನ್ ಹೇಗೆ ನೋಡುತ್ತದೆ ಎನ್ನುವುದರ ಸ್ಪಷ್ಟ ಸೂಚನೆ. ಒಂದು ಕಾಲದಲ್ಲಿ ಬ್ರಿಟನ್ ಪಾಕಿಸ್ತಾನವನ್ನು ಭಾರತದ ವಿರುದ್ಧದ ಶಕ್ತಿಯಾಗಿ ಬೆಳೆಸಲು ಪ್ರಯತ್ನಿಸಿತ್ತು. ಕಾಶ್ಮೀರದ ಕುರಿತಾಗಿ ಬ್ರಿಟಿಷ್ ನೀತಿ ಪಾಕಿಸ್ತಾನದ ಪರವಾಗಿತ್ತು. 1971ರ ಯುದ್ಧದ ದಿನಗಳಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಲು ಬಂಗಾಳ ಕೊಲ್ಲಿಗೆ ಅಮೆರಿಕಾದ ಸೆವೆಂನ್ತ್ ಫ್ಲೀಟ್ ಬಂದರೆ ಅರಬ್ಬಿ ಸಮುದ್ರದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಯುದ್ಧನೌಕೆಗಳು ರಹಸ್ಯವಾಗಿ ಠಳಾಯಿಸತೊಡಗಿದ್ದವು. ಆದರೆ ಭಾರತದ ಪರವಾಗಿ ಆಗಿನ ಸೋವಿಯತ್ ಯೂನಿಯನ್ನ ಫೆಸಿಫಿಕ್ ಫ್ಲೀಟ್ ಇತ್ತ ಬರತೊಡಗಿದಂತೆ ಬ್ರಿಟಿಷ್ ಮತ್ತು ಫ್ರೆಂಚ್ ಯುದ್ಧನೌಕೆಗಳು ಸದ್ದಿಲ್ಲದೆ ಅರಬ್ಬಿ ಸಮುದ್ರದಿಂದ ಓಡಿಬಿಟ್ಟವು. ಅರ್ಧ ಶತಮಾನದ ನಂತರ ಇತಿಹಾಸ ಬದಲಾಗಿದೆ, ಬ್ರಿಟನ್ ಇಂದು ಪಾಕಿಸ್ತಾನವನ್ನು ಮರೆತಿದೆ, ತನ್ನ ಹಲವು ಅಗತ್ಯಗಳಿಗಾಗಿ ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಬ್ರಿಟನ್ ಜತೆಗೆ ಇತರ ಪ್ರಮುಖ ಜಾಗತಿಕ ಶಕ್ತಿಗಳೂ ಇಂದು ಪಾಕಿಸ್ತಾನವನ್ನು ಕಡೆಗಣಿಸಿ ಭಾರತದತ್ತ ಆಶಾಭಾವನೆಯಿಂದ ನೋಡುತ್ತಿವೆ. ಅಚ್ಚರಿಯೆಂದರೆ ಈ ಗುಂಪಿಗೆ ಚೀನಾ ಸಹ ಸೇರಿದೆ! ಹಾಗಿದ್ದರೆ ಎಲ್ಲ ಪ್ರಮುಖ ದೇಶಗಳ ಒಂದುಕಾಲದ ಕಣ್ಮಣಿ ಪಾಕಿಸ್ತಾನ ವಿಶ್ವಾಸ ಕಳೆದುಕೊಂಡದ್ದಾದರೂ ಹೇಗೆ? ಆ ದೇಶ ಗೆಲ್ಲುವ ಕುದುರೆಯಲ್ಲ ಎಂಬ ಅಭಿಪ್ರಾಯ ಜಾಗತಿಕವಾಗಿ ಸಾರ್ವತ್ರಿಕವಾದದ್ದಾದರೂ ಹೇಗೆ? ಈ ಪ್ರಶ್ನೆಗಳಿಗೆ ಒಂದೇ ಉತ್ತರ-ಜಾನ್ ಸ್ಯಾಂತಾಯಾನಾ ಹೇಳಿದ, ‘ಇತಿಹಾಸವನ್ನು ಕಡೆಗಣಿಸಿದವರು ಅದನ್ನು ಪುನರಾವರ್ತಿಸುವ ಶಿಕ್ಷೆಗೊಳಗಾಗುತ್ತಾರೆ’ ಎಂಬ ಮಾತು.
ದುರಂತವೆಂದರೆ ಪಾಕಿಸ್ತಾನ ಒಂದಕ್ಕಿಂತ ಹೆಚ್ಚು ಇತಿಹಾಸಗಳನ್ನು ಕಡೆಗಣಿಸಿದೆ. ಹೀಗಾಗಿ ಶಿಕ್ಷೆಯೂ ದೊಡ್ಡದೇ. ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡು ತಮ್ಮ ಭಾರತ ಸಾಮ್ರಾಜ್ಯದೊಂದಿಗೆ ಸೇರಿಸಿಕೊಳ್ಳುವ ಬ್ರಿಟಿಷರ ಎರಡು ಪ್ರಯತ್ನಗಳು ವಿಫಲವಾದ ನಂತರ ಎರಡೂ ದೇಶಗಳ ನಡುವೆ ಬ್ರಿಟಿಷರು ಎಳೆದ ಗಡಿರೇಖೆ ‘ಡ್ಯೂರಾಂಡ್ ಲೀನ್’ ಅನ್ನು ಅಫ್ಘನ್ನರು ಒಪ್ಪಿಕೊಳ್ಳಲೇ ಇಲ್ಲ. 1947ರಲ್ಲಿ ಭಾರತ ಇಬ್ಭಾಗವಾದಾಗ ಆ ಗಡಿರೇಖೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿಯಾಯಿತು. ಅದರ ಬಗ್ಗೆ ತಮ್ಮ ಅಸಮ್ಮತಿಯನ್ನು ಮುಂದುವರಿಸಿದ ಅಫ್ಘನ್ ಸರ್ಕಾರ ಇಡೀ ಗಡಿನಾಡು ಪ್ರಾಂತ್ಯ ಹಾಗೂ ಬಲೂಚಿಸ್ತಾನದ ಉತ್ತರ ಭಾಗ ತನ್ನ ದೇಶದ್ದೆಂದು ಹೇಳಿದ್ದಲ್ಲದೆ ಪಾಕಿಸ್ತಾನದ ಅಸ್ತಿತ್ವವನ್ನೇ ಪ್ರಶ್ನಿಸಿತು. ಪಾಕಿಸ್ತಾನ ವಿಶ್ವಸಂಸ್ಥೆಯ ಸದಸ್ಯತ್ವಕ್ಕಾಗಿ ಅರ್ಜಿ ಹಾಕಿದಾಗ ಅದನ್ನು ಸಾಮಾನ್ಯ ಸಭೆಯಲ್ಲಿ ವಿರೋಧಿಸಿದ ಏಕೈಕ ರಾಷ್ಟ್ರ ಅಫ್ಘಾನಿಸ್ತಾನ ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಅಂದು ಅರಸ ಝುಹೀರ್ ಶಾ ನೇತೃತ್ವದ ಅಫ್ಘನ್ ಸರ್ಕಾರ ಅನುಸರಿಸಿದ ನೀತಿಯನ್ನೇ ಮುಂದಿನ ಎಲ್ಲ ಅಫ್ಘನ್ ಸರ್ಕಾರಗಳೂ ಅನುಸರಿಸಿದವು. ಪರಿಣಾಮವಾಗಿ ಎರಡೂ ದೇಶಗಳ ಜನತೆಗಳ ನಡುವೆಯೂ ವೈಷಮ್ಯ ಮುಂದುವರಿಯಿತು. ಆದರೆ ಕಾಬೂಲ್ನಲ್ಲಿನ ತನ್ನ ಕೈಗೊಂಬೆ ಕಮ್ಯೂನಿಸ್ಟ್ ಸರ್ಕಾರವನ್ನು ರಕ್ಷಿಸಲು ಸೋವಿಯತ್ ಯೂನಿಯನ್ 1979ರ ಡಿಸೆಂಬರ್ನಲ್ಲಿ ಅಫ್ಘಾನಿಸ್ತಾನಕ್ಕೆ ತನ್ನ ಸೇನೆ ಕಳುಹಿಸಿದಾಗ, ನಾಸ್ತಿಕ ಕಮ್ಯೂನಿಸ್ಟರ ವಿರುದ್ಧ ಹೋರಾಡಲು ಮುಸ್ಲಿಂ ಅಘ್ಘನ್ನರಿಗೆ ತಾನು ಸಹಾಯ ಮಾಡುವುದಾಗಿ ಹೇಳಿ ಪಾಕಿಸ್ತಾನಿ ಸೇನಾ ಸರ್ವಾಧಿಕಾರಿ ಜಿಯಾ-ಉಲ್ಹಕ್ ಅಫ್ಘನ್ನರ ಪ್ರೀತಿ ಗಳಿಸುವ ಪ್ರಯತ್ನ ಮಾಡಿದ.
ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ಅಫ್ಘನ್ನರು ಜಿಯಾನ ಮಾತು ಒಪ್ಪಿ ಗಡಿವಿವಾದವನ್ನು ಹಿನ್ನೆಲೆಗೆ ಸರಿಸಿದರು. ಆದರೆ ಅದೇ ನೀತಿ ಶಾಶ್ವತ ಎಂದು ಪಾಕಿಸ್ತಾನಿಗಳು ನಂಬಿದರು. ವಾಸ್ತವ ಹಾಗಿಲ್ಲ ಎಂದು ಅವರಿಗೆ ಇಂದು ದಾರುಣ ಬಗೆಯಲ್ಲಿ ಅರಿವಾಗುತ್ತಿದೆ. ಪಾಕಿಸ್ತಾನೀಯರೇ ಸೃಷ್ಟಿಸಿ ಬೆಳೆಸಿದ ತಾಲಿಬಾನಿಗಳು ಇಂದು ಕಾಬೂಲ್ನಲ್ಲಿ ಗಟ್ಟಿಯಾಗಿ ತಳವೂರುತ್ತಿದ್ದಂತೆ ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ, ಗಡಿಯ ಬಗ್ಗೆ ಪ್ರಶ್ನೆಯೆತ್ತಿದ್ದಾರೆ. ಜತೆಗೆ ಅಫ್ಘನ್ ತಾಲಿಬಾನ್ನ ಸಹೋದರ ಸಂಘಟನೆ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಅಥವಾ ಪಾಕಿಸ್ತಾನಿ ತಾಲಿಬಾನ್ ಪಾಕಿಸ್ತಾನದಲ್ಲೂ ಅಫ್ಘನ್ ಮಾದರಿಯದೇ ತಾಲಿಬಾನಿ ಸರ್ಕಾರವನ್ನು ಸ್ಥಾಪಿಸಲು ಹೋರಾಡುತ್ತಿದೆ. ಎರಡೂ ತಾಲಿಬಾನ್ಗಳು ಡ್ಯೂರಾಂಡ್ ರೇಖೆಯಲ್ಲಿ ಹಾಗೂ ಗಡಿನಾಡು ಖೈಬರ್ ಪಖ್ತೂನ್ಖ್ವಾದಲ್ಲಿ ಪಾಕಿಸ್ತಾನಿ ಸೇನೆಯ ವಿರುದ್ಧ ಅಡಿಗಡಿಗೆ ಕಾರ್ಯಾಚರಣೆ ನಡೆಸುತ್ತಿವೆ. ಇದೇ ಅವಧಿಯಲ್ಲಿ ಅಫ್ಘನ್ ತಾಲಿಬಾನ್ ಭಾರತದೊಂದಿಗೆ ಉತ್ತಮ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಲು ಶ್ರಮಿಸುತ್ತಿದೆ.
‘ಶತ್ರುವಿನ ಶತ್ರು ನಮ್ಮ ಮಿತ್ರ’ ಎನ್ನವುದು ಅದರ ನೀತಿಯಾಗಿರುವಂತಿದೆ. ಅಫ್ಘನ್ ವಿದೇಶಮಂತ್ರಿ ಆಮಿರ್ ಖಾನ್ ಮುತ್ತಾಕಿ ಇದೇ ಅಕ್ಟೋಬರ್ 9ರಂದು ಎಂಟು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದಾರೆ. ಇದು ಪಾಕಿಸ್ತಾನಕ್ಕೆ ನುಂಗಲಾಗದ ತುತ್ತು. ತನ್ನ ಹತಾಶೆಯನ್ನು ಪಾಕಿಸ್ತಾನ ತೋರಿಸಿದ್ದು ಪಾಕ್ ತಾಲಿಬಾನಿಗಳು ತನ್ನ 11 ಸೈನಿಕರನ್ನು ಕೊಂದು ಕಾಬೂಲ್ನಲ್ಲಿ ಅಡಗಿ ಕೂತಿದ್ದಾರೆ ಎಂಬ ಕಾರಣವೊಡ್ಡಿ ಪಾಕಿಸ್ತಾನ ಅಫ್ಘನ್ ರಾಜಧಾನಿಯ ಮೇಲೆ ಅಕ್ಟೋಬರ್ 9ರಂದು ವಾಯುದಾಳಿ ಎಸಗಿತು. ಕ್ರೋಧಗೊಂಡ ಅಫ್ಘನ್ ತಾಲಿಬಾನಿ ಸೇನೆ ಮರುದಿನವೇ ಗಡಿಯಲ್ಲಿ ಕಾರ್ಯಪ್ರವೃತ್ತವಾಗಿ ಹಲವರು ಪಾಕ್ ಸೈನಿಕರನ್ನು ಕೊಂದಿದೆ, ಕೆಲವರನ್ನು ಕೈದಿಗಳನ್ನಾಗಿಸಿಕೊಂಡಿದೆ, 24 ಪಾಕಿಸ್ತಾನಿ ಸೇನಾ ಚೌಕಿಗಳನ್ನು ವಶಪಡಿಸಿಕೊಂಡಿದೆ. ಪಾಕಿಸ್ತಾನದ ಬಗ್ಗೆ ಅಫ್ಘನ್ ತಾಲಿಬಾನ್ ಯಾವುದೇ ಸ್ನೇಹ ವಿಶ್ವಾಸ ತೋರಲು ಸಿದ್ಧವಿಲ್ಲ. ಪಾಕ್ ತಾಲಿಬಾನ್ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿಯೆಸಗಿ 51 ಪೊಲೀಸರನ್ನು ಹತ್ಯೆಗೈದಿದೆ.
ಅಫ್ಘನ್ನರು ತಮ್ಮ ಐತಿಹಾಸಿಕ ವೈರವನ್ನು ಮರೆತು ತಮ್ಮ ಅಡಿಯಾಳಾಗುತ್ತಾರೆ, ಅವರನ್ನು ಭಾರತದ ವಿರುದ್ಧ ಬಳಸಿಕೊಳ್ಳಬಹುದು ಎಂಬ ಪಾಕ್ ಲೆಕ್ಕಾಚಾರ ಹುಸಿಯಾಗಿದೆ. ಇತಿಹಾಸವನ್ನು ಕಡೆಗಣಿಸಿದ ಪಾಕಿಸ್ತಾನ ಈಗ ಅದನ್ನು ದಾರುಣ ಬಗೆಯಲ್ಲಿ ನೆನಪಿಸಿಕೊಳ್ಳುತ್ತಿದೆ. ಇದರೊಂದಿಗೆ ದೇಶದೊಳಗೆ ಇಸ್ರೇಲ್-ವಿರೋಧವನ್ನೂ, ಪ್ಯಾಲೆಸೆôನ್-ಪ್ರೀತಿಯನ್ನೂ ಬಿತ್ತಿ ಬೆಳೆಸಿದ ಪಾಕ್ ಸೇನೆ ಇಂದು ಆ ಇತಿಹಾಸವನ್ನೇ ಮರೆತು ಪ್ಯಾಲೆಸೆôನ್-ಪ್ರಿಯ ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ್ (ಟಿಎಲ್ಪಿ) ಆಂದೋಲನಕಾರರ ಮೇಲೆ ಅಕ್ಟೋಬರ್ 13ರಂದು ಗುಂಡು ಹಾರಿಸಿ ಮುನ್ನೂರಕ್ಕೂ ಹೆಚ್ಚಿನ ಜನರನ್ನು ಕೊಂದಿದೆ. ಹೀಗೆ ತಾನೇ ಸೃಷ್ಟಿಸಿದ ಇತಿಹಾಸವನ್ನು ಮರೆತ ಪಾಕ್ ಸೇನೆ ದೇಶವನ್ನು ಎತ್ತ ಕೊಂಡೊಯ್ಯಬಹುದು, ಆ ಹಾದಿಯಲ್ಲಿ ಅದು ಅನುಭವಿಸಬಹುದಾದ ಶಿಕ್ಷೆಯೇನು ಎನ್ನುವುದನ್ನು ಮುಂದಿನವಾರ ವಿಶ್ಲೇಷಿಸೋಣ.