

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸುಂಕನೀತಿ ಸೃಷ್ಟಿಸಿರುವ ವಿವಾದದ ಬಳಿಕ ಚೀನಾದಲ್ಲಿ ಆಯೋಜನೆಯಾಗಿದ್ದ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಶೃಂಗಸಭೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಟ್ರಂಪ್ ಬೆದರಿಕೆ ತಂತ್ರಕ್ಕೆ ಮಣಿಯದೆ, ಪರ್ಯಾಯವಾಗಿ ಜಾಗತಿಕ ಶಕ್ತಿಗಳು ಒಟ್ಟಾಗುವ ರಣತಂತ್ರ ರೂಪಿಸಲಾಯಿತು. ಇಪ್ಪತ್ತು ರಾಷ್ಟ್ರಗಳ ರಾಷ್ಟ್ರಾಧ್ಯಕ್ಷರು/ಪ್ರಧಾನಿ ಮತ್ತು ಹತ್ತಕ್ಕೂ ಅಧಿಕ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದು ಶೃಂಗಸಭೆಯ ಯಶಸ್ಸಿಗೆ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ 15 ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ ಈ ವರ್ಷದ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಖಂಡಿಸಿದೆ. ಜತೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ‘ದ್ವಿಮುಖ ನೀತಿ’ ಸ್ವೀಕಾರಾರ್ಹವಲ್ಲ ಎಂಬ ಭಾರತದ ನಿಲುವನ್ನು ಒಪ್ಪಿಕೊಂಡಿದೆ. ಭಯೋತ್ಪಾದನೆ ಮತ್ತು ಅಕ್ರಮವಾಗಿ ಗಡಿ ನುಸುಳುವಿಕೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯಗಳು ಹೋರಾಡಬೇಕು ಎಂದು ಸಂಘಟನೆಯ ಸದಸ್ಯರು ಕರೆ ನೀಡಿದರು. ಇದು ಭಾರತಕ್ಕೆ ದೊರೆತಿರುವ ಮಹತ್ವದ ರಾಜತಾಂತ್ರಿಕ ಗೆಲುವು.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲೇ ಪಾಕ್ ಪ್ರಾಯೋಜಿತ ಪಹಲ್ಗಾಮ್ ದಾಳಿಯನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ‘ಪಹಲ್ಗಾಮ್ಲ್ಲಿ ನಡೆದ ದಾಳಿ ಕೇವಲ ಭಾರತದ ಮೇಲಿನ ದಾಳಿಯಲ್ಲ. ಮಾನವೀಯತೆಯ ಮೇಲೆ ನಂಬಿಕೆಯನ್ನು ಇಡುವ ದೇಶಗಳಿಗೂ ಬಹಿರಂಗ ಸವಾಲಾಗಿತ್ತು’ ಎಂದರು. ‘ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲಿಸುವುದನ್ನು ಒಪ್ಪಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ’ ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಪ್ರಧಾನಿ ವಾಗ್ದಾಳಿ ನಡೆಸಿದರು. ಭಾರತ ಕಳೆದ ನಾಲ್ಕು ದಶಕಗಳಿಂದಲೂ ಭಯೋತ್ಪಾದನೆಯ ನೋವನ್ನು ಅನುಭವಿಸುತ್ತಿದೆ. ಹೀಗಾಗಿ, ಯಾವುದೇ ರಾಷ್ಟ್ರದ ಶಾಂತಿ, ಸಮೃದ್ಧಿ, ಸ್ಥಿರತೆಗೆ ಭಯೋತ್ಪಾದನೆ, ಪ್ರತ್ಯೇಕತಾವಾದ ಸವಾಲಾಗಿವೆ ಎಂಬುದನ್ನು ಪ್ರಧಾನಿ ಮನದಟ್ಟು ಮಾಡಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಿಂದ ಭಯೋತ್ಪಾದನೆ ವಿರುದ್ಧ ಸಂಘಟಿತ ಸಮರದ ಸಂದೇಶ ಮೊಳಗಿರುವುದು ಸಮಾಧಾನಕರ ಬೆಳವಣಿಗೆ.
ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ತಳೆಯಲಾಗುವುದು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಉಗ್ರವಾದದ ವಿರುದ್ಧ ಸಂಘಟಿತ ಹೋರಾಟ ಈಗಿನ ಅಗತ್ಯವೂ ಹೌದು. ಅಲ್ಲದೆ, ಚೀನಾ ಮತ್ತು ರಷ್ಯಾದೊಂದಿಗೆ ಭಾರತದ ಬಾಂಧವ್ಯ ಬಲವರ್ಧನೆಗೊಂಡಿರುವುದು ಕೂಡ ಪಾಕಿಸ್ತಾನಕ್ಕೆ ಮುಜುಗರ ತಂದಿದೆ. ಸುಂಕನೀತಿಯಿಂದ ವಿವಾದ ಸೃಷ್ಟಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ತಳಮಳ ಹುಟ್ಟಿಸಿದೆ. ಉಗ್ರವಾದದ ವಿರುದ್ಧ ಜಾಗತಿಕ ಸಮುದಾಯ ಒಗ್ಗಟ್ಟಾಗಿದೆ ಎಂಬ ಸಂದೇಶ ರವಾನೆಯಾಗಿದ್ದು, ಪಾಕಿಸ್ತಾನ ಇನ್ನಾದರೂ ಪಾಠ ಕಲಿತು ಉಗ್ರಪೋಷಣೆಯ ನೀತಿಯನ್ನು ತೊರೆಯಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಏಕಾಂಗಿಯಾಗಲಿದೆ. ಜತೆಗೆ, ಭಯೋತ್ಪಾದನೆಗೆ ಪೋಷಣೆ ನೀಡುತ್ತಿರುವುದಕ್ಕಾಗಿ ಅದು ಭಾರಿ ಬೆಲೆಯನ್ನು ತೆರಬೇಕಾಗುತ್ತದೆ. ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ’ ಇದಕ್ಕೆ ಸಣ್ಣ ನಿದರ್ಶನ.