ಪಿಎನ್​ಜಿಯಿಂದ ಹೊರವಲಯದ ರಿಯಲ್​ಎಸ್ಟೇಟ್ ಮೌಲ್ಯವರ್ಧನೆ

PNG '
Published on

ಪ್ರತಿನಿತ್ಯ ಮನೆಗೆ ಅತ್ಯಗತ್ಯವಾದ ಅಡುಗೆ ಅನಿಲವನ್ನು ಕೊಳವೆ ಮೂಲಕ ಪೂರೈಸಲು ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಪೈಪ್ಡ್ ನ್ಯಾಚುರಲ್ ಗ್ಯಾಸ್’ (ಪಿಎನ್​ಜಿ) ಕಾಮಗಾರಿಯಿಂದ ಹೊರವಲಯದ ಪ್ರದೇಶಗಳು ಹಾಗೂ ಲೇಔಟ್​ನ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಮೌಲ್ಯವರ್ಧನೆ ಯಾಗುವ ಸಾಧ್ಯತೆಯಿದೆ.

ಸದ್ಯ ಮನೆಗಳಿಗೆ ‘ದ್ರವೀಕೃತ ಪೆಟ್ರೋಲಿಯಂ ಅನಿಲ’ (ಎಲ್​ಪಿಜಿ) ಸಿಲಿಂಡರ್​ಗಳನ್ನು ಬಳಸಲಾಗುತ್ತಿದೆ. ಭಾರತದ ಕೋಟ್ಯಂತರ ಗ್ರಾಮೀಣ ಕುಟುಂಬಗಳು ಇತ್ತೀಚೆಗಷ್ಟೆ ಕಟ್ಟಿಗೆ ಉರುವಲಿನಿಂದ ಎಲ್​ಪಿಜಿಗೆ ಬದಲಾವಣೆ ಕಾಣುತ್ತಿವೆ. ನಗರ ಪ್ರದೇಶಗಳಲ್ಲಿ ಎಲ್​ಪಿಜಿಯಿಂದ ಮತ್ತಷ್ಟು ಪರಿಸರಸ್ನೇಹಿ ‘ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್’ (ಸಿಎನ್​ಜಿ) ಒದಗಿಸಲು ನಿರ್ಧರಿಸಲಾಗಿದೆ. ದೇಶದ ವಿವಿಧ ನಗರಗಳಿಗೆ ಪ್ರತ್ಯೇಕ ಕಂಪನಿಗಳು ಈ ಕಾಮಗಾರಿಯ ಟೆಂಡರ್ ಪಡೆದಿದ್ದು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಪಿಎನ್​ಜಿ ಮೂಲಸೌಕರ್ಯ ಒದಗಿಸಲು ಹಾಗೂ ಅನಿಲ ಸರಬರಾಜು ಮಾಡಲು ಸರ್ಕಾರಿ ಸ್ವಾಮ್ಯದ ಗೇಲ್ ಇಂಡಿಯಾ ಲಿ. ಗುತ್ತಿಗೆ ಪಡೆದಿದೆ.

2017ರಿಂದ ಆರಂಭ: ಯೋಜನೆ ಕುರಿತು 2015ರಲ್ಲಿ ಚಿಂತನೆ ನಡೆದಿತ್ತಾದರೂ 2017ರಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಬೆಂಗಳೂರು ಹೊರವಲಯದ ನೆಲಮಂಗಲ, ಹೊಸಕೋಟೆ, ಬೆಂಗಳೂರು ಪೂರ್ವ, ಬೆಂ. ಉತ್ತರ, ಬೆಂ. ದಕ್ಷಿಣ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಆನೇಕಲ್ ಪ್ರದೇಶಗಳ 4,395 ಚದರ ಕಿ.ಮೀ. ಪ್ರದೇಶದಲ್ಲಿ ಮನೆಯ ಅಡುಗೆ ಕೋಣೆಗಳಿಗೇ ನೇರವಾಗಿ ಅನಿಲ ಸರಬರಾಜು ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಗೇಲ್ ಕಂಪನಿ ತಿಳಿಸಿರುವಂತೆ, ನಗರದ ಇಬ್ಬಲೂರು ಸಹಿತ ಎಚ್.ಎಸ್.ಆರ್. ಬಡಾವಣೆ, ಸಿಂಗಸಂದ್ರ, ಮಂಗಮ್ಮನಪಾಳ್ಯ, ಬೆಳ್ಳಂದೂರು, ಮಾರತ್ತಹಳ್ಳಿ, ವೈಟ್​ಫೀಲ್ಡ್, ಗರುಡಾಚಾರ್​ಪಾಳ್ಯ, ಕಾಡುಗುಡಿ, ಹಗದೂರು, ದೊಡ್ಡನೆಕ್ಕುಂದಿ, ಸಂಜಯನಗರ, ರಾಧಾಕೃಷ್ಣ ವಾರ್ಡ್,

ನಾಗವಾರ, ಥಣಿಸಂದ್ರ, ಬ್ಯಾಟರಾಯನಪುರ, ಪೀಣ್ಯ, ಹೊಸಕೋಟೆ, ಎಲೆಕ್ಟ್ರಾನಿಕ್ಸ್ ಸಿಟಿ, ಎಚ್.ಎಂ.ಟಿ. ವಾರ್ಡ್, ಯಶವಂತಪುರ, ಸಿಎಂಟಿಐ, ಬಿ.ಇ.ಎಲ್. ಕಾಲನಿ, ಬಿಎಚ್​ಇಎಲ್, ಬೊಮ್ಮಸಂದ್ರ, ಜಿಗಣಿ, ವೀರಸಂದ್ರ, ಯಲಹಂಕ, ಜಿಂದಾಲ್ ನೇಚರ್ ಕ್ಯೂರ್ ಪ್ರದೇಶಗಳಲ್ಲಿ ಅನಿಲ ಸರಬರಾಜು ಮಾಡಲಾಗುತ್ತಿದೆ. ಈ ಪೈಕಿ ಹೆಚ್ಚಿನ ಪ್ರದೇಶಗಳು ಬೆಂಗಳೂರು ಹೊರವಲಯದಲ್ಲೇ ಇವೆ. ಬೆಂಗಳೂರು ಹೊರವಲಯದಲ್ಲೇ ಹೆಚ್ಚಿನ ಹೊಸ ಬಡಾವಣೆಗಳು, ಹೂಡಿಕೆಗೆ ತಕ್ಕ ಯೋಜನೆಗಳು ತಲೆಯೆತ್ತುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿನ ಪ್ರತಿ ಮನೆ ಹಾಗೂ ಕೈಗಾರಿಕೆಗಳಿಗೂ ನೈಸರ್ಗಿಕ ಅನಿಲ ಸರಬರಾಜು ಮಾಡುವ ಗುರಿಯನ್ನು ಗೇಲ್ ಸಂಸ್ಥೆ ಹೊಂದಿದೆ.

ಮತ್ತೂ ಅನೇಕ ಕಾರಣಗಳು

ಅಡುಗೆ ಮನೆಗೆ ನೇರವಾಗಿ ಅನಿಲ ಲಭಿಸುತ್ತದೆ ಎಂಬುದು ಮುಖ್ಯವಾಗಿ ಗೃಹಿಣಿಯರಿಗೆ ಸಂತಸದ ವಿಚಾರವಾದರೆ, ಪಿಎನ್​ಜಿ ಯೋಜನೆಯಿಂದ ಇಡೀ ಪ್ರದೇಶ ಯೋಜನಾಬದ್ಧವಾಗಿ ನಡೆಯುತ್ತದೆ ಎನ್ನುವುದು ಮತ್ತೊಂದು ಸಂತಸದ ವಿಚಾರ. ಪಿಎನ್​ಜಿ ಕೊಳವೆಗಳನ್ನು ನೆಲದಿಂದ 1 ಮೀಟರ್ ಆಳದಲ್ಲಿ ಹೂಳಲಾಗಿರುತ್ತದೆ. ಆ ಮಾರ್ಗದಲ್ಲಿ ಎಚ್ಚರಿಕೆ ಫಲಕಗಳನ್ನು ನಿರ್ವಿುಸಲಾಗಿರುತ್ತದೆ. ಜಲಮಂಡಳಿ, ಬೆಸ್ಕಾಂ ಸೇರಿದಂತೆ ಯಾವುದೇ ಸಂಸ್ಥೆ ಅಥವಾ ಖಾಸಗಿ ವ್ಯಕ್ತಿಗಳು ಗೇಲ್ ಸಂಸ್ಥೆಯ ಅನುಮತಿ ಇಲ್ಲದೇ ಈ ಪ್ರದೇಶದಲ್ಲಿ ಅಗೆಯುವಂತಿಲ್ಲ. ಆದ್ದರಿಂದ ಒಟ್ಟಾರೆ ಸರ್ಕಾರದ ಮೂಲಸೌಕರ್ಯ ಯೋಜನೆಗಳಲ್ಲಿ ಸಮನ್ವಯ ಏರ್ಪಡುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ವಿಚಾರದಲ್ಲಿ ನಾಗರಿಕರಿಗೆ ಉತ್ತಮ ಸೌಲಭ್ಯ ದೊರಕುತ್ತವೆ ಎಂಬುದು ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಮೌಲ್ಯವರ್ಧನೆಗೆ ಅನುಕೂಲವಾಗುವ ಸಾಧ್ಯತೆಯಿವೆ.

ರಿಯಲ್ ಎಸ್ಟೇಟ್​ಗೆ ಹೇಗೆ ಲಾಭ?

ಪಿಎನ್​ಜಿ ಎಂಬುದು ಎಲ್​ಪಿಜಿಗಿಂತ ಹಗುರವಾದ ಅನಿಲ. ಇದು ನೈಸರ್ಗಿಕವಾದ್ದರಿಂದ ಪರಿಸರಕ್ಕೆ ಹಾನಿ ಕಡಿಮೆ. ಎಲ್​ಪಿಜಿಗಿಂತಲೂ ಕಡಿಮೆ ದರಕ್ಕೆ ಗ್ರಾಹಕರಿಗೆ ಲಭಿಸುತ್ತದೆ. ನೇರವಾಗಿ ಅಡುಗೆ ಮನೆಗೆ ಸಂಪರ್ಕ ಕಲ್ಪಿಸುವುದರಿಂದಾಗಿ ಸಿಲಿಂಡರ್ ಇರಿಸಿಕೊಳ್ಳುವ ಗೋಜಲು ಇರುವುದಿಲ್ಲ. ಗ್ಯಾಸ್ ಖಾಲಿಯಾಯಿತು, ಮತ್ತೊಂದು ಬುಕ್ ಮಾಡಬೇಕೆಂಬ ಕಿರಿಕಿರಿ ಇಲ್ಲ. ಇದೀಗ ಜಲಮಂಡಳಿಯಿಂದ ನೀರು ಹಾಗೂ ಬೆಸ್ಕಾಂನಿಂದ ವಿದ್ಯುತ್ ಬಳಸಿದ ರೀತಿಯಲ್ಲೇ ಗ್ಯಾಸ್ ಬಳಸುವುದು, ಬಳಸಿದ್ದಷ್ಟಕ್ಕೆ ಬಿಲ್ ಪಾವತಿ ಮಾಡುವುದು ಇರಲಿದೆ. ಈ ಪ್ರದೇಶದಲ್ಲಿ ರಿಯಲ್​ಎಸ್ಟೇಟ್ ಮಾರಾಟದಲ್ಲಿ ತೊಡಗಿರುವವರಿಗೆ ಪಿಎನ್​ಜಿ ಯೋಜನೆ ವರದಾನವಾಗಿ ಪರಿಣಮಿಸಿದೆ. ನೇರವಾಗಿ ಮನೆಗೆ ಗ್ಯಾಸ್ ಬರಲಿದೆ ಎಂದು ಗ್ರಾಹಕರನ್ನು ಸೆಳೆಯುವುದು ಸಾಧ್ಯವಾಗುತ್ತಿದೆ. ಗ್ರಾಹಕರಿಗೂ ಇದು ಅನುಕೂಲವಾದ್ದರಿಂದ, ಪಿಎನ್​ಜಿ ಸರಬರಾಜಾಗುವ ಪ್ರದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

| ರಮೇಶ ದೊಡ್ಡಪುರ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net