

ಕರೊನಾ ಮಹಾಮಾರಿ ಕೃಷಿ ಕ್ಷೇತ್ರವನ್ನೂ ಬಿಟ್ಟಿಲ್ಲ. ಪರಿಹಾರದ ನಿಟ್ಟಿನಲ್ಲಿ ಪ್ರಯತ್ನಗಳು ಪ್ರಾರಂಭವಾಗುತ್ತಿದ್ದಂತೆ ಕೃಷಿಯೇತರ ಕ್ಷೇತ್ರಗಳಲ್ಲಿ ಚೇತರಿಕೆ ಕಂಡುಬರುವ ವೇಗದಲ್ಲಿಯೇ ಕೃಷಿ ಕ್ಷೇತ್ರದಲ್ಲೂ ಸುಧಾರಣೆ ಕಾಣಬಹುದು ಎಂದು ನಿರೀಕ್ಷಿಸಲಾಗದು. ಕಾರಣ, ಒಂದು ಬೆಳೆಯನ್ನು ಬಿತ್ತಿದ ನಂತರ ಅದು ಕೈಸೇರಲು ಕನಿಷ್ಠ ಮೂರು ತಿಂಗಳಾದರೂ ಬೇಕು ಹಾಗೂ ಕೃಷಿ ಬಹುತೇಕ ಹಂಗಾಮಿನ ಹಂಗಿನಲ್ಲೇ ನಡೆಯಬೇಕು.
ಕೃಷಿಯೇತರ ಕ್ಷೇತ್ರಗಳಲ್ಲಿ ತತ್ಕ್ಷಣದ ನಷ್ಟ ಅಪಾರವಾದರೆ, ಕೃಷಿ ಕ್ಷೇತ್ರದಲ್ಲಿ ದೀರ್ಘಾವಧಿಯಲ್ಲಿ ಆಗಬಹುದಾದ ನಷ್ಟವು ಅಲ್ಪಾವಧಿ ನಷ್ಟಕ್ಕಿಂತ ಅಗಾಧ. ಕಾರಣ, ಕೃಷಿಕಸುಬು ಇಂಧನವಿಲ್ಲ ಅಥವಾ ಚಾಲಕನಿಲ್ಲ ಎನ್ನುವ ಕಾರಣಕ್ಕೆ ತಾತ್ಕಾಲಿಕವಾಗಿ ನಿಂತು ಅವು ಲಭ್ಯವಾಗುತ್ತಿದ್ದಂತೆ ಮತ್ತೆ ಚಲಿಸಲು ಪ್ರಾರಂಭಿಸುವ ರೈಲಿನಂತಲ್ಲ, ಅದು ಸಮಯದಂತೆ, ಗಡಿಯಾರ ಕಾರಣಾಂತರದಿಂದ ನಿಂತರೂ ಸಮಯ ನಿಲ್ಲುವುದಿಲ್ಲ; ದಿನದ ಎರಡು ಹೊತ್ತಾದರೂ ಎಲ್ಲರಿಗೂ ಅನ್ನ ಬೇಕು. ಮಣ್ಣು, ನೀರು ಮತ್ತು ಜೀವವೈವಿಧ್ಯಗಳನ್ನು ಅವಲಂಬಿಸಿರುವ ಕೃಷಿ ನಿರಂತರವಾಗಿ ನಡೆಯುತ್ತಲೇ ಇರಬೇಕು. ಕರೊನಾ ಪ್ರಭಾವ ಏನಾದರೂ ಜೂನ್ ನಂತರವೂ ಮುಂದುವರಿದು ಕೃಷಿಗೆ ತಡೆ ಉಂಟುಮಾಡಿದರೆ ಅದರ ಪರಿಣಾಮ ಕೇವಲ ಆರ್ಥಿಕತೆಗೆ ಸೀಮಿತವಾಗಿ ಉಳಿಯುವುದಿಲ್ಲ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬುನಾದಿಗಳೊಂದಿಗೆ ಮನುಕುಲದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ.
ಪ್ರಸ್ತುತ ಜಾರಿಯಲ್ಲಿ ಇರುವ ದಿಗ್ಬಂಧನಗಳಿಂದಾಗಿ ಕೃಷಿ ಕ್ಷೇತ್ರ ಎರಡು ಸವಾಲುಗಳನ್ನು ಎದುರಿಸುತ್ತಿದೆ. ಒಂದು, ಬಿತ್ತಿದ ಹಿಂಗಾರು ಬೆಳೆಗಳನ್ನು ಕಟಾವು ಮಾಡಲಾಗದಿರುವುದು; ಕಟಾವಿಗೆ ಕೂಲಿಯಾಳುಗಳು ಸಿಗದಿರುವುದು ಮತ್ತು ಹೇಗೋ ಕಷ್ಟಪಟ್ಟು ಕಟಾವು ಮಾಡಿದರೆ ಮಾರಾಟ ಮಾಡಲಾಗದಿರುವುದು ರೈತರ ಮಟ್ಟದಲ್ಲಿನ ಪ್ರಮುಖ ಸಮಸ್ಯೆ. ಈ ಸಮಸ್ಯೆ ವಿಶೇಷವಾಗಿ ತರಕಾರಿ ಮತ್ತು ಹಣ್ಣಿನ ಬೆಳೆಗಳನ್ನು ಬೆಳೆದ ರೈತರನ್ನು ಹೆಚ್ಚಾಗಿ ಬಾಧಿಸುತ್ತಿದೆ. ಎರಡನೆಯ ಸವಾಲು ವಿತರಣೆಗೆ ಸಂಬಂಧಿಸಿದ್ದು; ಬೇಡಿಕೆ ಇದ್ದಾಗ್ಯೂ ಕಟಾವಾದ ಉತ್ಪನ್ನಗಳನ್ನು ಗ್ರಾಹಕರಿಗೆ ತುರ್ತಾಗಿ ಹಾಗೂ ಸಮರ್ಪಕವಾಗಿ ತಲುಪಿಸಲಾಗುತ್ತಿಲ್ಲ. ಸಾಗಾಟ ಮತ್ತು ವರ್ತಕರ ಮೇಲಿನ ದಿಗ್ಬಂಧನಗಳು ಕೃಷಿ ಉತ್ಪನ್ನಗಳ ಮುಕ್ತ ವಿತರಣೆಗೆ ಅಡ್ಡಿಯಾಗಿವೆ. ಸರ್ಕಾರ ಈ ಸಮಸ್ಯೆಯನ್ನು ಬಹುಬೇಗ ಗುರುತಿಸಿ ಔಷಧಗಳ ಜೊತೆಗೆ ಕೃಷಿ ಉತ್ಪನ್ನಗಳನ್ನೂ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿ ಯುದ್ಧೋಪಾದಿಯಲ್ಲಿ ಕಾರ್ಯೋನ್ಮುಖವಾಗಿದೆ. ಕೃಷಿ ಕ್ಷೇತ್ರದಲ್ಲಿ ಕರೊನಾದಿಂದ ಆಗಬಹುದಾದ ಅನಾಹುತಗಳನ್ನು ಅಲ್ಪಾವಧಿ ಹಾಗೂ ದೀರ್ಘಾವಧಿಗಳೆರಡರಲ್ಲೂ ಯಶಸ್ವಿಯಾಗಿ ನಿಭಾಯಿಸಬೇಕಾದರೆ ನಮ್ಮ ಯೋಜನೆಗಳೂ ಎರಡು ಮಟ್ಟದಲ್ಲಿ ಸಿದ್ಧವಾಗಬೇಕು.
ಈ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಕೈಗೊಳ್ಳುತ್ತಿರುವ ಪರಿಹಾರ ಕ್ರಮಗಳಲ್ಲಿ ವರ್ತಕರು, ಸರಕು ಸಾಗಾಟಗಾರರು, ರೈತ ಉತ್ಪಾದಕ ಕಂಪನಿಗಳು ಮತ್ತು ಸಾಫ್ಟ್ ವೇರ್ ತಜ್ಞರನ್ನು ಕೈಜೋಡಿಸುವಂತೆ ಉತ್ತೇಜಿಸಿ ಸರ್ಕಾರವು ಕ್ರೋಡೀಕರಣ ಮತ್ತು ವಿತರಣೆಯ ಕುರಿತು ತನ್ನ ಸೃಜನಶೀಲ ಪ್ರಯತ್ನಗಳನ್ನು ಮುಂದುವರಿಸುವುದು. ಇದರೊಂದಿಗೆ, ಸಮಯ ಮೀರುವ ಮುನ್ನ ಮುಂದಿನ ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಿಗೆ ಅಗತ್ಯ ಯೋಜನೆ ಮತ್ತು ಸಿದ್ಧತೆಗಳನ್ನು ಕೈಗೊಳ್ಳುವುದು.
ಕೃಷಿಗೆ ಎರಡು ಆಯಾಮಗಳಿವೆ, ನೀರಾವರಿ ಕೃಷಿ ಮತ್ತು ಮಳೆಯಾಶ್ರಿತ ಕೃಷಿ. ನೀರಾವರಿ ಮತ್ತು ಮಳೆಯಾಶ್ರಿತ ಕೃಷಿಗೆ ಪ್ರತ್ಯೇಕ ಯೋಜನೆಗಳ ಮತ್ತು ವಿಭಿನ್ನ ಕಾರ್ಯತಂತ್ರಗಳ ಅವಶ್ಯಕತೆಯಿದೆ. ನೀರಾವರಿ ಕೃಷಿಯಲ್ಲಿ ‘ನೀರು’ ಎನ್ನುವ ಅದ್ಭುತ ನೈಸರ್ಗಿಕ ಸಂಪನ್ಮೂಲದ ಖಚಿತತೆ ಇರುವುದರಿಂದ ರೈತ ಬಂಡವಾಳ ತೊಡಗಿಸಬಲ್ಲ, ತಂತ್ರಜ್ಞಾನ ಅಳವಡಿಕೆಗೆ ಒಲವು ತೋರಬಲ್ಲ, ಬೆಳೆಯ ಕುರಿತು ಕಾಳಜಿವಹಿಸಬಲ್ಲ, ಹಾಗೆಯೇ, ಹೆಚ್ಚಿನ ಸಂದರ್ಭಗಳಲ್ಲಿ ನಿರೀಕ್ಷಿತ ಆದಾಯ ಪಡೆಯಬಲ್ಲ. ಆದರೆ, ಮಳೆಯಾಶ್ರಿತ ಕೃಷಿಯಲ್ಲಿ ಅನಿಶ್ಚಿತ ಮಳೆಯೇ ಬೆಳೆಗೆ ಬೇಕಿರುವ ತೇವಾಂಶದ ಏಕೈಕ ಮೂಲ, ಅದರಿಂದಾಗಿ ಮಳೆಯಾಶ್ರಿತ ಕೃಷಿಯಲ್ಲಿ ಇನ್ನೆಲ್ಲವೂ ಅನಿಶ್ಚಿತ. ಆದ್ದರಿಂದ, ರೈತರಿಗೆ ಬಂಡವಾಳ ಹೂಡಲಾಗಲಿ, ನವೀನ ತಂತ್ರಜ್ಞಾನಗಳ ಕುರಿತ ಒಲವಾಗಲಿ ಅಷ್ಟಕ್ಕಷ್ಟೆ. ಕೃಷಿಯ ಈ ಎರಡು ಆಯಾಮಗಳ ಹಿನ್ನೆಲೆಯಲ್ಲಿ ಬರುವ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳು ಹೇಗೆ ಅನಾವರಣಗೊಳ್ಳಬಹುದು ಹಾಗೂ ಅದಕ್ಕೆ ಪೂರಕವಾಗಿ ಸರ್ಕಾರವು ಕೈಗೊಳ್ಳಬೇಕಾದ ಯೋಜನೆಗಳು ಮತ್ತು ಸಿದ್ಧತೆಗಳು ಏನಿರಬೇಕೆಂಬುದನ್ನು ನೊಡೋಣ.
ನೀರಾವರಿ ಕೃಷಿ: ರಾಜ್ಯವು 1.30 ಕೋಟಿ ಹೆಕ್ಟೇರ್ ಸಾಗುವಳಿ ಪ್ರದೇಶವನ್ನು ಹೊಂದಿದ್ದು, ಶೇಕಡ 30ರಷ್ಟು ಪ್ರದೇಶ ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ. ಆದಾಗ್ಯೂ ತೆಂಗು, ಬಾಳೆ, ರೇಷ್ಮೆ ಹಾಗೂ ತರಕಾರಿ ಬೆಳೆಗಳಲ್ಲಿ ರಾಜ್ಯವು ಅಗಾಧ ಸಾಧನೆ ಮಾಡಿದೆ. ಆದರೆ, ಕರೊನಾ ಕಾರಣದಿಂದಾಗಿ ನಷ್ಟ ಅನುಭವಿಸುತ್ತಿರುವ ಹೆಚ್ಚಿನ ಹಣ್ಣು-ತರಕಾರಿ ಬೆಳೆಗಾರರು ಹಣಕಾಸಿನ ಕೊರತೆಯಿಂದಾಗಿ ಮುಂಬರುವ ಹಂಗಾಮಿನಲ್ಲಿ ಅಧಿಕ ಬಂಡವಾಳ ಬೇಡುವ ಬೆಳೆ ಬೆಳೆಯಲು ಹಿಂದೇಟು ಹಾಕಬಹುದು. ಇದರಿಂದಾಗಿ ಪ್ರೋಟೀನ್ ಮತ್ತು ವಿಟಮಿನ್ ಮೂಲಗಳಾದ ವಿವಿಧ ತರಕಾರಿ ಮತ್ತು ಹಣ್ಣಿನ ಬೆಳೆಗಳ ಕ್ಷೇತ್ರ ಹಾಗೂ ಉತ್ಪಾದನೆ ಕುಂಠಿತವಾಗಿ ಗ್ರಾಹಕರಲ್ಲಿ, ಅದರಲ್ಲೂ ವಿಶೇಷವಾಗಿ ಬಡಜನರಲ್ಲಿ ಆಹಾರ ಮತ್ತು ಪೌಷ್ಟಿಕಾಂಶದ ಕೊರತೆ, ಆರೋಗ್ಯ ಸಮಸ್ಯೆಗಳು ಉಂಟಾಗುವುದಲ್ಲದೆ ರೈತರು ಮತ್ತು ರಾಜ್ಯದ ಆದಾಯಕ್ಕೂ ಹಿನ್ನಡೆಯಾಗಲಿದೆ. ಹೀಗಾಗದಿರಲು ನೀರಾವರಿ ವ್ಯವಸ್ಥೆ ಹೊಂದಿದ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದಲ್ಲದೆ ಅವುಗಳ ಖರೀದಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕು ಮತ್ತು ಪರ್ಯಾಯ ಬೆಳೆಗಳ ಕುರಿತು ತಜ್ಞರ ಮಾರ್ಗದರ್ಶನದಲ್ಲಿ ಕಾರ್ಯೋನ್ಮುಖರಾಗಬೇಕು.
ಮಳೆಯಾಶ್ರಿತ ಕೃಷಿ: ಸಮಸ್ಯೆಯ ಅಗಾಧತೆ ಇರುವುದು ಪ್ರಮುಖವಾಗಿ ಮಳೆಯಾಶ್ರಿತ ಕೃಷಿ ಕ್ಷೇತ್ರದಲ್ಲಿ. ಕಾರಣ, ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ಕೃಷಿಕರು ಮತ್ತು ಕೃಷಿ ಕಾರ್ವಿುಕರ ಸಂಖ್ಯೆ 2.4 ಕೋಟಿ (ಶೇಕಡ 40). ಇಷ್ಟು ಬೃಹತ್ ಸಂಖ್ಯೆಯ ಜನರು ವಿವಿಧ ಕೃಷಿಕಸುಬುಗಳಲ್ಲಿ ತೊಡಗಿದ್ದು, ಕಾರಣಾಂತರಗಳಿಂದ ಅವರು ಕೃಷಿಯಿಂದ ವಿಮುಖರಾದರೆ ಇತರ ಯಾವುದೇ ಕ್ಷೇತ್ರದಲ್ಲಿ ಅವರಿಗೆ ಉದ್ಯೋಗ ಒದಗಿಸುವುದು ಸಾಧ್ಯವಿಲ್ಲ. ರಾಜ್ಯದಲ್ಲಿ ಒಟ್ಟು 72 ಲಕ್ಷ ಕೃಷಿ ಹಿಡುವಳಿಗಳಿದ್ದು ಅವುಗಳಲ್ಲಿ ಶೇ.92ರಷ್ಟು ಹಿಡುವಳಿಗಳು 4 ಹೆಕ್ಟೇರಿಗಿಂತ ಚಿಕ್ಕವು (ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಳು). ಒಟ್ಟು ಕೃಷಿಕ್ಷೇತ್ರದ ಶೇ.70 ರಷ್ಟರಲ್ಲಿ ಮುಂಗಾರು ಬೆಳೆ ಬೆಳೆಯಲಾಗುತ್ತದೆ. ರಾಜ್ಯದ ಶೇ.40ರಷ್ಟಿರುವ ರೈತ ಹಾಗೂ ಕೃಷಿಕಾರ್ವಿುಕರು, ಅದರಲ್ಲೂ ಶೇ.70ರಷ್ಟಿರುವ ಮಳೆಯಾಧಾರಿತ ಕೃಷಿಕರು, ರಾಜ್ಯ ಮತ್ತು ರಾಷ್ಟ್ರದ ಜನತೆಗೆ ಆಹಾರ ಒದಗಿಸುವ ಬೃಹತ್ ಜವಾಬ್ದಾರಿ ಹೊಂದಿದ್ದಾರೆ. ಕರೊನಾ ಮಹಾಮಾರಿಯ ಕಾರಣದಿಂದಾಗಿ ಕೈಯಲ್ಲಿ ಹಣವಿಲ್ಲದ ಹೆಚ್ಚಿನ ಸಣ್ಣ ಹಿಡುವಳಿದಾರರು, ಅದರಲ್ಲೂ ವಿಶೇಷವಾಗಿ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿರುವವರು ಕೃಷಿ ಮಾಡುವ ಬದಲಾಗಿ ನಗರಗಳಿಗೆ ವಲಸೆ ಹೋಗುವ ಎಲ್ಲ ಸಾಧ್ಯತೆಗಳಿವೆ. ಇದರಿಂದಾಗಿ ನೇರವಾಗಿ ಆಹಾರ ಮತ್ತು ಪೋಷಕಾಂಶದ ಕೊರತೆ ಎಲ್ಲರನ್ನೂ ಕಾಡಲಿದೆ. ವಿಪರ್ಯಾಸವೆಂದರೆ, ಆಹಾರಧಾನ್ಯಗಳ (ಏಕದಳ ಮತ್ತು ದ್ವಿದಳ ಧಾನ್ಯಗಳು) ಕ್ಷೇತ್ರ ನಿರಂತರವಾಗಿ ಕಡಿಮೆಯಾಗುತ್ತಿದೆ. ಇದೀಗ, ಆಹಾರಭದ್ರತೆಯ ಸಮಸ್ಯೆ ಹೋಗಲಾಡಿಸಲು ಮತ್ತು ಮಳೆಯನ್ನೇ ನಂಬಿ ಕೃಷಿ ಮಾಡುವ ಹೆಚ್ಚಿನ ಸಂಖ್ಯೆಯ ರೈತರು ಹೆಚ್ಚಿನ ಕ್ಷೇತ್ರವನ್ನು ಪಾಳು ಬಿಡುವುದನ್ನು ತಪ್ಪಿಸಬೇಕಾದರೆ ತುರ್ತಾಗಿ ಅತ್ಯಂತ ಕನಿಷ್ಠ ಮಳೆಯಲ್ಲೂ ಇಳುವರಿ ನೀಡಬಲ್ಲ ಬೆಳೆಗಳಾದ ಸಿರಿಧಾನ್ಯಗಳು, ರಾಗಿ, ಜೋಳ, ಸಜ್ಜೆ ಮುಂತಾದುವನ್ನು ಬರುವ ಮುಂಗಾರಿನಲ್ಲಿ ಬಿತ್ತುವಂತಾಗಬೇಕು.
ಮಳೆಯಾಶ್ರಯದಲ್ಲಿ ಹೆಚ್ಚು ಶ್ರಮ ಹಾಗೂ ಖರ್ಚಿಲ್ಲದೆ, ಕೇವಲ 2 ರಿಂದ ಮೂರು ತಿಂಗಳಲ್ಲಿ ಕಟಾವು ಮಾಡಬಹುದಾದ ಸಿರಿಧಾನ್ಯಗಳು, ಸಜ್ಜೆ, ತೊಗರಿ, ಅಲಸಂದೆ, ಉದ್ದು, ಹೆಸರು ಮುಂತಾದುವುಗಳ ಬೀಜೋತ್ಪಾದನೆ ಕೈಗೊಂಡು ಜುಲೈವರೆಗೆ ರೈತರಿಗೆ ಒದಗಿಸುವ ಪ್ರಯತ್ನ ಮಾಡಬೇಕಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಒಣಬೇಸಾಯ ಕೃಷಿಗಾಗಿ ಕಾರ್ಯನಿರ್ವಹಿಸುತ್ತಿರುವ ಹೈದರಾಬಾದಿನಲ್ಲಿರುವ ಇಕ್ರಿಸ್ಯಾಟ್ ಸಂಸ್ಥೆಯ ಸಹಯೋಗದಲ್ಲಿ ಬೀಜೋತ್ಪಾದನೆ ಕಾರ್ಯ ಪ್ರಾರಂಭಿಸಿದರೆ ಉದ್ದೇಶ ಸಾಧನೆ ಸಾಧ್ಯವಿದೆ. ಇದಲ್ಲದೆ, ಕರೊನಾ ದಿಗ್ಬಂಧನದಿಂದ ಬಿಡುಗಡೆ ದೊರೆಯುತ್ತಿದ್ದಂತೆ ನರೇಗಾ ಯೋಜನೆಯಡಿ ಜಲಾನಯನ ಅಭಿವೃದ್ಧಿ ಮತ್ತು ರೈತರ ಜಮೀನುಗಳಲ್ಲಿ ಕಡ್ಡಾಯವಾಗಿ ಕೃಷಿ ಹೊಂಡ ನಿರ್ಮಾಣ ಕಾರ್ಯ ಪ್ರಾರಂಭಿಸಿದರೆ ಕೃಷಿಕರಿಗೆ ಅವರ ಹಳ್ಳಿಗಳಲ್ಲೇ ಉದ್ಯೋಗ ನೀಡುವುದರೊಂದಿಗೆ ಮಳೆನೀರಿನ ಕೊಯ್ಲು, ಮಣ್ಣು- ನೀರಿನ ಸಂರಕ್ಷಣೆಯಿಂದಾಗಿ ಮುಂಬರುವ ಹಂಗಾಮುಗಳಲ್ಲಿ ಬೆಳೆಗಳ ಇಳುವರಿ ಹೆಚ್ಚಿಸಲು ದಾರಿಯಾಗುತ್ತದೆ.
ಕರೊನಾ ವೈರಸ್ ಹರಡುವಿಕೆ ಶೀಘ್ರದಲ್ಲಿ ಹತೋಟಿಗೆ ಬರಬೇಕೆಂಬುದು ಎಲ್ಲರ ನಿರೀಕ್ಷೆ, ಆದಷ್ಟು ಬೇಗ ಹಾಗಾಗಲೆಂಬುದು ಎಲ್ಲರ ಹಾರೈಕೆ. ಜೊತೆಗೆ, ಸ್ವಯಂಪ್ರೇರಣೆಯಿಂದ ಕೈಗೋಳ್ಳಬೇಕಾದ ಕ್ರಮಗಳನ್ನು ನಿರ್ಲಕ್ಷಿಸುವಂತಿಲ್ಲ. ಪ್ರಯತ್ನಗಳು ನಿರೀಕ್ಷಿಸಿದ ಫಲಿತಾಂಶ ನೀಡದಿರಬಹುದು, ಆದರೆ ಕಳೆದುಕೊಳ್ಳುವುದೇನೂ ಇಲ್ಲ, ಪಡೆಯಬಹುದಾದದ್ದು ಅನನ್ಯ.
(ಲೇಖಕರು ಕೃಷಿ ತಜ್ಞರು)